ಅಭಿಮತ
ಮಿರ್ಲೆಚಂದ್ರಶೇಖರ
ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಖಾಸಗಿ ಇಂಗ್ಲೀಷ್ ಕಾನ್ವೆಂಟ್‌ಗಳು ತೆಲೆ ಎತ್ತಿರುವುದು ಹಾಗೂ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರಷ್ಟೇ ನಮ್ಮ ಮಕ್ಕಳು ವಿದ್ಯಾವಂತರು ಎನ್ನುವ ತೀರ್ಮಾನಕ್ಕೆ ಬಂದಿರುವ ಪೋಷಕರು ಸರಕಾರಿ ಕನ್ನಡ ಶಾಲೆಗಳನ್ನು ನಿರ್ಲಕ್ಷಿಸು ತ್ತಿದ್ದಾರೆ.
ನನ್ನದೊಂದು ಚಾಳಿ ಇದೆ, ಅದು ಕೆಟ್ಟದೆನ್ನಿ ಇಲ್ಲವೇ ಕೆಲವರಿಗೆ ಒಳ್ಳೆಯದು ಎನಿಸಬಹುದು, ಅದು ವಿದ್ಯೆ ಕಲಿತ ಶಾಲೆ ಅಥವಾ ಕರ್ತವ್ಯ ನಿರ್ವಹಿಸು ತ್ತಿದ್ದ ಸರಕಾರಿ ಕಚೇರಿ ಇರಬಹುದು ಒಮ್ಮೆ ವರ್ಗಾವಣೆಯಾಗಿ ಅಲ್ಲಿಂದ ಹೊರಟರೆ ಮತ್ತೇ ಭೇಟಿ ಕೊಡುವುದೆಂದರೆ ನನಗೆ ಇಷ್ಟವಾಗದ ಕೆಲಸ. ವಿಶೇಷ ಸಂದರ್ಭಗಳಲ್ಲಿ ತೀರಾ ಅವಶ್ಯಕತೆ ಇದ್ದು ಹಳೆಯ ದಾಖಲೆಗಳನ್ನು ಪಡೆಯಲು ಹೋಗಲೇಬೇಕಿರುವಾಗ ಹೋಗಿದ್ದೇನೆ. ವಯೋನಿವೃತ್ತಿ ಆದ ನಂತರವಂತು ಕರ್ತವ್ಯ ನಿರ್ವಹಿಸಿದ ಕಚೇರಿಗಳಿಗೆ ಹೋಗೇ ಇಲ್ಲ, ಮುಂದೆಯೂ ಹೋಗುವುದೇ ಇಲ್ಲ.
ಆದರೆ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳನ್ನು ಉಹಿಸಲಾಗದು ಏನುಬೇಕಾದರೂ ಆಗಬಹುದು. ನನ್ನ ಪ್ರಾಥಮಿಕ ಶಾಲೆಯ ಓದು ನಡೆದದ್ದು ಊರಿನ ನಮ್ಮ ಮನೆಯ ಎದುರು ಇರುವ ಶಾಲೆಯಲ್ಲಿ. ಊರಿಗೆ ಆಗಾಗ್ಗೆ ಹೋಗುತ್ತಿರುತ್ತೇನೆ ಆದರೆ ಮನಸ್ಸಿನೊಳಗೆ ತುಡಿತವಿದ್ದರೂ ಒಮ್ಮೆಯೂ ಶಾಲಾ ಆವರಣಕ್ಕೆ ಹೋಗುವ ಮನಸ್ಸು ಮಾಡಿರಲಿಲ್ಲ, ಕಾಂಪೌಂಡ್ ಹೊರಗಿನ ದೃಶ್ಯವನ್ನು ಮಾತ್ರ ಜಗುಲಿಯ ಮೇಲೆ ಅಥವಾ ಶಾಲಾ ಕಾಂಪೌಂಡ್ ಮೇಲೆ ಕುಳಿತು ಬಾಲ್ಯದ ನೆನಪುಗಳನ್ನು ಮನಸ್ಸಿನ ಪರದೆಯಲ್ಲಿ ಕಟ್ಟಿಕೊಳ್ಳುತ್ತಾ ನೋಡುತ್ತಿದ್ದೆ.
