Saturday, 28th September 2024

ದಿ ಆರ್‌ ಡಾಕ್ಯುಮೆಂಟ್ ಮತ್ತು ತುರ್ತುಪರಿಸ್ಥಿತಿ

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

೧೯೭೫ ರಲ್ಲಿ ಅಲಹಾಬಾದ್ ಹೈಕೋರ್ಟ್ ಚುನಾವಣಾ ಅಕ್ರಮದ ಮೇಲೆ ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸುತ್ತದೆ. ಪ್ರಧಾನಿ ಪಟ್ಟವನ್ನು ತೊರೆಯದೆ ಅವರಿಗೆ ಅನ್ಯಥಾ ಬೇರೆ ಮಾರ್ಗವಿರುವುದಿಲ್ಲ. ಆದರೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲದೆ ಪ್ರಧಾನಿಯಾಗಿಯೇ ಮುಂದುವರೆಯುತ್ತಾರೆ.

ಇಂದಿರಾ ಗಾಂಧಿಯವರು ತಮ್ಮ ಸದಸ್ಯತ್ವ ರದ್ದು ವಿರುದ್ಧ ಸುಪ್ರೀಂಕೋರ್ಟ್ ಬಾಗಿಲು ಬಡಿದಾಗ ನ್ಯಾಯಾಲಯವು ಸದನದೊಳಗೆ ಮತದಾನದ ಹಕ್ಕು ಇಲ್ಲದೆ ಸದನದ ಕಲಾಪದಲ್ಲಿ ಭಾಗಿಯಾಗಬಹುದು ಎಂದು ತೀರ್ಪು ನೀಡುತ್ತದೆ. ಇಂದಿರಾರವರು ಆಗಲೂ ರಾಜಿನಾಮೆ ನೀಡದೆ ಪ್ರಧಾನಿಯಾಗಿಯೇ ಮುಂದುವರೆಯುತ್ತಾರೆ. ಚುನಾವಣೆಯೇ ಇಲ್ಲದೆ ಅನಿರ್ದಿಷ್ಟಾವಧಿಯವರೆಗೂ ಪ್ರಧಾನಿ ಪಟ್ಟದಲ್ಲಿರಲು ಕಾನೂನು ತಿದ್ದುಪಡಿ ಮಾಡಿಕೊಳ್ಳುತ್ತಾರೆ.

೧೯೭೫ ಜೂನ್ ೨೫ರಂದು ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಿ ಸರ್ವಾಧಿಕಾರವನ್ನು ಸ್ಥಾಪಿಸುತ್ತಾರೆ. ಪತ್ರಿಕಾ ಸ್ವಾತಂತ್ರ ಹರಣ ವಾಗಿ ಮಾನವ ಹಕ್ಕುಗಳು ಇಲ್ಲವಾಗುತ್ತದೆ. ದೇಶದ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದು ೧೯೭೫ ಜೂನ್ ೨೫ ರಿಂದ ಆರಂಭವಾಗಿ ಪ್ರಜಾ ಪ್ರಭುತ್ವವು ಅಸ್ತಂಗತವಾಗುತ್ತದೆ. ಶ್ರೀಮತಿ ಗಾಂಧಿಯವರು ತಮ್ಮ ನಿರಂಕುಶ ಪ್ರಭುತ್ವ ಮುಂದುವರೆಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂ
ದಿನ ಹೆಜ್ಜೆ ಇಡುತ್ತಾರೆ. ಇದರ ಫಲಶ್ರುತಿಯ ಫಲವಾಗಿ ೧೯೭೬ರಲ್ಲಿ ಸಂವಿಧಾನದ ೪೨ನೇ ತಿದ್ದುಪಡಿಯು ರೂಪುಗೊಳ್ಳುತ್ತದೆ.

