Friday, 20th September 2024

ಭಾರತದಿಂದ ಕೊರೋನಾ ಹೋಗಿಲ್ಲ, ಈಗ ಮೈರೆತರೆ ಅಪಾಯ ಫಿಕ್ಸ್: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ವಿರುದ್ದದ ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. ಆದರೆ, ಭಾರತದಿಂದ ಕೊರೋನಾ ಹೋಗಿಲ್ಲ, ಈಗ ಮೈರೆತರೆ ಅಪಾಯ ಫಿಕ್ಸ್ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.

ಟ್ವೀಟ್ ಮಾಡಿದಂತೆ, ಮಂಗಳವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜನಸಾಮಾನ್ಯರು ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಲಾಕ್‍‍ಡೌನ್‍ ಹೋಗಿದೆ, ಕೊರೋನಾ ಹೋಗಿಲ್ಲ, ಹಾಗಾಗಿ, ಈಗ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜಾಗ್ರತೆಯಿಂದಿರಲು ಹೇಳಿದರು.

ಕೊರೋನಾ ಮರಣ ಪ್ರಮಾಣವೂ ಈಗ ಕಡಿಮೆಯಾಗುತ್ತಿದೆ. ಅಮೆರಿಕ, ಬ್ರೆಜಿಲ್ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ದೇಶದಲ್ಲಿ ಪ್ರತಿ ಹತ್ತು ಲಕ್ಷಕ್ಕೆ 83 ಜನರ ಸಾವು ಸಂಭವಿಸುತ್ತಿದೆ ಎಂದು ಅಂಕಿಅಂಶಗಳ ಕುರಿತ ವರದಿ ನೀಡಿದರು.

ದೇಶದಲ್ಲಿ 90 ಸಾವಿರ ಹಾಸಿಗೆಗಳು ಲಭ್ಯವಿದೆ. ಈ ಮೂಲಕ ಕೊರೋನಾ ಸೋಂಕಿತರ ಜೀವ ರಕ್ಷಿಸಿದ್ದೇವೆ. ಕೋರೊನಾ ಪೂರ್ತಿ ಕಡಿಮೆಯಾಗದೆ ಸಂತೋಷ ಪಡುವುದು ಸರಿಯಲ್ಲ. ಭಾರತದಲ್ಲಿ ಕೊರೋನಾ ವ್ಯಾಕ್ಸಿನ್ ಸಂಶೋಧನೆ ನಡೆಯುತ್ತಿದೆ. ಫ್ರಾನ್ಸ್, ಅಮೆರಿಕದಲ್ಲಿ ಕೊರೋನಾ ನಿಯಂತ್ರಣದಲ್ಲಿತ್ತು. ಆದರೀಗ, ಆ ದೇಶಗಳಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಕೊರೋನಾ ಇಲ್ಲ ಎಂದು ನಂಬಬೇಡಿ. ಮಹಾಮಾರಿಗೆ ವ್ಯಾಕ್ಸಿನ್ ಸಿಗುವ ತನಕ ಮೈಮರೆಯುವುದು ಬೇಡ ಎಂದು ದೇಶವಾಸಿ ಗಳಲ್ಲಿ ಮನವಿ ಮಾಡಿಕೊಂಡರು.

ಮನುಷ್ಯ ಸಂಕುಲವನ್ನು ಬದುಕಿಸಲು ಯುದ್ದೋಪಾದಿಯಲ್ಲಿ ಕೆಲಸ ನಡೆದಿದೆ. ಫಸಲು ನೋಡಿ ಧಾನ್ಯದ ಅಂದಾಜು ಹಾಕ ಬೇಡಿ. ಬೆಳೆ ಮನೆಗೆ ಬರುವ ತನಕ ಮೈ ಮರೆಯುವುದು ಬೇಡ ಎಂದು ಪರೋಕ್ಷವಾಗಿ ಕೊರೋನಾ ಸೋಂಕು ವಿಚಾರದಲ್ಲಿ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕೆಂದು ಒತ್ತಿ ಹೇಳಿದರು.

ಬಹಳಷ್ಟು ಜನ ನಿಯಮ ಪಾಲಿಸುತ್ತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಮರೆತಿದ್ದಾರೆ. ಇದರಿಂದ ಸೋಂಕು ಮತ್ತಷ್ಟು ಹೆಚ್ಚಬ ಹುದು ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಜನರು ದಯಮಾಡಿ ಎಚ್ಚರಿಕೆಯಿಂದಿರಿ ಎಂದು ಮನವಿ ಮಾಡಿದರು.