ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ರಾಜ್ಯ ಸರಕಾರ ಹಾಲಿನ ದರ ಏರಿಸಲು ಮುಂದಾಗಿದೆ. ಯಾವುದೇ ಸರಕಾರ ಹಾಲಿನ ದರ ಏರಿಸಿದಾಗ ರೈತರತ್ತ ಬೊಟ್ಟು ಮಾಡುವುದು ವಾಡಿಕೆ. ಈ ಬಾರಿಯೂ ರೈತರ ಹೆಸರಿನಲ್ಲಿಯೇ ಹಾಲಿನ ದರ ಏರಿಸಲಾಗುತ್ತಿದೆ. “ರಾಜ್ಯದಲ್ಲಿ ಈ ಬಾರಿ ಹಾಲಿನ ಉತ್ಪಾದನೆ ಶೇ.೧೫ ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ನಿತ್ಯ ಸರಾಸರಿ ೯೦ ಲಕ್ಷ ಲೀಟರ್‌ಗಳಷ್ಟಿದ್ದ ಹಾಲಿನ ಪ್ರಮಾಣ ಈಗ ೯೯ ಲಕ್ಷ ಲೀಟರ್‌ಗೆ ಏರಿಕೆಯಾಗಿದೆ.
ಹೆಚ್ಚುವರಿ ಹಾಲಿನ ಖರೀದಿ ಉದ್ದೇಶದಿಂದ ಒಂದು ಲೀಟರ್ ಹಾಲಿನ ಪ್ಯಾಕೇಟಿಗೆ ಹೆಚ್ಚುವರಿಯಾಗಿ ೫೦ ಮಿ.ಲೀ ಹಾಲನ್ನು ಸೇರಿಸಲಾಗಿದೆ. ಈ ಹೆಚ್ಚುವರಿ ಹಾಲಿನ ಬೆಲೆ ೨ ರೂಪಾಯಿಯನ್ನು ಮಾತ್ರ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ ಬೆಲೆ ಏರಿಕೆ ವಿಚಾರದಲ್ಲಿ ಸಿಎಂ ಅವರ ಈ ಹೇಳಿಕೆ ಹಾದಿ ತಪ್ಪಿಸುವಂತಿದೆ. ಕೆಎಂಎ-ನ ೧ ಲೀಟರ್ ಹೊಮೊಜಿನೈಸ್ಡ್ ಟೋನ್ಡ್ ಪ್ಯಾಕೇಟ್ ಹಾಲಿಗೆ ಪ್ರಸ್ತುತ ೪೨ ರೂಪಾಯಿ ದರವಿದೆ. ಇನ್ನು ಮುಂದೆ ಹೆಚ್ಚುವರಿಯಾಗಿ ೫೦ ಎಂಎಲ್ ಸೇರಿಸಿ ೪೪ ರೂ. ದರ ವಿಧಿಸಲು ಕೆಎಂಎಫ್ ಮುಂದಾಗಿದೆ. ಆದರೆ ಸಾಮಾನ್ಯವಾಗಿ ನಂದಿನಿ ಮಳಿಗೆಗಳಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್‌ಗಳನ್ನೇ ಹೆಚ್ಚು ಮಾರಲಾಗುತ್ತದೆ.
