Thursday, 28th November 2024

ಪಶ್ಚಿಮಘಟ್ಟ ಉಳಿದರೆ ಪಶ್ಚಿಮ ಕರಾವಳಿ ಉಳಿದೀತು

ಕಳಕಳಿ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಪ್ರಕೃತಿ ನಮ್ಮ ಕಣ್ಣಿಗೆ ಕಾಣುವ ದೇವರು. ಪ್ರಕೃತಿ ನಮ್ಮ ಪೊರೆವ ತೊಟ್ಟಿಲು. ನಾವೇ ನಾಶಕಾರರು ಎಂಬುದು ಪ್ರಕೃತಿಗೆ ತಿಳಿದಿದೆ. ಇದು ಇನ್ನಷ್ಟು ಮುಂದುವರಿದರೆ ಪ್ರಕೃತಿಯು ಮಾನವನನ್ನು ನಿಯಂತ್ರಿಸುತ್ತದೆ ಎಂದು ಹೇಳುತ್ತಾ ಬಂದಿದ್ದೇವೆ. ಆದರೆ ಪ್ರಕೃತಿಯ ಮೇಲೆ ಮಾನವ ಜನಾಂಗದ ದಬ್ಬಾಳಿಕೆ ಇನ್ನೂ ಕಡಿಮೆಯಾಗಿಲ್ಲ, ಹೆಚ್ಚುತ್ತಲೇ ಇದೆ. ವಯನಾಡು ಮತ್ತು ಅಂಕೋಲಾದ ದುರಂತಗಳು ಇದಕ್ಕೆ ಸಾಕ್ಷಿ. ಮೇಲ್ನೋಟಕ್ಕೆ ಪ್ರಕೃತಿವಿಕೋಪ ಎಂಬ ವರದಿ ಪ್ರಕಟವಾದರೂ, ಮಾನವನ ಅತಿಯಾಸೆಯೇ ಈ ದುರಂತಗಳ ಹಿಂದಿನ ಕಾರಣವೆಂಬುದು ವರದಿಯಾಚೆಗಿನ ಕಟುಸತ್ಯ.

ಪ್ರಕೃತಿ ಎಂಬ ಪದ ಹೆಚ್ಚಿಗೆ ನೆನಪಾಗುವುದು ವಿಕೋಪದ ಸಂದರ್ಭದಲ್ಲಿ. ಅಂಥ ಸಂದರ್ಭಗಳನ್ನು ಹೊರತುಪಡಿಸಿದರೆ ಪ್ರಕೃತಿಯ ಬಗೆಗಿನ ವಿಶೇಷ ಗಮನ ಬಹುಮಟ್ಟಿಗೆ ಶೂನ್ಯವೇ
ಆಗಿರುತ್ತದೆ. ಪ್ರಕೃತಿಯ ಮೇಲೆ ನಡೆಯುತ್ತಿರುವ ಅನ್ಯಾಯಗಳು, ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರಕೃತಿಯ ಸಂರಕ್ಷಣೆ ಮತ್ತು ಅದನ್ನು ಭವಿಷ್ಯದ ತಲೆಮಾರುಗಳಿಗೆ ಸುಸ್ಥಿರವಾಗಿ
ಉಳಿಸುವುದು ಮಾನವ ಜನಾಂಗದ ಅತ್ಯವಶ್ಯಕ ಜವಾಬ್ದಾರಿಯಾಗಿದೆ.

ಪ್ರಸಕ್ತ ಸನ್ನಿವೇಶದಲ್ಲಿ ವಿಶ್ವಾದ್ಯಂತ ಚರ್ಚೆಯಾಗುತ್ತಿರುವ ಅತ್ಯಂತ ಮಹತ್ವದ ವಿಚಾರ- ಪ್ರಕೃತಿ ಮತ್ತು ಪರಿಸರ. ಮನುಷ್ಯ ಎಷ್ಟೇ ದೊಡ್ಡ ಸ್ಥಾನಮಾನ ಅಲಂಕರಿಸಿದರೂ, ಆಗರ್ಭ ಶ್ರೀಮಂತನಾದರೂ ಅವನು ಪ್ರಕೃತಿಯ ಒಂದು ಅಂಶ ಮಾತ್ರ. ಪ್ರಕೃತಿದತ್ತ ಸ್ನೇಹಮಯ ಜೀವನದಿಂದ ನಾವು ಹೊರಬಂದು ಭೂಕುಸಿತ, ಬರಗಾಲ, ಅತಿವೃಷ್ಟಿ, ಭೂಕಂಪ, ಬಿಸಿಗಾಳಿ, ಚಂಡಮಾರುತ, ಕಲುಷಿತ ಗಾಳಿ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂಥ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಮುಂದಿನ ದಿನಗಳ ಭವಿಷ್ಯ ಮತ್ತು ಮುಂದಿನ ಜನಾಂಗದ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರಕೃತಿಯನ್ನು ಸಂರಕ್ಷಿಸಲೇಬೇಕು.

