Monday, 25th November 2024

ಕೊಪ್ಪಳದ ಪ್ಯಾಡ್ ವುಮನ್‍

ಕೊಪ್ಪಳದ ಗ್ರಾಮೀಣ ಮಹಿಳೆಯರಿಗೆ, ಕಿಶೋರಿಯರಿಗೆ ಸ್ಯಾನಿಟರಿ ಪ್ಯಾಡ್ ಬಳಕೆಯ ಮಾರ್ಗದರ್ಶನ ನೀಡುವುದರ ಜತೆ, ನೈರ್ಮಲ್ಯದ ಅರಿವು ಮೂಡಿಸಿದ ಭಾರತಿ ಗುಡ್ಲಾನೂರು ಅವರ ಅಭಿಯಾನ ಅಪರೂಪದ್ದು.

ಸುರೇಶ ಗುದಗನವರ

ಮಹಿಳೆಯರನ್ನು ಬಾಧಿಸುವ ಹಲವು ಸಂಗತಿಗಳಲ್ಲಿ ಮುಟ್ಟು ಮುಖ್ಯವಾದದ್ದು. ಈ ಕುರಿತು ಮುಕ್ತವಾಗಿ ಮಾತನಾಡಲು ಬಹಳಷ್ಟು ಜನ ಹಿಂಜರಿಯುತ್ತಾರೆ. ಶತಮಾನಗಳಿಂದಲೂ ಮುಟ್ಟಿನ ವಿಷಯವನ್ನು ಗೌಪ್ಯವಾಗಿಯೇ ಇಟ್ಟಿದ್ದೇವೆ. ಮುಟ್ಟಿನ ಸಮಯದಲ್ಲಿ ಮಹಿಳೆ ಅನುಭವಿಸುವ ನೋವು, ಸಂಕಟ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅದಕ್ಕೊಂದು ಪರಿಹಾರ ಕಲ್ಪಿಿಸುವ ನಿಟ್ಟಿನಲ್ಲಿ ಮಹಿಳೆಯೊಬ್ಬರು ಯಶಸ್ವಿ ಅಭಿಯಾನ ಕೈಗೊಂಡಿದ್ದಾರೆ. ಅವರೇ ಪ್ಯಾಡ್ ವುಮನ್ ಎಂದು ಚಿರಪರಿಚಿತರಾಗಿರುವ ಕೊಪ್ಪಳದ ಭಾರತಿ ಗುಡ್ಲಾನೂರು. ಮೂಲತಃ ಭಾರತಿಯವರು ಬಳ್ಳಾರಿ ಜಿಲ್ಲೆಯ ಹೊಸ ಪೇಟೆ ತಾಲೂಕಿನ ತುಂಗಭದ್ರಾ ಡ್ಯಾಂನವರು. ಇವರ ತಂದೆ ಕೊಟ್ರಪ್ಪ, ತಾಯಿ ಲಕ್ಷ್ಮೀದೇವಿ. ಭಾರತಿಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಟಿ.ಬಿ ಡ್ಯಾಂನಲ್ಲಿ ಮುಗಿಸಿ, ಹೊಸಪೇಟೆ ವಿಜಯನಗರ ಕಾಲೇಜಿನಿಂದ ಬಿ.ಕಾಂ. ಪದವಿ ಪಡೆದರು. ನಂತರ ಬಾಲ್ಡೊಟಾ ಅವರ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಿದರು. 2002 ರಲ್ಲಿ ಕೃಷಿಯಲ್ಲಿ ಸ್ನಾತಕೋ ತ್ತರ ಪದವೀಧರರಾದ ಬಸವರಾಜ ಗುಡ್ಲಾನೂರು ಅವರನ್ನು ಮದುವೆಯಾಗಿ ಕೊಪ್ಪಳಕ್ಕೆ ಬಂದು ನೆಲೆಸಿದರು.

