Sunday, 5th January 2025

ಧೀರೋದಾತ್ತ ನಾಯಕನನ್ನೇ ಮತ್ತೊಮ್ಮೆ ಚುನಾಯಿಸೋಣ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

‘ನರೇಂದ್ರ ಮೋದಿ’- ಇದು ಇಂದಿನ ಆರ್ಥಿಕ ಜಗತ್ತು ಹಾಗೂ ವಿಶ್ವ ರಾಜಕೀಯದಲ್ಲಿ ಬಹುಚರ್ಚಿತ ಹೆಸರು. ‘ನನ್ನ ಮುತ್ತಾತ ರಾಜಕೀಯದಲ್ಲಿದ್ದರು, ನನ್ನ ತಾತ- ಅಜ್ಜಿ-ಅಪ್ಪ ಪ್ರಧಾನಿಯಾಗಿದ್ದರು ಮತ್ತು ನನ್ನ ಅಮ್ಮ ಪ್ರಧಾನಿಗೇ ಪ್ರಧಾನಿಯಾಗಿದ್ದರು; ಆದ್ದರಿಂದ ನನ್ನನ್ನು ನೀವು ಭಾರತದ ಪ್ರಧಾನಿ ಯನ್ನಾಗಿ ಮಾಡಲೇಬೇಕು’ ಎನ್ನುತ್ತ ಬರಲಿಲ್ಲ ನರೇಂದ್ರ ಮೋದಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಯಾವ ಪ್ರತಿPಲಾಪೇಕ್ಷೆಯಿಲ್ಲದೆ ದುಡಿಯುತ್ತಿದ್ದ ಈ ವ್ಯಕ್ತಿಗೆ ಅಧಿಕಾರ ಒಲಿದುಬಂದಿದ್ದು ಮಾತ್ರ ತಾನಾಗಿಯೇ!

ಇದಕ್ಕೆ ಅವರು ಯಾವ ವಶೀಲಿಬಾಜಿ ಮಾಡಲಿಲ್ಲ. ಇಂದಿರಾ ಗಾಂಧಿಯವರು ಹೇರಿದ್ದ ಕರಾಳ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಭೂಗತರಾಗಿದ್ದ ಮೋದಿ, ೧೯೭೭ರ ನಂತರ ಗುಜರಾತ್ ಲೋಕಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದರು. ಹೀಗೆ ಪ್ರಚಾರಕರಾಗಿ ಕಾರ್ಯ ನಿರ್ವಹಿಸು ತ್ತಿದ್ದಾಗ ೧೯೮೫ರಲ್ಲಿ ಕಾರ್ಯನಿಮಿತ್ತ ಬಿಜೆಪಿಗೆ ನೇಮಕಗೊಂಡರು. ನಂತರ, ಆಡ್ವಾಣಿ ನೇತೃತ್ವದ ರಥಯಾತ್ರೆಯ ವೇಳೆ (೧೯೮೭) ಸಂಘಟನಾ ಕಾರ್ಯ ದರ್ಶಿಯಾಗಿ ಮುಂದೆ ನಿಂತು ಆ ಯಾತ್ರೆಯನ್ನು ಸಂಘಟಿಸಿದ ಶ್ರೇಯಸ್ಸು ಮೋದಿ ಮತ್ತು ಅಂದಿನ ಅವರ ತಂಡಕ್ಕೆ ಸಲ್ಲುತ್ತದೆ.

ನಂತರ ರಾಜಕೀಯ ತೊರೆದು ಅಹಮದಾಬಾದ್‌ನಲ್ಲಿ ಚಿಕ್ಕ ಶಾಲೆಯೊಂದನ್ನು ನಡೆಸಿಕೊಂಡು ಹೋಗುತ್ತಿದ್ದರು ಮೋದಿ. ಆದರೆ ವಿಧಾತನ ಎಣಿಕೆ ಬೇರೆಯೇ ಇತ್ತು; ಹೀಗಾಗಿ ಭಾರತದ ಭಾಗ್ಯವಿಧಾತ ನಮಗೆ ದೊರಕುವಂತಾಯಿತು. ಪಟೇಲ್ ಸರಕಾರದ ವೈಫಲ್ಯದ ಪರಿಹಾರಾರ್ಥವಾಗಿ ಗುಜರಾತ್‌ಗೆ ಹೋಗುವಂತೆ ಆಡ್ವಾಣಿಯವರು ಹೇಳಿದ್ದನ್ನು ಪರಿಪಾಲಿಸಿದ ಮೋದಿಯವರು ೨೦೦೧ರ ಅಕ್ಟೋಬರ್ ೭ರಂದು ಅಲ್ಲಿನ ಮುಖ್ಯಮಂತ್ರಿಯಾಗಿ
ಅಧಿಕಾರ ವಹಿಸಿಕೊಂಡರು.

