Monday, 25th November 2024

ಕಾವೇರಿ: ಕರ್ನಾಟಕಕ್ಕೆ ಬಿಗ್‌ ರಿಲೀಫ್‌

ನವದೆಹಲಿ: ಒಟ್ಟು 18 ಟಿಎಂಸಿಗಳನ್ನು ಮೇ ಅಂತ್ಯದವರೆಗೆ ಹರಿಸಬೇಕು ಎಂಬ ತಮಿಳುನಾಡು ರಾಜ್ಯದ ಕೋರಿಕೆಗೆ ಸ್ಪಂದಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ( CWMA ) ರಾಜ್ಯದಿಂದ ತಮಿಳುನಾಡಿಗೆ ನೀರು ಬಿಡುಗಡೆಗೆ ಯಾವುದೇ ನಿರ್ದೇಶನ ನೀಡಿಲ್ಲ.

ಈ ಮೂಲಕ ನದಿ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

ನವದೆಹಲಿಯಲ್ಲಿ ನಡೆದ ಪ್ರಾಧಿಕಾರದ 28ನೇ ಸಭೆಯಲ್ಲಿ ಕರ್ನಾಟಕದ ವಾದಕ್ಕೆ ಸ್ಪಂದನೆ ಸಿಕ್ಕಿದೆ. ಹೀಗಾಗಿ ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ರಾಜ್ಯಕ್ಕೆ ಇಲ್ಲದಂತಾಗಿದೆ.

ಕರ್ನಾಟಕದ 4 ಜಲಾಶಯಗಳಿಗೆ 2023ರ ಜೂನ್‌ 1ರಿಂದ ಜನವರಿ 29ರವರೆಗೆ ಶೇ.52.44ರಷ್ಟು ಒಳಹರಿವಿನ ಕೊರತೆ ಇದೆ. ಫೆಬ್ರವರಿ ಪೂರ್ಣ ಅವಧಿಗೆ ಕರ್ನಾಟಕವು ಸುಪ್ರೀಂ ಕೋರ್ಟ್‌ ಮಾರ್ಪಡಿಸಿದಂತೆ ಕಾವೇರಿ ಜಲವಿವಾದ ನ್ಯಾಯಾಧೀಕರಣದ ಆದೇಶದಂತೆ ನಿಗದಿತ ಪ್ರಮಾಣದ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಜನವರಿ 18ರಂದು ನಡೆದಿದ್ದ ಸಭೆಯಲ್ಲಿ ನಿರ್ಧರಿಸಿತ್ತು.

ಡಿಸೆಂಬರ್‌ 19ರಿಂದ ಜನವರಿ 28ರವರೆಗೆ ಕರ್ನಾಟಕದ ಜಲಾಶಯಗಳಲ್ಲಿ ಶೇ. 52.46ರಷ್ಟು ಒಳಹರಿವಿನ ಕೊರತೆ ಇದೆ ಎಂದು ಕರ್ನಾಟಕ ವಾದ ಮಂಡಿಸಿತು.