Thursday, 12th December 2024

ಮಂಗನಕಾಯಿಲೆ; ಆದಷ್ಟು ಬೇಗ ವ್ಯಾಕ್ಸಿನ್ ಬರಲಿ

ಮಲೆನಾಡಿನ ಕಾಯಿಲೆ ಎಂದೇ ಗುರುತಿಸಲ್ಪಡುವ ಮಂಗನ ಕಾಯಿಲೆಯು ಈ ಬಾರಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿದೆ. ನಿನ್ನೆ ಮೊನ್ನೆ ಕಾಣಿಸಿಕೊಂಡು ವಿಶ್ವವ್ಯಾಪಿ ವಿಸ್ತರಿಸಿದ ಕೋವಿಡ್-೧೯ಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸಾವಿರಾರು ಕೋಟಿ ರು. ಗಳನ್ನು ವೆಚ್ಚ ಮಾಡಿ ನಿಯಂತ್ರಣ ಕ್ರಮ ಕೈಗೊಂಡರೆ, ಆರೂವರೆ ದಶಕಗಳಿಂದ ರಾಜ್ಯದ ಅರಣ್ಯ ವಾಸಿಗಳಿಗೆ ನರಕ ತೋರಿಸುತ್ತಿರುವ ಮಂಗನ ಕಾಯಿಲೆಗೆ ಸರಕಾರ ಓಬಿರಾಯನ ಕಾಲದ ಪದ್ಧತಿಯನ್ನೆ ನೆಚ್ಚಿಕೊಂಡು ಕುಳಿತಿರುವುದು ವಿಪರ್ಯಾಸ.

ಈ ಕಾಯಿಲೆ ಮೇಲೆ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಕಳೆದ ೩೫ ವರ್ಷದಿಂದ ಒಂದೇ ಒಂದು ಯಶಸ್ವಿ ಸಂಶೋಧನೆ ನಡೆದಿಲ್ಲ. ಕಾಯಿಲೆಗೆ ಕೊಡಲಾಗುತ್ತಿರುವ ಕಿಲ್ಡ ವ್ಯಾಕ್ಸಿನ್‌ನಲ್ಲಿ ರೋಗ ನಿರೋಧಕ ಶಕ್ತಿ ಸಾಮರ್ಥ್ಯ ಒಂದು ವರ್ಷಕ್ಕಿಂತ ಕಡಿಮೆ ಇದೆ. ಮೂರು ಡೋಸ್ ತೆಗೆದುಕೊಂಡರೂ ಶೇ.೧೦೦ ರೋಗ ನಿರೋಧಕ ಶಕ್ತಿ ಬರುವುದಿಲ್ಲ. ೩ ಡೋಸ್ ಹಾಕಿಸಿಕೊಂಡ ಬಳಿಕವೂ ರೋಗ ನಿರೋಧಕ ಶಕ್ತಿ ಶೇ.೮೩ರಷ್ಟು ಮಾತ್ರ ಇರುತ್ತದೆ.

ಶೇ.೧೭ರಷ್ಟು ಜನರಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕವೂ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಪ್ರತಿ ವರ್ಷ ನಿರಂತರವಾಗಿ ತೆಗೆದುಕೊಂಡಾಗ ಮಾತ್ರ ಪೂರ್ಣ ರೋಗ ನಿರೋಧಕ ಶಕ್ತಿ ಪಡೆಯುವುದು ಸಾಧ್ಯವೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಕೆಎಫ್ ಡಿ ಕಾಯಿಲೆಯು ಕರ್ನಾಟಕದ ಮಲೆನಾಡಿಗೆ ಸೀಮಿತವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಆರಂಭವಾಗಿ ಬೇಸಿಗೆ ಅಂತ್ಯದೊಳಗೆ ಮಾತ್ರ ಇರುವುದರಿಂದ ವ್ಯಾಕ್ಸಿನ್ ಅಥವಾ ಔಷಧಕ್ಕೆ ವರ್ಷ ಪೂರ್ತಿ ಬೇಡಿಕೆ ಇರುವುದಿಲ್ಲ ಎಂಬ ಕಾರಣಕ್ಕೆ ಖಾಸಗಿ ಸಂಶೋಧಕರು ಅಥವಾ ಸಂಶೋಧನಾ ಸಂಸ್ಥೆಗಳು ಸಂಶೋಧನೆಗೆ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ.

ಹೀಗಾಗಿ ಕಾಯಿಲೆ ಉಲ್ಬಣಿಸಿದಾಗಲೆ ಕೆಎಫ್ ಡಿ ಬಗ್ಗೆ ಹೊಸ ಸಂಶೋಧನೆಗಳು ನಡೆಯಬೇಕು, ಪೋಲಿಯೋ ಮಾದರಿಯಲ್ಲಿ ಲೈವ್ ವ್ಯಾಕ್ಸಿನ್ ಅಭಿವೃದ್ಧಿಪಡಿಸಬೇಕು ಎಂಬ ಆಗ್ರಹ ಪ್ರತಿ ವರ್ಷ ಕೇಳಿ ಬರುತ್ತದೆ. ಸರಕಾರ ಸಹ ಹೊಸ ಭರವಸೆಗಳನ್ನು ನೀಡುತ್ತದೆ. ಆದರೆ, ಆನಂತರದಲ್ಲಿ ಮರೆತೇ ಹೋಗುತ್ತದೆ. ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ಕುರಿತು ಐಸಿಎಂಆರ್ ಜತೆ ಚರ್ಚೆ ನಡೆಸಲಾಗಿದ್ದು, ವ್ಯಾಕ್ಸಿನ್ ತಯಾರಿಕೆಗೆ ಐಸಿಎಂ ಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿzರೆ. ಆದಷ್ಟು ಬೇಗ ವ್ಯಾಕ್ಸಿನ್ ತಯಾರಾಗಲಿ.