Friday, 13th December 2024

ಭಾರತದ ಯೋಗಕ್ಕೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಯೋಗ

ಯೋಗಾಕ್ಷರ

ಜಯಶ್ರೀ ಕಾಲ್ಕುಂದ್ರಿ

ವಿಶ್ವಸಂಸ್ಥೆಯು ಜೂನ್ ೨೧ರಂದು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲು ಘೋಷಣೆ ಮಾಡಿದ ದಿನದಿಂದ ಭಾರತ ಮಾತ್ರವಲ್ಲ, ವಿಶ್ವ ದೆಡೆ ಯೋಗದ ಕಂಪು ಪಸರಿಸಿದೆ ವಿಶ್ವದ ಪ್ರಮುಖ ನಗರ ಗಳಲ್ಲಿ ಯೋಗ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಇಷ್ಟು ಮಾತ್ರವಲ್ಲ, ಯೋಗದಿಂದ ಜನತೆಯನ್ನು ನಿರೋಗಿಗಳಾಗುವ ದಿಶೆಯಲ್ಲಿ, ಕೇಂದ್ರದ ಆಯುಷ್ ಮಂತ್ರಾಲಯವು ಕಾರ್ಯೋನ್ಮುಖವಾಗಿದೆ. ವಿಶ್ವಸಂಸ್ಥೆಯ ಮಹಾಪ್ರಧಾನ
ಕಾರ್ಯದರ್ಶಿಗಳಾದ ಅಂಟೋನಿಯೋ ಗುಟರಸ್ ಅವರು, ಭಿಯೋಗ ಜನರನ್ನು ಒಗ್ಗೂಡಿಸುತ್ತದೆ. ದೇಹ ಮತ್ತು ಮನಸ್ಸನ್ನು ಬೆಸೆಯುತ್ತದೆ.

ಶಿಸ್ತು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ಮಾರ್ಗದರ್ಶಕವಾಗಿದೆ. ಮಾನವೀಯತೆ ಮತ್ತು ಪ್ರಕೃತಿಯನ್ನು ಸಂಗಮಿಸುವ ಯೋಗ, ಬಲ, ಸೌಹಾರ್ದ ಮತ್ತು ಶಾಂತಿಗೆ ಮೂಲವಾಗಿದೆ. ವಿಶ್ವ ವಿಘಟನೆ ಯಾಗುತ್ತಿರುವ ಈ ಸಂದರ್ಭಕ್ಕೆ, ಪ್ರಾಚೀನ ಅಭ್ಯಾಸವಾದ ಯೋಗ ಮದ್ದಾಗಿದೆ. ಎಂದು
ಅಭಿಪ್ರಾಯ ಪಡುತ್ತಾರೆ. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಮೂಲದ ಯೋಗ ಜನ ಪ್ರಿಯವಾಗಿದೆ. ಯೋಗದ ಮಹತ್ವ, ವೇದ, ಉಪನಿಷತ್ತು, ಭಗವದ್ಗೀತೆ ಹೀಗೆ ಇನ್ನೂ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಐಹಿಕ ಕಾಮನೆಗಳಿಂದ ಮನಸ್ಸನ್ನು ವಿಮೋಚನೆಗೊಳಿಸುವ ಯೋಗವು,
ಪ್ರಪಂಚಕ್ಕೆ ಭಾರತದ ಕೊಡುಗೆಯೆಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಹ ವಿಷಯ.

