ತನ್ನಿಮಿತ್ತ
ಬಸವರಾಜ ಶಿವಪ್ಪ ಗಿರಗಾಂವಿ
ಭಾರತವು ಸಂತ-ಮಹಾಂತರು ನೆಲೆಸಿದ ಪುಣ್ಯಭೂಮಿಯಾಗಿದೆ. ಸಮಾಜದಲ್ಲಿ ಆರೋಗ್ಯವಂತ ಬದುಕು ನಿರ್ಮಾಣವಾಗಿರಬೇಕೆಂಬುದು ಮಠ-ಮಾನ್ಯ ಗಳ ಬಯಕೆಯಾಗಿದೆ. ಭಾರತದ ಪ್ರಭಾವದಿಂದ ಈ ಸಂತ-ಸಂಸ್ಕೃತಿಯು ವಿದೇಶಗಳಲ್ಲಿಯೂ ಬೆಳೆಯುತ್ತಿದೆ. ಮಠಾಧೀಶರು ತಮ್ಮ ಜೋಳಿಗೆಗೆ ಭಕ್ತರಿಂದ ಬಂದಿರುವ ದಾನ-ಧರ್ಮಗಳಿಂದ ಮಠ ಮತ್ತು ಬಡಮಕ್ಕಳ ಶಿಕ್ಷಣ ನಡೆಸುವುದು ವಾಡಿಕೆ. ಆದರೆ ಇಲ್ಲೊಬ್ಬ ಪೂಜ್ಯರು ವಿಭಿನ್ನವಾಗಿ ಬದುಕಿದ್ದರು.
ತನ್ನಲ್ಲಿರುವ ಮಹಾಂತ ಜೋಳಿಗೆಗೆ ಭಕ್ತರಿಂದ ಧನ-ಧಾನ್ಯಗಳನ್ನು ಪಡೆಯದೆ ಭಕ್ತರಲ್ಲಿರುವ ವ್ಯಸನಗಳನ್ನು ಹೋಗಲಾಡಿಸಲು ಅವರಲ್ಲಿರುವ ಚಟಗಳನ್ನೇ ಮಹಾಂತ ಜೋಳಿಗೆಯಲ್ಲಿ ಭಿಕ್ಷೆಯನ್ನಾಗಿ ನೀಡಿ ವ್ಯಸನಮುಕ್ತರಾಗಿ ಬದುಕುವಂತೆ ಮಾಡಿದ್ದರು. ಇಂತಹ ಐತಿಹಾಸಿಕ ನಿರ್ಣಯದಿಂದ ಮಹಾಂತ ಜೋಳಿಗೆಯನ್ನು ವಿಶ್ವ ಪ್ರಸಿದ್ಧಗೊಳ್ಳುವಂತೆ ಮಾಡಿದ ಮಹಾನ್ ಸಮಾಜ ಸುಧಾರಕರು ಪರಮಪೂಜ್ಯ ಲಿಂಗೈಕ್ಯ ಶ್ರೀಮ.ನಿ.ಪ್ರ.
ಡಾ.ಮಹಾಂತ ಶಿವಯೋಗಿಗಳು. ಪೂಜ್ಯರು ಬಾಗಲಕೋಟೆ ಜಿಲ್ಲೆಯ ಚಿತ್ತರಗಿ ಮತ್ತು ಇಲಕಲ್ ಮಠಗಳ ಪೀಠಾಧಿಕಾರಿಗಳಾಗಿ ರಾಜ್ಯಾದ್ಯಂತ ಹಲವಾರು ಶಾಖಾ ಮಠಗಳನ್ನು ತೆರೆಯುವ ಮೂಲಕ ಸಾಕಷ್ಟು ಸಮಾಜ ಸುಧಾರಣೆಗಳನ್ನು ಕೈಗೊಂಡು ಇತಿಹಾಸ ಪುರುಷರಾಗಿ ಚಿರಸ್ಮರಣೀಯರಾಗಿದ್ದಾರೆ.
ಒಮ್ಮೆ ಗ್ರಾಮವೊಂದರಲ್ಲಿ ಯುವಕನೊಬ್ಬ ಕುಡಿತದ ಚಟದಿಂದ ನಿಧನವಾದ ಸುದ್ದಿಯು ಪೂಜ್ಯರಿಗೆ ಕೇಳಿತು.
