ಇವರೊಬ್ಬ ಅಪರೂಪದ ಗುರು. ಮನೋವೈದ್ಯ ಕ್ಷೇತ್ರದಲ್ಲಿ ಅದೆಷ್ಟೋ ಶಿಷ್ಯರನ್ನು ತಯಾರು ಮಾಡಿದ ಗುರು. ಹಿಮಾಲಯದ ಸಾಧುಗಳ ಮೇಲೆ ಅಧ್ಯಯನ ಮಾಡಿ, ಗ್ರಂಥ ರಚಿಸಿದ ಗುರು. ಈ ಅಪರೂಪದ ‘ಮನಸ್ಸಿನ ಗುರು’ವನ್ನು ಮನೋವೈದ್ಯರೊಬ್ಬರು ಇಲ್ಲಿ ಆಪ್ತವಾಗಿ ನೆನಪಿಸಿಕೊಂಡಿದ್ದಾರೆ.
ಡಾ ಕೆ.ಎಸ್. ಪವಿತ್ರ
ನಾನಿನ್ನೂ 10 ನೇ ತರಗತಿಯಲ್ಲಿ ಓದುತ್ತಿದ್ದ ನೆನಪು. ಆಗ ಅಪ್ಪನೊಂದಿಗೆ ಬೆಂಗಳೂರಿನಲ್ಲಿ ನಡೆದ ಮನೋವೈದ್ಯರ ಸಭೆಗೆ ಹೋಗಿದ್ದೆೆ. ಮುಂದೆ ವೈದ್ಯೆಯಾಗಬೇಕೆಂಬ ಆಸೆಯಿಂದ ಅರ್ಧ ದಿನ ಪೂರ್ತಿ ಅರ್ಥವಾಗದ ಭಾಷಣಗಳನ್ನು ಕೇಳುತ್ತಿದ್ದೆ. ಅಲ್ಲಿ ನನಗೆ ಅರ್ಥವಾದ ಒಂದೇ ವಿಷಯ ಏನೆಂದರೆ, ಒಬ್ಬರು ಹಿರಿಯ ಮನೋವೈದ್ಯರು, ಅಪ್ಪ ಮತ್ತು ಅವರಂತಹ ಪ್ರಸಿದ್ಧ ವೈದ್ಯರೆಲ್ಲರಿಗೂ ಮಾತು ಕೇಳಿಸುತ್ತಿದ್ದದ್ದು!
ಕುತೂಹಲದಿಂದ ಅವರು ಯಾರು ಎಂದು ವಿಚಾರಿಸಿದ್ದೆ. ಆಗ ಅಪ್ಪ ನಕ್ಕು ಹೇಳಿದ್ದರು, ‘ಅವರು ನಮ್ಮೆಲ್ಲರ ಗುರು! ನಗುತ್ತಲೇ
ಮಾತು ಕೇಳಿಸುವ ಕಪೂರ್ ಸರ್!’ ಮತ್ತೊಮ್ಮೆ ಮನೆಗೆ ಅವರೇ ಬಂದಿದ್ದರು. ಛಳಿಯಲ್ಲಿ ತೆಳುವಾದ ಷರ್ಟ್ ಧರಿಸಿದ್ದ ಅಪ್ಪನಿಗೆ
‘ಶ್ರೀಧರ್, ನೀನು ಬೆಚ್ಚಗಿನ ಬಟ್ಟೆ ಧರಿಸಬೇಕು’ ಎಂದು ಬೈದಿದ್ದರು. ಅಪ್ಪ ತಕ್ಷಣ ಸ್ವೆೆಟರ್ ಧರಿಸಿ ಹೊರಬಂದಿದ್ದರು. ಹಿಂದೆ ಬರುತ್ತಿದ್ದ ಕಪೂರ್ ಅವರ ಪತ್ನಿ ಹೇಳಿದ್ದರು, ‘ಶ್ರೀಧರ್ ನೀನು ನನಗೆ ‘ವಿಷ್’ ಮಾಡದೇ ಬಂದೆ’ ಎಂದು ಕಣ್ಣರಳಿಸಿದ್ದರು!
