Tuesday, 22nd October 2024

NEET-UG 2024 ಕೌನ್ಸೆಲಿಂಗ್‌ಗೆ ತಡೆ ಇಲ್ಲ

ನವದೆಹಲಿ: NEET-UG 2024 ಕೌನ್ಸೆಲಿಂಗ್‌ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಮತ್ತೊಮ್ಮೆ ನಿರಾಕರಿಸಿದ್ದು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಬಾಕಿ ಉಳಿದಿರುವ ಅರ್ಜಿಗಳ ಜೊತೆಗೆ ಹೊಸ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಟ್ಯಾಗ್ ಮಾಡಿ ಜುಲೈ 8ರಂದು ವಿಚಾರಣೆಗೆ ಮುಂದೂಡಿದೆ.

ಗುರುವಾರ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ- ಪದವಿಪೂರ್ವ (NEET-UG) 2024ರ ನಡವಳಿಯನ್ನು ಪ್ರಶ್ನಿಸಿ, ಪೇಪರ್ ಸೋರಿಕೆ ಮತ್ತು ಗ್ರೇಸ್ ಮಾರ್ಕ್‌ಗಳನ್ನು ಒಳಗೊಂಡಿರುವ ಅವ್ಯವಹಾರಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ಕೋರಿ ಮೂರು ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ರಜಾಕಾಲದ ಪೀಠವು, ಎನ್‌ಇಇಟಿ-ಯುಜಿ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸಲ್ಲಿಸಿದ ವರ್ಗಾವಣೆ ಅರ್ಜಿಗಳು ಮತ್ತು ಇದೇ ರೀತಿಯ ಕುಂದುಕೊರತೆಗಳನ್ನು ಎತ್ತುವ ಇತರ 11 ಅರ್ಜಿಗಳನ್ನೂ ಸೇರಿಸಿ ನೋಟಿಸ್ ಜಾರಿ ಮಾಡಿದೆ.

ಕಳೆದ ವಾರ, ನೀಟ್‌ ಪರೀಕ್ಷೆಯಲ್ಲಿ ಆಗಿರಬುದಾದ ಸಣ್ಣ ನಿರ್ಲಕ್ಷ್ಯವನ್ನು ಸಹ ಸಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಗುಡುಗಿತ್ತು. ಆದರೆ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತ್ತು.

ನೀಟ್‌ ಪರೀಕ್ಷೆಯನ್ನು ಮೇ 5ರಂದು ನಡೆಸಲಾಗಿತ್ತು. ಈ ತಿಂಗಳ ಆರಂಭದಲ್ಲಿ ಫಲಿತಾಂಶಗಳು ಬಂದವು. ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾದ ನೀಟ್ ಪರೀಕ್ಷೆಯಲ್ಲಿ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸಿದ್ದರು.

ಏತನ್ಮಧ್ಯೆ, ಯುಜಿಸಿ-ನೆಟ್ ಪೇಪರ್ ಇಂಟರ್‌ನೆಟ್‌ನಲ್ಲಿ ಸೋರಿಕೆಯಾದ ನಂತರ ಪರೀಕ್ಷೆ ರದ್ದತಿಗೆ ಕಾರಣವಾಯಿತು.