ಚಲನಚಿತ್ರ ಸ್ಫೂರ್ತಿ
ಭಾರತದ ಪ್ಯಾಡ್‌ಮ್ಯಾನ್ ಎಂದೇ ಖ್ಯಾತರಾಗಿರುವ ತಮಿಳುನಾಡಿನ ಉದ್ಯಮಿ ಅರುಣಾಚಲಂ ಮುರುಘನಾಥನ್ ಜೀವನಾ ಧಾರಿತ ಹಿಂದಿ ಚಲನಚಿತ್ರ ಪ್ಯಾಡ್ ಮ್ಯಾನ್‌ವನ್ನು ಭಾರತಿ ಕೂಡಾ ಚಲನಚಿತ್ರ ವೀಕ್ಷಿಸಿದ್ದರು. ಭಾರತೀಯ ಮಹಿಳೆಯರ ಮುಟ್ಟಿನ ಸಂದರ್ಭದಲ್ಲಿನ ಸಮಸ್ಯೆೆಗಳನ್ನರಿತ ನಾಯಕ, ಪ್ಯಾಡ್‌ಗಳನ್ನು ಆವಿಷ್ಕರಿಸಿ ಮತ್ತು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಶವನ್ನು ಆಧರಿಸಿದ ಅವರ ಜೀವನದಿಂದ ಸ್ಫೂರ್ತಿಗೊಂಡು ಭಾರತಿಯವರು ತಮ್ಮದೇ ಸ್ಯಾನಿಟರಿ ಪ್ಯಾಡ್ ಬಳಕೆ ಬಗ್ಗೆ ಅರಿವು ಮೂಡಿಸಲು ಹೆಜ್ಜೆ ಇಟ್ಟರು.

ಕೇಂದ್ರ ಸರ್ಕಾರದ ಸ್ತ್ರೀ ಸ್ವಾಭಿಮಾನ ಯೋಜನೆಯ ಅಡಿಯಲ್ಲಿ 2018ರ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಕೊಪ್ಪಳ ದಲ್ಲಿ ಸ್ಯಾನಿಟರಿ ಪ್ಯಾಡ್ ತಯಾರಿಸುವ ಪುಟ್ಟ ಘಟಕವನ್ನು ಆರಂಭಿಸಿದರು. ಭಾರತಿಯವರ ಘಟಕದಲ್ಲಿ ಹತ್ತು ಜನ ಮಹಿಳೆಯ ರಿದ್ದು, ಅವರಲ್ಲಿ ವಿಕಲಚೇತನ ಮಹಿಳೆಯರೂ ಸಹ ಉದ್ಯೋಗ ಪಡೆದಿದ್ದಾರೆ.

ಹೊಸ ವಿನ್ಯಾಸದ ಪ್ಯಾಡ್ ಭಾರತಿಯವರು ಹೊಸಬಗೆಯ ಪರಿಸರ ಸ್ನೇಹಿ, ಕಡಿಮೆ ವೆಚ್ಚದ ಹಾಗೂ ಮಹಿಳಾ ಸ್ನೇಹಿ ಆರೋಗ್ಯ ಪೂರಕ ಪ್ಯಾಡ್‌ಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಇವು ಎಂಟು ಪದರುಗಳನ್ನು ಹೊಂದಿದ್ದು, ಯಾವುದೇ ರಾಸಾಯನಿಕ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತಿಲ್ಲ. ಇಲ್ಲಿ ಬಳಸಿರುವ ಮೇಲಿನ ಪದರು ತೆಳುವಾದ ಗಾಳಿಯಾಡುವ ಹತ್ತಿಯಿಂದ ತಯಾ ರಾಗಿರುವುದರಿಂದ ಸೋಂಕು ಆಗುವುದಿಲ್ಲ. ಇಲ್ಲಿನ ನೀಲಿಯಾದ ಅನಿಯನ್ ಶೀಟ್, ಕೀಟಾಣುಗಳು ಮತ್ತು ಸೂಕ್ಷ್ಮಾಣು ಜೀವಿ ಗಳಿಂದಾಗುವ ಸಮಸ್ಯೆಯನ್ನು ತಡೆಗಟ್ಟುತ್ತದೆ. ಹಿಂಬದಿಗೆ ಹಾಕಿರುವ ಪದರವು ಸೋರಿಕೆಯನ್ನು ತಡೆಗಟ್ಟುತ್ತದೆ.

