Monday, 25th November 2024

ಕೋಚಿಂಗ್ ಸೆಂಟರ್‌: ಶಿಥಿಲವಾಗುತ್ತಿರುವ ಶಿಕ್ಷಣ ವ್ಯವಸ್ಥೆ

ವಿಶ್ಲೇಷಣೆ

ಡಾ.ಮುರಲೀ ಮೋಹನ್ ಚೂಂತಾರು

drmuraleemohanchuntaru@gmail.com

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಮತ್ತು ಟೀಕೆಗೆ ಒಳಗಾಗುತ್ತಿರುವ ವಿಚಾರ ನೀಟ್ ಪರೀಕ್ಷಾ ಹಗರಣೆ. ಈಗಿನ ವ್ಯಾಪಾರೀ ಕರಣಗೊಂಡ ಜಗತ್ತಿನಲ್ಲಿ ಶಿಕ್ಷಣ ಎನ್ನುವುದು ಒಂದು ಪಕ್ಕಾ ವ್ಯಾಪಾರವಾಗಿ ಬದಲಾಗಿದೆ. ಅದರಲ್ಲೂ ಉನ್ನತ ಶಿಕ್ಷಣವಂತೂ ಕುಲಗೆಟ್ಟು ಹೋಗಿದೆ. ಒಂದೆಡೆ ಅಣಬೆ ಗಳಂತೆ ಹುಟ್ಟಿಕೊಳ್ಳುತ್ತಿರುವ ಸ್ವಾಯುತ್ತ ವಿಶ್ವ ವಿದ್ಯಾಲಯಗಳು ತಮ್ಮ ಮೂಗಿನ ನೇರಕ್ಕೆ ಕಾನೂನು ಮತ್ತು ರಿವಾಜುಗಳನ್ನು ರೂಪಿಸಿ ಕೊಂಡು ಹಣದ ಥೈಲಿಯನ್ನು ಬಾಚಿಕೊಳ್ಳುತ್ತಾ ಉನ್ನತ ಶಿಕ್ಷಣವನ್ನು ಹರಾಜು ಹಾಕುತ್ತಿದ್ದಾರೆ.

ಇನ್ನೊಂದೆಡೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣಕ್ಕೆ ಅಪಾರ ಬೇಡಿಕೆ ಉಂಟಾಗಿ ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ವ್ಯಾಪಾರಿ ಸಂಸ್ಥೆ ಗಳಂತಾಗಿ, ಮಧ್ಯವರ್ತಿಗಳ ಮುಖಾಂತರ ಸೀಟುಗಳು ಚಿಕರಿಯಾಗುತ್ತಿದೆ. ಅರ್ಹ ಮೆರಿಟ್ ವಿದ್ಯಾರ್ಥಿಗಳಿಗೆ ಸರಿಯಾಗಿ ಮಾನ್ಯತೆ ಸಿಗದೇ, ಸೀಟುಗಳು ಲಭ್ಯವಾಗದೆ, ಮಕ್ಕಳು ಮತ್ತು ಹೆತ್ತವರ ಮೇಲೆ ಅಗಾಧವಾದ ಒತ್ತಡ ಉಂಟಾಗುತ್ತಿದೆ. ಕಡಿಮೆ ಸೀಟುಗಳು ಮತ್ತು ಹೆಚ್ಚುತ್ತಿರುವ ನಿರಂತರ ಬೇಡಿಕೆ ಯಿಂದಾಗಿ, ಮಳೆಗಾಲದಲ್ಲಿ ಹುಟ್ಟುವ ಅಣಬೆಗಳಂತೆ ದಿನಕ್ಕೊಂದರಂತೆ ಕೋಚಿಂಗ್ ಸೆಂಟರ್‌ಗಳು ಹುಟ್ಟಿಕೊಳ್ಳುತ್ತಿದೆ. ಈ ಕೋಚಿಂಗ್ ಸೆಂಟರ್‌ಗಳಿಗೆ ಯಾವುದೇ ಲಂಗು ಲಗಾಮು ಇಲ್ಲದಿರುವ ಕಾರಣವೇ ಈ ಎಲ್ಲ ರಾಧ್ಧಾಂತಕ್ಕೆ ಮೂಲ ಕಾರಣಎಂದರೂ ತಪ್ಪಾಗಲಾರದು. ಈಗ ಶಿಕ್ಷಣ ಈ ಕೋಚಿಂಗ್ ಮಾಫಿಯಾದ ದೊರೆಗಳ ಕಪಿ ಮುಷ್ಠಿಗೆ ಸಿಲುಗಿ ಒದ್ದಾಡುತ್ತಿದೆ.