ಅಪ್ಪ ನಗುತ್ತಾ, ‘ಮೇಡಂ ನಾನು ಕೈಯೆತ್ತಿ ವಿಷ್ ಮಾಡ್ದೆ, ನೀವು ನೋಡಲಿಲ್ಲ, ಇನ್ನೊಂದು ಸಲ ಮಾಡ್ತೀನಿ ಮೇಡಂ’ ಎಂದು ನಮಸ್ತೆ ಮಾಡಿದ್ದರು! ವಿದ್ಯಾರ್ಥಿಯಂತೆ ಅಪ್ಪ ನಮಸ್ಕಾರ ಮಾಡುವುದನ್ನು ನೋಡಿ ನಮಗೆ ಮಕ್ಕಳಿಗೆ ಅಚ್ಚರಿ. ಈ ಮೇಡಂ ಯಾರು? ಅವರು ಡಾ ಮಾಲವಿಕಾ ಕಪೂರ್. ಡಾ.ಆರ್.ಎಲ್.ಕಪೂರ್ ಮನೋವೈದ್ಯ ಗುರುವಾದರೆ, ಮಾಲವಿಕಾ ಮನಃಶಾ ಸ್ತ್ರಜ್ಞೆ (ಕ್ಲಿನಿಕಲ್ ಸೈಕಾಲಜಿಸ್ಟ್). ಇಬ್ಬರೂ ಅಪ್ಪನಿಗೆ ಗುರುಗಳೇ!
ಗುರುಗಳ ಗುರು
ಆರ್.ಎಲ್.ಕಪೂರ್ ಈಗ ಹಿರಿಯ ಮನೋವೈದ್ಯರು ಎನಿಸುವವರೆಲ್ಲರಿಗೂ ‘ಗುರು’. ಭಾರತ ವಿಭಜನೆಯಾಗುವ ಮೊದಲು, 1938ರಲ್ಲಿ ಪಶ್ಚಿಮ ಪಂಜಾಬ್‌ನಲ್ಲಿ ಹುಟ್ಟಿದ ರವೀಂದರ್ ಲಾಲ್ ಕಪೂರ್ ವೈದ್ಯಕೀಯ ಪದವಿ ಓದಿದ್ದು ಅಮೃತ್‌ಸರದಲ್ಲಿ. ಆಮೇಲೆ ಅವರು ಮನೋವೈದ್ಯಕೀಯ ಪದವಿ ಗಳಿಸಿದ್ದು ಆಗಿನ್ನೂ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಎಂದು ಕರೆಯಲ್ಪಡುತ್ತಿದ್ದ ಈಗಿನ ನಿಮ್ಹಾನ್ಸ್‌ನಲ್ಲಿ. ಆ ಮೇಲೆ ಕಾಮನ್‌ವೆಲ್ತ್ ಶಿಷ್ಯವೇತನ ಗಳಿಸಿದ ಮೊದಲ ಮನೋವೈದ್ಯರಾಗಿ ಹಲವು ವರ್ಷಗಳ ಕಾಲ ಇಂಗ್ಲೆೆಂಡ್‌ನಲ್ಲಿ ಅಧ್ಯಯನ ಮಾಡಿ, ಪೌರ್ವಾತ್ಯ- ಪಾಶ್ಚಿಮಾತ್ಯ ಸಂಸ್ಕೃತಿಗಳ ಸಾರವನ್ನು ಹೀರಿ ಕಪೂರ್‌ರವರು ಬಂದದ್ದು ಮರಳಿ ಭಾರತಕ್ಕೆ.
