Saturday, 14th December 2024

ಸಾಲದ ಬಲವಂತ ವಸೂಲಿಗೆ ಕಡಿವಾಣ ಹಾಕಿ

ರಾಜ್ಯಾದ್ಯಂತ ಭೀಕರ ಬರಗಾಲ ಆವರಿಸಿದ್ದರಿಂದ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಕುಟುಂಬ ಸಮೇತ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇಂತಹ ಸಂದರ್ಭದಲ್ಲಿ ನಾನಾ ಖಾಸಗಿ ಕಂಪನಿಗಳು, ಸ್ತ್ರೀಶಕ್ತಿ ಸಂಘಗಳು, ಬ್ಯಾಂಕ್‌ಗಳು ರೈತರಿಗೆ ನೀಡಿದ್ದ ಸಾಲವನ್ನು ಬಲವಂತವಾಗಿ ವಸೂಲಿ ಮಾಡಲು ಮುಂದಾಗಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಸಾಲ ವಸೂಲಿ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಪ್ರತಿನಿಧಿಗಳು ಬಲಪ್ರಯೋಗ, ಕಿರುಕುಳ ನೀಡುವಂಥ ಕ್ರಮಗಳನ್ನು ಅನುಸರಿಸುವಂತೆ ಇಲ್ಲ.

ಅನಪೇಕ್ಷಿತ ಸಂದೇಶಗಳನ್ನು, ಅನಾಮಧೇಯರ ಹೆಸರಿನಲ್ಲಿ ಬೆಳಗ್ಗೆ ೮ ಗಂಟೆಯಿಂದ ಮೊದಲು ಮತ್ತು ರಾತ್ರಿ ೭ ಗಂಟೆಯ ಬಳಿಕ ಫೋನ್ ಮಾಡು ವಂತಿಲ್ಲ ಎಂಬ ಭಾರತೀಯ ರಿಸರ್ವ್ ಬ್ಯಾಂಕ್‌ನ ಆದೇಶವನ್ನು ಯಾವ ಸಂಸ್ಥೆಗಳೂ ಪಾಲಿಸುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕುಗಳಲ್ಲಿ
ಹಾಗೂ ಫೋನಾಗಳಲ್ಲಿಯೂ ಅನೇಕ ರೈತರು ಸಾಲ ಪಡೆದಿದ್ದಾರೆ. ಇದೀಗ ಆ ಸಾಲದ ಕಂತು ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದರೆ ಹಣಕಾಸು
ಸಂಸ್ಥೆಗಳು ರೈತರ ಗೋಳನ್ನು ಕೇಳುತ್ತಿಲ್ಲ. ಬಡ ಕುಟುಂಬಗಳಿಗೆ ನೆರವಾಗಲೆಂದು ರಾಜ್ಯ ಸರಕಾರದಿಂದ ರೈತರ ಖಾತೆಗೆ ಜಮೆಯಾಗುವ ವೃದ್ಧಾಪ್ಯ
ವೇತನ, ವಿಧವಾ ವೇತನ, ಗೃಹಲಕ್ಷ್ಮೀ ಸೇರಿ ಸರಕಾರಿ ಸೌಲಭ್ಯಗಳ ಹಣವನ್ನು ಕೂಡ ಸಾಲದ ಕಂತುಗಳಿಗೆ ಹೊಂದಾಣಿಕೆ ಮಾಡುತ್ತಿವೆ.

ಇದರಿಂದಾಗಿ ಕುಟುಂಬ ನಿರ್ವಹಣೆಗೆ ಸಹಾಯವಾಗಲಿದೆ ಎಂಬ ನಂಬಿದ್ದ ಹಣವೂ ಕೈಗೆ ಸೇರುತ್ತಿಲ್ಲ. ಆದ್ದರಿಂದ ರೈತರಿಂದ ಯಾವುದೇ ಸಾಲ ವಸೂ ಲಿಗೆ ಬಲವಂತದ ಕ್ರಮ ವಹಿಸದಂತೆ ರಾಜ್ಯ ಸರಕಾರ ಸೂಚನೆ ನೀಡಬೇಕು. ಸರಕಾರದಿಂದ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿ ಸಾಲ ಸೌಲಭ್ಯಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕು. ಬ್ಯಾಂಕುಗಳು ಮಾತ್ರವಲ್ಲದೇ, ಖಾಸಗಿ ಲೇವಾದೇವಿದಾರರಿಂದ ಕೂಡ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆ ನೀಡಬೇಕು. ಗ್ರಾಹಕರ ಜತೆಗೆ ರಿಕವರಿ ಏಜೆಂಟರು ಅನುಚಿತ ವರ್ತನೆ ತೋರದಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆ ನಿಂದಿಸುವುದು ಅಥವಾ ಮಾನಸಿಕ-ದೈಹಿಕ ಕಿರುಕುಳ ನೀಡುವುದು ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.