ವಿದ್ಯಾರ್ಥಿಗಳ ಭವಿಷ್ಯ ಡೊಲಾಯಮಾನವಾಗಿದೆ. ಹೆತ್ತವರ ನಿದ್ದೆ ಹಾರಿ ಹೋಗಿದೆ. ಆದಷ್ಟುಬೇಗ ಈ ಕೋಚಿಂಗ್ ಮಾಫಿಯಾವನ್ನು ಮಟ್ಟ ಹಾಕದಿದ್ದಲ್ಲಿ ನಮ್ಮ ಸಮಾಜಕ್ಕೆ ದೊಡ್ಡದುರಂತ ಎದುರಾಗುವುದರಲ್ಲಿ ಸಂದೇಹವೇಇಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಗೊಳ್ಳಲೇ ಬಾರದು. ಹಾಗೆಂದ ಮಾತ್ರಕ್ಕೆ ಉಳಿದ ಕ್ಷೇತ್ರಗಳು ವ್ಯಾಪಾರೀಕರಣಗೊಳ್ಳಬಹುದು ಎಂಬರ್ಥವಲ್ಲ. ಶಿಕ್ಷಣ ವ್ಯಾಪಾರೀಕರವಾದಲ್ಲಿ ಸಮಾಜದ ನೈತಿಕ ಮೌಲ್ಯಗಳು, ಸಂಸ್ಕಾರಗಳು ಮತ್ತುಜನರ ನಂಬಿಕೆಗಳು ಒಡೆದು ಹೋಗಲು ವ್ಯಾಪಾರೀಕರಣ ಕಾರಣವಾಗಿ, ನಮ್ಮ ಸಮಾಜದ ಅಧಃಪತನವಾಗುವ ದಿನಗಳು ಹತ್ತಿರವಾಗುತ್ತಿದೆ.

ಕೋಚಿಂಗ್ ಸೆಂಟರ್‌ಗಳ ಹಾವಳಿಯಿಂದ ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ನಿಯಂತ್ರಿಸಲು ಸರಕಾರ ಜನವರಿಯಲ್ಲಿ ಹೊಸ ಕಾನೂನು ತಂದಿದ್ದರೂ
ಯಾವುದೇ ಕಾನೂನು ಸುಸೂತ್ರವಾಗಿ ಜಾರಿಗೆ ಬರುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲೆ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ. ಕೋಚಿಂಗ್ ಸೆಂಟರ್‌ ಗಳ ರಾಜಧಾನಿ ಎಂಬ ಬಿರುದಾಂಕಿತ ಕೋಟ ಈಗ ಆತ್ಮಹತ್ಯೆಗಳ ರಾಜಧಾನಿ ಎಂಬ ಹಣೆಪಟ್ಟಿಯನ್ನು ಅನಾಯಾಸವಾಗಿ ಪಡೆದುಕೊಂಡಿದೆ. ಸಾವಿರಕ್ಕೂ ಹೆಚ್ಚು ಕೋಚಿಂಗ್ ಸೆಂಟರ್ ಗಳು ರಾಜಸ್ಥಾನದ ಕೋಟಾದಲ್ಲಿಯೇ ಇದೆ.

ಕಳೆದೊಂದು ದಶಕದಲ್ಲಿ ಈ ಕೋಚಿಂಗ್ ಸೆಂಟರ್‌ಗಳು ದೇಶದೆಲ್ಲೆಡೆ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿದೆ. ಮೊದಲು ಮೆಟ್ರೋ ನಗರಕ್ಕೆ ಮಾತ್ರ ಸೀಮಿತ ವಾಗಿದ್ದ ಈ ಕೋಚಿಂಗ್ ಮಾಫಿಯಾ ಈಗ ಎರಡನೇ ಮತ್ತು ಮೂರನೇ ಸ್ಥರದ ನಗರಗಳಿಗೂ ತಲುಪಿದೆ. ಯಾವುದೇ ಕಾನೂನು ಕಟ್ಟಲೆಗಳಿಗೆ ಒಳಪಡದ ಅನಽಕೃತ ಶಿಕ್ಷಣದ ಜೂಜು ಅಡ್ಡೆಗಳಾಗಿ ಬದಲಾಗಿ, ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನೇ ಶಿಥಿಲಗೊಳಿಸುತ್ತದೆ ಎಂದರೂ ತಪ್ಪಾಗಲಾರದು. ಕೋಟಿಗಟ್ಟಲೇ ಹಣದ ವಿನಿಮಯವಾಗುವ ಈ ಕೋಚಿಂಗ್ ಸೆಂಟರ್‌ಗಳ ಪಾರುಪತ್ಯ ಮೇಲಾಟ ಮತ್ತು ಅನೈತಿಕ ಸ್ಪರ್ಧೆಯಿಂದಾಗಿ ನಮ್ಮದೇಶದ ಪ್ರತಿಷ್ಠಿತ ನೀಟ್ ಪರೀಕ್ಷೆ ಅಥವಾ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಕೂಡ ಮಾರಾಟವಾಗಿ ನಮ್ಮದೇಶದ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿದೆ. ಜೆಇಇ ಅಡ್ಡ, ಜಾಯಿಂಟ್ ಎಂಟ್ರಾನ್ಸ್ ಎಕ್ಸಾಂ (ಇಂಜಿನಿಯರಿಂಗ್ ಜೆಇಇ ಪ್ರವೇಶಾತಿ ಪರೀಕ್ಷೆ) ಕೂಡ ನ್ಯಾಯ ಸಮ್ಮತವಾಹಿ ನಡೆದಿಲ್ಲ ಎಂಬ ದೂರು ಬಂದಿತ್ತು.

ಒಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯ ಬುಡಕ್ಕೆ ಬೆಂಕಿ ಬಿದ್ದರೆ ಎಂದೂ ಅತಿಶಯೋಕ್ತಿಯಾಗದು. ಈ ನೀಟ್ ಹಗರಣ ರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ
ಸದ್ದು ಮಾಡುತ್ತಿದ್ದು ಈ ಬಾರಿ ಕಂಡು ಕಂಡು ಕೇಳರಿಯದ ರೀತಿಯಲ್ಲಿ ವಿವಾದಕ್ಕೆ ಗುರಿಯಾಗಿ ನಗೆಪಾಡಿಲಿಗೆ ಇಡಾಗಿದೆ. ಈ ಬಾರಿ ದಾಖಲೆಯ ೨೩
ಲಕ್ಷದ ಮೂವತ್ತ ಮೂರು ಸಾವಿರದ ಮುನ್ನೂರು ಮಂದಿ ವೈದ್ಯರಾಗುವ ಆಸೆಯಿಂದ ನೀಟ್ ಪರೀಕ್ಷೆ ಬರೆದಿರುತ್ತಾರೆ ಆದರೆ ಬಿಹಾರದಲ್ಲಿ ಪ್ರಶ್ನೆ ಪತ್ರಿಕೆ
ಸೋರಿಕೆ, ಗುಜರಾತಿನಲ್ಲಿ ಪರೀಕ್ಷಾ ಅಕ್ರಮ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಕೃಪಾಂಕ ನೀಡಿದೆ, ಒಂದೇ ಸೆಂಟರ್‌ನಲ್ಲಿ ಬರೆದವರಿಗೆ ಹೆಚ್ಚು ಅಂಕ, ಸರಣಿ
ರೋಲ್ ನಂಬರ್ ಹೊಂದಿರುವವರಿಗೆ ಹೆಚ್ಚು ಅಂಕ ಹೀಗೆ ಹತ್ತು ಹಲವು ವಿವಾದಗಳು ಮತ್ತು ದೂರುಗಳು ಹಾಗೂ ಗೊಂದಲಗಳಿಂದಾಗಿ ಈ ಪರೀಕ್ಷೆ
ಪಾವಿತ್ರ್ಯತೆ ಬಗ್ಗೆ ಸಂಶಯ ಮೂಡಿಸಿದೆ.

ಸೀಮಿತ ಪ್ರಾದೇಶಗಳಲ್ಲಿ ಮಾತ್ರ ಅಕ್ರಮವಾಗಿದೆ. ಹಾಗೂ ಪ್ರಾಮಾಣಿಕ ವಿದ್ಯಾಯಗಳಿಗೆ ಅನ್ಯಾಯವಾಗಬಾರದು ಎಂಬ ಸದುದ್ದೇಶದಿಂದ ಕೇಂದ್ರ ಸರಕಾರ ಈ ಪರೀಕ್ಷೆಯನ್ನು ಅಮಾನ್ಯ ಮಾಡಲಿಲ್ಲ. ಆದರೆ ಅಕ್ರಮದ ಸಿಬಿಐ ವಿರುದ್ದ ತನಿಖೆಗೆ ಆದೇಶ ಮಾಡಿರುವುದು ಚೇತೋಹಾರಿ ಬೆಳವಣಿಗೆ ಎಂದರೂ ತಪ್ಪಾಗಲಾರದು. ಅತೀ ಹೆಚ್ಚು ವೈದ್ಯಕೀಯ ಕಾಲೇಜು ಹೊಂದಿರುವ ಕರ್ನಾಟಕ ಮತ್ತು ತಮಿಳು ನಾಡು, ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ವಿಚಾರ ವಿಟ್ಟುಕೊಂಡು. ರಾಷ್ಟ್ರಮಟ್ಟದ ಪರೀಕ್ಷೆ ರಾಜ್ಯಮಟ್ಟದ ಪರೀಕ್ಷೆ ನಡೆಸಬೇಕು ಎಂಬ ಹಳೆಯ ವಿಧಾನದ ಜಾರಿಗೆ ತರಬೇಕು ಎಂಬ ಕೂಗಿಗೆ ಈಗ ಮತ್ತೆ ಮತ್ತಷ್ಟು ಬಲ ಬಂದಿದೆ. ಈ ಕೂಗಿನ ನಡುವೆ ಪ್ರತಿಷ್ಟಿತ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯ ಅಕ್ರಮ, ನಮ್ಮ ಪರೀಕ್ಷಾ ಪದ್ದತಿಗೆ ಹಿಡಿದ ಕೈಗನ್ನಡಿ ಎಂದರೂ ತಪ್ಪಾಗಲಾರದು.