ಅರ್ಧ ಲೀಟರ್ ಸಾಮಾನ್ಯ ಹಾಲಿನ ದರವನ್ನು ೨೪ ರೂ.ಗಳಿಗೆ ಏರಿಸಲಾಗಿದೆ. ಅಂದರೆ ಗ್ರಾಹಕರು ಒಂದು ಲೀಟರ್ ಸಾಮಾನ್ಯ ಹಾಲಿಗೆ ಇನ್ನು ಮುಂದೆ ೪೮ ರೂ. ತೆರಬೇಕಾಗಿದೆ. ಆದರೆ ಇಷ್ಟೆಲ್ಲ ಆದ ಬಳಿಕವೂ ನಮ್ಮ ರೈತರಿಗೆ ರಾಜ್ಯ ಸರಕಾರ ನೀಡುವ ಹಾಲಿನ ದರ ಲೀಟರಿಗೆ ೩೪ ರೂ. ಮೀರಿಲ್ಲ. ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೨ ರೂ. ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಈ ಭರವಸೆ ಇನ್ನೂ ಜಾರಿಗೆ ಬಂದಿಲ್ಲ. ಈಗಾಗಲೇ ಘೋಷಣೆಯಾಗಿರುವ ಪ್ರೋತ್ಸಾಹಧನ ಆರೇಳು ತಿಂಗಳಿನಿಂದ ಪಾವತಿಯಾಗಿಲ್ಲ.
ಇದು ಸಾಲದೆಂಬಂತೆ ರೈತರು ಮತ್ತು ಕಾರ್ಮಿಕರ ಕಲ್ಯಾಣ ನಿಧಿ ಹೆಸರಿನಲ್ಲಿ ಪ್ರತೀ ಲೀಟರ್ ಹಾಲಿಗೆ ೧೫ ಪೈಸೆ ಕಡಿತ ಮಾಡಲಾಗುತ್ತದೆ. ಸರಕಾರ ರೈತರಿಂದ ಖರೀದಿಸುವ ಹಾಲಿನಲ್ಲಿ ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ಹಲವು ಉಪಉತ್ಪನ್ನಗಳನ್ನು, ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಆದರೆ ಇದಾವುದರ ಪ್ರಯೋಜನವೂ ರೈತರಿಗೆ ಸಿಗುತ್ತಿಲ್ಲ. ಇನ್ನೊಂದೆಡೆ ಸಹಕಾರಿ ಸಂಸ್ಥೆಯಾದ ಕೆಎಂಎಫ್, ಹಲವು ವರ್ಷಗಳಿಂದ ಪಕ್ಷ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ನಲುಗಿ ಹೋಗುತ್ತಿದೆ.
ಬೇಕಾಬಿಟ್ಟಿ ನೇಮಕಾತಿಯಿಂದ ನೌಕರರಿಗೆ ಸಂಬಳ ನೀಡುವುದೇ ಸಂಸ್ಥೆಗೆ ದೊಡ್ಡ ಹೊರೆಯಾಗಿದೆ. ನೇಮಕಾತಿ ಹಗರಣಗಳ ಬಗ್ಗೆ ನಡೆಯುತ್ತಿರುವ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಐಸ್‌ಕ್ರೀಮ್, ಚಾಕೊಲೆಟ್, ಮೈಸೂರು ಪಾಕ್ ಸೇರಿದಂತೆ ನಂದಿನಿಯ ಉತ್ಪನ್ನಗಳನ್ನು ಸರಿಯಾಗಿ ಮಾರುಕಟ್ಟೆ ಮಾಡಿ ದೇಶಾದ್ಯಂತ ವಿಸ್ತರಿಸಿದರೆ, ಸಂಸ್ಥೆಗೆ ಅಮುಲ್‌ಗೆ ಪರ‍್ಯಾಯವಾಗಿ ಬೆಳೆಯಲು ಸಾಧ್ಯವಿದೆ. ಇದರಿಂದ ರೈತರ ಬಾಳನ್ನೂ ಹಸನಾಗಿಸಬಹುದು. ಬೆಲೆ ಏರಿಕೆ ಯಿಂದ ಜನಸಾಮಾನ್ಯರು ತತ್ತರಿಸಿರುವ ಈ ಸಂದರ್ಭದಲ್ಲಿ ಹಾಲಿನ ಬೆಲೆ ಏರಿಕೆ ಬದಲು ಇಂತಹ ಬದಲಿ ಆಯ್ಕೆಗಳ ಬಗ್ಗೆ ಸರಕಾರ ಹೆಚ್ಚು ಒತ್ತು
ನೀಡಬೇಕು.