ಪತಂಜಲಿ ಮುನಿಗಳು ಯೋಗದ ಪಿತಾಮಹರೆನಿಸಿದ್ದಾರೆ. ಸಂಸ್ಕೃತ ಪದವಾದ ಯೋಗದ ಮೂಲ ಪದ ಯುಜ ಎನ್ನಲಾಗಿದೆ. ಪತಂಜಲಿ ಮುನಿಗಳು, ಯೋಗ ಸಂಸ್ಥಾಪಕರು ಮಾತ್ರವಲ್ಲ, ಆಧ್ಯಾತ್ಮಿಕ ಚಿಂತಕರಾಗಿದ್ದರು. ಪತಂಜಲಿ ಯೋಗ ಸೂತ್ರ, ಹಿಂದೂ ತತ್ವಶಾಸದ ಪರಮ ಪವಿತ್ರ ಗ್ರಂಥವೆಂದೇ
ಪರಿಗಣಿಸಲಾಗುತ್ತದೆ. ೨೦೧೪ರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಂದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ, ಜೂನ್ ೨೧ರಂದು ಅಂತಾ ರಾಷ್ಟ್ರೀಯ ಯೋಗ ದಿವಸವೆಂದು ಘೋಷಿಸಬೇಕೆಂಬ ಪ್ರಸ್ತಾಪಕ್ಕೆ ಮನ್ನಣೆ ದೊರೆತು, ಭಾರತದ ಯೋಗದ ಹಿರಿಮೆಯ ಮುಕುಟಕ್ಕೆ ಗರಿ ಮೂಡಿರುವದು ನಿಜಕ್ಕೂ ಪ್ರಶಂಶಾರ್ಹ.

ಜೂನ್ ೨೧ರಂದು ಅತ್ಯಂತ ಹೆಚ್ಚು ಸಮಯ ಹಗಲಿರುವ ದಿನವೂ ಹೌದು. ಆರೋಗ್ಯಪೂರ್ಣ ಬದುಕು ಯಾರಿಗೆ ಬೇಡ? ಇಂದಿನ ನಿರಂತರ ಬದಲಾ ವಣೆಯ ವೇಗ ದಲ್ಲಿ, ನವೀನತೆ, ವೈವಿಧ್ಯ ಮತ್ತು ಐಹಿಕ ಸುಖಗಳನ್ನು ಅರಸುತ್ತಾ ಬರುತ್ತಿರುವ ಮಾನವನನ್ನು ಅನೇಕ ರೀತಿಯ ಚಿಂತೆ, ಒತ್ತಡಗಳು ಸುತ್ತುವರಿದಿವೆ. ಅಧುನಿಕ ಜೀವನಶೈಲಿ, ಮಾನವನನ್ನು ಅನಾರೋಗ್ಯ ಮಾತ್ರವಲ್ಲ, ಕಷ್ಟ-ಕಾರ್ಪಣ್ಯಗಳ ಸಮುದ್ರದಲ್ಲಿ ಓಲಾಡುವಂತೆ  ಮಾಡಿದೆ ಎನ್ನಬಹುದು. ಒತ್ತಡಗಳಿಂದ ಮಾನವನ ಮನಸ್ಸು, ದೇಹಗಳೆರಡೂ ಕುಸಿಯು ತ್ತಿವೆ. ನಮ್ಮ ಪೂರ್ವಜರು, ಸ್ವಸ್ಥ ಮನಸ್ಸು, ದೇಹಾರೋಗ್ಯ ಹಾಗೂ ಆಧ್ಯಾತ್ಮಿಕ ಸಾಧನೆಗಾಗಿ ಸಂಶೋಧಿಸಿದ ಯೋಗಶಾಸ್ತ್ರದಲ್ಲಿ ಬಳಲಿ ಬೆಂಡಾದ ಮಾನವನ ನೋವು, ಅಶಾಂತಿಗಳಿಗೂ ಸಂಪೂರ್ಣ ಪರಿಹಾರ ವಿದೆ, ನುರಿತ ವೈದ್ಯರಿಂದಲೂ ಗುಣ ಪಡಿಸಲಾಗದ ಶಾರೀರಿಕ ಮತ್ತು ಮಾನಸಿಕ ವ್ಯಾಧಿಗಳಿಂದ ಬಳಲುತ್ತಿರುವ ಜನಸಾಮಾನ್ಯರು, ಈ ಸಮಸ್ಯೆಯ ಪರಿಹಾರ ಕ್ಕಾಗಿ ಯೋಗಾಭ್ಯಾಸದ ಮೊರೆ ಹೋಗುತ್ತಿದ್ದಾರೆ.