ಇಂದಿರಾರವರಿಗೆ ಅದೇನು ಒಳ್ಳೇ ಬುದ್ದಿ ಬಂದಿತೋ ಏನೋ, ಸಂವಿಧಾನದ ೪೨ ನೇ ತಿದ್ದುಪಡಿಯ ಬಗ್ಗೆ ದೇಶದಲ್ಲಿ ಚರ್ಚೆ ಮಾಡಬಹುದು ಎಂದು ಫರ್ಮಾನು ಹೊರಡಿಸುತ್ತಾರೆ. ತುರ್ತುಪರಿಸ್ಥಿತಿಯಲ್ಲಿ ಸಭೆ ನಡೆಸಲು ನಿರ್ಬಂಧವಿದ್ದ ಕಾರಣ ಅನುಮತಿ ಕಡ್ಡಾಯವಾಗಿ ಬೇಕಾಗಿರುತ್ತದೆ. ಬಹುತೇಕ ವಿರೋಧ ಪಕ್ಷದ ನಾಯಕರನ್ನು ಅದಾಗಲೇ ಸೆರಮನೆಗೆ ತಳ್ಳಿದ್ದರು. ಹೊರಗಿದ್ದವರಲ್ಲಿ ಅನೇಕರು ಭೂಗತರಾಗಿದ್ದರು. ಇದರ ನಡುವೆಯೂ ಕೆಲವು ಕಾನೂನು ತಜ್ಞರು ಸಂವಿಧಾನದ ೪೨ನೇ ತಿದ್ದುಪಡಿಯ ಅಪಾಯವನ್ನು ವಿವರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಸಂವಿಧಾನದ ೪೨ನೇ ತಿದ್ದುಪಡಿ ಜಾರಿಯಾದರೆ ಅದರ ಅಪಾಯವನ್ನು ವಿವರಿಸಲು ಬೆಂಗಳೂರಿನ ಗಾಂಽ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಖ್ಯಾತ ನ್ಯಾಯವಾದಿ ಶಾಂತಿಭೂಷಣ್ ರವರು ಪ್ರಮುಖ ಭಾಷಣಕಾರರಾಗಿ ಬಂದಿರುತ್ತಾರೆ. ಸಂವಿಧಾನದ ೪೨ನೇ ತಿದ್ದುಪಡಿಯು ಬಹುಮತದ ಸರ್ಕಾರವು
ದೇಶದಲ್ಲಿ ಚುನಾವಣೆಯೇ ಇಲ್ಲದೆ ನಿರಂತರವಾಗಿ ಸರ್ವಾಧಿಕಾರದ ಆಡಳಿತ ನಡೆಸಲು ಅವಕಾಶ ನೀಡುತ್ತದೆ. ದೇಶದ ಆತಂರಿಕ ಭದ್ರತೆ ಅಪಾಯ ದಲ್ಲಿದೆ ಎಂದು ತೀರ್ಮಾನಿಸಿ ತುರ್ತುಪರಿಸ್ಥಿತಿಯನ್ನು ಹೇರಲು ಆಸ್ಪದ ನೀಡುತ್ತದೆ. ತಮ್ಮ ರಾಜಕೀಯ ವಿರೋಧಿಗಳ ವಿರುದ್ದ ಸೇಡು ತೀರಿಸಿಕೊಳ್ಳಲು
ಸುಲಭವಾಗಿ ಜೈಲಿಗೆ ಅಟ್ಟಲು ಸಾಧ್ಯವಾಗುವುದು. ಅತಿ ಮುಖ್ಯ ಸಂಗತಿಯು ಈ ತಿದ್ದುಪಡಿಯಿಂದ ಸಂಸತ್ತಿನಲ್ಲಿ ಅನುಮೋದನೆಯಾದ ಕಾಯಿದೆ ಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲದ ಹಾಗೆ ಕಾನೂನು ರೂಪಿಸಲಾಗಿದೆ.

