Sunday, 5th January 2025

ಕೇಂದ್ರದೊಂದಿಗೆ ಬಡಿದಾಟಕ್ಕಿಂತ ಸಮನ್ವಯ ಇರಲಿ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಮೋದಿ ನೇತೃತ್ವದ ಕೇಂದ್ರ ಸರಕಾರವು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ. ನಮಗೆ ಸೇರಬೇಕಾದ ಅನುದಾನ, ಬರ ಪರಿಹಾರದ ಹಣವನ್ನು ಸಕಾಲಕ್ಕೆ ಕೊಡುತ್ತಿಲ್ಲ ಎಂದು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ರಾಜ್ಯ ಕಾಂಗ್ರೆಸ್ ಸರಕಾರದ ಎಲ್ಲ ಮಹಾರಥಿಗಳು ಮರುದಿನ ದಿಲ್ಲಿಯಲ್ಲಿ ಸೇರಿ ಪ್ರತಿಭಟಿಸಿದ್ದು ದೇಶಾದ್ಯಂತ ಸುದ್ದಿಯಾಯಿತು.

ಈಗ ಕೇಂದ್ರದ ನಡೆಯನ್ನು ಪ್ರಶ್ನಿಸಿ ರಾಜ್ಯ ಸರಕಾರವು ಸುಪ್ರೀಂ ಕೋರ್ಟ್‌ನ ಮೊರೆಹೋಗಿದ್ದೂ ಆಗಿದೆ. ಶ್ರೀಸಾಮಾನ್ಯರು ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುವುದಲ್ಲದೆ, ಇಂದಿನ ದುಬಾರಿ ದುನಿಯಾದಲ್ಲಿ ಸಂಸಾರದ ಹಲವು ಬಾಬತ್ತುಗಳನ್ನು ನಿಭಾಯಿಸ ಬೇಕಾಗಿ ಬಂದಿರುವ ಇಂದಿನ ಪರಿಸ್ಥಿತಿಯಲ್ಲಿ, ಜನಸಾಮಾನ್ಯರ ಹಿತಕಾಯಬೇಕಾದವರು ಆರ್ಥಿಕತೆಯ ವಿಚಾರ ದಲ್ಲೂ ರಾಜಕೀಯ ಮಾಡುತ್ತ ಜನರನ್ನು ದಾರಿ ತಪ್ಪಿಸುತ್ತಿರುವುದು ದುರಂತ.

ಜನರೂ ಅಷ್ಟೇ, ಬಹಳ ಬೇಗ ರಾಜಕೀಯ ದಾಳಗಳಿಗೆ ಬಲಿಯಾಗಿ, ಕೆಲ ಸಂದರ್ಭಗಳಲ್ಲಿ ಅತಿರೇಕವಾಗಿ ವರ್ತಿಸಿಬಿಡುತ್ತಾರೆ. ಸಾಮರಸ್ಯ, ಭಾವೈಕ್ಯತೆ, ಸಮುದಾಯ ಹೊಂದಾಣಿಕೆ ಇವು ನಮ್ಮ ಸಾಮಾಜಿಕ ವ್ಯವಸ್ಥೆಗಳ ಮೂಲ ಅಂಶಗಳು ಎಂಬುದನ್ನು ಅರಿಯದೆ, ಬೆರಳ ತುದಿಯಲ್ಲೇ ಮನಬಂದಂತೆ ಕಮೆಂಟಿಸುವ ಇಂದಿನ ಯವಜನರಿಗೂ ಒಂದಷ್ಟು ತಿಳಿವಳಿಕೆ ನೀಡಬೇಕಿದೆ.
ಹೀಗೆ ದಿಲ್ಲಿಗೆ ತೆರಳಿದವರು ಕೇಳಿದ ಎರಡು ಪ್ರಮುಖ ಪ್ರಶ್ನೆಗಳೆಂದರೆ, ಕೇಂದ್ರದಿಂದ ಕರ್ನಾಟಕಕ್ಕೆ ಯಾವುದೇ ಪರಿಹಾರ
ಬಂದಿಲ್ಲ ಎಂಬುದು.