ಮೊದಲು ಮಣಿಪಾಲ, ನಂತರ ನಿಮ್ಹಾನ್ಸ್ ಎರಡೂ ಸಂಸ್ಥೆಗಳಲ್ಲಿ ಮನೋವೈದ್ಯಕೀಯ ವಿಭಾಗಗಳು ಬೆಳೆಯಲು ಶ್ರಮಿಸಿದವರು ಕಪೂರ್. ಹಾಗಾಗಿಯೇ, ದೇಶದಾದ್ಯಂತ ಇಂದು ಇರುವ ‘ಹಿರಿಯ’ ಮನೋವೈದ್ಯರಿಗೆ ಅವರು ‘ಗುರು’. ಇಷ್ಟಾಗಿದ್ದರೆ ಅವರ
ಬಗ್ಗೆ ಈ ಲೇಖನವನ್ನು ಬರೆಯುವುದೇನೂ ‘ವಿಶೇಷ’ ಎನಿಸುತ್ತಿರಲಿಲ್ಲ. ನಾನು ಮನೋವೈದ್ಯಕೀಯ ಸ್ನಾತಕೋತ್ತರ ಪದವಿ
ಪಡೆಯಲು ನಿಮ್ಹಾನ್ಸ್‌ಗೆ ಕಾಲಿಟ್ಟಿದ್ದೆ. ದೊಡ್ಡ ಗ್ರಂಥಾಲಯದಲ್ಲಿ ಕೆಳಗಿನ ಮಹಡಿಯಲ್ಲಿ ಪುಸ್ತಕಗಳನ್ನು ಹುಡುಕಿ ಓದುವ
ಅಭ್ಯಾಸ ನನಗೆ. ಹಾಗೊಮ್ಮೆ ಹುಡುಕುವಾಗ, ಒಂದು ಪುಟ್ಟ ಪುಸ್ತಕ ಕಣ್ಣಿಗೆ ಬಿದ್ದಿತ್ತು. ಅದರ ಹೆಸರು ‘ದ ಗ್ರೇಟ್ ಯುನಿವರ್ಸ್ ಆಫ್ ಕೋಟ’ – ಬರೆದಿದ್ದವರು ಕಪೂರ್ ಮತ್ತು ಕಾರ್‌ಸ್ಟೇರ್ಸ್. ಇದನ್ನು ಕನ್ನಡದಲ್ಲಿ ಓದಿದ್ದ ನೆನಪಿತ್ತು. ಅದರ ಕರ್ತೃ ಡಾ ಶಿವರಾಮ ಕಾರಂತರು!
‘ಕೋಟ ಮಹಾ ಜಗತ್ತು’ ಎಂಬ ಪುಸ್ತಕ ಕಪೂರ್‌ರವರ ಇಂಗ್ಲಿಷ್ ಅಧ್ಯಯನ ಪುಸ್ತಕದ ಅನುವಾದ. ‘ಅರೆ! ಹೇಗೆ ಇವರ ಪುಸ್ತಕ ವನ್ನು ಶಿವರಾಮ ಕಾರಂತರು ಅನುವಾದಿಸಿರಬಹುದು?’ ಎಂಬ ಪ್ರಶ್ನೆಗೆ ಅಪ್ಪ ಹೇಳಿದ್ದರು. ‘ಮಾಳವಿಕಾ ಕಪೂರ್ ಅವರು ಕಾರಂತರ ಮಗಳು. ಡಾ ಕಪೂರ್ ಕಾರಂತರ ಅಳಿಯ. ಒಂದೇ ರೀತಿಯ ಸೃಜನಶೀಲ ಮನಸ್ಸುಗಳು ಹೇಗೆ ಒಬ್ಬರನ್ನೊಬ್ಬರು ಹುಡುಕುತ್ತವೆ, ಒಂದೇ ಕೆಲಸವನ್ನು ವಿಭಿನ್ನ ರೀತಿಯಲ್ಲಿ ಮುಂದುವರೆಸುತ್ತವೆ ಎಂಬುದು ಇವರನ್ನು ನೋಡಿದರೆ ಗೊತ್ತಾಗು ತ್ತದೆ’.