ಗುಜರಾತನ್ನು ಆರ್ಥಿಕತೆಯ ಆಧಾರದ ಮೇಲೆ ಅಭಿವೃದ್ಧಿ ಮಾಡಲು ಮೋದಿ ತಯಾರಾಗುತ್ತಿದ್ದಂತೆ, ೨೦೦೨ರ ಫೆಬ್ರವರಿ ೨೭ರಂದು ಒಂದು ದುರಂತ ಸಂಭವಿಸಿಬಿಟ್ಟಿತು; ಅಯೋಧ್ಯೆಯಿಂದ ಗೋಧ್ರಾಗೆ ತೆರಳುತ್ತಿದ್ದ ೬೦ಕ್ಕೂ ಹೆಚ್ಚು ಹಿಂದೂ ಯಾತ್ರಿಗಳಿದ್ದ ರೈಲುಬೋಗಿಗೆ ದುರುಳರು ಬೆಂಕಿ ಹಚ್ಚಿ ಸಜೀವ ದಹನ ಮಾಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ಗಲಭೆಗೆ ಮೋದಿಯವರೂ ಕಾರಣವೆನ್ನುವ ಮೂಲಕ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನವೂ ನಡೆಯಿತು. ನಂತರ ಭಾರತದ ಸರ್ವೋಚ್ಚ ನ್ಯಾಯಾಲಯವು ಗಲಭೆ ಸಂಬಂಽತ ಹಲವು ಪ್ರಕರಣಗಳ ಮರುವಿಚಾರಣೆಗೆ ನಿರ್ಧರಿಸಿ ಒಂದು ಎಸ್‌ಐಟಿ ತನಿಖಾ ತಂಡವನ್ನು ನೇಮಿಸಿತು.

ಮೋದಿ ವಿರುದ್ಧದ ಆರೋಪಗಳೆಲ್ಲವೂ ಆಧಾರರಹಿತವಾಗಿದ್ದು ಅವರು ನಿರ್ದೋಷಿಯಾಗಿದ್ದಾರೆಂದು ಸುಪ್ರೀಂಕೋರ್ಟ್ ಮಾರ್ಚ್ ೨೦೧೦ರಲ್ಲಿ  ಹೇಳಿತು. ಹೀಗೆ ಆರೋಪಗಳಿಂದ ಮುಕ್ತರಾದ ಮೋದಿ, ರಾಜ್ಯದಲ್ಲಿ ಉತ್ತಮ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾದರು. ವಿಶ್ವದ ಬೃಹತ್ ಉದ್ದಿಮೆಗಳು, ಪ್ರತಿಷ್ಠಿತ ಕಂಪನಿಗಳು ಹೂಡಿಕೆ ಮಾಡಲೆಂದು ಗುಜರಾತ್‌ಗೆ ಬರತೊಡಗಿ ದವು. ಹೀಗಾಗಿ ‘ಗುಜರಾತ್ ಅಭಿವೃದ್ಧಿ ಮಾದರಿ’, ‘ಮೋದಿ ಮಾಡೆಲ್’ ಎಂದೆಲ್ಲಾ ದೇಶಾದ್ಯಂತ ಪ್ರಚಾರವಾಯಿತು.