ಎರಡನೆಯದಾಗಿ, ರಾಜ್ಯಕ್ಕೆ ವಿಶೇಷ ಅನುದಾನ ನೀಡಿಲ್ಲ ಎಂಬುದು. ಹಣಕಾಸಿನ ಸೂಕ್ಷ್ಮ ಲೆಕ್ಕಾಚಾರಗಳು ಸಾಮಾನ್ಯರಿಗೆ ತಿಳಿಯದು. ತಿಳಿದವರು ಪ್ರಶ್ನಿಸಿದರೆ, ‘ನೀನು ಬಿಜೆಪಿ ಏಜೆಂಟಾ?’ ಎಂದು ಹೇಳಿ ಬಾಯಿ ಮುಚ್ಚಿಸುತ್ತಾರೆ. ಹೀಗಾಗಿ, ಈ ಬರ ಪರಿಹಾರ, ವಿಶೇಷ ಅನುದಾನ ಇತ್ಯಾದಿ ಅಂಶಗಳನ್ನು ಸುತ್ತುವರಿದಿರುವ ಸಂಗತಿಗಳತ್ತ ಕೊಂಚ ಗಮನ ಹರಿಸೋಣ.

‘ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್’ (ಎನ್‌ಡಿಆರ್ ಎಫ್) ಎಂಬುದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ, ೨೦೦೫ರ ಅಡಿ ಸಂವಿಧಾನಾತ್ಮಕವಾಗಿ ಹುಟ್ಟುಹಾಕಲಾದ ಸಂಸ್ಥೆಯಾಗಿದ್ದು, ಇದು ದೇಶದ ಯಾವುದೇ ಸ್ಥಳದಲ್ಲಿ ಪ್ರಾಕೃತಿಕ ವಿಪತ್ತು ಸೇರಿದಂತೆ ಎಂಥದೇ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ಸದಾ ಸಿದ್ಧವಾಗಿರುತ್ತದೆ. ಈ ಸಂಸ್ಥೆಯು ತನ್ನದೇ ಆದ ನೀತಿ-ನಿಯಮಗಳ/ ಕಾರ್ಯವಿಧಾನಗಳ ಮೂಲಕ ಕೆಲಸ ಮಾಡುತ್ತದೆ. ಅವೆಂದರೆ: ೧) ರಾಜ್ಯ ಸರಕಾರವು ಒಂದು ಮೌಲ್ಯಮಾಪನ ತಯಾರು ಮಾಡಿ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಗೆ ತಲುಪಿಸಬೇಕು.

೨) ಪ್ರಾಥಮಿಕ ಸಮೀಕ್ಷೆ ಮುಗಿದ ನಂತರ ಈ ಸಂಸ್ಥೆಯ ಪ್ರಮುಖ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ರಾಜ್ಯ ಸರಕಾರ ಕೊಟ್ಟ ಮಾಹಿತಿ, ವಾಸ್ತವಿಕ ವಿಚಾರ ಹಾಗೂ ಸ್ಥಳೀಯರ ಕಷ್ಟಗಳನ್ನು ಆಲಿಸಿ, ಎಲ್ಲವನ್ನೂ ಸೇರಿಸಿ ಒಂದು ಸಮಗ್ರ ವರದಿ ತಯಾರಿಸಿ, ಎಸ್‌ಡಿಆರ್‌ಎಫ್ ಮೂಲಕ ಹಂತ-ಹಂತವಾಗಿ ಹಣವನ್ನು ಬಿಡುಗಡೆ ಮಾಡುತ್ತಾ ಹೋಗುತ್ತಾರೆ.

೩) ಇದಕ್ಕೆಂದೇ ನ್ಯಾಷನಲ್ ಎಕ್ಸಿಕ್ಯುಟಿವ್ ಕಮಿಟಿಯು (ಎನ್‌ಇಸಿ) ಸಂವಿಧಾನದ ನಿಯಮ-೫, ೨೦೦೫ರ ಅಡಿಯಲ್ಲಿ ರೂಪು ಗೊಂಡಿರುತ್ತದೆ. ಯಾವುದೇ ವಿಪತ್ತನ್ನು ಸಕಾಲದಲ್ಲಿ ಸಮರ್ಪಕವಾಗಿ ನಿಭಾಯಿಸಿ ನಿರ್ವಹಿಸುವಲ್ಲಿ ಈ ತಂಡವು ಎಳ್ಳಷ್ಟೂ ತಡಮಾಡದು.