ಇದರೊಂದಿಗೆ ಎರಡು ಪದರು ವುಡ್ ಪಲ್ಟ್ ಶಿಟ್‌ನ್ನು ಕೂಡಾ ಬಳಸಲಾಗುತ್ತದೆ. ಅಲ್ಲದೇ ಗಟ್ಟಿಯಾಗಿ ಅಂಟಿಕೊಳ್ಳಲು ಸಾವ ಯವ ರಿಲೀಸ್ ಪೇಪರ್ ಬಳಸಲಾಗುತ್ತದೆ. ಇದನ್ನು ಯುವಿ ಸೈರಲಾಯ್ಜ್ಡ್ ಮಾಡಿ ಪ್ಯಾಕಿಂಗ್ ಮಾಡಲಾಗುತ್ತದೆ. ಕೊಪ್ಪಳದ ಜಿಲ್ಲಾಡಳಿತ ಸಹಕಾರದೊಂದಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರನ್ನು, ಶಾಲಾ-ಕಾಲೇಜು ವಿದ್ಯಾರ್ಥಿನಿ ಯರನ್ನು, ಅಂಗನವಾಡಿ ಕಾರ್ಯಕರ್ತೆಯರನ್ನು, ಸ್ತ್ರೀ ಶಕ್ತಿ ಸಂಘದವರನ್ನು ಹಾಗೂ ಧರ್ಮಸ್ಥಳದ ಗ್ರಾಮೀಣ ಯೋಜನೆಯ ಸಂಘದ ವರನ್ನು ಭೇಟಿ ಮಾಡಿ, ಮುಟ್ಟಿನ ಸಮಯದಲ್ಲಿ ವಹಿಸಬೇಕಾದ ನೈರ್ಮಲ್ಯತೆ ಮತ್ತು ಪ್ಯಾಡ್ ಬಳಕೆ ಬಗ್ಗೆ ಜಾಗೃತಿ ಮೂಡಿಸು ತ್ತಿದ್ದಾರೆ.

ಜತೆಗೆ ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಸಂವಾದ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ 85 ಹಳ್ಳಿಗಳಲ್ಲಿ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಏರ್ಪಡಿಸಿ, ಸಾವಿರಾರು ಕಿಶೋರಿಯರು ಮತ್ತು ಮಹಿಳೆಯರಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಸರ್ಕಾರದ ಸಾಮಾನ್ಯ ಸೇವಾ ಕೇಂದ್ರ ಯೋಜನೆಯನ್ನು ಬಳಸಿಕೊಂಡು ಭಾರತಿಯವರು ಗ್ರಾಮೀಣ ಯುವ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ.

ಪ್ರಾರಂಭದಲ್ಲಿ ಸ್ಯಾನಿಟರಿ ಪ್ಯಾಡ್ ಘಟಕಕ್ಕೆ 3ಲಕ್ಷ ರೂಪಾಯಿಗಳ ಬಂಡವಾಳವನ್ನು ತೊಡಗಿಸಿ, ಕೈಯಿಂದಲೇ ದಿನವೊಂದಕ್ಕೆ 2000 ಪ್ಯಾಡ್ ಗಳನ್ನು ತಯಾರಿಸುತ್ತಿದ್ದರು. ನಂತರ ಎರಡು ಅಟೋಮ್ಯಾಟಿಕ್ ಯಂತ್ರಗಳನ್ನು ಖರೀದಿಸಿ, ಅವುಗಳಿಗಾಗಿ 35 ಲಕ್ಷ ರೂಗಳಷ್ಟು ಬಂಡವಾಳ ತೊಡಗಿಸಿದ್ದಾರೆ. ಈಗ ಪ್ರತಿದಿನವೂ 35 ಸಾವಿರ ಪ್ಯಾಡ್‌ಗಳನ್ನು ತಯಾರಿಸುತ್ತಿದ್ದಾರೆ. ತಾವು ತಯಾರಿ ಸಿದ ಗುಣಮಟ್ಟದ ಪ್ಯಾಡ್‌ಗಳನ್ನು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಚೆನ್ನೈ, ದೆಹಲಿ ಮುಂತಾದ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ.

ವೆಂಡಿಂಗ್ ಮೆಶಿನ್ ಕನಸು
ಮಹಿಳೆಯರಿಗೆ ಸುಲಭವಾಗಿ, ಕಡಿಮೆ ಬೆಲೆಯಲ್ಲಿ ಪ್ಯಾಡ್ ಸಿಗಲು ಏನು ಮಾಡಬೇಕು ಎಂಬುದರ ಕುರಿತು ಇವರು ಸದಾ
ಯೋಚಿಸುತ್ತಿರುತ್ತಾರೆ. ರೇಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ವೆಂಡಿಂಗ್ ಮಿಶಿನ್‌ಗಳ ಮೂಲಕ
ಸುಲಭವಾಗಿ ಕಡಿಮೆ ದರದಲ್ಲಿ ಪ್ಯಾಡ್‌ಗಳು ದೊರೆಯುವಂತೆ ವ್ಯವಸ್ಥೆ ಕಲ್ಪಿಸುವ ಯೋಜನೆಯಲ್ಲಿದ್ದಾರೆ. ಜಿಲ್ಲಾಧಿಕಾರಿಗಳು,
ನಗರಸಭೆ ಆಯುಕ್ತರು, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಕೊಪ್ಪಳ ಬಸ್ ನಿಲ್ದಾಣದಲ್ಲಿ ಕಳೆದ ಒಂದು
ವರ್ಷದಿಂದ ನ್ಯಾಪಕಿನ್ ಘಟಕವನ್ನು ಪ್ರಾರಂಭಿಸಿ ಮಹಿಳಾಲೋಕದಲ್ಲಿ ಆಶಾಕಿರಣ ಹುಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ
ಪ್ರತಿ ಹಳ್ಳಿಯಲ್ಲಿ ಕನಿಷ್ಟ ಒಬ್ಬ ಮಹಿಳೆಗೆ ಪ್ಯಾಡ್ ತಯಾರಿಕೆಯ ತರಬೇತಿ ನೀಡಿ, ಅವರ ಮೂಲಕ ಹಳ್ಳಿಯಲ್ಲೂ ಸದಾ ಕಾಲ
ಪ್ಯಾಡ್‌ಗಳು ಲಭ್ಯವಾಗುವಂತೆ ಮಾಡುವುದು ಭಾರತಿಯವರ ಕನಸಾಗಿದೆ.

