Sunday, 24th November 2024

ಇಲ್ಲಿ ಎಲ್ಲರೂ ಸಮಾನರಲ್ಲವೇ?

ಪೆನ್‌ಡ್ರೈವ್ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿರುವುದು ಜನಸಾಮಾನ್ಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಪ್ರಕರಣದ ತನಿಖೆಗೆಂದು ರೂಪುಗೊಂಡಿರುವ ಎಸ್‌ಐಟಿ ವತಿಯಿಂದ ಲುಕ್‌ಔಟ್ ನೋಟಿಸ್ ಮತ್ತು ಬ್ಲ್ಯೂಕಾರ್ನರ್ ನೋಟಿಸ್ ಗಳನ್ನು ಜಾರಿಗೊಳಿಸ ಲಾಗಿದ್ದರೂ ಅವರು ಶರಣಾಗದೆ ತಲೆಮರೆಸಿಕೊಂಡಿರುವುದು ಈ ಪ್ರಶ್ನೆಗಳು ಹುಟ್ಟುವುದಕ್ಕೆ ಕಾರಣ.

ಹೀಗಾಗಿ, ‘ಆರೋಪಿ ಎನಿಸಿಕೊಂಡವನು ಒಂದೊಮ್ಮೆ ಶ್ರೀಸಾಮಾನ್ಯ ಆಗಿದ್ದು ಆತನೂ ಹೀಗೆಯೇ ನಡೆದುಕೊಂಡಿದ್ದಿದ್ದರೆ ಅದು ಸ್ವೀಕಾರಾರ್ಹ ವಾಗುತ್ತಿತ್ತೇ?’ ಎಂದೆಲ್ಲಾ ಜನರು ಕೇಳುವಂತಾಗಿದೆ. ಬಿ.ಕೆ.ಸಿಂಗ್ ನೇತೃತ್ವದ ಎಸ್‌ಐಟಿ ತಂಡವು ಶುರುವಿನಲ್ಲಿ ನೋಟಿಸ್ ನೀಡಿದಾಗ, ಪ್ರಜ್ವಲ್ ರೇವಣ್ಣ ಏಳು ದಿನಗಳ ಕಾಲಾವಕಾಶವನ್ನು ಕೇಳಿದ್ದುಂಟು; ಅದು ಮುಗಿದು ಸಾಕಷ್ಟು ದಿನಗಳಾಗಿರುವುದರಿಂದ ಹಾಗೂ ಅವರ ಶರಣಾಗತಿಯ ವಿಷಯದಲ್ಲಿ ಯಾವುದೇ ಬೆಳವಣಿಗೆ ಆಗದಿರುವುದರಿಂದ ಜನರು ಹೀಗೆ ಪ್ರಶ್ನಿಸುವುದು ಸಹಜವೇ.

ಜತೆಗೆ ದಿನಗಳೆದಂತೆ ಈ ಪ್ರಕರಣಕ್ಕೆ ಬಗೆಬಗೆಯ ರೆಕ್ಕೆಪುಕ್ಕಗಳು ಸೇರಿಕೊಳ್ಳುತ್ತಿವೆ, ರಾಜಕೀಯ ಲೇಪಗಳು ಮೆತ್ತಿಕೊಳ್ಳುತ್ತಿವೆ. ‘ಸಂಸದ ಪ್ರಜ್ವಲ್ ರೇವಣ್ಣ ರಿಗೆ ನೀಡಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರದ್ದುಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಿಂಜರಿಯುತ್ತಿರುವು ದೇಕೆ? ಯಾವ ಶಕ್ತಿ ಇದನ್ನು ತಡೆಹಿಡಿದಿದೆ’ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಪ್ರಶ್ನಿಸಿರುವುದು ಇಲ್ಲಿ ಉಲ್ಲೇಖನೀಯ.

ಒಟ್ಟಾರೆಯಾಗಿ ಈ ಎಲ್ಲ ಕಾರಣಗಳಿಂದಾಗಿ ಎಸ್‌ಐಟಿ ಮೇಲೆ ಒತ್ತಡ ಹೆಚ್ಚಿರುವುದಂತೂ ಖರೆ. ಆದರೆ ಒಂದಂತೂ ನಿಜ. ಜನರೇ ಇರಲಿ, ಜನಪ್ರತಿನಿಽಗಳೇ ಇರಲಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ‘ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ’ ಎಂಬ ವರ್ತನೆಗೆ ಈ ನೆಲದ ಕಾನೂನು ಅವಕಾಶ ಮಾಡಿಕೊಡುವಂತಾಗಬಾರದು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಪ್ರಜ್ವಲ್ ರೇವಣ್ಣ ಅವರು ಆದಷ್ಟು ಬೇಗ ವಿದೇಶದಿಂದ ಮರಳಿ ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆಗೆ ಹಾಜರಾಗಬೇಕು. ಅದು ಸಂಸದರಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ಓರ್ವ ವ್ಯಕ್ತಿಯಿಂದ ಈ
ನೆಲದ ಜನರು ನಿರೀಕ್ಷಿಸುವ ನಡವಳಿಕೆ.