ಅವನ ಮನೆಗೆ ಸಾಂತ್ವನ ಹೇಳಲು ಹೋದಾಗ ಆತನ ಹೆಂಡತಿ ಮಕ್ಕಳು ಉಪವಾಸವಿದ್ದದ್ದು ಕಂಡು ಬಂದಿತು. ಇದಕ್ಕೆ ಕಾರಣ ತೀರಿದ ವ್ಯಕ್ತಿಯು ತನ್ನ ಆರೋಗ್ಯವನ್ನು ಮತ್ತು ಕುಟುಂಬದ ಬೇಕು- ಬೇಡಗಳನ್ನು ಲೆಕ್ಕಿಸದೆ ಕೇವಲ ಕುಡಿಯುವುದನ್ನೆ ಚಾಳಿಯಾಗಿಸಿಕೊಂಡಿದ್ದನು. ಸಮಾಜದಲ್ಲಿರುವ ಇಂತಹ ಹಲವು ಕುಟುಂಬಗಳ ಹೀನಾಯ ಪರಿಸ್ಥಿತಿಯನ್ನು ಕಂಡು ಪ್ರಭಾವಿತರಾದ ಸ್ವಾಮಿಜಿಯು ತನ್ನ ಜೋಳಿಗೆಗೆ ಭಕ್ತರಿಂದ ಯಾವುದೆ ಧನ- ಧಾನ್ಯಗಳು ಬೇಡ, ಭಕ್ತರಲ್ಲಿರುವ ದುಶ್ಚಟಗಳನ್ನು ತನ್ನ ಮಹಾಂತ ಜೋಳಿಗೆಯಲ್ಲಿ ಹಾಕಿಸಿಕೊಳ್ಳುವ ಮೂಲಕ ಭಕ್ತರನ್ನು ಶಾಶ್ವತವಾಗಿ ಚಟಗಳಿಂದ ಮುಕ್ತರಾಗಿಸುವ ಗಟ್ಟಿಯಾದ ನಿಲುವನ್ನು ತಾಳಿದರು.
ಇದರಿಂದ ಮನಃಪರಿವರ್ತನೆಗೊಂಡ ಸಾವಿರಾರು ಜನರು ಸಾರಾಯಿ ಬಾಟಲಿ, ಗುಟಕಾಗಳನ್ನು ಜೋಳಿಗೆಯಲ್ಲಿ ಹಾಕುವ ಮೂಲಕ ತಮ್ಮ ಜೀವನದ ಅವನತಿಯನ್ನು ತಪ್ಪಿಸಿಕೊಂಡು ಗೌರವಯುತ ಬದುಕನ್ನು ಕಟ್ಟಿಕೊಂಡಿದ್ದಾರೆ. ಪೂಜ್ಯರು ಮಹಾಂತ ಜೋಳಿಗೆಯಲ್ಲಿ ದೂರದ ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿನ ವ್ಯಸನಿಗಳಿಂದ ಚಟಗಳ ಭಿಕ್ಷೆ ಪಡೆದು ವಿಶ್ವವಿಖ್ಯಾತಿಯಾದರು. ದುಷ್ಚಟ ಮತ್ತು ದುರಾಚಾರಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆಂಬ ಅರಿವನ್ನು ತಮ್ಮ ಪ್ರವಚನಗಳಲ್ಲಿ ಸಾರುವ ಮೂಲಕ ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಗುರಿ ಹೊಂದಿದರು.
ಪೂಜ್ಯರು ೨೦೧೮ರವರೆಗೆ ನಿರಂತರ ಪ್ರಸಾದ ಮತ್ತು ವಚನ ಮಾಂಗಲ್ಯ, ದೇವದಾಸಿ ವಿಮೋಚನಾ ಸಂಸ್ಥೆ, ದೇವದಾಸಿಯರ ಮಕ್ಕಳಿಗೆ ಟ್ರಸ್ಟ್, ನಿರುದ್ಯೋಗಿ ಮತ್ತು ವಿಧವೆಯರಿಗೆ ಕಾಯಕ ಸಂಜೀವಿನಿ ಸಂಸ್ಥೆ, ನಿಸರ್ಗ ಚಿಕಿತ್ಸೆ, ಯೋಗ ಕೇಂದ್ರ, ಪಲ್ಲಕ್ಕಿಯಲ್ಲಿ ವಚನಗಳ ಮೆರವಣಿಗೆ, ಬಸವತತ್ವ ಪ್ರಸಾರ ಸೇರಿದಂತೆ ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆಯನ್ನು ಹೊಡೆದು ಹಾಕಿದರು. ಮಠದ ನೂರಾರು ಎಕರೆ ಜಮೀನನ್ನು ಆಯಾ ಗ್ರಾಮಗಳ ರೈತರಿಗೆ ಕೃಷಿ ಮಾಡಿಕೊಂಡು ಬದುಕಲು ನೀಡಿದ್ದು ಇತಿಹಾಸವಾಗಿದೆ. ವೈಚಾರಿಕತೆಯ ಹರಿಕಾರರಾಗಿದ್ದ ಪೂಜ್ಯರು ಮೂಲನಂಬಿಕೆಗಳನ್ನು ಗೌರವಿಸಿ ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದರು.