ಕೆಲವರು ಮಾಡುವ ಅಕ್ರಮದಿಂದಾಗಿ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗಬಾರದು. ಎಷ್ಟೇ ಕಟ್ಟೆಚ್ಚರ ವಹಿಸಿದರೂ ಪದೇ ಪದೇ ಅಕ್ರಮ ಗಳು ನಡೆಯುತ್ತಲೇಇದೆ. ಪರೀಕ್ಷೆ ಪಾರದೇರ್ಶಿಕವಾಗಿ ನಡೆಯುತ್ತದೆ. ಎಂಬ ವಿಶ್ವಾಸದೊಂದಿಗೆ ವಿದ್ಯಾರ್ಥಿಗಳು ಹಲವು ವರ್ಷಗಳ ಕಾಲ ತಮ್ಮ ಆಸೆಗಳನ್ನು ಬದಿಗೊತ್ತಿತಯಾರಿ ನಡೆಸಿದ ಬಳಿಕ ಈ ರೀತಿ ಅಕ್ರಮ ನಡೆದಾಗ ನಿರಾಶೆ ಆಗುವುದು ಸಹಜತೆ ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ರಕ್ಷಣಾ ಕಾರ್ಯ ಪ್ರವೃತ್ತರಾಗಿಕಾರ್ಯ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಮತ್ತು ವಿಧ್ಯಾರ್ಥಿಗಳು ಹಾಗೂ ಹೆತ್ತವರ ವಿಶ್ವಾಸವನ್ನು ಮಗದೊಮ್ಮೆ ಪಡೆಯುವ ಕಾರ‍್ಯಕ್ಕೆ ಶಕ್ತನಾಗಿ ಮುಂದಾಗಬೇಕು ಎಂಬುದೇ ನಮ್ಮೆಲ್ಲರ ಒಕ್ಕೊರಲಿನ ಅಭಿಪ್ರಾಯವಾಗಿರುತ್ತದೆ. ವಾಸ್ತವ ಏನು?

