ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ವಲಯದ ಉದ್ಯೋಗಿಗಳ ಕೆಲಸದ ಅವಧಿಯನ್ನು ೧೪ ಗಂಟೆಗಳ ತನಕ ವಿಸ್ತರಿಸುವ ಪ್ರಸಾಪ ಮತ್ತೆ ಮುನ್ನೆಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಉದ್ದಿಮೆದಾರರ ಜೊತೆ ನಡೆಸಿದ ಸಂವಾದದಲ್ಲಿ ೧೦ ತಾಸುಗಳ ಸಾಮಾನ್ಯ ಕೆಲಸದ ಅವಧಿಯನ್ನು ವಿಸ್ತರಿಸುವಂತೆ ಕೆಲವು ಉದ್ಯಮಿಗಳು ಮನವಿ ಮಾಡಿದ್ದರು.
ಇದಕ್ಕೆ ಪೂರಕವಾಗಿ ಕರ್ನಾಟಕ ಶಾಪ್ಸ್ ಮತ್ತು ಕಮರ್ಷಿಯಲ್ ಎಸ್ಟಾಬ್ಲಿಸ್ಮೆಂಟ್ ಆಕ್ಟ್‌ಗೆ ತಿದ್ದುಪಡಿ ತರುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಕೆಲಸದ ಅವಧಿ ವಿಸ್ತರಣೆ ಬಗ್ಗೆ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಇಂತಹ ಪ್ರಸ್ತಾಪ ವೊಂದರ ಬಗ್ಗೆ ಚರ್ಚೆಗೆ ಮುಂದಾದ ಸರಕಾರದ ಕ್ರಮವೇ ಪ್ರಶ್ನಾರ್ಹವಾಗಿದೆ.
ಯಾವುದೇ ಸರಕಾರ ಕಾನೂನು ರೂಪಿಸುವ ಮೊದಲು ಪ್ರಜೆಗಳ ಮೇಲೆ ಅದರ ಪರಿಣಾಮ ಏನು ಎಂಬುವುದರ ಮೇಲೆ ಮೊದಲು ಯೋಚಿಸಬೇಕು.
ಐಟಿ-ಬಿಟಿಯಾಗಲಿ, ಇತರ ಉದ್ಯಮವಾಗಲಿ, ಅಂಗಡಿ, ಮಳಿಗೆಗಳಾಗಲಿ ಕೆಲಸದ ಅವಧಿಯು ಸಾಮಾನ್ಯ ವ್ಯಕ್ತಿಯ ದೈನಂದಿನ ಸಾಮರ್ಥ್ಯವನ್ನು
ಆಧರಿಸಿ ಇರಬೇಕು. ಕೆಲಸ ಆತನ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಮತ್ತು ಕೌಟುಂಬಿಕ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರಬಾರದು. ೧೪ ಗಂಟೆಗಳ ಕೆಲಸ ಎಂದರೆ ಬೆಳಿಗ್ಗೆ ಎಂಟರಿಂದ ರಾತ್ರಿ ೧೦ ತನಕ ಗಂಟೆಯ ಕೆಲಸ ಎಂದು ಸರಳವಾಗಿ ಯೋಚಿಸೋಣ. ಬೆಂಗಳೂರಿನಂತಹ
ನಗರದಲ್ಲಿ ಕಚೇರಿಗೆ ರೆಡಿಯಾಗಿ ತೆರಳಬೇಕೆಂದರೆ ವ್ಯಕ್ತಿಯು ಕನಿಷ್ಠ ಬೆಳಿಗ್ಗೆ ೫ ಗಂಟೆಗೆ ಎದ್ದೇಳಬೇಕು. ರಾತ್ರಿ ೧೦ ಗಂಟೆಗೆ ಕಚೇರಿ ಬಿಟ್ಟರೆ ಮನೆಗೆ ತಲುಪುವಾಗಲೇ ರಾತ್ರಿ ೧೨ ಗಂಟೆಯಾಗಲಿದೆ.
ಒಂದು ಗಂಟೆಗೆ ಮಲಗಿದರೂ ನಿದ್ದೆಗೆ ಸಿಗುವ ಅವಧಿ ಕೇವಲ ನಾಲ್ಕು ಗಂಟೆ. ಕನಿಷ್ಠ ಸಾಮಾನ್ಯ ಪ್ರಜ್ಞೆ ಇರುವ ಯಾವ ವ್ಯಕ್ತಿಯೂ ಇಂತಹ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಕಾರ್ಮಿಕ ಕಾನೂನು ೧೨ ಗಂಟೆಗಳವರೆಗೆ (೧೦ ಗಂಟೆಗಳ ಜೊತೆಗೆ ೨ ಗಂಟೆ ಓವರ್ ಟೈಮ್) ಕೆಲಸದ ಸಮಯವನ್ನು ಅನುಮತಿಸುತ್ತದೆ. ರಾಜ್ಯದ ಐಟಿ ಉದ್ಯಮಿಗಳ ಪ್ರಸ್ತಾವನೆ ಒಪ್ಪಿಕೊಂಡರೆ ಈಗಿರುವ ೩ ಪಾಳಿಗಳ ಪದ್ಧತಿ ಎರಡು ಪಾಳಿಗಳಿಗೆ ಬದಲಾಗಲಿದೆ. ಇದು ಐಟಿ ಉದ್ಯಮದಲ್ಲಿ ನಿರುದ್ಯೋಗಕ್ಕೆ ಕಾರಣವಾಗಲಿದೆ ಎಂದು ಐಟಿ ಉದ್ಯೋಗಿಗಳ ಸಂಘಟನೆ (ಕೆಐಟಿಯು) ಕಾರ್ಮಿಕ ಸಚಿವರನ್ನು ಭೇಟಿಯಾಗಿ ಆತಂಕ ವ್ಯಕ್ತಪಡಿಸಿದೆ.