ರಾಯ್‍ಪುರ: ಮಹಾದೇವ್ ಆನ್‍ಲೈನ್ ಬುಕ್ ಆಪ್ ಮೂಲಕ ಅಕ್ರಮ ಬೆಟ್ಟಿಂಗ್ ಮತ್ತು ಗೇಮಿಂಗ್‍ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ರಾಯ್‍ಪುರದ ವಿಶೇಷ ನ್ಯಾಯಾಲಯಕ್ಕೆ ಹೊಸ ಚಾರ್ಜ್‍ಶೀಟ್ ಸಲ್ಲಿಸಿದೆ.
ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯವು ಛತ್ತೀಸ್‍ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಹೆಸರನ್ನು ಒಳಗೊಂಡಂತೆ 6 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಇತರ ಐವರು ಆರೋಪಿಗಳನ್ನು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದ್ದು, ವಿವಾದಾತ್ಮಕ ಬೆಟ್ಟಿಂಗ್ ಆಪ್ ಹಗರಣದ ಮೇಲೆ ಬೆಳಕು ಚೆಲ್ಲಿದೆ.
ದೋಷಾರೋಪ ಪಟ್ಟಿಯಲ್ಲಿ ಬಘೇಲ್ ಜತೆಗೆ ಶುಭಂ ಸೋನಿ, ಅಮಿತ್ ಕುಮಾರ್ ಅಗರ್ವಾಲ್, ರೋಹಿತ್ ಗುಲಾಟಿ, ಭೀಮ್ ಸಿಂಗ್ ಮತ್ತು ಅಸೀಮ್ ದಾಸ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಮಹದೇವ್ ಬೆಟ್ಟಿಂಗ್ ಆಪ್‍ನ ಪ್ರವರ್ತಕರ ಕೊರಿಯರ್ ಆಗಿ ಕೆಲಸ ಮಾಡುತ್ತಿದ್ದ ಅಸೀಮ್ ದಾಸ್ ಅವರನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಅವರ ನಿವೇಶನದಿಂದ ಸುಮಾರು 5.39 ಕೋಟಿ ರೂ. ವಶಪಡಿಸಿಕೊಂಡಿರುವ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು 1,700-1,800 ಪುಟಗಳ ಹೊಸ ಚಾರ್ಜ್‍ಶೀಟ್‍ನ್ನು ಜನವರಿ 1ರಂದು ಸಲ್ಲಿಸಲಾಗಿದ್ದು, ನಗದು ಕೊರಿಯರ್ ಆಸಿಮ್ ದಾಸ್, ಪೊಲೀಸ್ ಪೇದೆ ಭೀಮ್ ಸಿಂಗ್ ಯಾದವ್, ಆಯಪ್‍ಗೆ ಸಂಪರ್ಕ ಹೊಂದಿದ ಪ್ರಮುಖ ಕಾರ್ಯನಿರ್ವಾಹಕ ಶುಭಂ ಸೋನಿ ಸೇರಿದಂತೆ ಐವರು ಆರೋಪಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ.