Thursday, 12th December 2024

ಕೊಲೆಗಳಿಗೆ ಪುರುಷ ಅಹಂ ಕಾರಣ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ, ಕೊಡಗಿನ ಮೀನಾ ಹತ್ಯೆ ನಂತರ ಮತ್ತೆ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹತ್ಯೆಯಾಗಿದೆ. ತಾನು ಇಷ್ಟ ಪಟ್ಟ ಹುಡುಗಿ ತನಗೆ ಸಿಗುವುದಿಲ್ಲ ಎಂಬ ಖಾತ್ರಿಯಾದ ನಂತರ ಕೊಲೆ ಮಾಡಿರುವುದು ಈ ಮೂರೂ ಕೊಲೆಗಳಲ್ಲಿ ಕಂಡುಬಂದಿದೆ.

ಒಬ್ಬ ಗಂಡು ತಾನು ಇಷ್ಟ ಪಟ್ಟ ಹೆಣ್ಣು ತನಗೆ ಸಿಕ್ಕಿಲ್ಲ ಎನ್ನುವ ಕಾರಣಕ್ಕಾಗಿ ಆಕೆಯನ್ನು ಕೊಲ್ಲುತ್ತಾನೆ ಎಂದಾದರೆ ಆತನ ಇಷ್ಟಪಟ್ಟಿದ್ದೇ ಪ್ರಶ್ನಾರ್ಹ ವಾಗಬೇಕಾಗುತ್ತದೆ. ಯಾಕೆಂದರೆ ನಿಜಕ್ಕೂ ಆತ ಹುಡುಗಿಯನ್ನು ಪ್ರೀತಿಸಿದ್ದಿದ್ದರೆ ಆತ ಕೊಲೆ ಮಾಡಲು ಸಾಧ್ಯವಿಲ್ಲ. ಹೆಣ್ಣಿನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುವ ಪುರುಷ ಅಹಂನ ಪ್ರದರ್ಶನ ಇಲ್ಲಿ ಗುರುತಿಸಬಹುದು. ತನ್ನ ಪ್ರೀತಿಗೆ ಧಕ್ಕೆಯಾದ ಕಾರಣಕ್ಕಾಗಿಯಲ್ಲ, ತನ್ನ ಅಹಂಗೆ ಧಕ್ಕೆಯಾದ
ಕಾರಣಕ್ಕೇ ಇಲ್ಲಿ ಕೊಲೆಗಳು ನಡೆದಿವೆ.

ಹೆಣ್ಣಿಗೆ ಗಂಡನ್ನು ತಿರಸ್ಕರಿಸುವ ಅಧಿಕಾರವಿಲ್ಲ ಎನ್ನುವ ಪುರುಷಾಂಹಕಾರ ಇದರ ಹಿಂದಿದೆ. ಸಮಾಜ ಆಧುನಿಕವಾದಷ್ಟು ಪುರುಷನ ಮನಸ್ಸು ಸಂಕುಚಿತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹೆಣ್ಣಿನ ಕುರಿತಂತೆ ಆತನಲ್ಲಿರುವ ಕೀಳರಿಮೆ, ಅಭದ್ರ ಭಾವನೆಗಳು ಅಂತಿಮವಾಗಿ ಆತನನ್ನು ಕೊಲೆಗಾರ ನನ್ನಾಗಿಸುತ್ತಿರುವುದು ಆತಂಕಕಾರಿಯಾಗಿದೆ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳು, ಸಾಮಾಜಿಕ ಜಾಲತಾಣದ ಪ್ರಭಾವಗಳು ಮತ್ತು ಅದಕ್ಕೆ ಪೂರಕವಾಗಿ ಯುವಕರನ್ನು ತನ್ನ ಜಾಲದಲ್ಲಿ ಕೆಡಹುತ್ತಿರುವ ಮಾದಕ ದ್ರವ್ಯಗಳ ಮೊದಲ ಬಲಿಪಶುಗಳು ಮಹಿಳೆಯರೇ ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಹೆಣ್ಣಿನ ಮೇಲೆ ಅತ್ಯಾಚಾರ ಅಥವಾ ಇನ್ನಿತರ ಲೈಂಗಿಕ ದೌರ್ಜನ್ಯಗಳು ನಡೆದಾಗ ಸಮಾಜ ಹೆಣ್ಣಿಗೆ ಇನ್ನಷ್ಟು ಕಠಿಣವಾದ ಕಟ್ಟುಪಾಡುಗಳನ್ನು ವಿಧಿಸು ತ್ತದೆ. ಆದರೆ ಇದೇ ಸಂದರ್ಭದಲ್ಲಿ ಕೃತ್ಯ ಎಸಗಿದ ಪ್ರಮುಖ ಆರೋಪಿ ಪುರುಷನಿಗೆ ಕಟ್ಟುಪಾಡುಗಳನ್ನು ವಿಧಿಸುವ ಅಗತ್ಯವಿದೆ ಎನ್ನುವುದನ್ನು ಮರೆತು ಬಿಡುತ್ತದೆ. ನೈತಿಕತೆಗೆ ಸಂಬಂಧಿಸಿದ, ಚಾರಿತ್ರ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ನಾವು ಹೆಣ್ಣಿನ ಕಡೆಯಿಂದಷ್ಟೇ ನಿರೀಕ್ಷಿಸುವುದರಿಂದ, ಹೆಣ್ಣಿನ ವಿರುದ್ಧ ಅಪರಾಧಗಳನ್ನು ಎಸಗಲು ಗಂಡಿಗೆ ಪರೋಕ್ಷ ಪರವಾನಿಗೆ ನೀಡಿದಂತಾಗಿದೆ.

ಕೌಟುಂಬಿಕವಾಗಿ ಅಡುಗೆ ಕೆಲಸದಿಂದ ಹಿಡಿದು ಎಲ್ಲ ರೀತಿಯ ನೈತಿಕ ಜವಾಬ್ದಾರಿಗಳನ್ನು ಗಂಡು ಹೆಣ್ಣುಗಳಿಗೆ ಸಮಾನವಾಗಿ ಬೋಧಿಸುವ ಅಗತ್ಯವಿದೆ. ಹೆಣ್ಣಿನ ಬಗ್ಗೆ ವಹಿಸುವ ಕಾಳಜಿಯನ್ನು ಸಮಾಜ ಗಂಡಿನ ಕುರಿತಂತೆಯೂ ವಹಿಸಬೇಕಾಗಿದೆ. ಹೆಣ್ಣಿಗಿರುವಂತೆ ಆತನಿಗೂ ಚಾರಿತ್ರ್ಯ, ಶೀಲ ಎನ್ನುವುದು ಇದೆ ಎನ್ನುವುದನ್ನು ಬಾಲ್ಯದ ಬೋಧಿಸಬೇಕು.