ನಿಮ್ಹಾನ್ಸ್‌ನಲ್ಲಿ ಹಲವು ಅಂತರ್ ಕ್ಷೇತ್ರೀಯ ವಿಭಾಗಗಳನ್ನು ಬೆಳೆಸುವಲ್ಲಿ ಕಪೂರ್ ಶ್ರಮಿಸಿದ್ದರು. ಮುಖ್ಯವಾಗಿ ವೈದ್ಯಕೀಯ ಬೋಧನಾ ವಿಧಾನದಲ್ಲಿ ಅವರು ತಂದು ಬದಲಾವಣೆಗಳು, ಶಿಷ್ಯರನ್ನು ಸ್ನೇಹಿತರಂತೆ ನೋಡಿ ಅವರಿಗೆ ಕಲಿಸುವ, ಅವರಿಂದ ಕಲಿಯುವ ಮಾದರಿ, ಮನೋವೈದ್ಯಕೀಯವನ್ನು ‘ಕಲೆ-ವಿಜ್ಞಾನ’ ಎರಡೂ ಆಗಿ ಕಲಿಸುವ ವಿಧಾನ ಇವು ಕಪೂರರಂತಹ ಗುರು ಗಳು ಬೆಳೆಸಿದ, ಇಂದಿಗೂ ನಿಮ್ಹಾನ್ಸ್‌ನಲ್ಲಿ ನೋಡಬಹುದಾದ ವಿಷಯಗಳು.
ಹಿಂದೂಸ್ತಾನಿ ಸಂಗೀತವನ್ನು ಹಲವು ವರ್ಷಗಳ ಕಾಲ ಅವರು ಕಲಿತಿದ್ದರು. ಅವರು ಅರಬಿಂದೋರನ್ನು, ತನ್ನ ಇನ್ನಿಬ್ಬರು ಹಿರಿಯ ಗುರುಗಳು ಪ್ರೊ ಎನ್.ಸಿ.ಸೂರ್ಯ ಮತ್ತು ಪ್ರೊ ಜೆ.ಎಸ್.ನೇಕಿ ಅವರೊಂದಿಗೆ ತನ್ನ ಜೀವನದ ಮೇಲೆ ಪರಿಣಾಮ ಬೀರಿದ ವರು ಎಂದು ನೆನೆಸುತ್ತಿದ್ದರು.
ಸಾಧುಗಳ ಸಂದರ್ಶನ ಅಧ್ಯಯನ
ಅವರು ಮರಣಿಸಿದ್ದು ಇಟೆಲಿಯ ಬೆಲ್ಲಾಜಿಯೋದಲ್ಲಿ, ಅಧ್ಯಯನದ ರಜೆಯಲ್ಲಿದ್ದಾಗ. ಸಾಧುಗಳ ಮೇಲಿನ ಅವರ ಸಂಶೋಧನಾ ಕಾರ್ಯ ಆಗ ನಡೆಯುತ್ತಿತ್ತು. ಅದರ ಸಾರವೀಗ ‘ಅನದರ್ ವೇ ಟು ಲಿವ್’ ಎಂಬ ಅವರ ಪುಸ್ತಕದಲ್ಲಿ, ಹಿಮಾಲಯಕ್ಕೆ ಅವರ ಹಲವು ಪ್ರವಾಸಗಳ ಹಿನ್ನೆಲೆ, ಸಾಧುಗಳೊಂದಿಗೆ ಅವರ ಸಂದರ್ಶನಗಳೊಂದಿಗೆ ಅಡಕವಾಗಿವೆ. ಇದರ ಕನ್ನಡ ಅವತರಣಿಕೆ ‘ಬದುಕಿನ ಇನ್ನೊಂದು ಹಾದಿ’. ಅಕ್ಟೋಬರ್ 4ರಿಂದ 10ರವರೆಗಿನ ಸಪ್ತಾಹವನ್ನು ಜಗತ್ತಿನಾದ್ಯಂತ ವಿಶ್ವ ಮಾನಸಿಕ ಆರೋಗ್ಯ
ಸಪ್ತಾಹವಾಗಿ ಆಚರಿಸಲಾಗುತ್ತದೆ.