ಲಿಂಗ, ವಯಸ್ಸು, ಜಾತಿ ಮತ್ತು ಧರ್ಮಗಳನ್ನು ಮೀರಿ ಜನತೆ ಯೋಗದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ತಪೋಬಲದಂತೆ ಸತತ ಯೋಗಾಭ್ಯಾಸ ದಿಂದಲೂ ಒಬ್ಬ ವ್ಯಕ್ತಿಯು ಅತ್ಯಂತ ಸೂಕ್ಷ್ಮರೂಪವನ್ನು ಪಡೆದು ಅದೃಶ್ಯನಾಗಬಹುದಾಂತಹ ಶಕ್ತಿಯನ್ನು ಪಡೆಯಬಹುದು ಎನ್ನಲಾಗಿದೆ. ನಾವು ಸೇವಿಸುವ ಆಹಾರ, ಜೀವಕೋಶಗಳನ್ನು ತಲುಪಿ, ದೇಹದ ಅಂಗಗಳು, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದೇ ಆರೋಗ್ಯವೆಂಬ ಭಾವನೆ ಜನಸಾಮಾನ್ಯರಲ್ಲಿ ಮನೆಮಾಡಿದೆ.

ಶಾರೀರಿಕ ಆರೋಗ್ಯದ ಜೊತೆಜೊತೆಗೆ, ಉತ್ತಮ ಮಾನಸಿಕ ಸ್ಥಿತಿಯೂ ಪೂರಕವಾಗಿದ್ದಾಗ ಮಾತ್ರ ಬದುಕು ಸುಗಮವಾಗಿ ಸಾಗಬಲ್ಲದು. ಯೋಗದ ದೃಷ್ಟಿಯಲ್ಲಿ, ಪ್ರತಿ ವ್ಯಕ್ತಿ, ಶಾರೀರಿಕ-ಮಾನಸಿಕ ಆರೋಗ್ಯಗಳ ಜೊತೆಜೊತೆಗೆ ಆಧ್ಯಾತ್ಮಿಕವಾಗಿಯೂ ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯ ಪೂರ್ಣನೆನಿಸಿಕೊಳ್ಳುತ್ತಾನೆ ಎನ್ನಲಾಗಿದೆ. ರೋಗ ನಿವಾರಣೆಯಲ್ಲಿ, ಯೋಗದ ಪಾತ್ರ ವಿಶಿಷ್ಟವೆನಿಸಿದೆ. ವರ್ತಮಾನದ ವ್ಯಾಧಿಗಳು ಮಾತ್ರವಲ್ಲ, ಮುಂದೆ ಕಾಡಲಿರುವ ರೋಗಗಳನ್ನು ನಿಗ್ರಹಿಸುವ ಮಾಂತ್ರಿಕ ಶಕ್ತಿ ಯೋಗಕ್ಕಿದೆ.

ಯೋಗವೆಂಬುದು ರೋಗ ಸಂಸ್ಕಾರವನ್ನೇ ಕಿತ್ತು ಬಿಸುಡುವಷ್ಟು ಪ್ರಬಲ ಅಸ್ತ್ರವೆನಿಸಿದೆ. ಯೋಗದ ಒಂದು ಭಾಗವೇ ಯೋಗಾಸನವೆನ್ನಬಹುದು. ಮನಸ್ಸಿನಿಂದ ಯಾವುದೇ ಸಾಧನೆ ಮಾಡಬೇಕೆಂದರೆ ಮೊದಲು ದೇಹವನ್ನು ಸುಸ್ಥಿತಿಯಲ್ಲಿರಿಸಿ ಕೊಳ್ಳುವದಗತ್ಯ. ಯೋಗವೆಂದರೆ ಧ್ಯಾನವೆಂದು ಸಂತ ವ್ಯಾಸರು ನುಡಿಯುತ್ತಾರೆ. ದೀರ್ಘ ಧ್ಯಾನ ಮುದ್ರೆಗಳಿಂದ ಮನಸ್ಸಿಗೆ ಅನಿರ್ವಚನೀಯ ಶಾಂತಿ ದೊರೆತು, ಆತ್ಮ ಮತ್ತು ಪರಮಾತ್ಮಗಳೆರಡೂ ಒಂದೇ ಎನಿಸುತ್ತವೆ.

