Friday, 29th November 2024

ರಾಜನೀತಿ ಬದಲು ಯುವನೀತಿ: ಮೋದಿ ಮಂತ್ರ

ಅಭಿಮತ

ಡಿ.ಎಸ್.ಅರುಣ್

ಸತತ ಮೂರನೇ ಬಾರಿಗೆ ಪ್ರಚಂಡ ಜನಾದೇಶದಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ತನ್ನ
ಮೊದಲ ಪೂರ್ಣ ಪ್ರಮಾಣದ ಆಯವ್ಯಯ ಪತ್ರವನ್ನು ಸಂಸತ್ತಿನ ಮುಂದೆ ಮಂಡಿಸಿದೆ. ಸರಕಾರಕ್ಕೆ ಬರುವ ಆದಾಯಗಳನ್ನು ಕ್ರೋಢೀಕರಿಸಿ, ಸರಕಾರದ ಆದ್ಯತಾ ವಲಯಗಳನ್ನು ನಿರ್ಧರಿಸಿ, ಅವುಗಳಿಗೆ ತಗಲುವ ವೆಚ್ಚಕ್ಕೆ ಅನುದಾನ ಹಂಚಿಕೆ ಮಾಡುವ ಆರ್ಥಿಕ ಸಾಧನವೇ ಬಜೆಟ್.

ಪ್ರತಿಯೊಂದು ಸರಕಾರಕ್ಕೂ ತನ್ನದೇ ಆದ ಆದ್ಯತಾ ವಲಯಗಳಿರುತ್ತವೆ; ಸರಕಾರಕ್ಕೆ ಬರುವ ಒಟ್ಟು ಆದಾಯವನ್ನು ಪರಾಮರ್ಶಿಸಿ, ವೆಚ್ಚಗಳನ್ನು ಸರಿದೂಗಿಸಿ,
ಉಳಿತಾಯದ ಹಣದಲ್ಲಿ ಘೋಷಿಸಬಹುದಾದ ಘೋಷಣೆಗಳನ್ನು ಕೇಂದ್ರ ಸರಕಾರದ ಬಜೆಟ್‌ನಲ್ಲಿ ಕಾಣಬಹುದು. ಬದಲಾದ ರಾಜಕೀಯದಲ್ಲಿ ರಾಜ್ಯದ ಬಜೆಟ್‌ಗಳನ್ನು ಫ್ರೀಬೀಸ್‌ಗಳ ಮೂಲಕ ವೈಭವೀಕರಿಸಲಾಗುತ್ತಿದೆ. ಈ ಉಚಿತವೆಂಬ ಚಕ್ರವ್ಯೂಹದ ನಡುವೆ ಕೇಂದ್ರ ಸರಕಾರವೂ ಹೆಚ್ಚಿನ ಸಂಖ್ಯೆಯ ಫ್ರೀಬೀಸ್ ಘೋಷಿಸಬಹುದೆಂದು ಎಲ್ಲರೂ ಭಾವಿಸುತ್ತಿದ್ದರು ಮತ್ತು ಫ್ರೀಬೀಸ್ ಘೋಷಣೆ ಇಂದಿನ ರಾಜನೀತಿಯ ಅತ್ಯವಶ್ಯಕ ಭಾಗವಾಗಿದೆ ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ.

ಆದರೆ ರಾಜನೀತಿಯನ್ನು; ಫ್ರೀಬೀಸ್‌ಗಳ ಚಕ್ರವ್ಯೂಹವನ್ನು; ಬಾಹ್ಯ ಮತ್ತು ಆಂತರಿಕ ಒತ್ತಡವನ್ನು; ಪ್ರತಿ ವರ್ಗದ ಒತ್ತಾಸೆಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ದೃಷ್ಟಿಯಿಂದ ದೇಶದ ಯುವಕರಿಗಾಗಿ ರಾಜನೀತಿಯ ಬದಲಾಗಿ ಮೋದಿಯವರು ಯುವನೀತಿಯನ್ನು ಒಪ್ಪಿಕೊಂಡಿದ್ದಾರೆ ಎನ್ನುವುದು ಈ ಬಾರಿಯ ಬಜೆಟ್‌ನಿಂದ ಸ್ಪಷ್ಟವಾಗುತ್ತದೆ. ಒಂಬತ್ತು ಆದ್ಯತೆಯ ವಲಯವನ್ನು ಗುರುತಿಸಿರುವ ಕೇಂದ್ರದ ಬಜೆಟ್‌ನಲ್ಲಿ ಎರಡನೇ ಆದ್ಯತಾ ವಲಯವೇ ಕೌಶಲ್ಯ ಅಭಿವೃದ್ಧಿ.