೪) ಎನ್‌ಇಸಿಯ ಈ ವರದಿಯನ್ನು ಆಧರಿಸಿ, ಉನ್ನತ ಮಟ್ಟದ ಸಮಿತಿಯು ತತ್‌ಕ್ಷಣ ಅಷ್ಟೂ ಹಣವನ್ನು ಬಿಡುಗಡೆ ಮಾಡುತ್ತದೆ (ಈ ಸಮಿತಿಯಲ್ಲಿ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಗೃಹ ಮಂತ್ರಿಗಳು, ಕೇಂದ್ರ ಕೃಷಿ ಮಂತ್ರಿಗಳು ಹಾಗೂ ನೀತಿ ಆಯೋಗದ ಉಪಾಧ್ಯಕ್ಷರು, ಸದಸ್ಯರು ಜತೆಗೆ ಎನ್ ಇಸಿಯ ತಂಡದವರು ಇರುತ್ತಾರೆ). ಇದು ೨೦೦೫ರಿಂದಲೂ ಸಂವಿಧಾನಾತ್ಮಕವಾಗಿ ನಡೆದುಕೊಂಡು ಬಂದಿರುವ ವಿಧಾನ. ವಾಸ್ತವ ಹೀಗಿರುವಾಗ, ದೇಶದ ಯಾವುದೇ ರಾಜ್ಯದ/ ಸ್ಥಳದ ಸಮಸ್ಯೆಯನ್ನು ತನ್ನದೇ ಸಮಸ್ಯೆಯೆಂಬಂತೆ ಪರಿಗಣಿಸಿ, ಅದರ ಪರಿಹಾರಕ್ಕೆ ಶರವೇಗದಲ್ಲಿ ಧಾವಿಸಿ ಬರುವ ಸಂಸ್ಥೆಯ ಕುರಿತೇ ಆಪಾದನೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರವು, ಸರಿಯಾದ ವಿಧಾನದಲ್ಲಿ ಅರ್ಜಿ ಸಲ್ಲಿಸಿ, ಪರಿಣತರಿಂದ ಅನಾವೃಷ್ಟಿಯ ಮೌಲ್ಯಮಾಪನ ನಡೆಸಿ ಸಂಸ್ಥೆಗೆ ಸಲ್ಲಿಸಿದ್ದಿದ್ದರೆ, ಕೇಂದ್ರ ಸರಕಾರವನ್ನು ದೂರುವ ಪ್ರಮೇಯವೇ ಬರುತ್ತಿರಲಿಲ್ಲ.

ರಾಜ್ಯ ಸರಕಾರವು ಈ ಒಂದು ಚಿಕ್ಕ ಮತ್ತು ಸರಳ ಪ್ರಕ್ರಿಯೆಯನ್ನು ಅನುಸರಿಸುವುದು ಬಿಟ್ಟು, ರಾಜ್ಯದಿಂದ ಆಯ್ಕೆಯಾಗಿರುವ ಸಂಸದರನ್ನು ಮತ್ತು ಕೇಂದ್ರ ಹಣಕಾಸು ಸಚಿವರನ್ನು ದೂಷಿಸಿದರೆ ಎನ್‌ಡಿಆರ್‌ಎಫ್ ತಲೆ ಕೆಡಿಸಿಕೊಳ್ಳುವುದಿಲ್ಲ. ಇದನ್ನೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಒಂದು ಆಳುವ ಸರಕಾರವು ಇಷ್ಟು ವಿವೇಚನಾರಹಿತವಾಗಿ ನಡೆದುಕೊಳ್ಳುತ್ತಿರುವುದು ಮತ್ತು ಸುಳ್ಳು ಹೇಳುತ್ತಿರುವುದು ಇದೇ ಮೊದಲು.

ವಿಪತ್ತು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಎರಡನ್ನೂ ಸೇರಿಸಿ ಕೇಂದ್ರದಿಂದ ರಾಜ್ಯಕ್ಕೆ ಒಟ್ಟು ೧೨,೪೭೬ ಕೋಟಿ ರು. ಹಣವನ್ನು ಈಗಾಗಲೇ ನೀಡಿ ಆಗಿದೆ. ವಿತ್ತೀಯ ಶಿಸ್ತು ಪಾಲಿಸದ ರಾಜ್ಯ ಕಾಂಗ್ರೆಸ್ ಸರಕಾರವು ಬೇಕಾಬಿಟ್ಟಿಯಾಗಿ ಘೋಷಿಸಿದ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದು, ಇದನ್ನು ಮುಚ್ಚಿಡಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಈ ವಿಚಾರದಲ್ಲಿ ನಾವು ಜನರೊಂದಿಗೆ ರಾಜಕೀಯ ಮಾಡಲು ಹೋಗುವುದಿಲ್ಲ. ಇದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಹಾಗಾಗಿ, ಈ ಸಂಬಂಧದ ಎಲ್ಲ ದಾಖಲೆಗಳನ್ನೂ ನಾನು ಸಲ್ಲಿಸುತ್ತೇನೆ.