ಅಜ್ಞಾನ. ಐಭೋಗದ ಲಾಲಸೆ, ಕಳವಳ, ಆತಂಕಗಳು ಮರೆಯಾಗಿ ನೆಮ್ಮದಿಯ ಭಾವ ಮೂಡುತ್ತದೆ. ಧ್ಯಾನವನ್ನು ದಿನದಲ್ಲಿ ಒಂದು ಬಾರಿ ಅಥವಾ
ಎರಡು ಬಾರಿ(ಸುಮಾರು ೨೦ ನಿಮಿಷಗಳ ಕಾಲ) ಮಾಡುವದರಿಂದ, ಹಲವಾರು ಪ್ರಯೋಜನಗಳಿವೆ. ಧ್ಯಾನದಿಂದ ಕ್ರಿಯಾಶೀಲತೆ, ಏಕಾಗ್ರತೆ, ಚುರುಕು ತನ, ನೆನಪಿನ ಶಕ್ತಿ ಮತ್ತು ದೈಹಿಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಬಹುದು. ಅತ್ಯಂತ ಆತಂಕಭರಿತ ಸನ್ನಿವೇಶಗಳು ಎದುರಾದಾಗ, ಧ್ಯಾನದ ಮೂಲಕ ಮನಸ್ಸಿನಲ್ಲಿ ಮೂಡುವ ಇತ್ಯಾತ್ಮಕ ಭಾವನೆ ಗಳನ್ನು ನಿರ್ವಹಣೆ ಮಾಡಲು ಸಾಧ್ಯ. ಇಷ್ಟು ಮಾತ್ರವಲ್ಲ, ದೀರ್ಘಕಾಲದಿಂದ ಕಾಡುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳೆನಿಸಿದ ಮೈಗ್ರೇನ್, ಖಿನ್ನತೆ, ಮಾದಕದ್ರವ್ಯ ವ್ಯಸನ, ನಿದ್ರಾರಾಹಿತ್ಯಗಳನ್ನು ನಿವಾರಿಸಿಕೊಳ್ಳಬಹುದು.

ಯೋಗವೆಂದರೆ ಯೋಗವೂ ಹೌದು, ಅದೇ ರೀತಿ ಪ್ರಾಣಾಯಾಮವೂ ಹೌದು. ನಮ್ಮ ಉಸಿರಿನಲ್ಲಿ ಪ್ರಾಣ ಶಕ್ತಿ ಹರಿಯುತ್ತದೆ. ಈ ಪ್ರಾಣ ಶಕ್ತಿಯನ್ನು ವ್ಯವಸ್ಥಿತವಾಗಿ ನಿಯಂತ್ರಿಸುವದರಿಂದ ದೇಹದಲ್ಲಿ ಹರಿಯುವ ಚೈತನ್ಯವನ್ನೂ ಸಹ ಕ್ರಮಬದ್ಧ ಗೊಳಿಸಬಹುದು. ಯೋಗವು ಎಂಟು ಅಂಗಗಳನ್ನು ಹೊಂದಿದೆ. ಅದೇ ಅಷ್ಟಾಂಗ ಯೋಗ. ಪ್ರಾಚೀನ ಋಷಿ- ಮುನಿಗಳು ಪ್ರತಿಪಾದಿಸಿದ ಎಂಟು ಯೋಗ ಸೂತ್ರಗಳೆಂದರೆ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಯಮಸೂತ್ರದಲ್ಲಿ, ಪಾಲಿಸ ಬೇಕಾದ ನಿಯಮಗಳೆಂದರೆ, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳು. ಯಾವುದೇ ಕಾಲದಲ್ಲಿ ಯಾರಿಗೂ ನೋವುಂಟು ಮಾಡದಿರುವದು ಅಹಿಂಸೆ, ಕೆಲಸ-ಕಾರ್ಯಗಳಲ್ಲಿ ಯಥಾರ್ಥತೆ ತೋರುವದು ಸತ್ಯ, ಧರ್ಮರಹಿತ ಹಣವನ್ನು ಗಳಿಸದಿರುವದು ಅಸ್ತೇಯ, ಧರ್ಮಾನುಸಾರ ವಿವಾಹವಾದ ಸಂಗಾತಿಗೆ ನಿಷ್ಠೆಯಿಂದಿರು ವದು ಬ್ರಹ್ಮಚರ್ಯ ಮತ್ತು ಅಗತ್ಯಕ್ಕಿಂತಲೂ ಹೆಚ್ಚಾಗಿ ಏನನ್ನೂ ಸ್ವೀಕರಿಸದಿರುವದು.