-ಒಬ್ಬ ಕೈಗಾರಿಕೋದ್ಯಮಿಯಾಗಿ ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ನಿರ್ದೇಶಕನಾಗಿ ನಾನು ಹಲವಾರು ವೇದಿಕೆಗಳಲ್ಲಿ ಈಗಾಗಲೇ ಪ್ರಸ್ತಾಪಿಸಿರುವ ವಿಷಯವೇನೆಂದರೆ. ವಿದ್ಯಾರ್ಥಿಗಳು ಕೇವಲ ಪದವಿಯನ್ನು ಪಡೆಯದೇ, ಉದ್ಯೋಗ ಕ್ಷೇತ್ರದಲ್ಲಿ ಬೇಕಾದ ಕೌಶಲ್ಯಗಳನ್ನು ಪಡೆದುಕೊಂಡರೆ ಯುವಕರಿಗೆ ತಮ್ಮ ಓದಿಗೆ ತಕ್ಕುದಾದ ಕೆಲಸ ದೊರೆಯುವುದು ಹಾಗೂ ದೇಶದ ನಿರುದ್ಯೋಗ ಸಮಸ್ಯೆಗೆ ಉತ್ತರ ದೊರಕುವುದು.

ಸಾಮಾನ್ಯವಾಗಿ ಒಬ್ಬ ಉತ್ತಮ ಕೆಲಸಗಾರನಿಗೆ ಯಾವಾಗಲೂ ಕೆಲಸದ ಅವಕಾಶಗಳು ಸಿದ್ಧವಾಗಿರುತ್ತವೆ ಆದರೆ ಕೆಲಸ ಕೇಳಿಕೊಂಡು ಬರುವಂತಹ ಹಲವು
ಯುವಕರು ಪ್ರಾಮಾಣಿಕರಾಗಿದ್ದರೂ, ನೀತಿವಂತರಾಗಿದ್ದರೂ, ಉತ್ತಮ ಅಂಕ ಹೊಂದಿದ್ದರೂ ಕೌಶಲ್ಯದ ಕ್ಷಮತೆಯಿರದ ಕಾರಣ ಕೆಲಸ ದೊರೆಯುವುದಿಲ್ಲ. ಈ
ತೊಂದರೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಮ್ಮ ಶಿವಮೊಗ್ಗದಲ್ಲಿ ನಾವೆಲ್ಲರೂ ಸೇರಿ ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸ್ಕಿಲ್
ಟ್ರೈನಿಂಗ್ ಸೆಂಟರ್ ಸ್ಥಾಪಿಸಿರುವ ಪ್ರಮುಖ ಉದ್ದೇಶವೇ ವಿದ್ಯಾರ್ಥಿಗಳಲ್ಲಿರುವ ‘ಸ್ಕಿಲ್ ಗ್ಯಾಪ್’ ಅನ್ನು ಕಡಿಮೆ ಮಾಡಬೇಕೆಂಬುದು.

ಈ ನಿಟ್ಟಿನಲ್ಲಿ ಅತ್ಯಂತ ಸ್ವಾಗತಾರ್ಹವಾದ ಮತ್ತು ಅತ್ಯಂತ ಅವಶ್ಯಕವಾದ ಕೌಶಲ್ಯ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಕೇಂದ್ರದ ಬಜೆಟ್ನಲ್ಲಿ ಪ್ರಸ್ತಾಪಿ ಸಿರುವುದು. ಮುಂದಿನ ಐದು ವರ್ಷದ ಅವಧಿಗೆ ಮೋದಿ ಸರಕಾರವು ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದಾಗಿದೆ.

ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ೫೦೦೦ ರು. ನೀಡುವ ಮತ್ತು ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ‘ಇಂಟರ್ನ್‌ಶಿಪ್ ಆಪರ್ಚುನಿಟಿ’ ನೀಡುವಂತಹ ಯೋಜನೆ, ವಿದ್ಯಾರ್ಥಿಗಳಲ್ಲಿರುವ ಸ್ಕಿಲ್‌ಗ್ಯಾಪ್ ಸಮಸ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರಲ್ಲಿ ಅನುಮಾನವಿಲ್ಲ. ಈ ಯೋಜನೆ ದೇಶದ ಒಂದು ಕೋಟಿ ಯುವಕರನ್ನು ತಲುಪುವ ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಉದ್ಯಮಶೀಲ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ಮತ್ತು ವಿದ್ಯಾರ್ಥಿ ಸಮೂಹ ಈ ಯೋಜನೆಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.