ಮನೋರೋಗಗಳ ಬಗೆಗೆ ಅರಿವು ಮೂಡಿಸುವುದು ಇದರ ಒಂದು ಅಂಗವಾದರೆ, ಕಪೂರರಂತಹ ಮನೋವೈದ್ಯ ಗುರುಗಳನ್ನು ನೆನೆಸುವುದು, ಸಮಾಜದ ‘ಮನಸ್ಸಿನ ವಿವಿಧ ಮುಖಗಳಿಗೆ ಅವರು ಮಾಡಿದ ಸೇವೆಯನ್ನು ಸ್ಮರಿಸುವುದು, ಅವರಿಂದ ಇವತ್ತಿನ ಸಮಸ್ಯೆಗಳನ್ನು ಪರಿಹರಿಸಲು ಸ್ಫೂರ್ತಿ ಪಡೆಯುವುದು ಇನ್ನೊಂದು ಮುಖ್ಯ ಅಂಗವೇ. ಕಪೂರರು ಶಿವರಾಮ ಕಾರಂತರ ಅಳಿಯ ಎಂಬುದು ಯೋಗಾಯೋಗ ಎಂಬುದು, ಮೇಲ್ನೋಟಕ್ಕೆ ಎನಿಸಬಹು ದಾದರೂ, ಮಾಲವಿಕಾರನ್ನು ನೋಡಿ ಅದು ‘ಯೋಗ’ದ ಬದಲು ಬೌದ್ಧಿಕ-ಭಾವನಾತ್ಮಕ ಸಾಂಗತ್ಯ ಎಂಬುದು ಅರಿವಾಗುತ್ತದೆ. ಕಾರಂತರ ಕೊಡುಗೆ ಮನೋವೈದ್ಯಕೀಯ ಪ್ರಪಂಚಕ್ಕೆ ಪರೋಕ್ಷ ಎನಿಸಿದ್ದರೆ, ಕಪೂರದ್ವಯರ ಕೊಡುಗೆ ಪ್ರತ್ಯಕ್ಷ! ಬೌದ್ಧಿಕ, ವೈದ್ಯಕೀಯ ವಲಯದಲ್ಲಿ ಕಪೂರರು ಖ್ಯಾತ ರಾದರೆ, ಕಾರಂತರು ಜನಸಾಮಾನ್ಯರಲ್ಲೂ ಪರಿಚಿತರು. ಆದರೆ ಸಮಾಜದ ಮನೋಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಮಾತ್ರ ಇಬ್ಬರ ಕೊಡುಗೆಯೂ ಅಪಾರವೇ!
ಕಾರಂತರು ಕಂಡ ಕಪೂರ್
ಕಾರಂತರ ಆತ್ಮಕತೆ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ ‘ನನ್ನ ಹಿರಿಯ ಮಗಳು ಮಾಲವಿಕಾ ಕಲಿಯುತ್ತಿದ್ದ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, ಮನಃ ಚಿಕಿತ್ಸಾಶಾಸ್ತ್ರ ಕಲಿಯಲು ಬಂದ ಒಬ್ಬ ಪಂಜಾಬಿ ತರುಣನ ಪರಿಚಯ ಅವಳಿಗಾಯಿತು. ಆತನ ಹೆಸರು ರವಿ ಕಪೂರ. ಆತನ ತಂದೆ ಭಾರತ ವಿಭಜನೆಯ ಕಾಲದಲ್ಲಿ ಲಾಹೋರಿನಲ್ಲಿ ತಮ್ಮ ಸರ್ವಸ್ವವನ್ನು ಕಳೆದುಕೊಂಡು ಮುಂಬಯಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ಅಮೃತಸರದಲ್ಲಿ ನೆಲೆಸಿದ್ದರು. ಒಂದು ದಿನ ನನ್ನ
ಮಗಳು ರವಿಕಪೂರನನ್ನು ವಿವಾಹವಾಗಲು ನಿರ್ಧರಿಸಿ ಕೇಳಲು ಮನೆಗೆ ಬಂದಳು. ಆತ ದೂರದವ, ಭಿನ್ನ ಸಂಸ್ಕೃತಿಯವನು ಎಂಬ ಸಂದಿಗ್ಧ ನನಗೆ. ಆದರೆ ಕಿರಿಯರ ಭವಿಷ್ಯವನ್ನು ಅವರು ನಿರ್ಧರಿಸಬೇಕಾದ್ದೇ ಹೊರತು ‘ನಾನಲ್ಲ’ ಎಂದು ತಿಳಿದೆ. ಏಳನೆಯ ದಶಕದ ಬದುಕಿನ ಕಗ್ಗತ್ತಲಲ್ಲಿ ನಿಜಕ್ಕೂ ಸಂತೋಷ ಕೊಟ್ಟ ಸಂಗತಿ ಅದು. ಬಡತನದಲ್ಲೂ ದೊರೆತ ಸಂತಸ!’.
