‘ಇದು ಹುಚ್ಚೋ, ಬೆಪ್ಪೋ, ಶಿವಲೀಲೆಯೋ?’ ಎಂಬ ಮಾತನ್ನು ನಮ್ಮ ಜನ ಪ್ರಾಸಂಗಿಕವಾಗಿ ಆಡುವುದುಂಟು. ಎದುರಿನವರ ಮಾತಿನಲ್ಲೋ ಕೃತಿ ಯಲ್ಲೋ ವಿಚಿತ್ರ ವರ್ತನೆ ಹೊಮ್ಮಿದಾಗ ಅಪ್ರಯತ್ನವಾಗಿ ಕೇಳಿ ಬರುವ ಮಾತಿದು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಇತ್ತೀಚಿನ ಆಣಿ ಮುತ್ತೊಂದನ್ನು ಕೇಳಿಸಿಕೊಂಡ ಹಲವರಿಗೆ ಈ ಮಾತು ನೆನಪಾಗಿರಲಿಕ್ಕೂ ಸಾಕು.
‘ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜಪಿಸಿದರೆ ನಿಮ್ಮ ಪತಿಗೆ ಊಟ ಬಡಿಸಬೇಡಿ’ ಎಂದು ಕೇಜ್ರಿವಾಲರು ಇತ್ತೀಚೆಗೆ ದೆಹಲಿಯ ಮಹಿಳಾ ಮತದಾರರಿಗೆ ಅಪ್ಪಣೆ ಕೊಡಿಸಿದ್ದಾರಂತೆ. ಸಾರ್ವತ್ರಿಕ ಚುನಾವಣೆಗಳು ಬಂದಾಗ ರಾಜಕೀಯ ಎದುರಾಳಿಗಳ ನಡುವೆ ‘ಅರ್ಜುನ-ಬಭ್ರುವಾಹನ’ರ ಶೈಲಿಯಲ್ಲಿ ಮಾತಿನ ವಿನಿಮಯವಾಗುವುದು, ಅಕ್ಷರಶಃ ವಾಗ್ದಾಳಿಯೇ ನಡೆಯುವುದು ಸಹಜವೇ. ಆದರೆ ಅಂಥ ಮಾತಿಗೊಂದು ತೂಕ ಮತ್ತು ಮೌಲ್ಯ ಇರಬೇಕಲ್ಲವೇ? ಯಾವುದೇ ವ್ಯಕ್ತಿಯನ್ನು ಅಥವಾ ಆತ ನಂಬಿದ ಸಿದ್ಧಾಂತವನ್ನು ವಿರೋಧಿಸುವಾಗಲೂ ಅದಕ್ಕೊಂದು ಯೋಗ್ಯ ಮಾರ್ಗವಿದೆ.
ವ್ಯಕ್ತಿಯ ಜತೆಗಿನ ಸಂಬಂಧಕ್ಕೆ ಸಂಚಕಾರ ತಂದುಕೊಳ್ಳದೆಯೇ, ‘ನಿಮ್ಮ ಸಿದ್ಧಾಂತ ನನಗೆ ಒಗ್ಗದು’ ಎಂದು ಹೇಳಲು ಸಾಧ್ಯವಿದೆ. ಆದರೆ ಜನನಾಯಕರ ಆಡುಂಬೊಲ ಎನಿಸಿಕೊಂಡಿರುವ ನಮ್ಮ ರಾಜಕೀಯ ಕ್ಷೇತ್ರದಲ್ಲಿ ಇಂಥ ಪರಿಪಾಠ ಇತ್ತೀಚೆಗೆ ತೀರಾ ಕಡಿಮೆಯಾಗುತ್ತಿದೆ. ಅಣ್ಣಾ ಹಜಾರೆಯವರ ಜನಪರ ಹೋರಾಟಗಳೊಂದಿಗೆ ಗುರುತಿಸಿಕೊಂಡು, ಅದನ್ನೇ ತಮ್ಮ ರಾಜಕೀಯದ ಏಣಿಯನ್ನಾಗಿಸಿಕೊಂಡ ಅರವಿಂದ ಕೇಜ್ರಿವಾಲರು ಆರಂಭಿಕ ದಿನಗಳಲ್ಲಿ ಪ್ರಜ್ಞಾವಂತಿಕೆಯ ಮಾತು ಹಾಗೂ ಕಾರ್ಯ ದಕ್ಷತೆಗೆ ಹೆಸರಾಗಿದ್ದವರು; ಒಂದು ಹಂತದಲ್ಲಿ ಅವರು ಜನರಿಗೆ ಭರವಸೆಯ ಆಶಾಕಿರಣವಾಗಿ ಕಂಡಿದ್ದೂ ಉಂಟು.
ಆದರೆ ಬರುಬರುತ್ತಾ ಅವರೂ ಸಾಂಪ್ರದಾಯಿಕ ರಾಜಕಾರಣಿಗಳ ಸಾಲಿನಲ್ಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ವಿಷಾದನೀಯ. ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸಟಿಕದ ಶಲಾಕೆಯಂತಿರಬೇಕು’ ಎಂದಿದ್ದಾರೆ ಬಸವಣ್ಣನವರು. ಸಾರ್ವಜನಿಕ ಜೀವನದಲ್ಲಿ ನಾವಾಡುವ ಮಾತುಗಳು ಹೇಗಿರಬೇಕು ಎಂಬುದಕ್ಕೆ ಈ ಪಂಕ್ತಿಗಳೇ ಮೇಲ್ಪಂಕ್ತಿಯಾಗಬೇಕು. ಆದರೆ ನಮ್ಮ ತಥಾಕಥಿತ ಜನನಾಯಕರಿಗೆ ಈ ಸರಳಸತ್ಯವಿನ್ನೂ ಅರಿವಾಗದಿರುವುದು ದುರಂತ.