೨೦೧೪ರ ಮೇ ೨೬ರಂದು ಭಾರತದ ೧೪ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಚುಕ್ಕಾಣಿ ಹಿಡಿಯುತ್ತಿದ್ದಂತೆ, ‘ಚಿಕ್ಕ ಸರಕಾರ, ಗರಿಷ್ಠ ಆಡಳಿತ ಮತ್ತು ಶೂನ್ಯ ಭ್ರಷ್ಟಾಚಾರ’ ಎಂಬ ಮೂಲತತ್ವದೊಂದಿಗೆ ಆಡಳಿತಕ್ಕೆ ತೊಡಗಿದ ಮೋದಿಯವರು ಮೊದಲು ಹಿಡಿತಕ್ಕೆ ತಂದಿದ್ದು ದೇಶದ ಆರ್ಥಿಕ ಅವ್ಯವಸ್ಥೆಯನ್ನು. ಇದಕ್ಕಾಗಿ, ಜಡ್ಡುಗಟ್ಟಿದ್ದ ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗದ ಮೂಲಕ ನವಭಾರತಕ್ಕೆ ಅಡಿಪಾಯ ಹಾಕಿದರು.

ಭ್ರಷ್ಟಾಚಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದರು. ಮೊದಲ ೩ ವರ್ಷದ ಅವಧಿಯಲ್ಲಿ, ಬೇಡವಾದ ೧೨೦೦ ಕಾನೂನುಗಳನ್ನು ರದ್ದುಪಡಿಸಿದರು.
೨೦೧೪ರ ಅಕ್ಟೋಬರ್ ೩ರಂದು, ‘ಮನ್ ಕಿ ಬಾತ್’ ಎಂಬ ಕಾರ್ಯಕ್ರಮದ ಮೂಲಕ ಆಕಾಶವಾಣಿಗೆ ಮರುಜೀವ ಕೊಟ್ಟರು. ಉತ್ತಮ ಆಡಳಿತ ನೀಡುವ ಮೂಲಕ, ನವಚೈತನ್ಯ ನೀಡುವ ನಾಯಕನಿಗಾಗಿ ದೇಶ ಕಾಯುತ್ತಿತ್ತೇನೋ ಎಂಬಂಥ ವಾತಾವರಣವನ್ನು ನಿರ್ಮಿಸಿದರು. ಉಚಿತ ಪಡಿತರಕ್ಕಾಗಿನ ಗರೀಬ್ ಕಲ್ಯಾಣ್ ಯೋಜನೆ, ಜನೌಷಧಿ ಕೇಂದ್ರಗಳು, ಮುದ್ರಾ, ಆವಾಸ್, ಅಟಲ್ ಪಿಂಚಣಿ, ಕಿಸಾನ್ ಸಮ್ಮಾನ್, ನಾರಿಶಕ್ತಿ ವಂದನಾ ಯೋಜನೆಗಳು
ಮಾತ್ರವಲ್ಲದೆ, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸೇರುವ ‘ನೇರ ನಗದು ವರ್ಗಾವಣೆ’ಯಂಥ ಉಪಕ್ರಮಗಳು ಹಾಗೂ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ಯಾವ ಜಾತಿ-ಧರ್ಮದ ತಾರತಮ್ಯವಿಲ್ಲದೆ ದೇಶಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದರು.

‘ಉಜ್ವಲಾ’ ಯೋಜನೆ ಯಡಿ ಬಡಕುಟುಂಬಗಳಿಗೆ ದಾಖಲೆ ಪ್ರಮಾಣದಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕವನ್ನು ನೀಡಲಾಯಿತು. ಜಗತ್ತಿನ ಯಾವುದೇ ಸಮಸ್ಯೆ ಅಥವಾ ಚರ್ಚಾವಿಷಯದ ಕುರಿತಾಗಿ ಭಾರತದ ಸಲಹೆ-ಸೂಚನೆ ಪಡೆಯುವುದು ಅನಿವಾರ್ಯವಾಗುವಂಥ ರಾಜಕೀಯ ಸ್ಥಿತಿಯನ್ನು ವಿಶ್ವ ಮಟ್ಟದಲ್ಲಿ ಹುಟ್ಟುಹಾಕಿರುವುದು ಮೋದಿಯವರ ಹೆಗ್ಗಳಿಗೆ. ಇದನ್ನು ವಿದೇಶಿಗರು ‘ಮೋದಿ ಪಾಲಿಸಿ’ ಎಂದೇ ಕರೆಯುತ್ತಾರೆ. ಮೋದಿಪ್ರಣೀತ ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟಪ್ ಇಂಡಿಯಾ’ದಂಥ ಯೋಜನೆಗಳಿಂದಾಗಿ ಇಂದಿನ ಯುವಜನರು ವಿಶ್ವಮಟ್ಟದಲ್ಲಿ ಹೂಡಿಕೆ ಮಾಡುವಂತಾಗಿದೆ,
ಬೆಳವಣಿಗೆ ಹೊಂದುವಂತಾಗಿದೆ.