ನ್ಯಾಯಾಲಯವೇ ಇದನ್ನು ತೀರ್ಮಾನಿಸಲಿ’ ಎಂದು ರಾಜ್ಯದಲ್ಲಿ ಭಾನುವಾರ ನಡೆದ ಖಾಸಗಿ ಸಂಸ್ಥೆಯೊಂದರ ಕಾರ್ಯಕ್ರಮ ದಲ್ಲಿ ಭಾಗಿಯಾದ ಸಂದರ್ಭದಲ್ಲಿ ಹೇಳಿದ್ದಾರೆ. ಇನ್ನು, ಹಣಕಾಸು ಆಯೋಗ ಶಿಫಾರಸು ಮಾಡಿರುವ ಅನುದಾನವನ್ನು ನೀಡಿಲ್ಲ ಎಂಬುದು ರಾಜ್ಯ ಕಾಂಗ್ರೆಸ್ ಸರಕಾರದ ಎರಡನೇ ಪ್ರಮುಖ ಆರೋಪ. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ವಿತ್ತ ಸಚಿವೆ, ‘ರಾಜ್ಯಕ್ಕೆ ಸಿಗಬೇಕಾದ ಪ್ರತಿ ಪೈಸೆಯನ್ನೂ ಸಕಾಲದಲ್ಲಿ ಬಿಡುಗಡೆ ಮಾಡಲಾಗಿದೆ.

ಕಾಂಗ್ರೆಸ್ ಸರಕಾರಕ್ಕಿಂತ ನಮ್ಮ ಕಾಲದಲ್ಲಿ ರಾಜ್ಯದ ತೆರಿಗೆಯು ಶೇ.೨೫೦ರಷ್ಟು ಏರಿಕೆಯಾಗಿದೆ. ಕಳೆದ ೧೦ ವರ್ಷಗಳಿಗೆ ಹೋಲಿಸಿ ದರೆ ಮೂರೂವರೆ ಪಟ್ಟು ಹೆಚ್ಚಾಗಿದೆ. ಹಾಗೆಯೇ ಹಣಕಾಸು ಆಯೋಗದ ಅನುದಾನದಲ್ಲಿಯೂ ಶೇ.೨೭೦ರಷ್ಟು ಏರಿಕೆಯಾಗಿದೆ. ೧೫ನೇ ಹಣಕಾಸು ಆಯೋಗದ ವರದಿಯ ಪ್ರಕಾರವೇ ಗಮನಿಸುವುದಾದರೆ, ೨೦೦೪ ರಿಂದ ೨೦೧೪ರವರೆಗೆ ೬೦,೭೭೯ ಕೋಟಿ ರು. ಗಳಷ್ಟಿದ್ದರೆ, ೨೦೧೪ರಿಂದ ೨೦೨೪ರವರೆಗೆ ೨,೨೬,೮೩೨ ಕೋಟಿ ರು.ನಷ್ಟಿದೆ. ಇದರೊಟ್ಟಿಗೆ, ೨೦೧೭ರಿಂದ ೨೦೨೨ರವರೆಗಿನ ಜಿಎಸ್‌ಟಿ ಪಾಲನ್ನು ಸಂಪೂರ್ಣ ಬಿಡುಗಡೆ ಮಾಡಲಾಗಿದೆ. ಜತೆಗೆ, ೨೦೨೪ರ ಮಾರ್ಚ್ ವರೆಗಿನ ಜಿಎಸ್‌ಟಿ ಪರಿಹಾರದ ಬಾಕಿಯನ್ನೂ ಬಿಡುಗಡೆ ಮಾಡಿದೆ’ ಎಂದಿದ್ದಾರೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ೨೦೧೯ರಿಂದ ೨೦೨೨ರ ನಡುವೆ ತೀವ್ರ ಬೆಳೆಹಾನಿ ಸಂಭವಿಸಿ ದಾಗ, ನಾಲ್ಕು ಹಂತಗಳಲ್ಲಿ ಒಟ್ಟಾರೆ ೬,೯೫೨ ಕೋಟಿ ರು. ಹಣವನ್ನು ತಕ್ಷಣವೇ -ಲಾನುಭವಿಗಳಿಗೆ ಪರಿಹಾರವಾಗಿ ರಾಜ್ಯ ಬಿಜೆಪಿ ಸರಕಾರ ನೀಡಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಇನ್ನು, ಕೇಂದ್ರ ಹಣಕಾಸು ಆಯೋಗದ ಕುರಿತು ಗಮನಿಸು ವುದಾದರೆ, ಭಾರತ ಸಂವಿಧಾನದ ೨೮೦ನೇ ವಿಧಿಯ ಅನ್ವಯ ನಮ್ಮ ರಾಷ್ಟ್ರಪತಿಗಳು ೫ ವರ್ಷದ ಅವಧಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಶಿಫಾರಸು ನೀಡಲು ಈ ಆಯೋಗವನ್ನು ನೇಮಕ ಮಾಡಿರುತ್ತಾರೆ.