ಅಪರಿಗ್ರಹಗಳು ಯಮ ನಿಯಮ ಗಳೆನಿಸಿವೆ. ಪತಂಜಲಿ ಮುನಿಗಳ ಉಪದೇಶಾಮೃತದಂತೆ, ಈ ಐದೂ ನಿಯಮಗಳನ್ನು ಪರಿಪಾಲಿಸಿದ ಮನುಜ ದೇವಮಾನ ವನೆನುಸುತ್ತಾನೆ. ಮಾನವನ ದೇಹವೇ ದೇಗುಲವೆನಿಸಿದೆ. ಇದರಲ್ಲಿ ಪ್ರಾಣ ಸ್ವರೂಪನಾದ ಭಗವಂತ ನೆಲೆಸಿರುವದರಿಂದ. ಈ ದೇಹವನ್ನು
ಶುಚಿಗೊಳಿಸಿಕೊಳ್ಳುವುದರ ಜೊತೆಗೆ ಋಣಾತ್ಮಕ ಭಾವನೆಗಳನ್ನು ಹೊರತಳ್ಳಬೇಕು. ಮನಸ್ಸಿನಿಂದ ಸಾಧನೆ ಮಾಡಲು ದೇಹದ ಆರೋಗ್ಯವೂ ಅತಿ ಮುಖ್ಯ. ದೇಹವನ್ನು ವಿವಿಧ ಭಂಗಿಗಳಲ್ಲಿ ತಿರುಗಿಸಿ, ಯೋಗಾಸನ ಮಾಡುವುದರಿಂದ ದೇಹದಲ್ಲಿ, ರಕ್ತದ ಪರಿಚಲನೆ ಸರಿಯಾಗುವುದರೊಂದಿಗೆ, ವಾತ-ಶೀತ-ಪಿತ್ತಗಳು ಸಮಸ್ಥಿತಿಯಲ್ಲಿರುತ್ತವೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳು ಸಮತೋಲನದಲ್ಲಿರುತ್ತವೆ. ಈ ನಿಯಮಗಳ ಪಾಲನೆಯೇ ಮಹಾವ್ರತ ಎನಿಸಿದೆ. ಪ್ರಾಥಮಿಕ ವಾಗಿ ಗುರುಮುಖದಿಂದಲೇ ಯೋಗಾಸನಗಳನ್ನು ಕಲಿಯು ವದು ಸೂಕ್ತ, ಆಭ್ಯಾಸದಿಂದ ಆಸನ ಸ್ಥಿರವಾಗಿರಬೇಕು ಮತ್ತು ನೋವುರಹಿತವಾಗಿರಬೇಕು,