ಆವರಣದ ಸುತ್ತಲೂ ಮರಗಳು ಬೆಳದು ನಿಂತಿರುವುದರಿಂದ ಒಳಗಿನ ಕಟ್ಟಡಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಒಮ್ಮೆ ಎಂದಿನಂತೆ ಊರಿಗೆ ಹೋಗಿ ದ್ದಾಗ ಸಂಜೆ ಸೂರ್ಯನ ಬೆಳಕನ್ನು ಕತ್ತಲೆಯು ನುಂಗುತ್ತಿದ್ದ ಸಮಯ, ನಾನು ಬಾಲ್ಯದಲ್ಲಿ ಆಟವಾಡುತ್ತಿದ್ದ ಶಾಲಾ ಮೈದಾನವನ್ನು ನೋಡಬೇಕೆನಿಸಿ ಒಳಹೊಕ್ಕಿದೆ, ಚಿಕ್ಕವನಿದ್ದಾಗ ದೊಡ್ಡದಾಗಿ ಕಾಣುತ್ತಿದ್ದ ಮೈದಾನ ನನಗೆ ಚಿಕ್ಕದಾಗಿ ಕಾಣತೊಡಗಿತು, ಕೊಕ್ಕೋ, ಸೂರ್‌ಚೆಂಡು, ಜೂಟಾಟ ಹಾಗೂ ಡ್ರಿಲ್ ಮಾಡುತ್ತಿದ್ದ ಜಾಗವದು, ಸಂಜೆ ಆಯಿತೆಂದರೆ ದೊಡ್ಡವರು ವಾಲಿಬಾಲ್ ಆಟವನ್ನು ರಾಜ್ಯ ಮಟ್ಟಕ್ಕೆ ಸಮನಾಗಿ ಅದ್ಬುತವಾಗಿ ಆಡುತ್ತಿದ್ದರು, ನಾನು ಗೆಳೆಯರ ಜತೆ ತಪ್ಪದೆ ಅದನ್ನು ನೋಡುತ್ತಿದ್ದೆ.
ನನ್ನ ಕಾಲದ ಶಾಲಾ ಕಟ್ಟಡಗಳು ಬದುಕಿನ ಅಂತ್ಯಕಾಲ ದಲ್ಲಿವೆ, ಇಂದೋ ನಾಳೆಯೋ ಬಿದ್ದುಹೋಗುವ ಸ್ಥಿತಿಯಲ್ಲಿವೆ. ಕಿರಿಯ ಪ್ರಾಥಮಿಕ ಶಾಲೆ ೧೯೦೪ ರ ಅವಧಿಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯು ೧೯೫೦ರಲ್ಲಿ ಕಟ್ಟಿರುವುದಾಗಿ ಕೇಳಿದ್ದೇನೆ. ಮನಸ್ಸು ತಡೆಯಲಾರದೆ ಕುತೂಹಲದಿಂದ ನಾನು ಕುಳಿತ ಕೊಠಡಿಗಳನ್ನು ಬಾಗಿಲುಗಳು ಇಲ್ಲದ ಮುರಿದ ಕಿಟಿಕಿ ಗಳಿಂದ ಇಣುಕುತ್ತಿದ್ದಂತೆ ನೆನಪುಗಳು ಚುಚ್ಚಲು ಪ್ರಾರಂಭಿಸಿ ದವು, ಅನಾಥ
ಮಕ್ಕಳಂತೆ ಪಾಲನೆಪೋಷಣೆಗಳಿಲ್ಲದ ಕಟ್ಟಡಗಳನ್ನು ನೋಡುನೋಡುತ್ತಿದ್ದಂತೆ ನನ್ನ ಜೀವ ದಸಕ್ ಎಂದಿತು.
ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಶಿಥಿಲಾವಸ್ಥೆ ಯಲ್ಲಿದೆ, ಕಿಟಕಿಬಾಗಿಲುಗಳು ಮುರಿದು ಬಿದ್ದಿವೆ, ಬಾಗಿಲುಗಳಿದ್ದರೂ ಅವುಗಳು ಕರ್ತವ್ಯದಿಂದ ವಯೋನಿವೃತ್ತಿಗೊಂಡಿವೆ, ಮೇಲ್ಚಾವಣಿಯಲ್ಲಿ ಕೆಂಪನೆ ಚೆಂದವಾಗಿ ಕಾಣುತ್ತಿದ್ದ ಮಂಗಳೂರು ಹೆಂಚುಗಳು ಬಿದ್ದುಹೋಗಿವೆ, ಬಹುಶಃ ಮಳೆ ಬಂದರೆ ಮಕ್ಕಳು ಕೊಡೆ ಹಿಡಿದು ಕುಳಿತುಕೊಳ್ಳುತ್ತಿರಬಹುದು, ಕಟ್ಟಡವು ಸುಣಬಣ್ಣ ಕಂಡು ಎಷ್ಟು ಕಾಲವಾಗಿದೆಯೋ, ಕಿರಿಯ ತಮ್ಮನದು ಈ ರೀತಿಯಾದರೆ ಇನ್ನು ಹಿರಿಯಣ್ಣನ ಸ್ಥಿತಿ ಇದಕ್ಕಿಂತ ಭಿನ್ನವೇನು ಇಲ್ಲ, ಹಿರಿಯ ಪ್ರಾಥಮಿಕ ಶಾಲೆಯು ಆರ್‌ಸಿಸಿ ಕಟ್ಟಡವಾದರೂ ವಾರ್ಷಿಕ ನಿರ್ವಹಣೆ ಇಲ್ಲದೆ ಸೊರಗಿದೆ.
ಆ ನನ್ನ ಅಕ್ಷರದೇಗುಲದ ಆವರಣದ ಸುತ್ತಾ ನೋವಿನಿಂದ ಒಂದು ಸುತ್ತು ಪ್ರದಕ್ಷಿಣೆ ಹಾಕಿದೆ ಮೈ ಆಟೋಗ್ರಾಫ್ ಸಿನಿಮಾದ ನಾಯಕ ತನ್ನ ಬಾಲ್ಯ ಕಳೆದ ಸ್ಥಳಗಳಿಗೆ ಬೇಟಿ ನೀಡಿ ಅನುಭವಿಸಿದ ನೋವಿನ ಹಾಗೆ, ಅದು ಸಿನಿಮಾದಲ್ಲಿನ ಕಲ್ಪನಾ ಲೋಕ, ಆದರೆ ಇಲ್ಲಿ ವಾಸ್ತವವಾಗಿ ಹೃದಯ ಹಿಂಡಿದ ನೋವನ್ನು ಅನುಭವಿಸಿದೆ. ‘ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವೆಯದ ನೆನಪು, ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು’ಗಳು ಕಾಡಿ ನನ್ನ ಕಣ್ಣಲಿ ಕಣ್ಣೀರು ಸುರಿದಿದ್ದು ಸುಳ್ಳಲ್ಲ.
