Monday, 25th November 2024

ಈ ಕ್ರೌರ್ಯಕ್ಕೆ ಕೊನೆ ಇಲ್ಲವೆ ?

ಉತ್ತರಪ್ರದೇಶದಲ್ಲಿ, ಅತ್ಯಾಚಾರ ಹತ್ಯೆೆಗೆ ಬಲಿಯಾದ 19 ವರ್ಷದ ಬಡ ಹುಡುಗಿ ದೇಶದ ಮುಂಚೂಣಿ ಚರ್ಚೆಗೆ ಬಂದು ಮತ್ತೆ ಜೀವಂತವಾಗಿದ್ದಾಳೆ. ನಮ್ಮ ಮನದಲ್ಲಿ ಹಲವು ವಿಷಯಗಳ ಮಂಥನಕ್ಕೆ ಕಾರಣ ಎನಿಸಿ, ಮತ್ತದೇ ಅಸಹಾಯಕ ಸ್ಥಿತಿಗೆ ತಲುಪಿಸುತ್ತಿದ್ದಾಳೆ. ಈ ಕ್ರೌರ್ಯಕ್ಕೆೆ ಕೊನೆಯೇ ಇಲ್ಲವೇ? ಗೌರವ, ಅಭಿಮಾನ ಸ್ವತಂತ್ರ ಬದುಕು ನಮಗೆ, ಅಂದರೆ ಹೆಣ್ಣು ಕುಲಕ್ಕೆ ಗಗನ ಕುಸುಮವೇ? ಅದೇಕೋ ಈ ಒಂದು ನಿರಾಶೆ ನಿಧಾನವಾಗಿ ಆವರಿಸುತ್ತಿದೆ.

ಸ್ಮಿತಾ ಮೈಸೂರ ಹುಬ್ಬಳ್ಳಿ

ಆ ಹುಡುಗಿ ಅಂದು ಅಮ್ಮನ ಜತೆ ಊರಿಗೆ ಹೋಗಿದ್ದರೆ ಬದುಕುತ್ತಿದ್ದಳೋ ಏನೋ, ತನ್ನ ಮೇಲೆ ನಡೆದ ದೌರ್ಜನ್ಯದಿಂದ ತಪ್ಪಿಸಿಕೊಳ್ಳುತ್ತಿದ್ದಳೋ ಏನೋ? ಆ ಹುಡುಗಿ ಅಂದು ಮಾತ್ರ ಶಾಲೆಗೆ ಹೋಗದೇ ಇದ್ದಿದ್ದರೆ ಉಳಿಯುತ್ತಿದ್ದಳೋ ಏನೋ? ಅತ್ಯಾಚಾರದಿಂದ ಬಚಾವಾಗುತ್ತಿದ್ದಳೋ ಏನೋ? ಆ ಹುಡುಗಿ ಸಂಜೆಯಾಗುತ್ತಲೇ ಮನೆ ಸೇರುತ್ತಿದ್ದರೆ ಹೀಗಾಗುತ್ತಿರಲಿಲ್ಲವೋ ಏನೋ? ಪರಿಚಿತರೆಂದು ವಿಶ್ವಾಸವಿಟ್ಟು ಹೋದದ್ದೇ ತಪ್ಪಾಯಿತೋ ಏನೋ?

‘ಅಮ್ಮ ನನ್ನ ಹತ್ತಿರ ಸೈಕಲ್ಲಿದೆ, ನಾನೇ ಅಜ್ಜಿ ಮನೆಗೆ ಹೋಗಿ ನಿನಗೆ ಬೇಕಾದ ಮಸಾಲೆ ಪದಾರ್ಥ ತಂದುಕೊಡುವೆ’ ಎಂದು
ಖುಷಿಯಿಂದ ಸೈಕಲ್ ಹತ್ತಿ ಹೊರಟ ಮಹಾರಾಷ್ಟ್ರದ ಕೋಪರ್ದಿ ಗ್ರಾಮದ 16 ವರ್ಷದ ಹುಡುಗಿ, ಈ ಜಗತ್ತಿನಲ್ಲಿ ಕ್ರೂರ
ಮಾನವ ಮೃಗಗಳೂ ಇವೆ, ಎಂಬುದನ್ನು ತಿಳಿಯದೇ ಆ ಕ್ರೂರ ಮೃಗಗಳಿಗೆ ದಾಹಕ್ಕೆ ಬಲಿಯಾಗಿ ಹೋದಳು. ಮತ್ತೊಂದು ಹುಡುಗಿ ಅಪ್ಪ ಅಮ್ಮ ಕೆಲಸಕ್ಕೆ ಹೋದಾಗ ತನ್ನ ಹತ್ತಿರವೇ ಇದ್ದ ಮಾನವ ವೇಷದ ಸೀಳು ನಾಯಿಗಳಿಗೆ ಆಹಾರವಾದಳು.