ಎಲ್ಲಾ ಆಸನಗಳನ್ನು ಆಭ್ಯಸಿ ಸುತ್ತಾ ಹೋದರೆ, ಆಧ್ಯಾತ್ಮ ವಿದ್ಯೆ ಗೋಚರವಾಗುತ್ತದೆ. ಭಗವಂತನಲ್ಲಿ ಶೃದ್ಧೆ-ಭಕ್ತಿಗಳು ಮೂಡಿ ಮನಸ್ಸು ಸದಾ ಪ್ರಸನ್ನ ಚಿತ್ತವಾಗಿರುತ್ತದೆ. ಪತಂಜಲಿ ಮುನಿಗಳ ಪ್ರಕಾರ, ಯೋಗಾಸ ನವೆಂದರೆ, ಯೋಗಾಭ್ಯಾಸಿಯು ಧೃಡ ಮತ್ತು ಆರಾಮ ಸ್ಥಿತಿಯಲ್ಲಿ ಕುಳಿತುಕೊಳ್ಳುವ ಭಂಗಿ ಎಂದು ವ್ಯಾಖ್ಯಾನಿಸಿದ್ದಾರೆ. ಯೋಗದ ವಿವಿಧ ಆಸನಗಳನ್ನು ದೇಹದ ಭಾಗಗಳಿಗೆ ವ್ಯಾಯಾಮವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಜನಪ್ರಿಯ ಯೋಗಾಸನಗಳೆಂದರೆ, ಸೂರ್ಯ ನಮಸ್ಕಾರ, ಭುಜಂಗಾಸನ, ವೀರಭದ್ರಾಸನ, ಶೀರ್ಷಾಸನ, ಮತ್ತು ತಾಡಾಸ ನಗಳು. ಯೋಗಾಸನಗಳನ್ನು ನಿರಂತರ ಮಾಡುವದರಿಂದ ರಕ್ತ ಪರಿಚಲನೆ ಉತ್ತಮವಾಗಿ, ಸ್ನಾಯು ಬಲ ಸುಧಾರಿಸು ವುದರೊಂದಿಗೆ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಉತ್ತಮ ನಿದ್ರೆ ಬರುತ್ತದೆ.

ಯೋಗಾಭ್ಯಾಸಗಳಿಗೂ ಮತ್ತು ವ್ಯಾಯಾಮಗಳಿಗೂ ಹಲವಾರು ಅಂತರಗಳಿವೆ. ಯೋಗಾಭ್ಯಾಸಗಳನ್ನು ಮಾಡುವಾಗ ಮಿತವಾದ ಶಕ್ತಿ ವ್ಯಯವಾದರೆ, ವ್ಯಾಯಾಮಗಳನ್ನು ಮಾಡುವಾಗ ಹೆಚ್ಚಿನ ಶಕ್ತಿಯ ವ್ಯಯವಾಗುತ್ತದೆ. ಯೋಗಾಭ್ಯಾಸಗಳು ಆಯಾಸವನ್ನುಂಟು ಮಾಡದೆ, ದೇಹವನ್ನು ಹಗುರ ವಾಗಿಸುತ್ತದೆ. ಇದಕ್ಕೆ ವಿಪರೀತವಾಗಿ ವ್ಯಾಯಾಮಗಳು, ಆಯಾಸದ ಜೊತೆಗೆ ದೈಹಿಕ ಅಸ್ವಸ್ಥತೆಯನ್ನುಂಟು ಮಾಡುತ್ತವೆ. ಯೋಗಾಭ್ಯಾಸಗಳಿಗೆ ವಯಸ್ಸು ತಡೆಗೋಡೆಯಾಗ ಲಾರದು.

