Sunday, 15th December 2024

ಮೋದಿ ಮುತ್ಸದ್ದಿತನಕ್ಕೆ ಸವಾಲು

ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಸನ್ನಿವೇಶ ಬದಲಾಗಿದೆ. ೨೦೧೪ ಮತ್ತು ೨೦೧೯ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಿದರೆ, ಈ ಬಾರಿ ಮಿತ್ರಪಕ್ಷಗಳ ಮರ್ಜಿಗನುಸಾರ ಅಧಿಕಾರ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ನಾನಾ ಭಾಷೆ, ಧರ್ಮ, ಜಾತಿ, ಪಂಗಡ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಭಾರತದಂತಹ ದೇಶದಲ್ಲಿ ಒಂದೇ ಪಕ್ಷ ಇಡೀ ದೇಶದ ಜನರ ಮನ ಗೆಲ್ಲುವುದು ನಿಜಕ್ಕೂ ಸವಾಲು. ಈ ವೈರುಧ್ಯಗಳ ನಡುವೆ ಕಳೆದ ಒಂದು ದಶಕದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರಕಾರ ರಚಿಸಿರುವುದು ಗಮನಾರ್ಹ ಅಂಶ. ಈ ಬಾರಿ ಪ್ರತಿಪಕ್ಷ ಇಂಡಿಯ ಒಕ್ಕೂಟದ ಸಂಘಟಿತ ಪ್ರಯತ್ನ ಮತ್ತು ೧೦ ವರ್ಷಗಳ ಸರಕಾರದ ವಿರುದ್ಧದ ಆಕ್ರೋಶದ ಅಲೆಯ ಮಧ್ಯೆ ಬಿಜೆಪಿಗೆ ೨೪೦ ಸೀಟುಗಳನ್ನಷ್ಟೇ ಪಡೆಯಲು ಸಾಧ್ಯವಾಗಿದೆ.

ಹೀಗಾಗಿ ಎನ್‌ಡಿಎ ಮೈತ್ರಿಕೂಟದಲ್ಲಿರುವ ಇತರ ೧೧ ಪಕ್ಷಗಳ ಬೆಂಬಲದೊಂದಿಗೆ ಸರಕಾರ ನಡೆಸಬೇಕಾಗಿದೆ. ಇದುವರೆಗೂ ತನ್ನ ಇಚ್ಛಾನುಸಾರ ಪಕ್ಷ ಮತ್ತು ಸರಕಾರವನ್ನು ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಅವಧಿ ನಿಜಕ್ಕೂ ಸವಾಲಿನದು. ಇಲ್ಲಿ ಏಕಪಕ್ಷೀಯ ನಿರ್ಧಾರಗಳಿಗೆ ಅವಕಾಶವಿಲ್ಲ. ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲವನ್ನೂ ಅಳೆದು ತೂಗಿ ತೀರ್ಮಾನ ಕೈಗೊಳ್ಳಬೇಕಾಗಿದೆ. ವಿಶೇಷವಾಗಿ ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಸಂಬಂಧಿಸಿ ಬರಬಹುದಾದ ಬೇಡಿಕೆಗಳು ಮೋದಿ ಅವರನ್ನು ಪೇಚಿಗೆ ಸಿಲುಕಿಸುವ ಸಾಧ್ಯತೆ ಇದೆ.

ಬಿಜೆಪಿ ಬಲವಾಗಿ ವಿರೋಧಿಸುತ್ತಾ ಬಂದ ಜಾತಿ ಗಣತಿ ಮತ್ತು ಮುಸ್ಲಿಂ ಮೀಸಲಾತಿ ಜಾರಿಯ ಬಗ್ಗೆ ತೆಲುಗುದೇಶಂ ಮತ್ತು ಜೆಡಿಯು ಒಲವು ತೋರಿವೆ. ಇದೇ ರೀತಿ ಪೌರತ್ವ ಕಾಯಿದೆ (ಸಿಎಎ), ಏಕರೂಪ ನಾಗರಿಕ ಸಂಹಿತೆ, ಅಗ್ನಿಪಥ್ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಬಿಜೆಪಿಯ ಕಾರ್ಯ ಸೂಚಿಯಲ್ಲಿರುವ ಹಲವು ವಿಷಯಗಳಿಗೆ ಎನ್‌ಡಿಎ ಮಿತ್ರಪಕ್ಷಗಳು ವಿರೋಧ ವ್ಯಕ್ತಪಪಡಿಸಿವೆ. ೧೯೫೨ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆ ಯಿಂದ ಈ ತನಕ ೭೨ ವರ್ಷಗಳಲ್ಲಿ ಸುಮಾರು ೩೨ ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರಗಳನ್ನು ಕಂಡ ದಶಕ್ಕೆ ರಾಜಕೀಯ ಅಸ್ಥಿರತೆ ಹೊಸದಲ್ಲ.

೧೯೮೯ರಿಂದ ೨೦೧೪ರ ತನಕ ಎರಡು ದಶಕಗಳ ಕಾಲ ನಿರಂತರವಾಗಿದ್ದ ಮೈತ್ರಿಕೂಟ ಶಕೆ ೧೦ ವರ್ಷಗಳ ಬಳಿಕ ಮರು ಕಳಿಸಿದೆ. ಆದರೆ ವಿಭಜನೆಯ ಬೀಜವನ್ನು ಒಳಗಿಟ್ಟುಕೊಂಡೇ ಮೈತ್ರಿಕೂಟಗಳು ಜನ್ಮ ತಳೆಯುತ್ತವೆ. ಈ ಬೀಜ ಮೊಳಕೆಯೊಡೆಯದಂತೆ ನೋಡಿಕೊಂಡಷ್ಟು ದಿನ ಇವುಗಳ ಬಾಳಿಕೆ ಯೂ ನಿರ್ಧಾರವಾಗುತ್ತದೆ. ಕಾರ್ಯ ಸಾಧ್ಯವಲ್ಲದ ಬೇಡಿಕೆಗಳು ಮತ್ತು ಅಹಮಿಕೆಗಳು ಯಾವ ಮೈತ್ರಿಕೂಟವನ್ನಾದರೂ ಬೀಳಿಸಬಲ್ಲುದು. ಮೋದಿ ಮುತ್ಸದ್ದಿತನಕ್ಕೆ ಮೂರನೇ ಅವಽ ನಿಜಕ್ಕೂ ಸವಾಲು. ೧೯೯೯- ೨೦೦೪ರ ಅವಧಿಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಪೂರ್ಣಾವಧಿಗೆ ಮುನ್ನಡೆಸಿದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಯಮ, ಮುತ್ಸದ್ದಿತನ ಈ ನಿಟ್ಟಿನಲ್ಲಿ ಮೋದಿಗೆ ಪಾಠವಾಗಬಹುದು