ಎಷ್ಟೊಂದು ವಿಚಾರಗಳು? ಹೀಗಾಗಿದ್ದರೆ, ಹೋಗಿದ್ದರೆ? ಇದ್ದಿದ್ದರೆ? ತಿಳಿದಿದ್ದರೆ? ಮನಸ್ಸು, ಮೆದುಳು ಇಂಥ ಸಾದ್ಯತೆಗಳ
ಸುತ್ತ ಗಿರಕಿ ಹೊಡೆಯುತ್ತಿದ್ದರೆ, ಅಲ್ಲಿ ಮತ್ತೊಂದು ಅತ್ಯಾಚಾರ, ನಂತರ ಹತ್ಯೆೆ. ಇಲ್ಲಿಯೂ ಜಾತಿಯ ನಂಟು, ರಾಜಕೀಯ ಬಣ್ಣ ಬಳಿದು ಲಾಭ ಮಾಡಿ ಕೊಳ್ಳುತ್ತಾರೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಬಾಲಕಿ ತನ್ನ ಅಮ್ಮ ಊರಿಗೆ ಹೊರಟಾಗ ತಾನು ಹೋಗಿ ಬಿಟ್ಟಿದ್ದರೆ! ತನಗೆ ಅರಾಮ ಇಲ್ಲ, ಯಾಕೊ ಬಹಳ ದಣಿವಾಗಿದೆ ಮನೆಯಲ್ಲಿ ಮಲಗುತ್ತೇನೆ, ಹೇಗೂ ತನ್ನೊಂದಿಗೆ ಅಜ್ಜ ಇದ್ದಾನೆ, (ಆ ಅಜ್ಜನಿಗೆ ಕಿವಿ ಕೇಳದು, ಕಣ್ಣೂ ಸಹ ಮಂಜು) ನೀ ಹೋಗಿಬಾ ಎಂದು ಅಮ್ಮನನ್ನು ಕಳಿಸಿ ಗಾಢನಿದ್ರೆಗೆ ಜಾರಿ ದವಳನ್ನ ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿ ಬಿಸಾಕಿ ಹೋದ ಮೃಗಗಳು, ಹೊಂಚು ಹಾಕಿ ಕುಳಿತ ಹುಲಿ ಚಿರತೆ ಗಳಿಗಿಂತ ಕ್ರೂರವಾಗಿ ಕಾಣುತ್ತಾರೆ.

ಸಾಕ್ಷಿ ಸಿಗಬಾರದು ಎಂದು ಅತ್ಯಾಚಾರಗೈದು ಸುಟ್ಟು ಹಾಕಿದ ಹೈದರಾಬಾದ್ ಪ್ರಕರಣ ಕೇಳಿ ಮನಸ್ಸು ತಲ್ಲಣಿಸಿ ಹೋಗಿತ್ತು. ಈಗ ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಮತ್ತೊಂದು ಭೀಕರ ಘಟನೆ. ಇಂಥ ಪ್ರಕರಣಗಳು ದಿನವೂ ನಡೆಯುತ್ತಿದ್ದರೂ, ಯಾರೂ
ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾನು ಆಕಾಶವಾಣಿ ಯಲ್ಲಿ ಕೆಲಸ ಮಾಡುತ್ತಿದ್ದಾಗ ರೇಡಿಯೊ ಜಿಂಗಲ್ (ಚುಟು ಕಾಗಿ ಪ್ರಾಸಬದ್ಧ ಅಕ್ಷರಗಳಲ್ಲಿ ಹಿರಿದಾದ ಅರ್ಥವನ್ನ ಹೇಳುವ) ಒಂದನ್ನ ಮಾಡಿದ್ದೆ. ಕುಸಿಯುತ್ತಿರುವ ಗಂಡು ಹೆಣ್ಣಿನ ಅನು ಪಾತ, ನಮ್ಮ ಊಹೆಗೂ ಮೀರಿದ ಅಪಾಯಗಳನ್ನು ಹೆಣ್ಣಿಗೆ ತಂದೊಡ್ಡಬಹುದು, ಎಂಬುದನ್ನು ಭ್ರೂಣಹತ್ಯೆ ಘಟನೆ ಮೂಲಕ ಹೇಳಲು ಪ್ರಯತ್ನಿಸಿದ್ದೆ. ಆದರೆ ಈಗ ಅನ್ನಿಸುತ್ತಿದೆ, ಈ ಅಪಾಯಗಳು ಬರೀ ಕುಸಿಯುತ್ತಿರುವ ಅನುಪಾತದಿಂದ ಮಾತ್ರವಲ್ಲ, ಹೆಣ್ಣಿಗೆ ಸಿಕ್ಕ ಸ್ವಾತಂತ್ರ್ಯ, ಸಮಾನತೆ, ಭರವಸೆ, ಮಾನ್ಯತೆ ಇವೆಲ್ಲ ಈ ಪುರುಷ ಮೃಗಗಳಕಣ್ಣು ಕೆಂಪಾಗಿಸಿ ಅವಳ ಧ್ವನಿ ಅಡಗಿಸ ಲೆಂದೇ ಇಂಥ ಕರಾಳ, ಕ್ರೂರ ಕೃತ್ಯಕ್ಕೆ ಕಾರಣವಾಗಿವೆ ಎಂದು.