ವಯಸ್ಸು ಹೆಚ್ಚಾದಂತೆ ವ್ಯಾಯಾಮಗಳನ್ನು ಮಾಡುವುದು ಕಷ್ಟವೆನಿಸುತ್ತದೆ. ಯೋಗಾಸನಗಳು, ಶಾರೀರಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಸುಧಾರಣೆಯ ಗುರಿ ಹೊಂದಿದರೆ, ವ್ಯಾಯಾಮಗಳು ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯ ಗುರಿ ಹೊಂದಿವೆ. ಇಂದಿನ ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು ಐದು ಕೋಟಿಗೂ ಮಿಕ್ಕು ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಗಮನಾರ್ಹ ವಿಷಯವೆಂದರೆ, ಅಮೆರಿಕದಲ್ಲಿ ಯೋಗ
ವಾಣಿಜ್ಯ ಉದ್ಯಮವಾಗಿದೆ. ಯೋಗ ಸಾಧನೆಗೆ ಪೂರಕವಾಗಿ ರುವ ಯೋಗ ಪ್ಯಾಂಟ್ಸ, ಯೋಗ ಮ್ಯಾಟ, ಯೋಗ ಕ್ಲಬ್ ಗಳು ಹೀಗೆ ಎಲ್ಲವೂ ವಾಣಿಜ್ಯಿ ಕರಣಗೊಂಡಿವೆ.

ಅಂತರಂಗದ ಕನ್ನಡಿಯಾದ ಯೋಗ ಹಿಂದೂ ಧರ್ಮವನ್ನು ಪ್ರಚುರ ಪಡಿಸುತ್ತದೆ ಎಂಬ ಅಪಾದನೆ, ಆಕ್ಷೇಪ, ಆರೋಪಗಳು ತೇಲಿ ಬರುತ್ತಿರುವುದು  ವಿಪರ್ಯಾಸದ ಸಂಗತಿ. ಯೋಗ ಸಾಧನೆ ಚಿಂತನೆಯನ್ನಾಧರಿಸಿದ್ದೇ ಹೊರತು ಧರ್ಮವನ್ನಾಧರಿಸಿದ್ದಲ್ಲವೆಂಬ ಮಾತಿನಲ್ಲಿ ಸತ್ಯಾಂಶವಿಲ್ಲದಿಲ್ಲ. ಯೋಗ ವ್ಯಕ್ತಿಯ ವಿಕಸನಕ್ಕೆ ಸಾಧನವೆಂದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳೇನೇ ಇರಲಿ, ಯೋಗಾಭ್ಯಾಸದ ಜನಪ್ರಿಯತೆ ಹೆಚ್ಚುತ್ತಲೇ ಇರುವುದು ಸಮಾಧಾನಕರ ಸಂಗತಿ. ಪ್ರಧಾನಿ ಮೋದಿಯವರು, ಅಭಿಪ್ರಾಯ ಪಡುವಂತೆ, ಯೋಗ ಪ್ರೀತಿಯನ್ನು ಧಾರೆಯೆರೆಯುತ್ತದೆ.

ಯೋಗದ ಮೂಲಕ ಏಕ ಭಾರತ, ಶ್ರೇಷ್ಠ ಭಾರತ ಎಂಬುದನ್ನು ಜಗತ್ತಿನ ಮುಂದೆ ನಾವು ಸಾದರಪಡಿಸಬಹುದು. ವಿಶ್ವಾದಾದ್ಯಂತ ಜನರು ಸ್ವಪ್ರೇರಣೆ ಯಿಂದ ಭಾಗಿಯಾಗಿರುವುದು ಯೋಗ ಶಕ್ತಿಯ ವಿಸ್ತರಣಶೀಲತೆಯನ್ನು ತೋರುತ್ತದೆ. ಹೀಗಾಗಿಯೇ ‘ವಸುಧೈವ ಕುಟುಂಬಕಂ’ ಗಾಗಿ ಯೋಗ ಅವಶ್ಯ ವಾಗಿದೆ. ಯೋಗಾಭ್ಯಾಸಗಳಿಂದ ಜಾಗತಿಕ ಆರೋಗ್ಯ ಸಮಸ್ಯೆಗಳು ಪರಿಹಾರವಾಗಿ, ವಿಶ್ವದೆಡೆ ಜನತೆ ಆರೋಗ್ಯವಂತರಾಗಲೆಂಬ ಸದಾಶಯ ಭಾರತೀಯ ರದು.