ಇದು ನಿಜಕ್ಕೂ ಸಂಭ್ರಮಿಸಬೇಕಾದ ಸಂಗತಿ. ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವಿನ ಬಾವುಟ ಹಾರಿಸುವ ಮೂಲಕ ಮಹಿಳಾ ಆರ್ಸಿಬಿ ತಂಡದವರು ಕ್ರೀಡಾಭಿಮಾನಿಗಳ ಸಂತಸಕ್ಕೆ ಮತ್ತಷ್ಟು ಇಂಬು ತುಂಬಿದ್ದಾರೆ. ಪುರುಷರು ಪಾಲ್ಗೊಳ್ಳುವ ಬಹುತೇಕ ಕ್ರೀಡೆಗಳಲ್ಲಿ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಇದೆಯಾದರೂ ಕ್ರಿಕೆಟ್ನಲ್ಲಿ ಅದು ಕಾಣಬರದೆ ಒಂಥರಾ ನಿರ್ವಾತ ಸೃಷ್ಟಿಯಾಗಿತ್ತು.
ಆದರೀಗ ಆ ಕ್ಷೇತ್ರಕ್ಕೂ ದಾಂಗುಡಿಯಿಟ್ಟಿರುವ ಮಹಿಳೆಯರು ಈ ಕೊರತೆಯನ್ನು ನೀಗಿದ್ದಾರೆ; ಮಾತ್ರವಲ್ಲ, ಅಖಾಡಕ್ಕಿಳಿದ ಎರಡನೇ ವರ್ಷಕ್ಕೇ ‘ಕಪ್ ನಮ್ದೇ’ ಎಂದು ಹೆಮ್ಮೆಯಿಂದ ಘೋಷಿಸಿಕೊಳ್ಳುವಷ್ಟರ ಮಟ್ಟಿಗಿನ ಸಾಧನೆ ಅವರಿಂದ ಹೊಮ್ಮಿರುವುದು ಅವರ ಸಾಧನೆಗೆ ದಕ್ಕಿರುವ ಶ್ರೇಷ್ಠ ಪ್ರಮಾಣ ಪತ್ರವೇ ಸರಿ. ವಿವಿಧ ಕಾರ್ಯಕ್ಷೇತ್ರಗಳಲ್ಲಿನ ಮಹಿಳಾ ಪ್ರತಿಭೆಗಳಿಗೆ ದಕ್ಕಬೇಕಿರುವ ಉತ್ತೇಜನಕ್ಕೂ ಈ ಗೆಲುವು ಮೂಲವಾಗಬೇಕು. ‘ಹೆಣ್ಣು ಎಂದರೆ, ಅಡುಗೆ ಮನೆಗಷ್ಟೇ ಸೀಮಿತ; ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಬಿದ್ದುಕೊಂಡಿದ್ದರೆ ಸಾಕು, ಅವಳಿಗೇಕೆ ಇಲ್ಲದ ಉಸಾಬರಿ? ಪುರುಷನಿಗೆ ಸರಿಸಮನಾಗಿ ಸಮಾಜದಲ್ಲಿ ಅವಳು ಹೆಣಗಬಲ್ಲಳೇ?’ ಎಂಬ ಧೋರಣೆಗಳೇ ನಮ್ಮ ವ್ಯವಸ್ಥೆಯಲ್ಲಿ ವ್ಯಾಪಿಸಿದ್ದ ಕಾಲವೊಂದಿತ್ತು.
ಆದರೆ ಈ ಗ್ರಹಿಕೆಯನ್ನು ಪರಿಣಾಮಕಾರಿಯಾಗಿ ಅಳಿಸಿಹಾಕಿರುವ ಮಹಿಳೆ ಇಂದು ಪುರುಷನಿಗೆ ಸರಿಸಮನಾಗಿ ಎಲ್ಲ ಕಾರ್ಯಕ್ಷೇತ್ರದಲ್ಲೂ ಮಿಂಚುತ್ತಿ ದ್ದಾಳೆ. ಬಾಹ್ಯಾಕಾಶ ಯಾನಕ್ಕೂ ತೆರಳಿದ್ದಾಳೆ, ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾಳೆ, ರಾಜಕಾರಣದಲ್ಲೂ ತನ್ನ ಹೆಜ್ಜೆಗುರುತುಗಳನ್ನು ಸ್ಪಷ್ಟವಾಗಿ ಮೂಡಿಸುತ್ತಿದ್ದಾಳೆ. ಹೀಗಾಗಿ, ‘ತೊಟ್ಟಿಲು ತೂಗುವ ಕೈ, ಅಡುಗೆ ಮನೆಯಲ್ಲಿ ಮಗುಚುವ ಕೈ ಹಿಡಿಯಲಷ್ಟೇ ಸಾಧ್ಯವಾದೀತು’ ಎಂಬ ಗ್ರಹಿಕೆ ಜನಮಾನಸ ದಿಂದ ಮರೆಯಾಗುತ್ತಿದೆ. ಒಂದು ಕಾಲಕ್ಕೆ ಹಿಂಜರಿಕೆಯ ಬಲಿಪಶುವಾಗಿದ್ದ ಮತ್ತು ಗೇಲಿಗೆ ಆಹಾರ ವಾಗಿದ್ದ ಮಹಿಳೆಯರು ಇಂದು ಈ ಮಟ್ಟಿಗಿನ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರೆ, ಅವರಲ್ಲಿ ಸ್ವಭಾವ ಸಹಜವಾಗಿ ಕೆನೆಗಟ್ಟಿರುವ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಗಳೇ ಅದಕ್ಕೆ ಕಾರಣ.
ಈ ಶಕ್ತಿಗಳು ಕಮರ ಬಾರದು, ನಿರಂತರ ಬಲವನ್ನು ಮೈಗೂಡಿಸಿಕೊಂಡು ಭವ್ಯಭಾರತದ ನಿರ್ಮಾಣಕ್ಕೆ ತಳಹದಿಯಾಗಬೇಕು. ಅದು ಈ ಕ್ಷಣದ ಅನಿವಾರ್ಯತೆಯೂ ಹೌದು.