Saturday, 14th December 2024

ವಿನಾಕಾರಣ ಮುಷ್ಕರ ಸರಿಯಲ್ಲ

ಹಿಟ್ ಆಂಡ್ ರನ್ ಪ್ರಕರಣದಲ್ಲಿ ಶಿಕ್ಷೆ ವಿಽಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ. ರಾಷ್ಟ್ರಪತಿಯವರ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಅಪಘಾತ ನಡೆಸಿ ಪರಾರಿಯಾದ ಪ್ರಕರಣ, ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣವಾದರೆ, ಯಾವುದೇ ಚಾಲಕ ಅಪಘಾತದ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡದೆ, ಸ್ಥಳದಿಂದ ಪಲಾಯನ ಮಾಡಿದರೆ ಅಂಥ ಆರೋಪಿಗೆ ೧೦ ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ೭ ಲಕ್ಷ ರು.ವರೆಗೆ ದಂಡವನ್ನು ವಿಧಿಸಬೇಕು ಎಂಬುದು ಈ ಹೊಸ ಕಾನೂನಿನ ನಿಯಮ.

ಆದರೆ ಕೇಂದ್ರ ಸರಕಾರದ ರಸ್ತೆ ಸಂಚಾರಿ ಕಾನೂನು ತಿದ್ದುಪಡಿ ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ನಾಳೆಯಿಂದ ಅನಿರ್ದಿಷ್ಟಾವಧಿ
ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ಸರಕಾರ ಲಾರಿ ಮಾಲೀಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಹಿಟ್ ಆಂಡ್ ರನ್ ಪ್ರಕರಣ
ವನ್ನು ತನಗೆ ಬೇಕಾದಂತೆ ತಿರುಚುತ್ತಿದೆ ಎಂಬುದು ಅವರ ಆರೋಪ. ಈ ಕಾನೂನು ಲಾರಿ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ತಪ್ಪು. ರಾತ್ರಿ
ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಗುದ್ದಿ ಜೀವಹಾನಿಗೆ ಕಾರಣರಾಗುವ ಕಾರು ಮಾಲಿಕರ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ.

ಇಂಥವರೂ ಶಿಕ್ಷೆಗೆ ಅರ್ಹರು. ಅಪಘಾತ ಎಸಗಿ ಪರಾರಿ ಆಗುವವರಿಗೆ ಮಾತ್ರ ಈ ಕಾಯಿದೆ ಅನ್ವಯಿಸುತ್ತದೆ. ಹೀಗಿರುವಾಗ ಇಡೀ ಚಾಲಕರ ಸಮೂಹ ಹೆದರಲು ಕಾರಣಗಳಿಲ್ಲ. ಅಪಘಾತ ಸಂಭವಿಸಿದಾಗ ಸ್ಥಳದಲ್ಲಿದ್ದು, ಸಂತ್ರಸ್ತರಿಗೆ ನೆರವು ಒದಗಿಸುವುದು ಮಾನವೀಯತೆ. ಅದು ಚಾಲಕನಲ್ಲಿ ಯಾವುದೇ ದುರುದ್ದೇಶವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಇದು ಮುಂದೆ ಪೊಲೀಸ್ ಕೇಸ್ ಅಥವಾ ನ್ಯಾಯಾಂಗ ವಿಚಾರಣೆಯಲ್ಲಿ ಲಾರಿ ಚಾಲಕರ ಪರವಾಗಿ ನಿಲ್ಲುವ ಅಂಶ ಕೂಡ ಆಗಿದೆ. ಆ ನಿಟ್ಟಿನಲ್ಲಿ ಮುಷ್ಕರಕ್ಕೆ ಕರೆ ನೀಡಿರುವ ಮುಖಂಡರು ಲಾರಿ ಚಾಲಕರಿಗೆ ಕಾನೂನು ಕುರಿತು ತಿಳಿವಳಿಕೆ
ಮೂಡಿಸಬೇಕೇ ವಿನಾ ಮುಷ್ಕರಕ್ಕೆ ಕರೆ ಕೊಡುವುದರಲ್ಲಿ ಅರ್ಥವಿಲ್ಲ.