ನಿರಂಕುಶ ಪ್ರಭುತ್ವ ಸ್ಥಾಪಿಸಲು ೪೨ನೇ ತಿದ್ದುಪಡಿಯಿಂದ ಸುಲಭ ಎಂದು ಮುಂದಾಗುವ ಅಪಾಯವನ್ನು ಎಳೆಎಳೆಯಾಗಿ ಬಿಡಿಸಿ ವಿವರಿಸಿದರು.
ಶಾಂತಿಭೂಷಣ್ ರವರು ತಮ್ಮ ಭಾಷಣದಲ್ಲಿ ೪೨ ನೇ ತಿದುಪಡಿಯು ಏನು ಮಾಡಬಹುದು ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಇಂಗ್ಲೀಷ್ ಖ್ಯಾತ ಲೇಖಕ ಈರ್ವಿನ್ ವ್ಯಾಲೇಸ್ ಬರೆದಿದ್ದ R Document ಎಂಬ ಪುಸ್ತಕವನ್ನು ಉಲ್ಲೇಖಿಸಿ ಅದನ್ನು ಓದಲು ಸಲಹೆ ನೀಡುತ್ತಾರೆ.

R Document ಕಾಲ್ಪನಿಕ ಕಥಾವಸ್ತುವನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಮೆರಿಕಾ ಸರಕಾರವು ಸಂವಿಧಾನಕ್ಕೆ ೩೫ನೇ ತಿದ್ದುಪಡಿಯನ್ನು ತರಲು ಮುಂದಾಗುತ್ತದೆ. ತಿದ್ದುಪಡಿಯು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲು ಅವಕಾಶ ನೀಡುತ್ತದೆ. ದೇಶದ ಭದ್ರತೆಯು ಅಪಾಯದಲ್ಲಿರುವಾಗ
ಜನರ ಮೂಲಭೂತ ಹಕ್ಕುಗಳನ್ನು ರದ್ದುಪಡಿಸುತ್ತದೆ. ರಾಷ್ಟ್ರೀಯ ಭದ್ರತೆಗೆ ಒದಗಿರುವ ಅಪಾಯವು ದೂರವಾಗುವ ತನಕ ಇದು ಜಾರಿಯಲ್ಲಿರುವ ಹಾಗೆ ನಿಬಂಧನೆಯಿರುತ್ತದೆ. ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸಂಪೂರ್ಣ ಅಧಿಕಾರ ಓರ್ವ ವ್ಯಕ್ತಿಗೆ ಹಸ್ತಾಂತರವಾಗುತ್ತದೆ. ಎಫ್ ಬಿಐ
ನಿರ್ದೇಶಕನ ಅಧ್ಯಕ್ಷತೆಯಲ್ಲಿ ಸಮಿತಿಯು ರಚನೆ ಮಾಡಿ ಮುಂದಿನ ಎಲ್ಲಾ ತೀರ್ಮಾನಗಳು ಪರಿಸ್ಥಿತಿಯು ಸುಧಾರಿಸುವ ತನಕ ತುರ್ತುಪರಿಸ್ಥಿತಿಯು ಜಾರಿಯಲ್ಲಿರುತ್ತದೆ.

ಈ ಅವಧಿಯಲ್ಲಿ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳು ಮತ್ತು ಸವಲತ್ತುಗಳು ರದ್ದಾಗುವುದು. ಆರ್ ಡಾಕ್ಯುಮಂಟ್‌ನಲ್ಲಿ ಅರಾಜಕತೆಯ ಸಮಯ ದಲ್ಲಿ ತುರ್ತು ಪರಿಸ್ಥಿತಿ ಹೇರುವ ಅಽಕಾರವಿರುತ್ತದೆ. ಹಾಗೆಯೇ ೩೫ ನೇ ತಿದ್ದುಪಡಿಯಲ್ಲಿ ದೇಶದ ಭದ್ರತೆಗೆ ಅಪಾಯದ ಸಂದರ್ಭದಲ್ಲಿ ತುರ್ತುಪರಿಸ್ಥಿತಿ ಹೇರುವ ಅಧಿಕಾರವಿರುತ್ತದೆ. ಇರ್ವಿನ್ ವ್ಯಾಲೇಸ್ ಕಾದಂಬರಿ ಕಾಲ್ಪನಿಕ ಕಥಾ ವಸ್ತುವಾದರೆ ಅದರಲ್ಲಿ ಉಲ್ಲೇಖವಾಗಿದ್ದ ಹಲವಾರು ಸಂಗತಿಗಳು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುವ ವಿವರಗಳು ಸಂವಿಧಾನದ ೪೨ನೇ ತಿದ್ದುಪಡಿ ಯಲ್ಲಿ ಅಡಕವಾಗಿ ರುತ್ತದೆ.