ಐದು ದಶಕಗಳ ಹಿಂದೆ ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಅರ್ಧ ಎಕರೆಯಷ್ಟು ಜಾಗದಲ್ಲಿ ಸೊಪ್ಪು ತರಕಾರಿಗಳನ್ನು ಬೆಳೆಯಲಾಗುತ್ತಿತ್ತು, ನಮ್ಮಗಳಿಂದ ಗಿಡಗಳಿಗೆ ನೀರುಣಿಸುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನು ಟೀಚರ್‌ಗಳ ಮಾಡಿಸುತ್ತಿದ್ದರಲ್ಲದೆ ಸ್ವತಃ ಅವರೂ ಭಾಗಿಯಾಗುತ್ತಿದ್ದರು, ಹತ್ತಿರದ ಪಿಳಗಾಲುವೆ ಅಥವಾ ಶಾಲೆಯ ಆವರಣದಲ್ಲೇ ಇದ್ದ ತೆರೆದ ಬಾವಿಯಿಂದ ನೀರನ್ನು ಸೇದಿಸಿ ಗಿಡಗಳಿಗೆ ಹಾಕಿಸುತ್ತಿದ್ದರು. ಆ ಸಂಭ್ರಮವನ್ನು ಅನುಭವಿಸಿ ಕೈತೋಟದ ಸೊಬಗನ್ನು ನೋಡುವುದೇ ಆನಂದ, ಅಂದು ಅಂದಾಜು ಆರನೂರು ಮಕ್ಕಳವರೆಗೆ ಕಲಿಯುತ್ತಿದ್ದ ಕನ್ನಡ ಶಾಲೆಯಲ್ಲಿ ಈಗ
ಒಂದರಿಂದ ಏಳನೇ ತರಗತಿಯವರೆಗೆ ಕೇವಲ ಅರವತ್ತು ಮಕ್ಕಳಿದ್ದಾರೆ ಎನ್ನುವುದನ್ನು ಕೇಳಿ ಆ ಕ್ಷಣಕ್ಕೆ ಬಹಳವೇ ಬೇಸರವಾಗಿ ಎದೆಗೆ ಗುಂಡು ಹೊಡೆದಂತಾಯಿತು, ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ಕೆಲವೇ ಕಿಮೀ ದೂರದಲ್ಲಿ ಹಲವು ಹಳ್ಳಿಗಳನ್ನು ಸುತ್ತುವರಿದ ನನ್ನೂರು ಶಾಲೆ, ನಾ ಕಲಿತ ಶಾಲೆ ಕಳೆದುಹೋಗುವ ಸ್ಥಿತಿಯಲ್ಲಿ ಇರುವ ನೋವನ್ನು ಹೇಗೆ ಸಹಿಸುವುದು? ಕನ್ನಡ ಶಾಲೆಗಳಿಗೆ ಯಾಕಿಂತಹ ದುಸ್ಥಿತಿ?
ಹಳ್ಳಿಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಖಾಸಗಿ ಇಂಗ್ಲೀಷ್ ಕಾನ್ವೆಂಟ್‌ಗಳು ತೆಲೆ ಎತ್ತಿರುವುದು ಹಾಗೂ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರಷ್ಟೇ ನಮ್ಮ ಮಕ್ಕಳು ವಿದ್ಯಾವಂತರು ಎನ್ನುವ ತೀರ್ಮಾನಕ್ಕೆ ಬಂದಿರುವ ಪೋಷಕರು ಸರಕಾರಿ ಕನ್ನಡ ಶಾಲೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಪೋಷಕರ ಜತೆಗೆ ಸರಕಾರದ ಆಡಳಿತವು ಕೂಡ ಪರೋಕ್ಷವಾಗಿ ಖಾಸಗಿ ಶಾಲೆಗಳನ್ನು ಪೋಷಿಸುತ್ತಿರವುದು ಸುಳ್ಳಲ್ಲ ಏಕೆಂದರೆ ಬಹುತೇಕ ಖಾಸಗಿ ಶಾಲೆಗಳು ರಾಜಕಾರಣಿ ಗಳ ಒಡೆತನದಲ್ಲಿವೆ. ಶಿಕ್ಷಣವು ಒಂದು ಲಾಭದಾಯಕ ಉದ್ಯಮವಾಗಿ ಬೆಳೆದಿರುವುದು ಬಹುದೊಡ್ಡ ದುರಂತ. ಭವಿಷ್ಯದಲ್ಲಿ ಉಳಿವಿಗಾಗಿ ದೊಡ್ಡ ಆಂದೋಲನವೇ ನಡೆಯಬೇಕಾಗುತ್ತದೆ, ಪುನಶ್ಚೇತನಗೊಳಿಸಲು ಆಗದಿದ್ದರೆ ಸರಕಾರ ಶಿಕ್ಷಣ ಇಲಾಖೆಯನ್ನು ಸಂಪೂರ್ಣವಾಗಿ ಮುಚ್ಚಿ ಎಲ್ಲವನ್ನೂ ಖಾಸಗೀಕರಣ ಗೊಳಿಸಿ ಆ ಶಾಲೆಗಳಿಂದ ವಾರ್ಷಿಕ ತೆರಿಗೆ ಕಟ್ಟಿಸಿಕೊಂಡು ಸುಮ್ಮನಿರುವುದು ಲೇಸು.