ಮದುವೆಯಾದರೂ ಅಪಾಯ ಇದ್ದದ್ದೇ

ಒಬ್ಬಳೇ ಅಡ್ಡಾಡುವಂತಿಲ್ಲ, ಜತೆಯಲ್ಲಿ ಇದ್ದರೂ ರಕ್ಷಣೆ ಇಲ್ಲ. ಪರಿಚಿತರೆಂದು ತಿಳಿದವರೊಡನೆ ಹೊರಟರೆ ಅವರಿಂದಲೇ ಆಕ್ರಮಣ. ಮಾಮಾ, ಕಾಕಾ, ಅಣ್ಣ ಅಪ್ಪ ಈ ಸಂಬಂಧಗಳೂ ಈ ದುರಾಚಾರವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕೇವಲ 16-17 ವಯಸ್ಸಿಗೇ ಮಗಳ ಮದುವೆ ಮಾಡಿ, ಜವಾಬ್ದಾರಿ ಎಂಬ ಸುಳ್ಳು ಕುಣಿಕೆಯಿಂದ ಪಾರಾದೆವು ಎಂದು ಅಂದುಕೊಳ್ಳುವ ಪಾಲಕರೇ ಹೆಚ್ಚು. ಸುರಕ್ಷಿತವಾಗಿದ್ದಾಳೆ, ಅಂದುಕೊಳ್ಳುವಾಗಲೇ ಅಲ್ಲೊಬ್ಬ 25-30ವರ್ಷದ ಮದುವೆಯಾದ ಯುವತಿಯ ಆತ್ಯಾಚಾರ, ಕೊಲೆಯಾಗಿರುತ್ತದೆ. ಹೆಣ್ಣಿಗೇಕೆ ಇಂಥ ಸ್ಥಿತಿ?

‘ನೀವು ಬರೀ ಹೆಣ್ಣಿನ ಮೇಲಿನ ದೌರ್ಜನ್ಯವನ್ನಷ್ಟೇ ವಿರೋಧಿಸಿ ನ್ಯಾಯ ಬೇಡುತ್ತೀರಿ, ಹುಡುಗರ ಮೇಲೆ ದೌರ್ಜನ್ಯಗಳು, ಹತ್ಯೆ ನಡೆಯುವದಿಲ್ಲವೇ? ಗಡಿಯಲ್ಲಿ ದೇಶ ರಕ್ಷಣೆಗೆ ನಿಂತ ಸೈನಿಕರ ಹತ್ಯೆೆ ಯಾಗುವದಿಲ್ಲವೆ? ಮಹಿಳಾ ದೌರ್ಜನ್ಯವನ್ನು ಇಷ್ಟು ಭಾವುಕರಾಗಿ ಯಾಕೆ ಪರಿಗಣಿಸಬೇಕು? ನ್ಯಾಯಾಲಯ ಇದೆ, ಪೋಲಿಸ್ ಇಲಾಖೆ ಇದೆ, ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆ ಬಿಡಿ’ ಎಂದು ವಾದಿಸುವವರೂ ನಮ್ಮಲ್ಲಿ ಇದ್ದಾರೆ!