ಹೀಗಾಗಿ ಶಾಂತಿಭೂಷಣ್ ಇದನ್ನು ತಮ್ಮ ಭಾಷಣದಲ್ಲಿ ಉದಾಹರಿಸುತ್ತಾರೆ. ತುರ್ತುಪರಿಸ್ಥಿತಿಯ ದುರ್ಲಾಭ ಪಡೆದು ಜಾರಿಗೆ ತಂದ ೪೨ನೇ ತಿದ್ದುಪಡಿ ಯನ್ನು ಮಿನಿ ಸಂವಿಧಾನವೆಂದೇ ಕರೆಯಲಾಗಿತ್ತು. ಸಂವಿಧಾನದ ೩೫೨, ೩೫೬ ಮತ್ತು ೩೬೦ ನೇ ವಿಧಿಗಳಿಗೆ ತಂದ ತಿದ್ದುಪಡಿಗಳು ರಾಷ್ಟ್ರೀಯ
ತುರ್ತು ಪರಿಸ್ಥಿತಿಯನ್ನು ಘೋಷಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡಿತು. ಆದರೆ ಈ ಘೋಷಣೆಯನ್ನು ಸಂಸತ್ತಿನ ಎರಡೂ ಸದನಗಳು ಪೂರ್ವ ನಿರ್ಧರಿತ ಕಾಲಮಿತಿಯೊಳಗೆ ಅಂಗೀಕರಿಸುವ ನಿಬಂಧನೆಯ ಅವಧಿಯನ್ನು ಒಂದರಿಂದ ಆರು ತಿಂಗಳವರೆಗೆ ವಿಸ್ತರಿಸಲು ಅವಕಾಶ ನೀಡಿತು. ಈ ಬದ
ಲಾವಣೆಯಿಂದ ತುರ್ತು ಸಂದರ್ಭಗಳಲ್ಲಿ ಕೇಂದ್ರ ಸರಕಾರದ ನಿಯಂತ್ರಣ ಹೆಚ್ಚಿಸಿತು ತನ್ಮೂಲಕ ಇದರ ದುರುಪಯೋಗ ಮತ್ತು ನಿರಂಕುಶಾಧಿಕಾರಕ್ಕೆ ಅವಕಾಶ ನೀಡಿತು.

