ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಾ, ‘ನಮಗೆ ದೇಶದ ವಿಷನ್ ಚಿಂತೆಯಾದರೆ, ಪ್ರತಿಪಕ್ಷಗಳಿಗೆ ಕಮಿಷನ್ ಚಿಂತೆಯಾಗಿದೆ’ ಎಂದಿರುವುದನ್ನು ನೀವು ಈಗಾಗಲೇ ಪತ್ರಿಕೆಗಳಲ್ಲಿ ಓದಿದ್ದೀರಿ.
ಚುನಾವಣೆಯ ಆಸುಪಾಸಿನಲ್ಲಿ ಹೊಮ್ಮುವ ಇಂಥ ಪದಪಂಜಗಳು ಮಿಕ್ಕ ಅವಧಿಯಲ್ಲೂ ಚರ್ಚೆಗೆ ಬಂದು, ಜನಕಲ್ಯಾಣಕ್ಕೆ ಆಳುಗರು ಸಂಕಲ್ಪಿಸು ವಂತಾದರೆ, ಅಭಿವೃದ್ಧಿಯ ಹಾದಿಯೇನೂ ದೂರ ಉಳಿಯವುದಿಲ್ಲ. ಆದರೆ ಹಾಗಾಗುತ್ತಿಲ್ಲ ಎಂಬುದೇ ಸ್ವಾತಂತ್ರ್ಯೋತ್ತರ ಭಾರತ ಸಮಸ್ಯೆಗಳಲ್ಲಿ ಒಂದಾಗಿದೆ. ತಾವು ಅಧಿಕಾರಕ್ಕೆ ಬಂದರೆ ಏನೇನೆಲ್ಲಾ ನೆರವೇರಿಸಬೇಕು ಎಂಬ ಜನನಾಯಕರ ಆಶಯಗಳ ಸಂಕಲಿತ ರೂಪವೇ ಆಗಿರುತ್ತದೆ ಇಂಥದೊಂದು ‘ದೂರದೃಷ್ಟಿ’.
ಆದರೆ ಅಧಿಕಾರ ದಕ್ಕುತ್ತಿದ್ದಂತೆ ಜನನಾಯಕರಲ್ಲಿ ರೂಪುಗೊಳ್ಳುವ ಸ್ವಹಿತಾಸಕ್ತಿಯ ನೆರವೇರಿಕೆಗಾಗಿನ ಹಪಹಪಿ ಮತ್ತು ಸ್ವಜನಪಕ್ಷಪಾತದ ಕಾರಣ ದಿಂದಾಗಿ ಆ ದೂರದೃಷ್ಟಿ ಕಾಲಕ್ರಮೇಣ ಮಸುಕಾಗಿಬಿಡುವುದೇ ಹಿನ್ನಡೆಗೆ ಕಾರಣ. ಇಲ್ಲವಾಗಿದ್ದಲ್ಲಿ, ದೇಶದ ಸಾಕಷ್ಟು ಹಳ್ಳಿಗಳು ಈಗಲೂ ಸರಿಯಾದ ರಸ್ತೆ, ಶಾಲೆ, ಆಸ್ಪತ್ರೆ, ವಿದ್ಯುಚ್ಛಕ್ತಿ, ಕುಡಿಯುವ ನೀರಿನಂಥ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತಿರಲಿಲ್ಲ. ಕೃಷಿ ಕಾರ್ಯಕ್ಕಾಗಿ ಅನಿಶ್ಚಿತ ಮಳೆಯನ್ನೇ ನೆಚ್ಚಬೇಕಾಗಿ ಬಂದಿರುವುದು ನಮ್ಮ ದೇಶದಲ್ಲಿ ದಶಕಗಳಿಂದಲೂ ಕಾಣಬರುತ್ತಿರುವ ಅನಿವಾರ್ಯತೆ; ಪರ್ಯಾಯ ನೀರಾವರಿ ವ್ಯವಸ್ಥೆ ಯನ್ನು ಬಹಳಷ್ಟು ಕಡೆ ಇನ್ನೂ ಕಲ್ಪಿಸಲಾಗದಿರುವುದು, ಕೃಷಿಯೇ ಬಹುತೇಕರ ಪ್ರಮುಖ ಜೀವನೋಪಾಯವಾಗಿರುವ ಭಾರತದಲ್ಲಿನ ಒಂದು ನ್ಯೂನತೆಯಲ್ಲವೇ? ಇದಕ್ಕೆ ಕಾರಣ, ಜನನಾಯಕರಲ್ಲಿ ದೂರದೃಷ್ಟಿ ಇಲ್ಲದಿರುವುದೋ ಅಥವಾ ಇದ್ದರೂ ಅದರ ಸಾಕಾರಕ್ಕೆ ಮನಸ್ಸು ಮಾಡದಿರು ವುದೋ ಎಂಬುದನ್ನು ಅವರೇ ಹೇಳಬೇಕು.
ನಮ್ಮ ರೈತರು ವೈಭೋಗದ ಜೀವನವನ್ನೇನೂ ಕೇಳುತ್ತಿಲ್ಲ; ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಲಭ್ಯತೆಯು ಅಬಾಧಿತವಾಗಿರಬೇಕು, ತಾವು ಬೆಳೆದ ಬೆಳೆಗೆ ಸೂಕ್ತ ಬೆಂಬಲಬೆಲೆ ಸಿಗಬೇಕು ಎಂಬುದಷ್ಟೇ ಅವರ ಆಗ್ರಹವಾಗಿರುತ್ತದೆ. ಆದರೆ ಇದು ನೆರವೇರದ ಕಾರಣ, ತಾವು ಮಾಡಿದ ಸಾಲವನ್ನು ತೀರಿಸಲಾಗದೆ ರೈತರು ಆತ್ಮಹತ್ಯೆಯ ಮೊರೆಹೋಗುವಂತಾಗಿದೆ. ದೂರದೃಷ್ಟಿಯ ಮಹತ್ವವನ್ನು ನಮ್ಮ ಜನನಾಯಕರು ಇನ್ನಾದರೂ ಅರಿಯಲಿ.