ಫ್ರಿಂಜ್ ಸೈಕಿಯಾಟ್ರಿಸ್ಟ್
ಎನಿಸಿದ್ದ ಪ್ರಕಾಂಡ ಪಂಡಿತ ಕಪೂರರ ವಿಭಿನ್ನ ಆಸಕ್ತಿಗಳು ಮನೋವೈದ್ಯಕೀಯದೊಂದಿಗೆ ತಳುಕು ಹಾಕಿಕೊಂಡದ್ದು ಅವರ
ಅಧ್ಯಯನಗಳ ವೈವಿಧ್ಯದಿಂದ ಸುಸ್ಪಷ್ಟ. ಪಂಜಾಬ್ ಮತ್ತು ಕಾಶ್ಮೀರದ ಭಯೋತ್ಪಾದಕರ ಮಾನಸಿಕ ನೆಲೆಗಟ್ಟು, 20ನೇ ಶತಮಾನದ ಕೊನೆಯಲ್ಲಿ ಭಾರತದ ಯುವ ಜನತೆಯ ಮನಃಸ್ಥಿತಿ, ಭಾರತೀಯ ವಿಜ್ಞಾನಿಗಳಲ್ಲಿ ಸೃಜನಶೀಲತೆ, ಅಧ್ಯಾತ್ಮ ಮತ್ತು
ಮಾನಸಿಕ ಆರೋಗ್ಯ, ಐ.ಎ.ಎಸ್. ಮತ್ತು ಐ.ಪಿ.ಎಸ್. ಅಧಿಕಾರಿಗಳಲ್ಲಿ ಉದ್ಯೋಗ ತೃಪ್ತಿ ಹೀಗೆ ಈ ಅಧ್ಯಯನ ವೈವಿಧ್ಯ ಮುಂದುವರಿಯುತ್ತದೆ. ಅವರ ಈ ಆಸಕ್ತಿಗಳು ಅವರಿಗೆ ‘ಫ್ರಿಂಜ್ ಸೈಕಿಯಾಟ್ರಿಸ್ಟ್’ (ಅಪ್ರಧಾನ / ಅಮುಖ್ಯ ಮನೋವೈದ್ಯ) ಎಂಬ ಹೆಸರನ್ನೂ ಕೊಟ್ಟಿದ್ದವು. ಅಂದರೆ ಮುಖ್ಯವಲ್ಲದ ವಿಷಯಗಳಲ್ಲಿ ಅಧ್ಯಯನ ನಡೆಸುವವರು ಎಂದರ್ಥ. ಆದರೆ ಮನೋವೈದ್ಯ ಕೀಯದ ‘ಮುಖ್ಯ’ ನೆಲೆಗಳನ್ನು, ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಅವರು ಎಂದೂ ಅಲಕ್ಷಿಸಿರಲಿಲ್ಲ ಎಂಬುದು ಗಮನಾರ್ಹ. ಈ ವಿಭಿನ್ನ, ಕುತೂಹಲಕಾರಿ ಅಧ್ಯಯನಗಳ ಮಧ್ಯೆಯೂ ಅವರೊಬ್ಬರು ಜನಪ್ರಿಯ, ಬಿಡುವಿಲ್ಲದೆ ದುಡಿಯುವ ‘ವೈದ್ಯ’ರಾಗಿ ದ್ದದ್ದು ವಾಸ್ತವ.