ಜಯಪ್ರಕಾಶ್ ನಾರಾಯಣ್ ರವರು ಅನ್ಯಾಯದ ವಿರುದ್ಧ ಸಿಡಿದೇಳಿ ಎಂದು ಪೊಲೀಸರಿಗೆ ಮತ್ತು ಸೈನಿಕರಿಗೆ ಕೊಟ್ಟ ಕರೆಯನ್ನು ಇಂದಿರಾ ಗಾಂಧಿ ಯವರು ಅದನ್ನು ತಮ್ಮ ಅನುಕೂಲಕ್ಕೆ ತಿರುಚಿಕೊಂಡು ನಡುರಾತ್ರಿಯಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಹೇರುತ್ತಾರೆ. ಸಂವಿಧಾನಕ್ಕೆ ವಿರುದ್ಧ ವಾಗಿ ಲೋಕಸಭಾ ಚುನಾವಣೆ ಯನ್ನು ಒಂದು ವರ್ಷದ ಕಾಲ ಮುಂದೂಡಿ ಅಕ್ರಮವಾಗಿ ಪ್ರಧಾನಿಯಾಗಿ ಮುಂದುವರೆಯುತ್ತಾರೆ. ಸಾವಿರಾರು ಜನರು ಪೊಲೀಸರ ಚಿತ್ರಹಿಂಸೆಗೆ ತುತ್ತಾದಾರು, ಹಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಪ್ರಮುಖ ವಿರೋಧ ಪಕ್ಷದ ನಾಯಕರನ್ನು
ಸೆರಮನೆಗೆ ಅಟ್ಟಿ ರಾಜ್ಯಭಾರ ಮಾಡಿದ ಅಪಕೀರ್ತಿ ಇಂದಿರಾ ಅವರದ್ದು. ಭಾರತದ ಇತಿಹಾಸದ ಇದೊಂದು ಕರಾಳ ಅಧ್ಯಾಯವಾಗಿತ್ತು.

ಪ್ರಜಾಪ್ರಭುತ್ವ ದಮನ ಮಾಡಿ ತುರ್ತುಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೂಗುವುದು ಅತ್ಯಂತ ಹಾಸ್ಯಾಸ್ಪದ ವಾದ ವಿಚಾರವು. ತಮ್ಮ ಕರಾಳ ಇತಿಹಾಸವನ್ನು ಮರೆಮಾಚಿ ಸಂವಿಧಾನ ರಕ್ಷಕರು ಎಂದು ಬಿಂಬಿಸಿಕೊಳ್ಳುವುದು ಸಾಧು ವೇಷದಲ್ಲಿ ಸೀತೆ
ಅಪಹರಿಸಲು ಬಂದ ರಾವಣನ ಹಾಗಿದೆ ಇವರ ನಿಲುವು. ಇಂದಿರಾ ಗಾಂಧಿಯವರು ಬಹುಮತವಿದೆಯೆಂದು ಸಂವಿಧಾನದ ಮೂಲ ಆಶಯಕ್ಕೆ ಅಪಚಾರವೆಸಗಿದರು. ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಕಾನೂನುಬಾಹಿರವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದರು. ರಾಜಕೀಯ ವಿರೋಧಿಗಳ ಹೆಡೆ
ಮುರಿ ಕಟ್ಟಲು ಮೀಸಾ ಎಂಬ ಕರಾಳ ಕಾಯಿದೆಯನ್ನು ಜಾರಿಗೆ ತಂದು ರಾಜಕೀಯ ಪ್ರತಿಸ್ಪರ್ಧಿಗಳನ್ನು ತಿಂಗಳುಗಟ್ಟಲೆ ಯಾವುದೇ ಮೊಕದ್ದಮೆ ಯಿಲ್ಲದೆ ಜೈಲಿಗೆ ತಳ್ಳಿದರು.

ತುರ್ತುಪರಿಸ್ಥಿತಿ ಬಂದು ೪೯ ವರ್ಷವಾಗಿದೆ. ನೊಂದವರಿಗೆ ಅದರ ನೆನಪು ಇನ್ನೂ ಹಸಿರಾಗಿಯೇ ಇರುವುದು. ಆದರೆ ಕಾಂಗ್ರೆಸ್ಸಿಗರು ಮಾತ್ರ ಅದನ್ನು ತಮ್ಮ ನೆನಪಿನ ಪಟದಿಂದಲೇ ತೆಗೆದುಹಾಕಿ ಮೋದಿಯವರನ್ನು ಪ್ರಜಾತಂತ್ರ ವಿರೋದಿ ಎಂದು ಕೂಗುವ ದಾರ್ಷ್ಟ್ಯವನ್ನು ತೋರಿ ಭಂಡತನ ಪ್ರದರ್ಶಿಸುತ್ತಿದ್ದಾರೆ. ಇಂದಿನ ಕಾಂಗ್ರೆಸ್ಸಿಗರು ಪದೇ ಪದೇ ನೆಹರು ಕಾಲದ ಯೋಜನೆಗಳ ಬಗ್ಗೆ ಪ್ರಸ್ತಾಪಸಿ ಮೋದಿ ಸರಕಾರವನ್ನು ಟೀಕಿಸುತ್ತಾರೆ. ಆದರೆ ಕಾಂಗ್ರೆಸ್ಸಿಗರು ಇಂದಿರಾ ಕಾಲದ ಸರ್ವಾಧಿಕಾರದ ಆಡಳಿತವನ್ನು ಅಪ್ಪಿ ತಪ್ಪಿಯೂ ಪ್ರಸ್ತಾಪಿಸುವ ಎದೆಗಾರಿಕೆಯಿಲ್ಲ.