ಜತೆಗೆ, ಜಗತ್ತಿನ ಇತರ ದೇಶಗಳು ಭಾರತದಲ್ಲಿನ ತಮ್ಮ ಸಹಭಾಗಿತ್ವಕ್ಕಾಗಿ ತುದಿಗಾಲಲ್ಲಿ ನಿಲ್ಲುವಂತಾಗಿದೆ. ರೈಲ್ವೆ ಯೋಜನೆಗಳಂತೂ ಶರವೇಗದಲ್ಲಿ
ಪೂರ್ಣಗೊಳ್ಳುತ್ತಿವೆ. ಸೇತುವೆಗಳು, ರೈಲುಮಾರ್ಗದ ವಿದ್ಯುದೀಕರಣ, ಅಮೆರಿಕದ ರಸ್ತೆಗಳನ್ನೂ ಮೀರಿಸುವಂಥ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಉಲ್ಲೇಖಿಸಬಹುದಾದ ಮತ್ತಷ್ಟು ಉಪಕ್ರಮಗಳು. ಇಂದು ಎಲ್ಲ ಅಭಿವೃದ್ಧಿ ಯೋಜನೆಗಳಲ್ಲಿ ವಿಶ್ವಮಟ್ಟದ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಆತ್ಮನಿರ್ಭರತೆಯನ್ನು ಸಾಧಿಸಲು ಸ್ವದೇಶಿ ತಂತ್ರಜ್ಞಾನದ, ಅತಿವೇಗದ ‘ವಂದೇಭಾರತ್’ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲಾಗಿದೆ. ಮುಂಬೈನಿಂದ ಅಹಮದಾಬಾದ್‌ಗೆ ಸಂಚರಿಸಲಿರುವ ದೇಶದ ಮೊಟ್ಟಮೊದಲ ಬುಲೆಟ್ ರೈಲಿಗೆ ಕೆಲವೇ ತಿಂಗಳಲ್ಲಿ ಚಾಲನೆ ಸಿಗಲಿದೆ.

ವಿರೋಽಗಳು ಎಷ್ಟೇ ವಿಘ್ನಗಳನ್ನು ಒಡ್ಡಿದರೂ ಎದೆಗುಂದದೆ, ಅಂದುಕೊಂಡ ಯೋಜನೆಗಳನ್ನು ಮಾಡಿ ಮುಗಿಸಿದ ಛಾತಿ ಮೋದಿಯವರದ್ದು. ಇಲ್ಲಿವೆ ನೋಡಿ ಅದಕ್ಕೆ ಒಂದಷ್ಟು ಪುರಾವೆಗಳು: ಕೋವಿಡ್ ಮಹಾಮಾರಿ ಅಪ್ಪಳಿಸಿದಾಗ ಅಮೆರಿಕ ದಂಥ ವಿಶ್ವದ ಮುಂದುವರಿದ ದೇಶಗಳೇ ಕೈಚೆಲ್ಲಿದಾಗ,
ಮನೆಯ ಹಿರಿಯನಂತೆ ವೈದ್ಯಲೋಕದೊಂದಿಗೆ ನಿಂತು, ದೇಶದ ಕೋಟ್ಯಂತರ ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಾ, ವಿರೋಧಿಗಳ ಅಪಪ್ರಚಾರದ ನಡುವೆಯೂ ಕೋವಿಡ್ ಸಂಕಷ್ಟವನ್ನು ಮೋದಿ ನಿಭಾಯಿಸಿದ್ದು ವಿಶ್ವ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.

ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ರಾಮಮಂದಿರವನ್ನು ನಿರ್ಮಿಸಿ, ಬಹು ವಿಜೃಂಭಣೆಯಿಂದ ದೇಶಕ್ಕೆ ಸಮರ್ಪಿಸಿದರು. ಪದೇಪದೆ ಭಯೋತ್ಪಾದಕ ದಾಳಿಗೆ ಕುಮ್ಮಕ್ಕು ನೀಡಿ ಭಾರತೀಯ ಯೋಧರ ಸಾವುನೋವಿಗೆ ಕಾರಣವಾಗಿದ್ದ ಪಾಕಿಸ್ತಾನಕ್ಕೆ, ೨ ಬಾರಿಯ ಸರ್ಜಿಕಲ್ ಸ್ಟ್ರೈಕ್ ಮೂಲಕ ತಪರಾಕಿ ನೀಡಿದರು. ದೇಶದ ರಕ್ಷಣೆಯ ನಿಟ್ಟಿನಲ್ಲಿ ಇರಾನ್‌ನ ಚಾಬಹಾರ್ ಬಂದರು ಪ್ರದೇಶವನ್ನು ೨೦೧೮ರ ಡಿಸೆಂಬರ್‌ನಲ್ಲಿ ಭಾರತದ
ಬಳಕೆಗೆ ಪಡೆದುಕೊಂಡರು; ಚೀನಾದ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಮ್ಯಾನ್ಮಾರ್‌ನ ಸಿತ್‌ವೇ ಬಂದರಿನ ಬಳಕೆಗೆ ೨೦೧೬ರಲ್ಲಿ ಒಡಂಬಡಿಕೆ ಮಾಡಿಕೊಂಡರು.

ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರತೀಕವಾಗಿದ್ದ ‘ತ್ರಿವಳಿ ತಲಾಖ್’ ಪದ್ಧತಿಯನ್ನು ನಿಷೇಧಿಸುವ ಮೂಲಕ, ಆ ಮಹಿಳೆಯರು ಆತ್ಮಸಮ್ಮಾನ ದಿಂದ ಬದುಕುವುದಕ್ಕೆ ಅನುವುಮಾಡಿಕೊಟ್ಟರು. ಕಾಂಗ್ರೆಸ್‌ನಿಂದ ಕಡೆಗಣಿಸಲ್ಪಟ್ಟಿದ್ದ ಬಾಬಾಸಾಹೇಬರಿಗೆ ನ್ಯಾಯ ಒದಗಿಸಲು ಮೋದಿ ಸರಕಾರವು ಅಂಬೇಡ್ಕರ್ ಅವರ ಪ್ರಮುಖ ಕ್ಷೇತ್ರಗಳನ್ನು ಕೋಟ್ಯಂತರ ರು. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ಪಂಚತೀರ್ಥಗಳೆಂದು ದೇಶಕ್ಕೆ ಸಮರ್ಪಿಸಿತು.

ವಿದೇಶಿ ನೆಲೆಗಳಲ್ಲಿನ ಯುದ್ಧದ ಸಮಯದಲ್ಲಿ ಮೋದಿ ಸರಕಾರವು ರಾಜತಾಂತ್ರಿಕತೆಯನ್ನು ಸಮರ್ಥವಾಗಿ ಬಳಸಿ, ಭಾರತದ ಸಾವಿರಾರು ನಾಗರಿಕರನ್ನು ದೇಶಕ್ಕೆ ಸುರಕ್ಷಿತವಾಗಿ ಕರೆತಂದಿತು. ಇದು ವಿಶ್ವದೆಲ್ಲೆಡೆ ಪ್ರಶಂಸೆಗೂ ಪಾತ್ರವಾಯಿತು. ಇದೇ ರೀತಿ, ರಷ್ಯಾ-ಉಕ್ರೇನ್ ಯುದ್ಧಭೂಮಿಯಿಂದ ೨೫ ಸಾವಿರ ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ‘ಆಪರೇಷನ್ ಗಂಗಾ’ ಕಾರ್ಯಾಚರಣೆಯ ಮೂಲಕ ರಕ್ಷಿಸಿ ಭಾರತಕ್ಕೆ ಕರೆತರಲಾಯಿತು. ಹೀಗೆ ಭಾರತದ ನಾಗರಿಕರು ತಾವು ಜಗತ್ತಿನ ಯಾವುದೇ ನೆಲದಲ್ಲಿದ್ದರೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಬಲ್ಲೆವು ಎಂಬ ಧೈರ್ಯ ತಳೆಯಲು ಸಾಧ್ಯವಾಯಿತು.