ನಾಗರ ಪಂಚಮಿಯಲ್ಲಿ ಕಲ್ಲಿಗೆ ಹಾಲೆರೆದು ಹಾಳು ಮಾಡುವ ಬದಲು ಬಡಮಕ್ಕಳಿಗೆ ಹಾಲು ಕುಡಿಸಿದರು. ಅನವಶ್ಯಕ ದೀಪ ಹಚ್ಚಿ ಎಣ್ಣೆ ಸುಡುವ ಬದಲು ಬೆಳಕಿಗೆ ಅವಶ್ಯವಿರುವಷ್ಟು ದೀಪ ಹಚ್ಚಿರೆಂದು ಸಾರಿದರು. ಹಿಂದಿನ ಬಡತನದ ದಿನಮಾನಗಳಲ್ಲಿ ಉಂಟಾದ ಭೀಕರ ಬರಗಾಲದಲ್ಲಿ ಕಾಶಿಯಿಂದ ಬಂದು ಶ್ರೀಮಂತರ ಮನವೊಲಿಸಿ ಗಂಜಿ ಕೇಂದ್ರ ಮತ್ತು ಗೋಶಾಲೆಗಳನ್ನು ಆರಂಭಗೊಳಿಸಿದ್ದರು. ಬೀದರನಲ್ಲಿ ನಡೆದ ಬಸವತತ್ವ ಸಮಾವೇಶದಲ್ಲಿ ಅಂದಿನ ಕೇಂದ್ರ ಸಚಿವ ರಾಮ್ ವಿಲಾಸ ಪಾಸ್ವಾನವರು ದಲಿತರನ್ನು ಪೀಠಾಧಿಕಾರಿಯನ್ನಾಗಿ ಮಾಡ ಬಲ್ಲಿರಾ? ಎಂದು ಕಾರ್ಯಕ್ರಮ ದಲ್ಲಿದ್ದ ಮಠಾಧೀಶರುಗಳಿಗೆ ಸವಾಲು ಹಾಕಿದರು.
ಇದನ್ನು ಸ್ವೀಕರಿಸಿದ ಪೂಜ್ಯರು ರಾಯಚೂರ ಜಿಲ್ಲೆಯ ಲಿಂಗಸೂರು ಮಠಕ್ಕೆ ಲಂಬಾಣಿ ಸಮುದಾಯದ ಸಿದ್ಧಲಿಂಗ ಸ್ವಾಮಿಜಿ ಮತ್ತು ಕೆ.ಆರ್.ಪೇಟೆ ತಾಲೂಕಿನ ಸಿದ್ದಯ್ಯನಕೋಟೆ ಮಠಕ್ಕೆ ದಲಿತರಾದ ಬಸವಲಿಂಗ ಸ್ವಾಮಿಜಿಯನ್ನು ನೇಮಿಸಿ ಅಚ್ಚರಿ ಮೂಡಿಸಿದರು. ಇದಲ್ಲದೆ ಹಲವು ಮಠಗಳಿಗೆ
ಮಹಿಳೆಯರನ್ನೂ ನೇಮಕ ಮಾಡಿದ್ದಾರೆ. ಚಿತ್ತರಗಿ-ಇಳಕಲ್ ಮಠದ ಉತ್ತರಾಧಿಕಾರಿಯಾಗಿ ಜಂಗಮರಲ್ಲದ ಗುರು ಮಹಾಂತ ಶ್ರೀಗಳನ್ನು ನೇಮಕ ಮಾಡಿದಾಗ ಹಲವು ವರ್ಷಗಳ ಕಾಲ ಕೆಲವು ಭಕ್ತರೊಂದಿಗೆ ವಿರೋಧ ಕಟ್ಟಿಕೊಂಡಿದ್ದರು.
ಮುಂದೆ ಭಕ್ತರಿಗೆ ಸಮಾನತೆಯ ಕುರಿತು ಭೋಧನೆ ಮಾಡಿ ಮನಃಪರಿವರ್ತಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಪೂಜ್ಯರು ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಆಗಸ್ಟ್ ೧, ೧೯೩೦ ರಲ್ಲಿ ಜನಿಸಿದರು. ೧೦ನೇಯ ವಯಸ್ಸಿಗೆ ಬೆಳಗಾಂವಿ ಜಿಲ್ಲೆಯ ಸವದಿ ವಿರಕ್ತಮಠದ ಕಿರಿಯ ಸ್ವಾಮಿಗಳಾಗಿ ನೇಮಕವಾದರು. ಕಾಶಿಯಲ್ಲಿ ಸಂಸ್ಕೃತ, ಹಿಂದಿ, ಯೋಗ, ಶಾಸೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಪಡೆದಿದ್ದರು. ೧೯೭೦ರಲ್ಲಿ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ೧೯ನೇಯ ಪೀಠಾಧಿಕಾರಿಯಾಗಿ ನೇಮಕರಾಗುವ ಮೂಲಕ ಬಸವತತ್ವ ನಿಷ್ಠರಾಗಿಕ್ರಾಂತಿಕಾರಕ ಸಮಾಜ ಸುಧಾರಣೆಗಳನ್ನು ಕೈಗೊಂಡರು.
ಇಂತಹ ಅಗಾಧ ಸಾಧಕರಾಗಿದ್ದ ಪೂಜ್ಯರು ೨೦೧೮ ಮೇ ೧೯ ರಂದು ಲಿಂಗೈಕ್ಯರಾದರು. ಸರಕಾರವು ಪೂಜ್ಯರ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುವಂತೆ ಆದೇಶ ಹೊರಡಿಸಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ.
(ಲೇಖಕರು: ಹವ್ಯಾಸಿ ಬರಹಗಾರರು)