ಸ್ವಲ್ಪ ವಾಸ್ತವಿಕ ಸಂಗತಿಗಳನ್ನು ಚಿಂತಿಸಿ. ಹುಡುಗರ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ, ಹೆಚ್ಚಿನ ಹುಡುಗರು ರೌಡಿಗಳಾಗಿರು ತ್ತಾರೆ, ಮಾದಕ ವ್ಯಸನಿಗಳಾಗಿರುತ್ತಾರೆ ಅಥವಾ ಕುಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ. ಮುಗ್ಧ, ಪ್ರಾಮಾಣಿಕ ಹುಡುಗರ ಮೇಲೆ ಹಲ್ಲೆಗಳು ಕಡಿಮೆ. ಗಡಿಯಲ್ಲಿ ಹುತಾತ್ಮರಾಗುವ ಸೈನಿಕರ ಬಗ್ಗೆ ಎಲ್ಲರಿಗೂ ಗೌರವ ಭಾವನೆ ಇದ್ದೇ ಇದೆ. ನಿಜವಾದ ಹೀರೊಗಳು ಅವರು. ಒಬ್ಬ ಮಹಿಳೆ ಸೈನ್ಯ ಸೇರಿ ಹುತಾತ್ಮಳಾದರೆ, ಅವಳಿಗೂ ಇಂಥದ್ದೇ ಗೌರವ, ಅದು ವೀರ ಮರಣ. ಅತ್ಯಾಚಾರಕ್ಕೊಳಗಾಗಿ ಕೊಲೆಯಾಗುವದಕ್ಕೂ ಹುತಾತ್ಮರಾಗುವದಕ್ಕೂ ಹೋಲಿಸುವದು ಸರಿಯಲ್ಲ.

ಹೆಣ್ಣೊಂದು ಕಲಿತರೆ…..
ದೇಶ ಪ್ರಗತಿಯತ್ತ ಸಾಗಲು ಹೆಣ್ಣುಮಕ್ಕಳ ಪಾತ್ರ ಮಹತ್ವದ್ದು, ಹೆಣ್ಣೊೊಂದು ಕಲಿತರೆ ಶಾಲೆಯೊಂದು ತೆರೆದಂತೆ.. ಎಂದೆಲ್ಲ ಭಾಷಣ ಮಾಡುವ ರಾಜಕಾರಣಿಗಳು, ಅಧಿಕಾರಿಗಳು ಹೆಣ್ಣುಕುಲವನ್ನೇ ನಾಶ ಮಾಡುವ ಕೃತ್ಯಗಳನ್ನೇಕೆ ತಡೆಯುತ್ತಿಲ್ಲ? ಇಂದು ಹುಡುಗಿಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ಸಹಜವಾಗಿ, ದಿನಪತ್ರಿಕೆಗಳಲ್ಲಿ ಒಳಪುಟದ ಸಣ್ಣ ಸುದ್ದಿಯಾಗಿ
ಪ್ರಕಟವಾಗುತ್ತವೆ, ದೃಶ್ಯ ಮಾದ್ಯಮಗಳಲ್ಲಿ ಅಡಿಸುದ್ದಿಯಾಗಿ ಕಣ್ಮರೆಯಾಗುತ್ತವೆ ಅಷ್ಟೇ.

ಕೆಲವೇ ಕೆಲವು ಪ್ರಕರಣಗಳು ಹೆಚ್ಚು ಪ್ರಚಾರಕ್ಕೆ ಬರುತ್ತವೆ, ಅದಕ್ಕೆ ರಾಜಕೀಯ ಕಾರಣಗಳೂ ಇರಬಹುದು ಅಥವಾ ದೃಶ್ಯ ಮಾಧ್ಯಮಗಳಿಗೆ ಪರಿಣಾಮಕಾರಿ ವಿಡಿಯೋ ದೊರಕಿದ್ದಕ್ಕೂ ಇರಬಹುದು. ಆದರೆ, ಇಂತಹ ಪೈಶಾಚಿಕ ಕೃತ್ಯ ಮತ್ತು ಅದನ್ನು ನಡೆಸುವ ಪಾಶವೀ ಮನಸ್ಥಿತಿಯನ್ನು ಸರಿಪಡಿಸುವವರು ಯಾರು? ಇದು ಸಮಾಜದಲ್ಲೇ ಅಂತರ್ಗತವಾಗಿರುವ ವಿಷವಾಹಿನಿಯ ರೀತಿ ಪ್ರವಹಿಸುತ್ತಿದೆ ಅಲ್ಲವೆ? ಅತ್ಯಾಚಾರ ತಡೆಯಲು ಇಂದು ಇರುವ ಶಿಕ್ಷೆಯ ಬೆದರಿಕೆ ಇನ್ನಷ್ಟು ಬಿಗಿಯಾಗಬೇಕೆನ್ನುವುದು
ಒಂದು ಕಡೆಯಾದರೆ, ಇಂತಹ ಮನಸ್ಥಿತಿಯ ಪುರುಷ ಕುಲವನ್ನು ರೂಪಿಸುತ್ತಿರುವ ನಮ್ಮ ಸಮಾಜಕ್ಕೆ ಯಾವ ಚಿಕಿತ್ಸೆ ನೀಡ ಬೇಕು? ಇಂತಹ ಯೋಚನೆಯಲ್ಲಿ, ಕಾಳಜಿಯಲ್ಲಿ, ಚಿಂತೆಯಲ್ಲಿ ಮನವನ್ನು ಕಾಡುತ್ತಿರುವ ನೋವೆಂದರೆ, ಹೆಣ್ಣು ಇಂದು
ತಲುಪಿರುವ ಹತಭಾಗ್ಯ ಸ್ಥಿತಿ. ಇದನ್ನು ಸರಿಪಡಿಸಲೇಬೇಕು, ಇಲ್ಲವಾದರೆ, ದೇಶಕ್ಕೆ ಉಳಿಗಾಲವಿಲ್ಲ.

