Thursday, 24th October 2024

ಕೂಚುಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ಇನ್ನಿಲ್ಲ

ಹೈದ್ರಾಬಾದ್: ಕೂಚುಪುಡಿ ನೃತ್ಯ ಕಲಾವಿದೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶೋಭಾ ನಾಯ್ಡು ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

1956 ರಲ್ಲಿ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ಜನಿಸಿದ್ದ ಶೋಭಾ ನಾಯ್ಡು ಕೂಚುಪುಡಿ ನೃತ್ಯದ ತರಬೇತಿಯನ್ನು ವೇಂಪತಿ ಚಿನ್ನ ಸತ್ಯಂ ಅವರಿಂದ ಪಡೆದರು. 1991 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2001 ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಗೌರವ ಮದ್ರಾಸ್‌ ನ ಶ್ರೀ ಕೃಷ್ಣ ಗಣ ಸಭೆಯಿಂದ ನೃತ್ಯ ಚೂಡಾಮಣಿ ಪ್ರಶಸ್ತಿ ಸಂದಿದೆ.

ಹೈದರಾಬಾದ್‌ನ 40 ವರ್ಷಪರಂಪರೆ ಇರುವ ಕೂಚುಪುಡಿ ಆರ್ಟ್ ಅಕಾಡೆಮಿಗೆ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದ್ದರು. ಭಾರತ ಮತ್ತು ವಿದೇಶಗಳ 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರ ಬೇತಿ ನೀಡಿದ್ದರು.

ಯು.ಕೆ, ಯು.ಎಸ್.ಎಸ್.ಆರ್, ಸಿರಿಯಾ, ಟರ್ಕಿ, ಹಾಂಗ್ ಕಾಂಗ್, ಬಾಗ್ದಾದ್, ಕಂಪುಚಿಯಾ, ಮತ್ತು ಬ್ಯಾಂಕಾಕ್ ನಂತಹ ವಿವಿಧ ರಾಷ್ಟ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು. ಭಾರತ ಸರ್ಕಾರದ ಪರವಾಗಿ ಅವರು ವೆಸ್ಟ್ ಇಂಡೀಸ್, ಮೆಕ್ಸಿಕೊ, ವೆನೆಜುವೆಲಾ, ಟುನಿಸ್, ಕ್ಯೂಬಾಗೆ ಸಾಂಸ್ಕೃತಿಕ ನಿಯೋಗ ವನ್ನು ಮುನ್ನಡೆಸಿದ್ದರು.