ಮುಖ್ಯವಾಗಿ, ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಆದಾಯವನ್ನು ವಿತರಿಸಲು ಶಿಫಾರಸು ನೀಡುವುದು ಇದರ ಕಾರ್ಯ ವ್ಯಾಪ್ತಿ. ಈ ಹಿಂದೆ ೨೦೧೫ರಿಂದ ೨೦೨೦ರವರೆಗೆ ೧೪ನೇ ಹಣಕಾಸು ಆಯೋಗವು ರಚಿತವಾದಾಗ, ಅದರ ಸಮಿತಿಯಲ್ಲಿ ಇದೇ ಕಾಂಗ್ರೆಸ್ ನಾಯಕರು ಮುಗುಮ್ಮಾಗಿ ಕುಳಿತಿದ್ದರು. ವಿವಿಧ ರಾಜ್ಯಗಳಿಗೆ ವಿಷಯವಾರು ಹಂಚಿಕೆಗಳನ್ನು ಶೇಕಡಾವಾರು ಹಂಚಿಕೆ ಮಾಡಿ ಆಯೋಗವು ತನ್ನ ವರದಿ ಸಲ್ಲಿಸಿತು ಕೂಡ. ನಂತರದಲ್ಲಿ, ರಚನೆಯಾದ ೧೫ನೇ ಹಣಕಾಸು ಆಯೋಗದ ಶಿಫಾಸುಗಳಲ್ಲಿ, ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ೨೦೧೫-೨೦೨೦ರ ಅವಽಯಲ್ಲಿದ್ದ ಶೇ.೪೨ರಷ್ಟು ಪಾಲನ್ನು ೨೦೨೦-೨೧ಕ್ಕೆ ಶೇ.೪೧ಕ್ಕೆ ಇಳಿಸಲು ಸೂಚಿಸಲಾಗಿದೆ.

ಈ ಒಂದು ಉಳಿಕೆಯಿಂದ ಬರುವ ಶೇ.೧ರಷ್ಟು ಪಾಲನ್ನು ಹೊಸದಾಗಿ ರಚನೆಯಾದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಕೇಂದ್ರ ಸರಕಾರದ ಸಂಪನ್ಮೂಲಗಳಿಂದ ಒದಗಿಸುವುದು ಎಂದು ತನ್ನ ವಿಸ್ತೃತ ವರದಿಯಲ್ಲಿ, ವಿಕಾಸವಾಗಬೇಕಾದ ಯೋಜನಾ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಸಲ್ಲಿಸಿರುವುದು ಕಂಡುಬರುತ್ತದೆ. ವಾಸ್ತವ ಹೀಗಿರುವಾಗ, ಇನ್ನೂ ಮುಂದುವರಿದ ರಾಜ್ಯ ಕಾಂಗ್ರೆಸ್ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕು ಮತ್ತು ಸೇವಾ ಕಾಯ್ದೆ, ೨೦೧೭ರ (ಸಿಜಿಎಸ್‌ಟಿ) ಪರಿಚ್ಛೇದ ೩೨ರ ಅಡಿಯಲ್ಲಿ ದೂರು ದಾಖಲಿಸಿದೆ.