‘ದೇವರ ಸ್ವಂತ ನಾಡು’, ‘ಭೂಮಿಯ ಮೇಲಿನ ಸ್ವರ್ಗ’ ಎಂದೇ ಕರೆಯಲ್ಪಡುವ ಕೇರಳದ ವಯನಾಡಿನಲ್ಲಿ ಕಂಡುಬಂದ ಭೂಕುಸಿತ ಮತ್ತು ಪ್ರವಾಹಗಳು ದೊಡ್ಡ ದುರಂತವೇ ಸರಿ. ಹೊರಜಗತ್ತಿಗೆ ಅದು ತಿಳಿಯುವ ಹೊತ್ತಿಗೆ ಘಟನೆ ಸಂಭವಿಸಿ ನಾಲ್ಕು ತಾಸುಗಳೇ ಕಳೆದುಹೋಗಿದ್ದವು. ಗೋಳಾಡುವವರೇ ಇಲ್ಲದಿದ್ದಾಗ ಊರಿಗೆ ಮೂಕ ಆಕ್ರಂದನವೇ ಗತಿಯಾಯಿತು. ನೀರಿನ ರಭಸಕ್ಕೆ ಜನರು, ಮನೆಗಳು, ವಾಹನಗಳು ಎಲ್ಲವೂ ಕೊಚ್ಚಿಹೋಗಿದ್ದವು. ಬದುಕು ಹೂತುಹೋಗಿತ್ತು. ಮುಂಜಾನೆ ಮೂಕಹಕ್ಕಿಯ ಹಾಡಿಗೂ ಅವಕಾಶವಿಲ್ಲದಂಥ ಅನಾಹುತ ಸಂಭವಿಸಿಬಿಟ್ಟಿತ್ತು. ಹಲವಾರು ದೃಶ್ಯಗಳು ಕಲ್ಲು ಹೃದಯಗಳನ್ನೂ ಕಣ್ಣೀರ ಕಡಲಲ್ಲಿ ತೇಲಿಸಿದ್ದವು. ವಯನಾಡಿನ ಮಂಡಕೈ ಮತ್ತು ಚೂರಲ್‌ಮಲದಲ್ಲಿ ಏಕಾಏಕಿ ಉಂಟಾದ ಭೂಕುಸಿತಕ್ಕೆ ಹತ್ತೇ ಹತ್ತು ನಿಮಿಷದಲ್ಲಿ ಎಲ್ಲವೂ ಬದಲಾಗಿ ಹೋಗಿದ್ದವು. ನೀರೇ ಇಲ್ಲದ ಊರಿನಲ್ಲಿ ಊರಿಗೂರೇ ನದಿಯಾಗಿ, ಊರುಗಳು, ಕೆರೆ, ಗುಡ್ಡಗಳಾಗಿ ಮಾರ್ಪಟ್ಟಿವೆ. ಇದ್ದ ಮನೆ, ಮಡದಿ, ಮಕ್ಕಳು, ತಂದೆ, ತಾಯಿ ಯಾರೂ ಸಿಗದೆ ಬದುಕುಳಿದವರ ಆಕ್ರಂದನ ಮುಗಿಲು ಮುಟ್ಟಿದೆ. ಇವೆಲ್ಲಾ ಮನುಷ್ಯರು ಪ್ರಕೃತಿಯ ಮೇಲೆ ಎಸಗಿದ ದೌರ್ಜನ್ಯಗಳ ಪರಿಣಾಮವಲ್ಲವೇ? ೧೩ ವರ್ಷಗಳ ಹಿಂದೆ ಮಾಧವ ಗಾಡ್ಗೀಳ್ ವರದಿಯಲ್ಲಿ, ಈಗ ದುರ್ಘಟನೆ ಸಂಭವಿಸಿದ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿತ್ತು.

