ದೇಶದ ಪ್ರತೀ ಚುನಾವಣೆಯ ಫಲಿತಾಂಶವೂ ಮುಂದಿನ ರಾಜಕೀಯ ನಡೆಗೆ ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶಿಯಾಗುತ್ತದೆ. ಈ ಸಲದ ಚುನಾವಣೆಯನ್ನೂ ರಾಜಕೀಯ ಪಕ್ಷಗಳಿಗೆ ಮತದಾರ ಕಲಿಸಿದ ಪಾಠ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದರಲ್ಲಿ ಎದ್ದು ಕಾಣುವುದು ರಾಜಕೀಯ ನಾಯಕರಿಗೆ ಇರಲೇಬೇಕಾದ ವಿನಮ್ರತೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಡೆ, ನುಡಿಯಲ್ಲಿ ಅಧಿಕಾರದ ದರ್ಪ ತೋರಿಸಿದ ನಾಯಕರಿಗೆ ಮತದಾರ ತಕ್ಕ ಪಾಠ ಕಲಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಚುನಾವಣೆಗೆ ಮೊದಲು, ಕಾಂಗ್ರೆಸ್ ದೇಶದ ರಾಜಕೀಯ ಭೂಪಟ ದಿಂದ ಮಾಯವಾಗಲಿದೆ ಎಂದಿದ್ದ ಬಿಜೆಪಿ ನಾಯಕರು ಈಗ ತಮ್ಮ ಮಾತನ್ನು ತಾವೇ ನುಂಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ‘ದೇಶದ ಸಂವಿಧಾನ ವನ್ನು ಬದಲಿಸಲಿಕ್ಕಾಗಿಯೇ ನಾವು ೪೦೦ರಷ್ಟು ಸೀಟುಗಳನ್ನು ಕೇಳುತ್ತಿದ್ದೇವೆ.
ಮುಸ್ಲಿಂ ಮತಗಳು ನಮಗೆ ಬೇಕಾಗಿಲ್ಲ’ ಎಂದೆಲ್ಲ ಬಡಬಡಿಸಿದ್ದವರು ಇಂದು ಅನಿವಾರ್ಯವಾಗಿ ಹೊಂದಾಣಿಕೆ ರಾಜಕೀಯಕ್ಕೆ ಒಗ್ಗಿಕೊಳ್ಳಬೇಕಾಗಿದೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ಸಿನ ಏಕಪಕ್ಷೀಯ ಆಡಳಿತವಿದ್ದಾಗ ರಾಜ್ಯದ ಮುಖ್ಯ ಮಂತ್ರಿಗಳನ್ನು ಲಕೋಟೆ ಮೂಲಕ ಆರಿಸುವ ಪರಂಪರೆ ಇತ್ತು. ವಾಜಪೇಯಿ, ಆಡ್ವಾಣಿಯಂತಹ ನಾಯಕರ ನಿರ್ಗಮನದ ಬಳಿಕ ಬಿಜೆಪಿಯಲ್ಲೂ ಯಜಮಾನಿಕೆ ಧೋರಣೆ ಎದ್ದು ಕಾಣುತ್ತಿತ್ತು. ಕರ್ನಾಟಕದ ಉದಾ ಹರಣೆಯನ್ನು ತೆಗೆದುಕೊಳ್ಳುವುದಾ ದರೆ, ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ, ಸ್ಥಳೀಯ ರಾಜ ಕಾರಣದ ಸೂಕ್ಷ್ಮತೆಗಳನ್ನು ಅರಿಯದೆಯೇ, ದಿಲ್ಲಿಯಲ್ಲಿ ಕುಳಿತು ನಿರ್ಧಾರಗಳನ್ನು ಕೈಗೊಳ್ಳುವ ಚಾಳಿ ಹಲವು ಸಲ ಪಕ್ಷವನ್ನು ಸಂಕಷ್ಟಕ್ಕೆ ಗುರಿ ಮಾಡಿತ್ತು.
ಅಮಿತ್ ಶಾ, ನಿರ್ಮಲಾ ಸೀತಾರಾಮನ್‌ರಂತಹ ನಾಯಕರು ರಾಜ್ಯನಾಯಕರನ್ನು ತಮ್ಮ ಅಡಿಯಾಳುಗಳಂತೆ ಕಾಣುತ್ತಿದ್ದ ಬಗೆ ಸಾಮಾನ್ಯ ಜನರಲ್ಲೂ ರೋಷ ಹುಟ್ಟಿಸುತ್ತಿತ್ತು. ವಿನಮ್ರತೆಯ ಬಗ್ಗೆ ಆಗಾಗ ಭಾಷಣ ಮಾಡುವ ಮೋದಿಯವರ ನಡೆಯೂ ಇದಕ್ಕೆ ಭಿನ್ನವಾಗಿರಲಿಲ್ಲ. ಆಂಧ್ರಪ್ರದೇಶ ವಿಧಾನ ಸಭೆಯಲ್ಲಿ ಏಕಮೇವ ನಾಯಕನಂತೆ ಮೆರೆದು, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕಣ್ಣೀರು ಹಾಕುವಂತೆ ಮಾಡಿದ್ದ ವೈ.ಎಸ್. ಜಗನ್ ಮೋಹನ್ ರೆಡ್ಡಿಗೂ ಈ ಚುನಾವಣೆ ವಿನಮ್ರತೆಯ ಪಾಠ ಕಲಿಸಿದೆ. ಈ ದೇಶಕ್ಕೆ ಸಮ್ಮಿಶ್ರ ರಾಜಕೀಯ ಹೊಸದೇನೂ ಅಲ್ಲ. ಆದರೆ ಅದು ಯಶಸ್ವಿಯಾಗಬೇಕಾದರೆ ೧೯೯೯ರಲ್ಲಿ ಎನ್ ಡಿಎ ಮೈತ್ರಿಕೂಟದ ನಾಯಕರಾಗಿ ಪ್ರಧಾನಿ ವಾಜಪೇಯಿ ಅವರು ತೋರಿಸಿದ ಮುತ್ಸದ್ಧಿತನ ಮತ್ತು ವಿನಮ್ರತೆ ಬೇಕೇ ಬೇಕು.