ಅಷ್ಟಕ್ಕೂ ಈ ಪರಿಚ್ಛೇದವು ಇರುವುದು ಅನಧಿಕೃತ ತೆರಿಗೆ ಸಂಗ್ರಹದ ನಿಷೇಧದ ಕಾರಣಕ್ಕೆ. ಅದರ ಒಂದೆರಡು ನಿಯಮಾವಳಿ ಹೀಗಿವೆ:

೧) ನೋಂದಾಯಿತರಲ್ಲದ ವ್ಯಕ್ತಿಯು ಈ ಅಧಿನಿಯಮದ ಅಡಿಯಲ್ಲಿ ತೆರಿಗೆಯ ಮೂಲಕ ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆಯಲ್ಲಿ ಯಾವುದೇ ಮೊತ್ತವನ್ನು ಸಂಗ್ರಹಿಸಬಾರದು.

೨) ಯಾವುದೇ ನೋಂದಾಯಿತ ‘ವ್ಯಕ್ತಿ’ಯು ಈ ಕಾಯ್ದೆಯ ನಿಬಂಧನೆಗಳು ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳಿಗೆ ಅನುಸಾರವಾಗಿ ತೆರಿಗೆಯನ್ನು ಸಂಗ್ರಹಿಸತಕ್ಕದ್ದಲ್ಲ.

ರಾಜ್ಯಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಇದು ರೂಪುಗೊಂಡಿದೆ ಕೂಡ. ವಿಷಯ ಹೀಗಿದ್ದರೂ, ತನ್ನ ೧೯ ಪುಟಗಳ ಅಫಿಡವಿಟ್‌ನಲ್ಲಿ ಕೇಂದ್ರಕ್ಕೆ ಸಂಬಂಧಿಸಿದ ದಾಖಲೆ, ದಿನಾಂಕ ಸೇರಿ ಇತರೆ ದಾಖಲೆಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ರಾಜ್ಯ ಸರಕಾರವು ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗಿದೆ. ಇದರಲ್ಲಿ ಜನಹಿತವಿದ್ದು ನೈಜ ಪರಿಸ್ಥಿತಿಯ ಕಾರಣದಿಂದ ಹೋರಾಟಕ್ಕಿಳಿದರೆ ನಮ್ಮ ಸಹಕಾರವೂ ಇದೆ.

ಅಂತಿಮವಾಗಿ ಜನರಿಗೆ ಕಲ್ಯಾಣ ಬಯಸುವುದೇ ನಮ್ಮ  ರಾಜಮಾರ್ಗವಾಗಬೇಕು. ಹಾಗಂತ, ಕೇಂದ್ರ ಅಥವಾ ಹಣಕಾಸು ಸಚಿವಾಲಯವು ಸುಮ್ಮನೆ ಕೂರುವುದಿಲ್ಲ, ತನ್ನದೇ ಆದ ವಾದವನ್ನು ಕೋರ್ಟ್ ಮುಂದೆ ಇಡುತ್ತದೆ ಕೂಡ. ಚುನಾವಣಾ ಸಂದರ್ಭದಲ್ಲಿ, ಕೇವಲ ಮೋದಿ ಸರಕಾರವನ್ನು ವಿರೋಧಿಸುವ ಕಾರಣಕ್ಕೆ ಇಂಥ ಕಾರ್ಯಕ್ಕೆ ಕೈಹಾಕಿ ಜನರ ಮತ್ತು ನ್ಯಾಯಾ ಲಯದ ಮುಂದೆ ರಾಜ್ಯವು ತಲೆತಗ್ಗಿಸುವಂತಾಗಬಾರದು ಎಂಬ ಕಳಕಳಿಯು ನಮಗಿದೆ.

ಜನರ ಭಾವನೆಗಳೊಂದಿಗೆ ವಿಭಜನಾತ್ಮಕ ಅಲೆಗಳನ್ನು ಸೂಕ್ಷ್ಮವಾಗಿ ಹುಟ್ಟುಹಾಕುವ ಯಾವುದೇ ರೀತಿಯ ಹುನ್ನಾರಕ್ಕೆ ಪರೋಕ್ಷವಾಗಿಯೂ ನಾವು ಆಸ್ಪದ ಕೊಡಬಾರದು ಎಂಬುದನ್ನು ಮರೆಯದಿರೋಣ.

Leave a Reply

Your email address will not be published. Required fields are marked *