ಇದಲ್ಲದೆ ೧೮ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿತ್ತು. ಅಲ್ಲದೆ ಪಶ್ಚಿಮಘಟ್ಟದ ೧.೨೯ ಲಕ್ಷ ಚ.ಕಿ.ಮೀ. ವ್ಯಾಪ್ತಿಯ ಪೈಕಿ ಶೇ.೭೫ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಅದು ಶಿಫಾರಸು ಮಾಡಿತ್ತು. ತದನಂತರ ಕಸ್ತೂರಿರಂಗನ್ ವರದಿಯು ಸ್ವಲ್ಪ ಸೂಕ್ಷ್ಮ ಪ್ರದೇಶವನ್ನು ಕಡಿಮೆ ಮಾಡಿದರೂ, ಈ ಎರಡೂ ಪ್ರಮುಖ ವರದಿಗಳಿಗೆ ಕೇರಳ ಮತ್ತು ಕರ್ನಾಟಕ ಸರಕಾರಗಳೆರಡೂ ನಿರ್ಲಕ್ಷ್ಯ ತೋರಿ ಪ್ರತಿರೋಧಿಸಿದ್ದವು. ಪರಿಣಾಮವಾಗಿ ಈ ಪ್ರದೇಶಗಳಲ್ಲಿ ಕಲ್ಲು ಕ್ವಾರಿ, ಗಣಿಗಾರಿಕೆ, ಹೊಸ ಕೈಗಾರಿಕೆಗಳ ನಿರ್ಮಾಣ ಸೇರಿದಂತೆ ಇನ್ನಿತರ
ನಿರ್ಮಾಣ ಕಾರ್ಯಗಳು ನಿರಾತಂಕವಾಗಿ ನಡೆಯುತ್ತಿದ್ದವು. ಇವುಗಳ ಅಡ್ಡ ಪರಿಣಾಮವೇ ಮಳೆಗಾಲದಲ್ಲಿ ಭೂಕುಸಿತದ ರೂಪದಲ್ಲಾಗುತ್ತಿದೆ.

ಅತಿಯಾದ ಮಳೆ, ಭೂಕಂಪನಗಳು, ಮಾನವನಿರ್ಮಿತ ನಿರ್ಮಾಣ ಚಟುವಟಿಕೆಗಳು, ಅರಣ್ಯನಾಶ ಇವು ಭೂಕುಸಿತಕ್ಕೆ ಕಾರಣವಾಗಿ, ಮಣ್ಣು, ಬಂಡೆಗಳು, ಇತರ ಭಗ್ನಾವಶೇಷಗಳ ಹಠಾತ್ ಚಲನೆಯಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಪಶ್ಚಿಮಘಟ್ಟ ಶಿಥಿಲಗೊಂಡಂತಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳಲ್ಲಿ ಒಂದರ ಮೇಲೊಂದರಂತೆ ಭೂಕುಸಿತಗಳು ಸಂಭವಿಸುತ್ತಿವೆ. ಭೌಗೋಳಿಕ ವೈವಿಧ್ಯತೆ ಮತ್ತು  ಜೀವವೈವಿಧ್ಯತೆಯ ಆಗರವಾಗಿರುವ ಪಶ್ಚಿಮಘಟ್ಟದಲ್ಲಿ ಭೂಕುಸಿತಗಳು ಸಂಭವಿಸಲು ಮಾನವನ ಸ್ವಯಂಕೃತ ಅಪರಾಧಗಳೇ ಕಾರಣವೇ ವಿನಾ, ಇದಕ್ಕೆ ಪ್ರಕೃತಿಯನ್ನು ದೂರಲಾಗದು. ೨೦೧೮ರ ಕೊಡಗಿನ ದುರಂತ, ಉತ್ತರ ಕನ್ನಡದ ಇತ್ತೀಚಿನ ದುರಂತ, ಕರಾವಳಿ ಮತ್ತು ಒಳನಾಡನ್ನು
ಬೆಸೆಯುವ ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಪದೇಪದೆ ಸಂಭವಿಸುವ ಭೂಕುಸಿತ ಇವು ಕೇವಲ ಕೇರಳ, ಕರ್ನಾಟಕದ ಭವಿಷ್ಯದ ಪ್ರಶ್ನೆ ಮಾತ್ರವಾಗಿರದೆ ಇಡೀ ದೇಶದ ಮುಂದಿರುವ ಗುರುತರ ಸವಾಲು ಮತ್ತು ರಾಷ್ಟ್ರೀಯ ದುರಂತವಾಗಿ ಹೊರಹೊಮ್ಮಿವೆ.