ಯೋಜನಾನಾಂ ಸಹಸಂ ತು ಶನೈರ್ಗಚ್ಛೇತ್ ಪಿಪಿಲಿಕಾ| ಆಗಚ್ಛನ್ ವೈನತೆಯೋಪಿ ಪದ್ಮೇಕಂ ನ ಗಚ್ಛತಿ|| ಇರುವೆಯಂತಹ ಪುಟ್ಟ ಜೀವಿಯೂ ಸತತವಾಗಿ ನಡೆಯುತ್ತಿದ್ದರೆ ಸಾವಿರಾರು ಕಿಲೋಮೀಟರ್‌ಗಳಷ್ಟು ಮುಂದೆ ಚಲಿಸಬಹುದು. ಆದರೆ ಒಂದು ಹದ್ದು ತನ್ನ ಸ್ಥಳದಿಂದ ಕದಲದಿದ್ದರೆ ಅದು ಒಂದು ಅಡಿ ಕೂಡ ಮುಂದೆ ಚಲಿಸಲಾರದು ಎಂಬ ಉಕ್ತಿಯಂತೆ ನಮ್ಮ ದೇಶದ ಯುವ ಸಮೂಹ ಭಾರತ ಸರಕಾರದ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳ ಬೇಕೆಂದು ಆಶಿಸುತ್ತೇನೆ.

ಹಸಿದ ಹೊಟ್ಟೆಗೆ ಊಟವನ್ನು ನೀಡುವ ಬದಲು ಅನ್ನ ಸಂಪಾದನೆಯ ವಿಧಾನವನ್ನು ಹೇಳಿಕೊಡುವುದೇ ಅತಿ ಶ್ರೇಷ್ಠವಾದದ್ದು. If someone is hungry, don’t give him fish, teach him fishing ಎಂಬ ಮಾತಿನಂತೆ ಸುಮ್ಮನೆ ಕುಳಿತವರಿಗೆ ಭತ್ಯೆ ಕೊಡುವ ಬದಲು ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಓದಿನ ಜೊತೆಗೆ ಇಂಟನ್ ಶಿಪ್ ಮಾಡುವಾಗ ೫,೦೦೦ರು. ಕೊಡುವ ಯೋಜನೆ, ಯುವ ಭಾರತದ ನಿರ್ಮಾಣಕ್ಕೆ ಅತ್ಯಂತ ಪೂರಕವಾದ ಯೋಜನೆ ಎಂದು ಹೇಳಬಹುದು. ಯುವಕರ ಸಬಲೀಕರಣಕ್ಕೆ ಬಜೆಟ್‌ನಲ್ಲಿ ಇನ್ನೂ ಹತ್ತು ಹಲವು ಯೋಜನೆಗಳಿದ್ದು ಹೊಸ ಉದ್ಯೋಗವನ್ನು ಸ್ಥಾಪನೆ ಮಾಡುವ ಯುವಕರಿಗೆ ಸಹಾಯ ಮಾಡುವ ಧನಿಕರಿಗೆ ವಿಧಿಸುತ್ತಿದ್ದ ‘ಏಂಜಲ್ ಟ್ಯಾಕ್ಸ್’ ಅನ್ನು ಸರಕಾರವು ತೆಗೆದುಹಾಕಿದ್ದು, ಉನ್ನತ ವಿದ್ಯಾಭ್ಯಾಸಕ್ಕೆ ಪಡೆದುಕೊಳ್ಳುವ ಸಾಲದ ಮರುಪಾವತಿಗಾಗಿ ‘ಇ-ವೋಚರ್’ ವ್ಯವಸ್ಥೆ ಜಾರಿಗೆ ತಂದಿದ್ದು ಯುವ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯೆಡೆಗಿನ ಮಹಾಸಂಕಲ್ಪವಾಗಿದೆ.

(ಲೇಖಕರು: ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ
ಬಿಜೆಪಿ ಕಾರ್ಯದರ್ಶಿ)