ನಮ್ಮ ದೇಶದಲ್ಲಿ ಸುಮಾರು ೪ ಕೋಟಿ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್‌ನಲ್ಲಿ ನೊಂದಾಯಿಸಿದ್ದಾರೆ. ಮತ್ತು ೨೦೨೨ ಅಂಕಿ ಅಂಶಗಳ ಪ್ರಕಾರ
ಕೋಚಿಂಗ್ ಶಿಕ್ಷಣದ ವಾರ್ಷಿಕ ಅಂದಾಜು ಹಣಕಾಸಿನ ವ್ಯವಹಾರ ೫೮,೦೦೦ ಕೋಟಿ ರು. ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸಿಂಹ ಸಾಲು ಜೆಇಇ
ಕೋಚಿಂಗ್ ಸೇರಿದ್ದು, ಅದು ಸುಮಾರು ೨೪೦೦೦ ಕೋಟಿ ರು. ಎಂದು ತಿಳಿದು ಬಂದಿದೆ. ಈ ಸಂಖ್ಯೆ ೨೦೨೮ರಲ್ಲಿ ೧.೩ ಲಕ್ಷ ಕೋಟಿ ರು.ಗೆ ತಲುಪಬಹುದು
ಎಂದು ಅಂದಾಜಿಸಲಾಗಿದೆ. ನಮ್ಮ ದೇಶದ ಶಿಕ್ಷಣ ಕ್ಷೇತ್ರದ ಮಾರುಕಟ್ಟೆಯ ಶೇ.೧೭ ಪಾಲು ಕೋಚಿಂಗ್ ಶಿಕ್ಷಣಕ್ಕೆ ಸೇರಿದೆ ಎಂದು ಅಂಕಿ ಅಂಶಗಳಿಂದ
ಸಾಬೀತಾಗಿದೆ. ಸುಮಾರು ೨೪೦೦೦ ಕೋಚಿಂಗ್ ಶಿಕ್ಷಣದ ವಾರ್ಷಿಕ ಹಣಕಾಸಿನ ವಹಿವಾಟು ೨೦೨೧ ರಲ್ಲಿ ಇತು. ಸುಮಾರು ೪೦ ಶೇಕಡಾ ಮಂದಿ ಮಕ್ಕಳು ಭಾರತದಲ್ಲಿ ಕೋಚಿಂಗ್ ಶಿಕ್ಷಣಕ್ಕೆ ನೊಂದಾಯಿಸಿರುತ್ತಾರೆ. ಹೈಸ್ಕೂಲ್ ಹಂತದಲ್ಲಿ ಶೇ.೮೩ ರಷ್ಟು ಮಕ್ಕಳು ಕೋಚಿಂಗ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಮತ್ತು ವಾರ್ಷಿಕವಾಗಿ ೧೨ ಲಕ್ಷ ಮಕ್ಕಳು ನೊಂದಣಿಗೊಳ್ಳುತ್ತಾರೆ. ಈ ಕೋಚಿಂಗ್ ಮಾಫಿಯಾ ಪ್ರತೀ ವರ್ಷ ಶೇ.೧೪.೫ ರಂತೆ ಭಾರತದಲ್ಲಿ ಬೆಳೆಯುತ್ತಿದೆ. ಅಮೆರಿಕದಲ್ಲಿ ಈ ಪ್ರಮಾಣ ಶೇ. ೭.೫, ಯುಕೆಯಲ್ಲಿ ಶೇ.೧೬.೨ ಹಾಗೂ ಜರ್ಮನಿಯಲ್ಲಿ ಶೇ.೧೬.೩ ವಾರ್ಷಿಕವಾಗಿ ಬೆಳೆಯುತ್ತದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಇನ್ನು ವಿದ್ಯಾರ್ಥಿಗಳಿಗೆ ಸೀಟು ಸಿಗುವ ಪ್ರಮಾಣವನ್ನು ಗಮನಿಸುವುದಾದಲ್ಲಿ ಈ ಪ್ರಮಾಣ ಅತೀಕಡಿಮೆ ಮತ್ತು ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ.
೨೦೨೩ರಲ್ಲಿ ೧೧ ಲಕ್ಷ ಮಂದಿ, ೨೦೨೪ರಲ್ಲಿ ೧೨ ಲಕ್ಷ ವಿದ್ಯಾರ್ಥಿಗಳು ಜೆಇಇ ಪರೀಕ್ಷೆ ಬರೆದಿರುತ್ತಾರೆ ಮತ್ತು ಇದರಲ್ಲಿ ಶೇಕಡಾ ಒಂದು ರಷ್ಟು ಮಂದಿ
ಮಾತ್ರ ಸೀಟು ಪಡೆಯುತ್ತಾರೆ. ೨೦೨೩ರಲ್ಲಿ ೨೦ ಲಕ್ಷ ಮಂದಿ ನೀಟ್ ಪರೀಕ್ಷೆ ಬರೆದಿರುತ್ತಾರೆ ಮತ್ತು ಇದರಲ್ಲಿ ಶೇ.೪ರಷ್ಟು ಮಂದಿ ಮತ್ತು ಸೀಟು
ಪಡೆದಿರುತ್ತಾರೆ. ೨೦೨೪ ರಲ್ಲಿ ೨೪,೦೬,೦೭೯ ಮಂದಿ ನೀಟು ಪರೀಕ್ಷೆಗೆ ನೊಂದಾಯಿಸಿರುತ್ತಾರೆ. ಮತ್ತು ಸುಮಾರು ೧,೦೮,೯೦೦ ಮೆಡಿಕಲ್ ಸೀಟು ಲಭ್ಯವಿದೆ.

ಇದರ ಅರ್ಧ ಕೇವಲ ಶೇ.೪ ರಷ್ಟು ಮಂದಿ ಮಾತ್ರ ಸೀಟು ಪಡೆಯಲು ಅರ್ಹರಾಗಿರುತ್ತಾರೆ. ನೀಟ್ ಪರೀಕ್ಷೆ ಬರೆಯುವರು ಸಂಖ್ಯೆ ಪ್ರತಿ ವರ್ಷ
ಗಣನೀಯವಾಗಿ ಹೆಚ್ಚುತ್ತಿದೆ. ೨೦೨೦ರಲ್ಲಿ ೧೫ ಲಕ್ಷ, ೨೦೨೧ರಲ್ಲಿ ೬ ಲಕ್ಷ, ೨೦೨೨ರಲ್ಲಿ ೧೮ ಲಕ್ಷ, ೨೦೨೩ರಲ್ಲಿ ೨೦.೫ ಲಕ್ಷ ಮತ್ತು ೨೦೨೪ರಲ್ಲಿ ೨೩,೩೩,೩೦೦ ಮಂದಿ ನೀಟ್ ಪರೀಕ್ಷೆ ಬರೆದಿರುತ್ತಾರೆ. ೨೦೨೪ ಜನವರಿಯಲ್ಲಿ ಹೆಚ್ಚುತ್ತಿರುವ ಕೋಚಿಂಗ್ ಸೆಂಟರ್‌ಗಳ ಹಾವಳಿ ಮತ್ತು ಮಾಫಿಯಾ ನಿಯಂತ್ರಿಸಲು ಸರಕಾರ ಹಲವಾರು ಕಾನೂನು ಜಾರಿಗೆ ತಂದಿದೆ. ಇದರಲ್ಲಿ ೧೬ ವರ್ಷಗಳಿಗಿಂತಲೂ ಕೆಳಗಿನ ಮಕ್ಕಳನ್ನು ತೆಗೆದುಕೊಳ್ಳಬಾರದು, ತಪ್ಪು ಮಾಹಿತಿ ನೀಡಿ ಮಕ್ಕಳನ್ನು ಮತ್ತು ಹೆತ್ತವರ ದಾರಿ ತಪ್ಪಿಸಬಾರದು, ಸೀಟು ಸಿಗುತ್ತದೆ ಎಂಬ ಗ್ಯಾರಂಟಿ ಭಾಗ್ಯ ನೀಡಬಾರದು.

