Monday, 25th November 2024

ಮಿತಿ ಅರಿತರೆ ಹಿತ

ಮಹಾದೇವ ಬಸರಕೋಡು

ಜೀವನದಲ್ಲಿ ಎಲ್ಲವನ್ನೂ ಸಾಧಿಸುವುದು ಒಳ್ಳೆಯದೇ. ಆದರೆ ವ್ಯರ್ಥ ನಿರಾಸೆಯನ್ನು ತಪ್ಪಿಸಲು, ನಮ್ಮ ಸಾಮರ್ಥ್ಯದ ಮಿತಿ ಅರಿತಿರಬೇಕು.

ನಮ್ಮಲ್ಲಿ ಬುದ್ಧಿವಂತಿಕೆಗೆ, ಸಾಮರ್ಥ್ಯಕ್ಕೆ ಯಾವುದೇ ಕೊರತೆ ಇಲ್ಲದಿದ್ದರೂ, ಕೆಲವು ಬಾರಿ ಸೋಲನ್ನು ಎದುರುಗೊಳ್ಳುವ ಪ್ರಸಂಗಗಳು ಬಂದೆರಗುತ್ತವೆ. ನಿರಂತರ ಪ್ರಯತ್ನ, ಏಕಾಗ್ರತೆ, ಬದ್ಧತೆ, ತ್ಯಾಗ ಇವುಗಳಾವುದೂ ಗೆಲುವಿಗೆ ಸಹಾಯಕಾರಿಯಾಗದೇ ಹೋಗುತ್ತವೆ. ಅಂತಹ ಸೋಲಿನ ಘಟನೆಗಳು ಬದುಕಿನಲ್ಲಿ ಜರುಗಿದಾಗ ತಕ್ಷಣಕ್ಕೆ ಕುಗ್ಗಿಹೋಗುತ್ತೇವೆ. ನಮ್ಮ ಅದೃಷ್ಟವನ್ನು, ಹಳಿದುಕೊಂಡು ಸುಮ್ಮನಾಗಿ ಬಿಡುತ್ತೇವೆ. ವಿಧಿಲಿಖಿತವೇ ಹಾಗಿರುವಾಗ ಏನು ಮಾಡಲು ಸಾಧ್ಯ ಎಂದು ನಮ್ಮನ್ನು ನಾವೇ ಸಂತೈಸಿಕೊಳ್ಳುತ್ತೇವೆ.

ನೈಜ ಕಾರಣ ಹುಡುಕದೇ ಸೋಲನ್ನು ಒಪ್ಪಿಕೊಳ್ಳುತ್ತೇವೆ. ಬಹುತೇಕ ಸಂದರ್ಭಗಳಲ್ಲಿ ಇಂತಹ ನಮ್ಮ ನಿರಾಸೆಗೆ ಯಾವುದನ್ನು ಮಾಡದೇ ಬಿಡುವುದು ಸೂಕ್ತ ಎಂದು ನಿರ್ಧರಿಸುವಲ್ಲಿನ ನಮ್ಮ ವಿಫಲತೆ, ಎಲ್ಲದಕ್ಕೂ ಅತಿಯಾಗಿ ಸ್ಪಂದಿಸುವ ನಮ್ಮ ದುರ್ಬಲ ಮನೋಭಾವ ಮತ್ತು ನಮ್ಮ ಅಧೀನಕ್ಕೆ ಒಳಪಡದ ವಸ್ತುಗಳ ಕಡೆಗೆ ಕೈಚಾಚುವ ನಮ್ಮ ಹುಚ್ಚು ಹವ್ಯಾಸಗಳು ಕಾರಣವಾಗಿರು ತ್ತವೆ.

ನಮಗೆಲ್ಲ ಪರಿಚಿತವಾಗಿರುವ ಕಥೆಯೇ ಇದು. ಹಸಿದ ನರಿಯೊಂದು ಆಹಾರಕ್ಕಾಗಿ ಅಲ್ಲಿ ಇಲ್ಲಿ ಅರಸುತ್ತಿತ್ತು. ಸುಂದರವಾದ ದ್ರಾಕ್ಷಿ ತೋಟವೊಂದು ಕಂಡಿತು. ಅಲ್ಲಿ ಗೊಂಚಲು ಗೊಂಚಲಾಗಿ ಜೋತು ಬಿದ್ದ ದ್ರಾಕ್ಷಿಗಳನ್ನು ನೋಡಿತು. ಅವುಗಳನ್ನು ತಿನ್ನ ಬೇಕೆಂಬ ಹಂಬಲದಿಂದ ತೋಟಕ್ಕೆ ನುಗ್ಗಿತು. ದ್ರಾಕ್ಷಿಯ ಗೊಂಚಲುಗಳು ನೇತಾಡುವುದನ್ನು ಕಂಡು ಬಾಯಲ್ಲಿ ನೀರೂರಿತು. ಆದರೆ ಅವುಗಳು ಅದಕ್ಕೆ ನಿಲುಕದಷ್ಟು ಎತ್ತರದಲ್ಲಿದ್ದವು. ಅದನ್ನು ಲೆಕ್ಕಿಸದೇ ನರಿ ಜಿಗಿದು ದ್ರಾಕ್ಷಿಯನ್ನು ತಿನ್ನಲು ಪ್ರಯತ್ನಿಸಿತು. ಸಿಗದೇ ಹೋಯಿತು. ಮತ್ತೆ ಮತ್ತೆ ಜಿಗಿಯಿತು. ಅದು ಅದಕ್ಕೆ ನಿಲುಕಷ್ಟು ಎತ್ತರದಲ್ಲಿದ್ದ ಕಾರಣ ಅದರ ಎಲ್ಲ ಜಿಗಿತದ ಪ್ರಯತ್ನ ಗಳು ವ್ಯರ್ಥವಾದವು. ಒಂದು ದ್ರಾಕ್ಷಿಯೂ ಅದಕ್ಕೆ ಸಿಗಲಿಲ್ಲ.