ಮಾನಸಿಕ ಆಘಾತ
ಒಂದು ಹುಡುಗಿಯ ಸುತ್ತ ಎಷ್ಟೊಂದು ವಿಷಯಗಳು! ಮೊದಲು ಮನೆ ಮರ್ಯಾದೆ, ಜಾತಿಯ ವಿಷಯ, ಮತ್ತೆ ಅದಕ್ಕೆ ರಾಜಕೀಯ ಬಣ್ಣ. ತನ್ನ ದೇಹದ ಮೇಲಿನ ಸ್ವಾತಂತ್ರ್ಯ ಕಳೆದುಕೊಳ್ಳುವ ಹುಡುಗಿ, ಮನಸ್ಸಿನ ಮೇಲೂ ನಡೆಯುವ, ಆಘಾತ ವನ್ನು ಹೇಗೆ ತಡೆದುಕೊಳ್ಳಬಲ್ಲಳು? ಸೂಕ್ಷ್ಮ ಮನಸ್ಸಿನವಳಾದರೆ, ಇಂಥ ಆಘಾತಗಳಿಂದ, ಮಾನಸಿಕ ಸ್ಥಿಮಿತ ಕಳೆದು ಕೊಂಡು, ಹುಚ್ಚರಾಗಬಹುದು ಎನ್ನುತ್ತದೆ ಮನಃಶಾಸ್ತ್ರ. ‘ಗಂಗಾಜಲ’ ಎಂಬ ಹಿಂದಿ ಚಲನ ಚಿತ್ರದಲ್ಲಿ ತನ್ನನ್ನು ಹುಚ್ಚನಂತೆ ಬೆನ್ನುಹತ್ತಿದ್ದ ಪ್ರಮುಖ ರಾಜಕೀಯ ವ್ಯಕ್ತಿಯ ಮಗನಿಂದ ತಪ್ಪಿಸಿಕೊಳ್ಳುವ ಪ್ರಯತ್ನ, ರಾಜಕೀಯ ವಲಯದಲ್ಲಿ, ಪೋಲಿಸ್ ಇಲಾಖೆಯಲ್ಲಿ ವಿಪ್ಲವವನ್ನೇ ಸೃಷ್ಟಿಸುತ್ತದೆ. ಇಂಥ ಸಂಘರ್ಷದಲ್ಲಿ ಹೇಗೋ ಈ ಮದುವೆ ಮಾಡಿ ಮುಗಿಸಿದರೆ ಸಾಕು, ಎಂದು ತಾಯಿ ಮದುವೆ ಮಾಡಲು ಪ್ರಯತ್ನಿಸಿದಾಗ, ಆ ಹುಚ್ಚ ಮದುವೆ ಮಂಟಪಕ್ಕೇ ನುಗ್ಗುತ್ತಾನೆ. ಆಗ ಅಸಹಾಯಕಳಾದ ಹುಡುಗಿ ತನ್ನ ಹೊಟ್ಟೆಗೆ ಚಾಕು ತಿವಿದುಕೊಂಡು ತನ್ನ ಜೀವವನ್ನು ಕೊನೆಗೊಳಿಸಿಕೊಳ್ಳುತ್ತಾಳೆ.