ಗೂಢಚಾರಿಕೆಯ ಆರೋಪದ ಮೇಲೆ ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ೮ ಮಂದಿ ಮಾಜಿ ಅಧಿಕಾರಿಗಳನ್ನು ಶಿಕ್ಷೆ ಯಿಂದ ಪಾರು ಮಾಡಿ ತಾಯ್ನಾಡಿಗೆ ಸುರಕ್ಷಿತವಾಗಿ ಕರೆತಂದಿದ್ದೂ ಮೋದಿ ಸರಕಾರದ ಸಾಧನೆಯೇ. ದೇಶಕ್ಕೆ ಮಾರಕವಾಗಿದ್ದ ಆಂತರಿಕ ಹಾಗೂ ಬಾಹ್ಯ ದಾಳಿಕೋರರನ್ನು ಸಮರ್ಥವಾಗಿ ಸದೆಬಡಿದಿರುವ ಮೋದಿ, ಭಾರತಕ್ಕೆ ಕಂಟಕವಾಗಿದ್ದ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಹಣಿದಿದ್ದಾರೆ ಮತ್ತು ಚೀನಾ ಕಾಲಾನುಕಾಲಕ್ಕೆ ಒಡ್ಡುತ್ತ ಬಂದಿರುವ ಸವಾಲುಗಳನ್ನು ನಿಭಾಯಿಸಿದ್ದಾರೆ. ಹೀಗಾಗಿ, ಮ್ಯಾನ್ಮಾರ್‌ನ ಉಗ್ರಪಡೆ, ರೋಹಿಂಗ್ಯಾಗಳ ಅನಧಿಕೃತ ವಾಸ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸಲು ಮೋದಿಯವರ ನಾಯಕತ್ವ ಈ ದೇಶಕ್ಕೆ ಮತ್ತೊಮ್ಮೆ ಬೇಕಿದೆ.

ಕಾಶ್ಮೀರದ ವಿಚಾರಕ್ಕೆ ಕೈಹಾಕಿದರೆ ದೇಶದ ತುಂಬಾ ರಕ್ತಪಾತವಾಗುತ್ತೆ ಎಂಬ ಹುಸಿಗೊಂಬೆಯನ್ನು ಎಲ್ಲರ ತಲೆಯಲ್ಲಿ ಕೂರಿಸಿದ್ದ ಕಾಂಗ್ರೆಸ್ ಪಕ್ಷವು, ಇಂಥ ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ಹೇಳುತ್ತ ದೇಶವನ್ನೇ ನಿರ್ವೀರ್ಯಗೊಳಿಸಿತ್ತು. ಆದರೆ ವಿಶ್ವ ಮಟ್ಟದಲ್ಲಿ ಏನೆಲ್ಲ ಒತ್ತಡಗಳು ಬಂದರೂ ಹಿಂಜರಿ ಯದೆ ಸಂವಿಧಾನದ ೩೭೦ ಮತ್ತು ೩೫ ಎ ವಿಧಿಗಳನ್ನು ಮೋದಿಯವರು ಕಿತ್ತೆಸೆಯುವ ಮೂಲಕ ದೇಶದ ಸಾರ್ವಭೌಮತೆಗೆ ಒದಗಿದ್ದ ಕಪ್ಪುಮಚ್ಚೆ ಯನ್ನು ತೊಡೆದುಹಾಕಿದ್ದಾರೆ. ದೇಶಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಮತ್ತು ‘ದೇಶವೇ ನನ್ನ ಪರಿವಾರ’ ಎನ್ನುತ್ತ ಬದುಕುತ್ತಿರುವ ಮೋದಿಯವರು ಮತ್ತೊಮ್ಮೆ ಆಯ್ಕೆಯಾಗಿ ಬರಲಿ ಎಂದು ಆಶಿಸೋಣ. ದೇಶ ಕಟ್ಟುವ ನಾಯಕನಿಗೆ ನಮ್ಮೆಲ್ಲರ ಪವಿತ್ರ ಮತಗಳನ್ನು ಮೀಸಲಾಗಿ ಡೋಣ.

Leave a Reply

Your email address will not be published. Required fields are marked *