ಹಳ್ಳಿ ಹೆಂಗಸರಿಗೆ ಪ್ಯಾಡ್ ಪರಿಚಯ ಭಾರತಿಯವರು ಎದುರಿಸಿದ ಸವಾಲುಗಳಲ್ಲಿ ಪ್ರಮುಖ ಎಂದರೆ, ಕೊಪ್ಪಳ ಪ್ರದೇಶದ  ಗ್ರಾಮೀಣ ಮತ್ತು ಬಡ ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ. ಸ್ಯಾನಿಟರಿ ಪ್ಯಾಡ್ ಎಂದ ರೇನು ಎಂಬ ಪ್ರಾಥಮಿಕ ಪರಿಚಯದಿಂದ ಆರಂಭಿಸಿ, ಅದರ ಉಪಯೋಗ ತಿಳಿಸಿ, ಕಡಿಮೆ ವೆಚ್ಚದಲ್ಲಿ ಲಭ್ಯವಾಗುವಂತೆ
ಮಾಡಲು ಸಾಕಷ್ಟು ಶ್ರಮಿಸಿದ್ದಾರೆ.

ಜನಸಾಮಾನ್ಯರಿಗೆ ಪ್ಯಾಡ್ ಪರಿಚಯಿಸಿದ ಭಾರತಿಯವರನ್ನು ‘ಕೊಪ್ಪಳದ ಪ್ಯಾಡ್ ವುಮನ್’ ಎಂದೇ ಕರೆಯಬಹದು. ಬಡವರಿಗೆ ಉಚಿತ ವಿತರಣೆ ಭಾರತಿಯವರು ಪ್ರಕೃತಿ ಸೇವಾ ಸಂಸ್ಥೆ ಎಂಬ ಸಮಾನ ಮನಸ್ಕರ ತಂಡವನ್ನು ಕಟ್ಟಿ, ಪ್ಯಾಡ್ ಬಳಕೆ ಪರಿಚಯಿಸಿ ದ್ದರ ಜತೆ, ಲಾಕ್‌ಡೌನ್ ಸಮಯದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುವ ಕಿಶೋರಿಯರಿಗೆ ಉಚಿತವಾಗಿ ಪ್ಯಾಡ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸ್ನೇಹಿತರ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮುಂತಾದ ವಿಶೇಷ ದಿನಗಳಂದು ಅವರನ್ನು ಸಂಪರ್ಕಿಸಿ ಕಿಶೋರಿಯೊಬ್ಬರಿಗೆ ಒಂದು ವರ್ಷಗಳವರೆಗೆ ಉಪಯೋಗವಾಗುವಷ್ಟು ಪ್ಯಾಡ್‌ಗಳ ವಿತರಣೆಗಾಗಿ 500 ರೂಗಳಷ್ಟು ದೇಣಿಗೆ ರೂಪದಲ್ಲಿ ಸಂಗ್ರಹಿಸುತ್ತಾರೆ. ಸ್ನೇಹಿತರ ಆರ್ಥಿಕ ಸಹಕಾರದಿಂದ, 100 ಬಡ ಹೆಣ್ಣು ಮಕ್ಕಳಿಗೆ ಒಂದು ವರ್ಷಕ್ಕಾಗುವಷ್ಟು ಪ್ಯಾಡ್‌ಗಳನ್ನು ಉಚಿತವಾಗಿ ನೀಡಿ ಪ್ಯಾಡ್ ಬಳಕೆಯ ಅಭಿಯಾನದಲ್ಲಿ ತೊಡಗಿಕೊಂಡಿ ದ್ದಾರೆ.