Sunday, 15th December 2024

ಮನೆಯೊಂದು ಮೂರು ಬಾಗಿಲು!

‘ಈಗಲೇ ಹಿಂಗೆ, ಆಮೇಲೆ ಇನ್ಹೆಂಗೋ?!’ ಎಂಬುದು ಚಲನಚಿತ್ರವೊಂದರ ಹಾಸ್ಯ ಸನ್ನಿವೇಶದಲ್ಲಿ ತೂರಿ ಬರುವ ಸಂಭಾಷಣೆ. ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟದ ವರಸೆಗಳನ್ನು ನೋಡುತ್ತಿದ್ದರೆ ಈ ಮಾತು ಅಪ್ರಯತ್ನವಾಗಿ ನೆನಪಾಗುತ್ತದೆ. ಕಾರಣ, ಲೋಕಸಭಾ ಚುನಾವಣೆಯ ದಿನಾಂಕವು ಘೋಷಣೆಯಾಗುವ ಹೊತ್ತಿಗಾಗಲೇ, ಈ ಮೈತ್ರಿಕೂಟದಲ್ಲಿ ಗುಪ್ತಗಾಮಿನಿಯಾಗಿದ್ದ ಗೊಂದಲ, ಮುನಿಸು, ಅಸಮಾಧಾನಗಳು ಎಳೆಎಳೆಯಾಗಿ ಗೋಚರಿಸಲು ಶುರುವಾಗಿದ್ದವು.

ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದ ಸಹವರ್ತಿಗಳು ಎಂದು ಗುರುತಿಸಿಕೊಂಡ ಬಿಡಿಬಿಡಿ ಪಕ್ಷಗಳು, ರಾಜ್ಯ ಮಟ್ಟದಲ್ಲಿ ಪರಸ್ಪರರ ವಿರುದ್ಧ ಕತ್ತಿ ಮಸೆಯುವಂಥ
ತಂತ್ರಗಾರಿಕೆಯಲ್ಲಿ ತೊಡಗಿದ್ದನ್ನೂ ಜನ ಕಂಡಿದ್ದಾರೆ. ಈಗ ಅದರ ಮುಂದುವರಿದ ಭಾಗವೆಂಬಂತೆ ‘ಇಂಡಿಯ’ ಮಿತ್ರಪಕ್ಷಗಳಲ್ಲಿ ಮತ್ತೊಂದಾವರ್ತಿ ಕಿತ್ತಾಟ ಶುರುವಾಗಿ, ಕೇರಳದಲ್ಲಿ ಅದು ತಾರಕಕ್ಕೇರಿದೆ. ‘ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರವು ಕೇರಳದಲ್ಲಿ ಮತದಾರರಿಗೆ ಕಿರುಕುಳ ನೀಡುತ್ತಿದೆ; ಮತದಾನದ ಪ್ರಮಾಣ ಹೆಚ್ಚಾದರೆ ತನಗೆ ಅನಾನುಕೂಲ ಎಂಬ ಕಾರಣಕ್ಕೆ ಮತದಾರರನ್ನು ಬೆದರಿಸಿ ಅವರು ಮತಕೇಂದ್ರಗಳಿಗೆ ಬಾರದಂತೆ ಮಾಡಿದೆ, ಕೆಲವೆಡೆ ಸಾವಿರಾರು ಮತದಾರರ ಹೆಸರನ್ನೇ ಪಟ್ಟಿಯಿಂದ ಕಿತ್ತುಹಾಕಲಾಗಿದೆ’ ಎಂದು ಕಾಂಗ್ರೆಸ್ ವರಾತ ಹಚ್ಚಿಕೊಂಡಿರುವುದು ಇದಕ್ಕೆ ತಾಜಾ ಉದಾಹರಣೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ-ಎಂ ಪಕ್ಷ ಗಳು ಬಿಜೆಪಿಗೆ ಬೆಂಬಲ ನೀಡುತ್ತಿವೆ’ ಎಂಬ ವಿಲಕ್ಷಣ ಆರೋಪವನ್ನು ಮಾಡಿ ದ್ದಾರೆ. ಈ ಎರಡು ಬೆಳವಣಿಗೆಗಳನ್ನು ರಾಜಕೀಯ ಪ್ರಬುದ್ಧತೆಯ ಲಕ್ಷಣ ಎನ್ನಲಾದೀತೇ? ‘ಮನೆ ಗೆದ್ದು ಮಾರುಗೆಲ್ಲು’ ಎಂಬುದು ನಮ್ಮ ಜನಬಳಕೆ ಯಲ್ಲಿರುವ ಜಾಣನುಡಿ. ತಂತಮ್ಮ ರಾಜ್ಯಗಳಲ್ಲೇ ಸೌಹಾರ್ದ ಯುತವಾಗಿ ವ್ಯವಹರಿಸಲಾಗದವರು, ಒಂದು ಇಡುಗಂಟಾಗಿ ದೆಹಲಿ ಗದ್ದುಗೆಯಲ್ಲಿ ಒಂದೊಮ್ಮೆ ಜಮೆಯಾದರೆ ಅದ್ಯಾವ ಪರಿಯಲ್ಲಿ ‘ಸುಶಾಸನ’ ವನ್ನು ನೀಡಿ ಯಾರು? ಎಂಬುದಿಲ್ಲಿ ಯಕ್ಷಪ್ರಶ್ನೆ.

ಹೀಗಾಗಿ, ಜನರು ಮತದಾನ ಪ್ರಕ್ರಿಯೆ ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮ ಪ್ರತಿನಿಽಯ ಆಯ್ಕೆಯಲ್ಲಿ ವಿವೇಚನೆ ಮೆರೆಯಬೇಕಾದ್ದು, ವಿಶ್ವಾಸಾರ್ಹ ಸರಕಾರವನ್ನು ಕೇಂದ್ರದ ಗದ್ದುಗೆಯಲ್ಲಿ ಕೂರಿಸಬೇಕಾದ್ದು ಈ ಕ್ಷಣದ ಅನಿವಾರ್ಯತೆ.