ಎಂದೆಲ್ಲ ಆ ತಾಕೀತು ಮಾಡಿದೆ. ಕೋಚಿಂಗ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ, ಸಮಾರ್ಪಕ ಮೂಲಭೂತ ಸೌಕಾರ್ಯಗಳ ಕೊರತೆ, ಬೆಂಕಿ ಅನಾಹುತ, ಮತ್ತು ಕಳಮೆ ಗುಣಮಟ್ಟದ ಶಿಕ್ಷಕರು ಹಾಗೂ ಶಿಕ್ಷಣವನ್ನು ಗಮನಿಸಿ ಈ ಕ್ರಮಗಳನ್ನು ಜಾರಿಗೆ ತಂದಿದೆ. ಆದರೆ, ಸರಕಾರದ ಈ ನಿಯಮ ಗಳನ್ನು ಯಾವುದೇ ಕೋಚಿಂಗ್ ಸೆಂಟರ್‌ಗಳು ಕ್ಯಾರೆ ಅನ್ನುತ್ತಿಲ್ಲ ಮತ್ತು ಅವುಗಳ ತಮ್ಮ ಶಿಕ್ಷಣ ದಂಧೆಯನ್ನು ಮತ್ತು ಶಿಕ್ಷಣದ ವ್ಯಾಪಾರವನ್ನು ಎಗ್ಗಿಲ್ಲದೆ ಮುಂದುವರಿಸುತ್ತಾ ನಮ್ಮ ಶಿಕ್ಷಣ ವ್ಯವಸ್ಥೆಯ ಬುಡಕ್ಕೆ ಬೆಂಕಿ ಇಡುವ ಕಾರ್ಯ ಮಾಡುತ್ತಲೇ ಇದೆ.

ಏನು ಮಾಡಬೇಕು ೧. ಕೋಚಿಂಗ್ ಕಲ್ಚರ್‌ನ್ನು ಜಾಸ್ತಿ ನಿಯಂತ್ರಣಕ್ಕೆ ತರಬೇಕು. ಶಾಲಾ ಶಿಕ್ಷಣಕ್ಕೆ ಜಾಸ್ತಿ ಒತ್ತುನೀಡಬೇಕು. ೧೬ ವರ್ಷದ ಕೆಳಗಿನ ಮಕ್ಕಳನ್ನು ಕೋಚಿಂಗ್ ಸೆಂಟರಿಗೆ ಸೇರಿಸಬಾರದು ಎಂಬ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆತರಬೇಕು.

೨. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ತಮ್ಮದೇ ಕೋಚಿಂಗ್ ಸೆಂಟರ್ ಹೊಂದಿದ್ದು ಶಾಲಾ ಶಿಕ್ಷಣಕ್ಕೆ ಆಧ್ಯತೆ ನೀಡುವುದೇ ಇಲ್ಲ. ತಮ್ಮದೇ ಶಿಕ್ಷಣ ಸಂಸ್ಥೆಯ
ಮಕ್ಕಳನ್ನು ತಮ್ಮದೇ ಕೋಚಿಂಗ್ ಸೆಂಟರ್ ಸೇರಿಸಲು ಒತ್ತಾಯ ಮಾಡುತ್ತಾರೆ. ಈ ಬಗ್ಗೆ ಸೂಕ್ತ ಕಾನೂನು ಕಟ್ಟಳೆ ಜಾರಿಗೆ ತರಲೇಬೇಕು.

