Sunday, 15th December 2024

ಕೃಷಿ ಹೊಂಡಗಳ ಬಳಿ ತಡೆಗೋಡೆ ಇರಲಿ

ಜಮೀನುಗಳಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗದಿರಲಿ, ಈ ನೀರು ಬೇಸಿಗೆಯಲ್ಲೂ ಉಪಯೋಗಕ್ಕೆ ಬರಲಿ ಎಂಬ ಸಕಾರಣದಿಂದ ರೈತರ ಜಮೀನು ಗಳಲ್ಲಿ ತೆಗೆದಿರುವ ಕೃಷಿ ಹೊಂಡಗಳು ಪುಟ್ಟ ಬಾಲಕರ ಜೀವಕ್ಕೆ ಎರವಾಗುತ್ತಿರುವುದು ಮಾತ್ರ ದುರದೃಷ್ಟಕರ ಸಂಗತಿ. ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು, ಮೂವರು ಬಾಲಕರು ಸಾವು, ಬಾಲಕರ ಜತೆ ತಂದೆ-ತಾಯಿಯೂ ಸಾವು ಎಂಬಿತ್ಯಾದಿ ಸುದ್ದಿಗಳನ್ನು ಆಗಾಗ ಪತ್ರಿಕೆಗಳಲ್ಲಿ ಕಾಣಬಹುದಾಗಿದೆ. ಇಂಥದ್ದೇ ಘಟನೆ ಮಂಗಳವಾರ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ನಡೆದಿದೆ.

ಇಬ್ಬರು ಮಕ್ಕಳು ಈಜಲು ಹೋಗಿ ಈ ಹೊಂಡದಲ್ಲಿ ಬಿಟ್ಟು ಸಾವನ್ನಪ್ಪಿದ್ದಾರೆ. ಮೊದಲೇ ಹೇಳಿದ ಹಾಗೆ ಇಂಥ ಸುದ್ದಿಗಳು ಕಡಿಮೆ ಏನಲ್ಲ. ಏ.೧೫ ರಂದು ಬಸವನಬಾಗೇವಾಡಿಯಲ್ಲಿ ಒಬ್ಬ ಬಾಲಕ, ಮಾ.೩೧ರಂದು ಹೊಳಲ್ಕೆರೆ ತಾಲೂಕಿನ ಶಿರಾಪನಹಳ್ಳಿಯಲ್ಲಿ ಇಬ್ಬರು ಬಾಲಕರು, ಮಾ.೨೨ರಂದು ಬಾಲಕಿ, ಮೇ ೫ರಂದು ತಾಯಿ-ಮಗು, ಮೇ ೬ರಂದು ಮಾ.೨೬ರಂದು ಕಾಲು ತೊಳೆಯಲು ಹೋಗಿದ್ದ ವ್ಯಕ್ತಿ, ಏ.೧ರಂದು ಮಹಿಳೆ, ಮಾ.೪ರಂದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಗಳು ಈ ವರ್ಷವೇ ನಡೆದಿರುವಂಥವು.

ಅಲ್ಲದೆ ಕೆಲವು ಪ್ರಕರಣಗಳು ಕಣ್ತಪ್ಪಿ ಹೋಗಿವೆ. ಇನ್ನು ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಇಂಥ ನೂರಾರು ಘಟನೆಗಳು ಕಾಣಸಿಗುತ್ತವೆ. ಈ ಘಟನೆಗಳಲ್ಲಿ ಹೆಚ್ಚಾಗಿ ಮಕ್ಕಳೇ ಸಾವನ್ನಪ್ಪಿರುವುದೂ ಬೆಳಕಿಗೆ ಬರುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ಮಕ್ಕಳಿಗೆ ಈಜಾಡುವ ಆಸೆ ಹೆಚ್ಚು. ಎಷ್ಟೋ ಬಾರಿ ತಮ್ಮ ಮನೆಗಳಲ್ಲಿ ಯಾರಿಗೂ ಹೇಳದೇ ಸ್ನೇಹಿತರೊಂದಿಗೆ ಕೃಷಿ ಹೊಂಡಗಳಿಗೆ ಹೋಗಿ ಈಜಾಡುತ್ತವೆ. ಇಂಥ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೇಲಕ್ಕೆ ಏಳಲಾಗದೆ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಘಟನೆಗಳನ್ನು ಗಮನದಲ್ಲಿ ಇರಿಸಿಕೊಂಡು ಸರಕಾರ ಅಥವಾ ಕೃಷಿ ಇಲಾಖೆ ಕೃಷಿ ಹೊಂಡಗಳಲ್ಲಿನ ದುರಂತ ತಪ್ಪಿಸುವ ಬಗ್ಗೆ ಆಲೋಚನೆ ನಡೆಸಬೇಕು.

ಸುತ್ತ ಬೇಲಿ ಹಾಕಲು ಸಾಧ್ಯವೇ? ಅಥವಾ ತಡೆಗೋಡೆ ಕಟ್ಟಬಹುದೇ? ಇದನ್ನು ಬಿಟ್ಟು ಬೇರಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಯೋಜನೆ ರೂಪಿಸಿ ಅದನ್ನು ಜಾರಿಗೆ ತರಲು ಮುಂದಾಗಬೇಕು. ಅಲ್ಲದೆ, ಪೋಷಕರೂ ಮಕ್ಕಳ ಮೇಲೆ ಗಮನ ಇರಿಸಿ, ಕೃಷಿ ಹೊಂಡಗಳತ್ತ ಹೋಗಲು ಬಿಡಬಾರದು. ಇಲ್ಲದಿದ್ದರೆ ಪ್ರತಿ ವರ್ಷವೂ ಇಂಥ ನೂರಾರು ಮಕ್ಕಳು ಜೀವ ಕಳೆದುಕೊಳ್ಳುತ್ತಲೇ ಹೋಗುತ್ತವೆ.