Sunday, 24th November 2024

ಬದಲಾವಣೆ ಜಗದ ನಿಯಮ

ವೀರೇಶ್ ಎನ್.ಪಿ. ದೇವರಬೆಳಕೆರೆ

ಈ ಜಗತ್ತಿನಲ್ಲಿ ಕಷ್ಟಪಟ್ಟು ಕೆಲಸ ಮಾಡುವುದರಲ್ಲಿನ ಆನಂದವನ್ನು ಗುರುತಿಸಿ. ಕಷ್ಟಪಟ್ಟು ದುಡಿಮೆ ಮಾಡುವುದಲ್ಲದೆ
ವಿಜಯಕ್ಕೆ ಬೇರೆ ದಾರಿ ಇಲ್ಲ. ವ್ಯಕ್ತಿತ್ವ ಇರಬೇಕು. ಅದಿಲ್ಲದೆ ನೀವು ಏನು ಸಾಧಿಸಿದರೂ ಅದಕ್ಕೆ ಬೆಲೆ ಇಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಸಹಾನುಭೂತಿ, ದಯೆ ಇರಬೇಕು.

ಹಣದ ಬೆಲೆಯನ್ನು, ಸಮಯದ ಮೌಲ್ಯವನ್ನು ತಿಳಿದುಕೊಂಡು ಅದರಂತೆ ನಡೆಯಿರಿ. ಇಲ್ಲದಿದ್ದರೆ ನೀವು ಎಷ್ಟು ಸಂಪಾದಿಸಿ ದರೂ ಅದಕ್ಕೆ ಅರ್ಥ ಇರುವುದಿಲ್ಲ. ಈ ಜೀವನದಲ್ಲಿ ಸಮತೋಲನ ಸಾಧಿಸಲು ಗುರುವಿನ ಮಾರ್ಗದರ್ಶನ ಬೇಕು, ಜತೆಗೆ ಕೆಲವು ಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

* ಸರ್ವ ಶ್ರೇಯಸ್ಸಿಗೂ, ಸರ್ವ ಪತನಕ್ಕೂ ಮಾತೇ ಮುಖ್ಯ. ಆದ್ದರಿಂದ ಮಾತನ್ನು ಕೊಡುವಾಗ ಇಂದು-ಮುಂದಿನ ಸಾಧ್ಯತೆ ಗಳನ್ನು ಅರಿತು ಮಾತು ಕೊಡುವುದು ಉತ್ತಮ.

* ನಮಗೆ ಸಿಗುವ ಸಣ್ಣ ಯಶಸ್ಸುಗಳನ್ನು ದೊಡ್ಡ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬಹುದು.

* ಬದಲಾವಣೆ ಜಗದ ನಿಯಮ. ಜೀವನದಲ್ಲಿ ಬದಲಾಗೋದು ಕಷ್ಟವೇನಲ್ಲ. ಅದಕ್ಕೆ ಮನಸ್ಸು ಮಾಡಬೇಕು. ಬದಲಾದ ಮೇಲೆ ಹಿಂದಿನದನ್ನು ಮರೆಯಬೇಕು.

* ನಾನು ಸೋಲನ್ನು ಬಹಳ ಇಷ್ಟ ಪಡುತ್ತೇನೆ. ಗೆಲುವಿನ ಮೆಟ್ಟಿಲೇ ಸೋಲು.

* ನಿರ್ಮಲ ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬಹುದು. ಪ್ರೀತಿ ವ್ಯಕ್ತಿ- ವ್ಯಕ್ತಿಯ ನಡುವೆ ಬಾಂಧವ್ಯವನ್ನು ಬೆಸೆಯುತ್ತದೆ. ಪ್ರೀತಿಯ ಅರ್ಥ ಅಗಾಧ.

* ಮೋಸ ಮಾಡುವವನಿಗೆ ತಕ್ಷಣಕ್ಕೆ ಗೆಲವು ದೊರತಿರಬಹುದು. ಆದರೆ ಹೆಚ್ಚು ಕಾಲ ಉಳಿಯುವುದಿಲ್ಲ.

* ಸರಿದಾರಿಯಲ್ಲಿ ನಡೆಯುವವನಿಗೆ ಒಂದಲ್ಲಾ ಒಂದು ದಿನ ಗೆಲವು ಸಿಕ್ಕೇ ಸಿಗುತ್ತೆ.

* ಲೋಕದಲ್ಲಿ ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬಾರದು.  ನಿಂದನೆಯನ್ನು ನಗುತ್ತಾ ಸ್ವೀಕರಿಸಿ. ಗೆಲವು ಖಂಡಿತ ಕಾದಿರುತ್ತದೆ.

* ಜೀವನದಲ್ಲಿ ದುರಾಸೆ ಒಳ್ಳೆಯದಲ್ಲ. ಇದ್ದುದ್ದರಲ್ಲಿ ತೃಪ್ತಿಪಡುವುದೇ ಲೇಸು.

* ದೀಪ ಮಾತಾಡುವದಿಲ್ಲ ಅದರ ಬೆಳಕು ದೀಪದ ಪರಿಚಯ ನೀಡುತ್ತೆ. ಒಳ್ಳೆಯ ಕೆಲಸ ಮಾಡ್ತಾ ಇರಿ, ಅದೇ ನಿಮ್ಮ ಪರಿಚಯ ನೀಡುತ್ತೆ.  ಒಬ್ಬ ವ್ಯಕ್ತಿ ಕೇಳುತ್ತಾನೆ – ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಏನು ಮಾಡಬೇಕು? ಆಗ ಒಬ್ಬ ಜ್ಞಾನಿ ಹೇಳುತ್ತಾನೆ ‘ಕಾಲು ಎಳೆಯುವುದು ಬಿಟ್ಟು ಕೈಯನ್ನು ಎಳೆಯಬೇಕು’ ಎಂದು. ಇದೇ ಜೀವನ! ಸೋಲು ಗೆಲವು ಅನ್ನೋದು ಓಡು ತ್ತಿರುವ ಎರಡು ಕಾಲುಗಳಂತೆ, ಬದಲಾಗೋದಕ್ಕೆ ಒಂದು ಸೆಕೆಂಡ್ ಸಾಕು.