೩. ಕೋಚಿಂಗ್ ಸೆಂಟರ್‌ಗಳಲ್ಲಿ ಅನಗತ್ಯವಾಗಿ ಮುಂದಿನ ತರಗತಿಗಳ ವಿಷಯಗಳನ್ನು ಹೆಚ್ಚು ಹೆಚ್ಚು ಮಕ್ಕಳಿಗೆ ತುರುಕಲಾಗುತ್ತದೆ. ಉದಾಹರಣೆ ಗಣಿತ
ಶಾಸ್ತ್ರ, ಬಯೋಲಾಜಿ (ಜೀವಶಾಸ್ತ್ರ) ಬೌತಶಾಸ್ತ್ರ ಇತ್ಯಾದಿ ಅನಗತ್ಯವಾಗಿ ಮಕ್ಕಳಲ್ಲಿ ಸ್ಪರ್ಧ್ಮಾತ್ಮಕತೆ ಉಂಟು ಮಾಡಿ ಅವರಲ್ಲಿ ಒತ್ತಡ ಹೇರಲಾಗುತ್ತದೆ.
೪. ಹೆಚ್ಚಿನ ಕೋಚಿಂಗ್ ಸೆಂಟರ್‌ಗಳು ತಮ್ಮದೇ ಮಕ್ಕಳಲ್ಲಿ ಭೇದಭಾವ ಮಾಡುತ್ತಾರೆ. ಹೆಚ್ಚು ಕೌಶಲ್ಯ ಮತ್ತು ಜ್ಞಾನ ಉಳ್ಳ ವಿದ್ಯಾರ್ಥಿಗಳಿಗೆ ಹೆಚ್ಚು ಮನ್ನಣೆ ನೀಡಿಅವರಿಗೆ ಹೆಚ್ಚಿನ ಮುತುವರ್ಜಿವಹಿಸಿ ರ‍್ಯಾಂಕ್ ಬರುವಂತೆ ಬೇರೆಯೇ ಬ್ಯಾಚ್ ಮಾಡಿ ಹೆಚ್ಚಿನ ಕೋಚಿಂಗ್ ನೀಡುತ್ತಾರೆ. ಸಾಮಾನ್ಯ ಮತ್ತು ಇತರ ವಿದ್ಯಾರ್ಥಿಗಳನ್ನು ಬರೀ ಸಿಟ್ ತುಂಬಿಸಲು, ಕೋಚಿಗ್ ಸೆಂಟರ್ ಅಂಬಾಸಿಡರ್ (ರಾಯಾಬಾರಿ) ಗಳಂತೆ ಬಳಸುತ್ತಾರೆ. ಎಲ್ಲ ಮಕ್ಕಳನ್ನು ಒಂದೇ ರೀತಿ ನೋಡಬೇಕು. ಮತ್ತು ಸಮಾನವಾಗಿ ಕಾಣಬೇಕು ಎಂದು ನಿಯಮ ತರಬೇಕು.

೫. ಕೋಚಿಂಗ್ ಸೆಂಟರಿನ ಎಲ್ಲಾ ಮಕ್ಕಳಿಗೂ ಪ್ರಾಥಮಿಕ ಸೌಲಭ್ಯ ಉನ್ನತ ಮಟ್ಟದ ಶಿಕ್ಷಕರು ಮತ್ತು ಶಿಕ್ಷಣದ ವ್ಯವಸ್ಥೆ ಸಮಾನವಾಗಿ ನೀಡಬೇಕು.
ಅಗತ್ಯವಿದ್ದಲ್ಲಿ ಒತ್ತಡ ನಿರ್ವಹಣೆಗೆ ಮಕ್ಕಳಿಗೆ ಮಾನಸಿಕ ಆಪ್ತ ಸಮಾಲೋಚನೆ ನಡೆಸಿ ಒತ್ತಡ ನಿರ್ವಹಣೆಗೆ ಪರಿಹಾರ ನೀಡಬೇಕು.

೬. ಶಾಲಾ ಶಿಕ್ಷಣಕ್ಕೆ ಇರುವ ಸಮಯದಲ್ಲಿ ಕೊಂಚಿಂಗ್ ಸೆಂಟರ್ ನಡೆಸಲೇಬಾರದು. ಹೆಚ್ಚಿನ ಶಾಲೆಗಳು ಮತ್ತು ಕೋಂಚಿಂಗ್ ಸೆಂಟರ್‌ಗಳು ತನ್ನೊಳಗೆ ಒಳ ಒಪ್ಪಂದ ಮಾಡಿ ಶಾಲಾ ಶಿಕ್ಷಣವನ್ನು ನಿರ್ಲಕ್ಷಿಸುತ್ತಾರೆ. ಶಾಲಾ ಶಿಕ್ಷಣದ ಸಮಯದ ನಂತರ ಕೋಚಿಂಗ್ ಶಿಕ್ಷಣ ನೀಡಲು ಕಾನೂನು ಮಾಡಬೇಕು.