ತುಂಬ ನಿರಾಸೆಯಾಯಿತು. ಅಷ್ಟೊತ್ತಿಗಾಗಲೇ ಮೊದಲೇ ಹಸಿದ ನರಿಯ ಇನ್ನಷ್ಟು ದೇಹ ಬಳಲಿತ್ತು. ಕೊನೆಗೊಮ್ಮೆ ದ್ರಾಕ್ಷಿ
ಸಿಗದಿದ್ದೇ ಒಳ್ಳೆಯದಾಯಿತು. ಅವು ತುಂಬ ಹುಳಿ. ತಿಂದರೆ ಆರೋಗ್ಯ ಕೆಡಬಹುದಿತ್ತು ಎಂದು ತನ್ನ ಸೋಲನ್ನು ಸಮರ್ಥಿಸಿ ಕೊಂಡಿತು. ತನಗೆ ನಿಲುಕದಷ್ಟು ಎತ್ತರದಲ್ಲಿರುವ ದ್ರಾಕ್ಷಿಗೆ ಅನಗತ್ಯ ಚಡಪಡಿಕೆ ವ್ಯರ್ಥ ಪ್ರಯತ್ನ ಎಂದು ನರಿ ಮೊದಲೇ
ತಿಳಿದುಕೊಂಡಿದ್ದರೆ ಅದಕ್ಕೆ ಸೋಲಾಗುತ್ತಿರಲಿಲ್ಲ. ಬದುಕಿನಲ್ಲಿ ಕೊರತೆಯಿದೆ ಎಂದು ಭಾವಿಸಿ ಅವುಗಳನ್ನು ತುಂಬಿಕೊಳ್ಳಲು ಹವಣಿಸುವ ನಮ್ಮ ಸ್ವಭಾವ ಸಹಜ. ನಮ್ಮ ಮನಸ್ಸಿಗೆ ಒಂದಷ್ಟು ಕಡಿವಾಣ ಹಾಕಿಕೊಳ್ಳಬೇಕು. ನಮ್ಮ ಆದ್ಯತೆಗಳನ್ನು ಸ್ಪಷ್ಟ ವಾಗಿರಿಸಿಕೊಳ್ಳಬೇಕು. ನಮ್ಮ ಶಕ್ತಿ ಸಾಮರ್ಥ್ಯಗಳನ್ನು ವ್ಯರ್ಥವಾಗಿಸಬಲ್ಲ ಸಂದರ್ಭಗಳನ್ನು ವಿವೇಚನೆಯಿಂದ ದೂರಕ್ಕೆ ಸರಿಸ ಬೇಕು. ನನಗೆಲ್ಲವೂ ಸಾಧ್ಯ ಎಂಬ ಭ್ರಮೆಯಿಂದ ಹೊರಬರಬೇಕು. ಯಾವುದೇ ಪ್ರಯತ್ನಕ್ಕೆ ಕೈ ಹಾಕುವ ಮುನ್ನ ಸಾಧ್ಯಾ ಸಾಧ್ಯತೆ ಗಳನ್ನು ಕುರಿತು ಯೋಚಿಸಬೇಕು.

ನಮಗೆ ಸಾಧ್ಯವಾಗಬಲ್ಲ ವಿಷಯಗಳ ಕುರಿತು ಮಾತ್ರವೇ ಗಮನ ಹರಿಸಬೇಕು. ನಮ್ಮ ಜೀವನವನ್ನು ಸುಧಾರಿಸಬಲ್ಲ ವಿಷಯಗಳ ಮೇಲೆ ನಮ್ಮ ಸಮಯವನ್ನು ವಿನಿಯೋಗಿಸಿಬೇಕು. ಸ್ವಾತಿ ಮಳೆಯ ಹನಿ ಚಿಪ್ಪಿನಲ್ಲಿ ಬಿದ್ದಾಗ ಮಾತ್ರವೇ ಮುತ್ತಾಗುತ್ತದೆಯೇ ವಿನಃ ಕಾಯ್ದ ಹಂಚಿನ ಮೇಲಲ್ಲ ಎಂಬ ವಾಸ್ತವಿಕತೆಯನ್ನು ನಾವು ಅರಿತುಕೊಳ್ಳಬೇಕು. ಉತ್ಸಾಹ ಬತ್ತಿಹೋಗದಂತೆ ಕಾಪಿಟ್ಟು ಕೊಳ್ಳಲು ನಾವು ಸ್ವ-ಒಳಗೊಳ್ಳುವಿಕೆಯನ್ನು ರೂಢಿಸಿಕೊಳ್ಳಬೇಕು. ವಿವೇಕವನ್ನು ಕಂಡುಕೊಳ್ಳಬೇಕು. ಇದು ನಮ್ಮ ಸಾಮರ್ಥ್ಯ ಗಳಿಗೆ ಇಂಬು ನೀಡುತ್ತದೆ.