Sunday, 15th December 2024

ಪ್ರಕೃತಿಯನ್ನು ದೂರುವ ನೈತಿಕತೆ ಇಲ್ಲ

ಕಲುಷಿತ ಕುಡಿಯುವ ನೀರಿಗೆ ಪ್ರತಿವರ್ಷವೂ ನೂರಾರು ಜನರು ಬಲಿಯಾಗುತ್ತಿದ್ದಾರಾದರೂ ಅದು ಸುದ್ದಿಯಾಗುವುದು, ಚರ್ಚೆಯಾಗುವುದು ತೀರಾ ಕಡಿಮೆ. ಇದೀಗ ಮೈಸೂರು ಸಮೀಪದ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವಕನೊಬ್ಬ ಮೃತಪಟ್ಟ ಬೆನ್ನಲ್ಲೇ ಎಲ್ಲೆಡೆ ಕುಡಿಯುವ ನೀರಿನ ಶುದ್ಧತೆಯ ಕುರಿತು ಚರ್ಚೆ ನಡೆದಿದೆ.

ಭಾರತದಲ್ಲಿ ೧೬ ಕೋಟಿಗೂ ಅಧಿಕ ಜನರು ಕುಡಿಯುವ ನೀರಿನ ಕೊರತೆ ಎದುರಿಸುತ್ತಿzರೆ. ೨೧ ಕೋಟಿ ಜನರು ಶುಚಿತ್ವದ ಸಮಸ್ಯೆಯನ್ನು ನೀರಿ ನಿಂದಾಗಿಯೇ ಎದುರಿಸುತ್ತಿದ್ದಾರೆ. ಶೇ.೨೧ರಷ್ಟು ಸಾಂಕ್ರಾಮಿಕ ರೋಗಗಳನ್ನು ಈ ದೇಶದ ಜನರು ಕಲುಷಿತ ನೀರಿನ ಮೂಲಕವೇ ಆಹ್ವಾನಿಸಿಕೊಳ್ಳುತ್ತಿದ್ದಾರೆ.
ಭಾರತದಲ್ಲಿ ಪ್ರತಿ ದಿನ ಐದು ವರ್ಷದ ಒಳಗಿನ ೫೦೦ ಮಕ್ಕಳು ಅತಿಸಾರದಿಂದ ಸಾಯುತ್ತಿದ್ದಾರೆ. ಇದಕ್ಕೆ ಕಲುಷಿತ ನೀರಿನ ಕೊಡುಗೆ ಬಹುದೊಡ್ಡದಿದೆ.
ಭಾರತವು ಕುಡಿಯುವುದಕ್ಕಾಗಿ ನದಿ ನೀರನ್ನೇ ಬಹುವಾಗಿ ನೆಚ್ಚಿಕೊಂಡಿದೆ.

ಆದರೆ ಇಲ್ಲಿರುವ ಬಹುತೇಕ ನದಿಗಳು ಮಾಲಿನ್ಯಗೊಂಡಿವೆ. ದೇಶದಲ್ಲಿ ಸುಮಾರು ೩೫೧ ನದಿಗಳು ಕಲುಷಿತಗೊಂಡಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಕರ್ನಾಟಕದಲ್ಲೂ ೧೭ ನದಿಗಳು ಕುಡಿಯಲು ಯೋಗ್ಯವಾದ ನೀರನ್ನು ಹೊಂದಿಲ್ಲ. ಕೈಗಾರಿಕೆಗಳ ಕಲುಷಿತ ತ್ಯಾಜ್ಯಗಳು ಒಂದೆಡೆ ನದಿಗಳನ್ನು ಕೆಡಿಸುತ್ತಿದ್ದರೆ, ವಿವಿಧ ಕಾರಣಗಳಿಗಾಗಿ ಜನರು ಕೂಡ ನದಿಗಳನ್ನು ಸಾಯಿಸುತ್ತಿದ್ದಾರೆ. ಅಂತರ್ಜಲವನ್ನು ಹೆಚ್ಚಿಸುವ ಬಗ್ಗೆ ಸರಕಾರ ಬೇರೆ ಬೇರೆ ಯೋಜನೆಗಳನ್ನು ರೂಪಿಸಿದೆ. ಅದಕ್ಕೆ ಮೊದಲು ಇರುವ ನದಿಗಳನ್ನು ರಕ್ಷಿಸುವ ಬಗ್ಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕಿದೆ.

ನದಿಯನ್ನು ಮಾಲಿನ್ಯಗೊಳಿಸುವವರ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾರ್ಖಾನೆಗಳು ತ್ಯಾಜ್ಯಗಳನ್ನು ನದಿಗೆ ಬಿಡುವ ಕೃತ್ಯವನ್ನು ಘೋರ ಅಪರಾಧವಾಗಿ ಭಾವಿಸಬೇಕು. ನದಿ ನೀರಿನ ಪೂರೈಕೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಆದ್ಯತೆ ನೀಡಬೇಕು. ಹೂಳು ತುಂಬಿ ನಾಶವಾಗಿರುವ ಕೆರೆಗಳನ್ನು ಗುರುತಿಸಿ ಅವುಗಳನ್ನು ಮತ್ತೆ ಜೀವಂತಗೊಳಿಸಬೇಕು. ಅತ್ಯುತ್ತಮವಾದ ಕುಡಿಯುವ ನೀರು ಜನರ ಮೂಲ ಹಕ್ಕು ಎನ್ನುವುದನ್ನು ಸರಕಾರ ಯಾವತ್ತೂ ಮರೆಯಬಾರದು. ತನಗೆ ಜೀವಜಲವನ್ನು ಇತ್ತು ಪೋಷಿಸುವ ನದಿಯನ್ನೇ ತನ್ನ ಸ್ವಾರ್ಥಕ್ಕಾಗಿ ಕೆಡಿಸುವ ಮನುಷ್ಯರನ್ನು ಹೊಂದಿರುವವರೆಗೆ, ನೀರಿನ ಕೊರತೆಗಾಗಿ ಪ್ರಕೃತಿಯನ್ನು ದೂರುವ ನೈತಿಕತೆ ಇಲ್ಲ.