ಕೊನೆಮಾತು

ಮಾದಕದ್ರವ್ಯ, ಮಾಫಿಯಾ ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಶಿಕ್ಷಣ ಮಾಫಿಯಾದಷ್ಟೇ ದೊಡ್ಡದಾದ ಮಾಫಿಯಾ ಕೋಚಿಂಗ್ ಮಾಫಿಯಾ
ಎಂದರೆ ಅತಿಶಯೋತ್ತಿಯಾಗಲಾರದು. ಈ ಕೋಚಿಂಗ್ ಮಾಫಿಯಾದಲ್ಲಿ ಸಿಕ್ಕಿ ನರಳುವುದು ವಿದ್ಯಾರ್ಥಿಗಳು ಮತ್ತು ಹೆತ್ತವರು. ಈ ಕಾರಣದಿಂದ ದೇಶದ ಭವಿಷ್ಯವನ್ನು ನಿರ್ಧರಿಸುವ ಮಕ್ಕಳೇ ಈ ಮಾಫಿಯಾಕ್ಕೆ ಬಲಿಪಶುವಾಗುವ ಕಾರಣದಿಂದ ಈ ಕೋಚಿಂಗ್ ಮಾಫಿಯಾದ ನಿಯಂತ್ರಣ ಅತೀ ಅನಗತ್ಯ ವಾಗಿರತ್ತದೆ. ಲಂಗು ಲಗಾಮ ಇಲ್ಲದೆ ನಿಯಂತ್ರಣಕ್ಕೆ ಸಿಗದಂತಹ ಈ ಕೋಚಿಂಗ್ ಮಾಫಿಯಾದ ಕದಂಬ ಬಾಹುಗಳಿಂದ ಮಕ್ಕಳನ್ನು ಮತ್ತು ಹೆತ್ತವರನ್ನು ರಕ್ಷಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ. ಮಕ್ಕಳ ಮೇಲೇ ಅಧಿಕ ಮಾನಸಿಕ ಒತ್ತಡ ಹೇರಿ ಕಳಪೆ ಗುಣಮಟ್ಟದ ಶಿಕ್ಷಣ ನೀಡುವ ಕೋಚಿಂಗ್ ಸೆಂಟರ್‌ಗಳ ಆಡಳಿತ ಮಂಡಳಿಯ ತಾಳಕ್ಕೆ ಕುಣಿಯವ ತಲೆ ಹಿಡುಕ ಶಿಕ್ಷಕರು, ಮೂಲಭೂತ ಸೌಕಾರ್ಯಗಳು ಇಲ್ಲದ ಕೋಚಿಂಗ್ ಸೆಂಟರ್‌ಗಳು ಮತ್ತು ಅಪಾಯಕಾರಿ ಕೋಚಿಂಗ್ ಸೆಂಟರ್‌ಗಳಿಂದ ಮಕ್ಕಳನ್ನು ರಕ್ಷಿಸಕೊಳ್ಳಲೇಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಂದು ಇದ್ದೇವೆ. ೧೪೦ ಕೋಟಿ ಜನಸಂಖ್ಯೆಯ ಜಗತ್ತಿನ ಎರಡನೇ ಅತಿದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟವಾದ ಭಾರತದಲ್ಲಿ ಬರೀ ನಾಲ್ಕು ಕೋಟಿ ಮಕ್ಕಳು ಕೋಚಿಂಗ್ ಸೆಂಟರ್‌ ಗಳಲ್ಲಿ ಕನಸುಗಳನ್ನು ಕಟ್ಟಿಕೊಂಡು ಹಗಲು ರಾತ್ರಿ ಎನ್ನದೇ ಶ್ರಮ ವಹಿಸಿ ಹೆತ್ತವೆರ ಆರೋತ್ರಾದಗಳನ್ನು ಪೂರೈಸಲು ಹೆಣ ಗಾಡುತ್ತಿರುವ ಅವರ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಸರಕಾರ ಮಾಡಲೇಬೇಕು. ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕಠಿಣಕ್ರಮ ಜಾರಿಗೆ ತಂದು ಕೋಚಿಂಗ್ ಸೆಂಟರ್‌ಗಳಿಗೆ ಮೂಗುದಾರ ತೊಡಿಸಲೇಬೇಕು.

ಹಾಗಾದಲ್ಲಿ ಮಾತ್ರ ನಮ್ಮ ದೇಶದ ಭವಿಷ್ಯ ಉಜ್ವಲವಾದಿತ್ತು ಮತ್ತು ನಮ್ಮ ಭಾರತ ಜಗತ್ತಿನ ಹಿರಿರಯಣ್ಣನಾಗಲು ಸಾಧ್ಯವಾಗಬಹುದು. ಮಗದೊಮ್ಮೆ ನೀಟ್‌ನಂತ ಹಗರಣ ನಡೆಯದಿರಲಿ ಮತ್ತು ಭವ್ಯ ಭಾರತದ ಪ್ರತಿಷ್ಠೆ ಮಣ್ಣು ಪಾಲಾಗದಿರಲಿ ಎಂದು ಹಾರೈಸೋಣ…

(ಲೇಖಕರು: ಬಾಯಿ ಮುಖ ಮತ್ತುದವಡೆ ಶಸ್ತ್ರಚಿಕಿತ್ಸಕರು)