ಲೋಕಸಭಾ ಚುನಾವಣೆಗೂ ಮೊದಲು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಕೆಲವು ಸಚಿವರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿರುವ ಗೃಹ ಸಚಿವ ಜಿ.ಪರಮೇಶ್ವರ,
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತಿತರರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಯ ಅನಿವಾರ್ಯದ ಬಗ್ಗೆ ಮನವರಿಕೆ ಮಾಡಿದ್ದಾರೆ.
ಲಿಂಗಾಯತ, ದಲಿತ ಹಾಗೂ ಅಲ್ಪಸಂಖ್ಯಾತ ಈ ಮೂರು ಸಮುದಾಯಗಳನ್ನು ಪ್ರತಿನಿಧಿಸುವ ಹಿರಿಯ ಸಚಿವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವುದರಿಂದ ಈ ಸಮುದಾಯಗಳ ಓಲೈಕೆ ಸಾಧ್ಯವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಪಕ್ಷದ ಗುರಿಗೆ ಈ ನಡೆ ಪೂರಕವಾಗಲಿದೆ ಎಂಬ ವಾದವನ್ನು ಸುರ್ಜೆವಾಲ ಎದುರು ಈ ಸಚಿವರು ಪ್ರತಿಪಾದಿಸಿದ್ದು, ಉಪಮುಖ್ಯಮಂತ್ರಿಗಳ ಆಯ್ಕೆ ರಾಜ್ಯದ ಅಭಿವೃದ್ಧಿಯ ಅಗತ್ಯವಲ್ಲ, ಚುನಾವಣೆಯ ಅಗತ್ಯ ಎನ್ನುವುದನ್ನು ಅವರೇ ಈ ಮೂಲಕ ಘೋಷಿಸಿದ್ದಾರೆ. ಚುನಾವಣೆಯ ಗೆಲುವಿಗಾಗಿ ರಾಜ್ಯದ ಜನರ ಮೇಲೆ ಮೂವರು ಉಪಮುಖ್ಯಮಂತ್ರಿಗಳನ್ನು ಹೇರುವುದು ಎಷ್ಟು ಸರಿ? ಚುನಾವಣೆಯ ಹೆಸರಿನಲ್ಲಿ ರಾಜ್ಯವನ್ನು ಹಂಚಿ ತಿನ್ನುವುದಕ್ಕಾಗಿ ಹೊಸ ಹೊಸ ಹುದ್ದೆಗಳನ್ನು ಸೃಷ್ಟಿ ಮಾಡಬೇಕೆ? ಮೂವರು ಉಪಮುಖ್ಯಮಂತ್ರಿ ಯಾವ ಕಾರಣಕ್ಕೂ ಒಂದು ಪಕ್ಷದ ಅಥವಾ ಒಂದು ಸರಕಾರದ ಹೆಗ್ಗಳಿಕೆಯಾಗುವುದಿಲ್ಲ.
ಮೂವರು ಉಪಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆಯೆಂದರೆ ಆ ಪಕ್ಷದಲ್ಲಿ, ಸರಕಾರದಲ್ಲಿ ಭಿನ್ನಮತ ಅತಿರೇಕಕ್ಕೆ ತಲುಪಿದೆ ಎಂದೇ ಅರ್ಥ. ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಮಾನ್ಯತೆ ಇಲ್ಲ ಎನ್ನುವುದು ಈಗ ಲಾಭಿ ಮಾಡುತ್ತಿರುವ ಎಲ್ಲರಿಗೂ ಚೆನ್ನಾಗಿಯೇ ಗೊತ್ತು. ಮುಖ್ಯ ಮಂತ್ರಿಗೆ ಸಿಗುವ ಎಲ್ಲ ಸವಲತ್ತುಗಳು ಈ ಉಪಮುಖ್ಯಮಂತ್ರಿಗಳಿಗೂ ಸಿಗುತ್ತದೆ ಎನ್ನುವುದು ಬಿಟ್ಟರೆ, ಯಾವುದೇ ಅಧಿಕೃತ ರಾಜಕೀಯ ತೀರ್ಮಾನ ಗಳನ್ನು ತೆಗೆದುಕೊಳ್ಳಲು ಇವರಿಗೆ ಅವಕಾಶವಿಲ್ಲ. ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಇವರು ಅಧಿಕಾರವನ್ನು ಕೈಗೆತ್ತಿಕೊಳ್ಳಬಹುದೇ ಹೊರತು, ಮುಖ್ಯಮಂತ್ರಿ
ಇರುವವರೆಗೂ ಇವರದು ಡಮ್ಮಿ ಸ್ಥಾನವಾಗಿರುತ್ತದೆ. ಆದ್ದರಿಂದ ತಮಗೆ ಸಿಕ್ಕಿರುವ ಖಾತೆಗಳನ್ನೇ ಸರಿಯಾಗಿ ನಿರ್ವಹಿಸಬೇಕು. ಆ ಮೂಲಕ ಅನಗತ್ಯ
ಡಿಸಿಎಂ ಹುದ್ದೆ ಸೃಷ್ಟಿಯ ಗೊಂದಲವನ್ನು ಮೂಡಿಸಬಾರದು.