ನವದೆಹಲಿ: ದಿಬ್ರುಗಢ ಜೈಲಿನಲ್ಲಿರುವ ಖಲಿಸ್ತಾನಿ ಪರ ಹೋರಾಟಗಾರ ಹಾಗೂ ಸಂಸದ ಅಮೃತಪಾಲ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಲು ಅವರಿಗೆ ನಾಲ್ಕು ದಿನಗಳ ಪೆರೋಲ್ ನೀಡಲಾಗಿದೆ.
ಜು.5 ರಂದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಜೈಲಿನಲ್ಲಿದ್ದುಕೊಂಡೇ ಖದೂರ್ ಸಾಹಿಬ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂಬತ್ತು ಸಹಚರರೊಂದಿಗೆ ಪ್ರಸ್ತುತ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥರಿಗೆ ಪ್ರಮಾಣವಚನ ಸ್ವೀಕರಿಸಲು ನಾಲ್ಕು ದಿನಗಳ ಪೆರೋಲ್ ನೀಡಲಾಗಿದೆ ಎಂದು ಅಮೃತಸರದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತಪಾಲ್ ಸಿಂಗ್ ಜು.5 ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಫರೀದ್‌ಕೋಟ್‌ನ ಸ್ವತಂತ್ರ ಸಂಸದ ಸರಬ್ಜೀತ್ ಸಿಂಗ್ ಖಾಲ್ಸಾ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ ಅಮೃತಪಾಲ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ಕುಲ್ಬೀರ್ ಸಿಂಗ್ ಝಿರಾ ಅವರನ್ನು ಸೋಲಿಸಿ ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.
ಖಲಿಸ್ತಾನಿ ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯನ್ನು ಹತ್ಯೆಗೈದ ನಂತರ ಅಮೃತಪಾಲ್ ಸಿಂಗ್ ಅವರನ್ನು ಕಳೆದ ವರ್ಷ ಏಪ್ರಿಲ್ 23 ರಂದು ಬಂಧಿಸಲಾಗಿತ್ತು.