ಇರ್ವಿನ್ ವ್ಯಾಲೇಸ್ ಬರೆದ ಕಾಲ್ಪನಿಕ ಕತೆ ನಿಜ ಜೀವನದಲ್ಲಿ ಜಾರಿಗೆ ಬಂದರೆ ಅದರ ನೈಜ ಸ್ವರೂಪವು ಹೇಗೆ ಇರುತ್ತದೆ ಎಂಬುದನ್ನು ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿ ಅದರ ಪ್ರತ್ಯಕ್ಷ ದರ್ಶನವನ್ನು ಮಾಡಿಸಿದರು. ೨೦೦೨ರ ಗುಜರಾತ್ ದಂಗೆಯಲ್ಲಿ ಬಲಿಯಾದವರ ಸಂಖ್ಯೆ ೮೦೦. ಇಂದಿರಾ ಹತ್ಯೆಯ ನಂತರ ರಾಜೀವ್ ಗಾಂಧಿ ಆಡಳಿತ ದಲ್ಲಿ ಹತ್ಯೆಯಾದ ಸಿಖ್ಖರ ಸಂಖ್ಯೆಯು ೨,೦೦೦ ದಾಟಿತು.

ಕಾಂಗ್ರೆಸ್ ಪ್ರಕಾರ ಗುಜರಾತಿನ ದಂಗೆಯು ಹತ್ಯಾಕಾಂಡ. ಸಿಖ್ಖ್ ವಿರೋಧಿ ಹತ್ಯೆಯು ದೊಡ್ಡ ಮರ ಬಿದ್ದಾಗ ಸುತ್ತಮುತ್ತಲಿನ ಭೂಮಿಯು ಅಲುಗಾಡು ವುದು ಸಹಜ ಎಂಬ ಸಮರ್ಥನೆ. ನರೇಂದ್ರ ಮೋದಿಯು ಸಾವಿನ ವ್ಯಾಪಾರಿ. ಅದೇ ರಾಜೀವ್ ಗಾಂಽಯವರು ಮಾನವೀಯತೆಯ ಮೂರ್ತರೂಪ. ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ದಮನ ಮಾಡಿದ ಕಾಂಗ್ರೆಸ್ ಪ್ರಜಾಪ್ರಭುತ್ವದ ರಕ್ಷಕ. ಕಳೆದ ಹತ್ತು ವರ್ಷದಿಂದ ನಿರಂತರ ನಿಂದನೆಗೆ ಒಳಗಾದರೂ ಅದನ್ನು ವಿಷವನ್ನು ಕುಡಿದ ವಿಷಕಂಠನ ಹಾಗೆ ಸಹಿಸಿಕೊಂಡಿರುವ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವದ ಹಂತಕರು ಎಂದು ಹಣೆಪಟ್ಟಿ ಕಟ್ಟುವ ಸಮಯಸಾಧಕ ನೀತಿಯನ್ನು ಕಾಂಗ್ರೆಸ್ಸ್ ಅನುಸರಿಸುತ್ತಿದೆ.