ಈ ಸಮಸ್ಯೆಗಳ ನಡುವೆ ಅವೈಜ್ಞಾನಿಕವಾಗಿ, ಗೊತ್ತುಗುರಿಯಿಲ್ಲದೆ ಯೋಜಿಸಿರುವ ಎತ್ತಿನಹೊಳೆ ಯೋಜನೆಯು ಭಯಾನಕ ತೊಂದರೆಗಳಿಗೆ ಆಹ್ವಾನ ನೀಡುವಂಥದ್ದಾಗಿದೆ ಎಂದರೆ ತಪ್ಪಾಗಲಾರದು. ಪ್ರಕೃತಿಯ ಜತೆಗೆ ಹೆಜ್ಜೆಹಾಕುವ ಮನೋಭಾವವನ್ನು ಸಮಾಜ ಮತ್ತು ಆಡಳಿತ ವ್ಯವಸ್ಥೆಗಳು ಮೈಗೂಡಿಸಿಕೊಳ್ಳಬೇಕು. ಪಶ್ಚಿಮಘಟ್ಟ ಪ್ರದೇಶವು ಜೀವಸಿರಿಯ ವೈವಿಧ್ಯದ
ತಾಣವೂ ಹೌದು, ನಿಸರ್ಗವಿಕೋಪಗಳ ಉಗ್ರನೆಲೆಯೂ ಹೌದು. ಅರಣ್ಯ ಮತ್ತು ಕಣಿವೆಗಳ ನಾಶದಿಂದಾಗಿ ಇದು ಭೂಕುಸಿತಕ್ಕೆ ಹೆಚ್ಚು ಪ್ರಶಸ್ತ ತಾಣವಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಹಿಮಾಲಯದ ಬಳಿಕ ಪಶ್ಚಿಮ ಘಟ್ಟದಲ್ಲಿ ಹೆಚ್ಚು ಭೂಕುಸಿತಗಳು ಸಂಭವಿಸುತ್ತಿವೆ. ಇಲ್ಲಿ ನಡೆಯುತ್ತಿರುವ ಮಾನವನ ಅತಿಯಾದ ಹಸ್ತಕ್ಷೇಪವು ದುರಂತಕ್ಕೆ ದೊಡ್ಡ ಕಾರಣವಾಗಿದೆ. ಭೂಕುಸಿತದಿಂದ ಅಪಾರ ಪ್ರಮಾಣದ ಜೀವಹಾನಿ ಮತ್ತು ಸ್ವತ್ತುನಷ್ಟವಾಗುತ್ತದೆ, ರಸ್ತೆ ಸಂಪರ್ಕ, ಸಂವಹನ ವ್ಯವಸ್ಥೆ ಸ್ಥಗಿತಗೊಳ್ಳುತ್ತವೆ.

ಜಲಮೂಲಗಳ ಮೇಲೂ ಅದರ ಪರಿಣಾಮವಾಗುತ್ತದೆ. ಪಶ್ಚಿಮ ಘಟ್ಟಗಳು ನಾಶವಾದರೆ ಕರಾವಳಿ ಪ್ರದೇಶ ಮಾತ್ರವಲ್ಲ, ಇಡೀ ದಕ್ಷಿಣ ಭಾರತವೇ ಸಂಕಷ್ಟಕ್ಕೆ ಸಿಲುಕಲಿದೆ. ಜಗತ್ತಿನ ಜೀವವೈವಿಧ್ಯ ವ್ಯವಸ್ಥೆಯ ಅಸಮತೋಲನಕ್ಕೆ ಅದು ಕಾರಣವಾಗಲಿದೆ. ಆದ್ದರಿಂದ ನಿಸರ್ಗದ ವಿರುದ್ಧ ಹೋಗಲು ನ್ಯಾಯಾಲಯವೂ ಒಪ್ಪಬಾರದು. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಸಹ್ಯಾದ್ರಿಯ ಪಾಲುದಾರರಾದ ಕೇರಳ, ಕರ್ನಾಟಕ ಮತ್ತು ಗೋವಾ ರಾಜ್ಯಗಳು ಎಷ್ಟು ಅಭಿವೃದ್ಧಿ ಮಾಡಬೇಕು, ಎಂಥ
ಜಲಾಶಯಗಳನ್ನು ಕಟ್ಟಬೇಕು ಈ ಯಾವುದನ್ನೂ ಹೊಂದಾಣಿಕೆಯಿಂದ ಮಾಡುತ್ತಿಲ್ಲ. ಆಡಳಿತಾತ್ಮಕವಾಗಿ ಪ್ರತ್ಯೇಕ ರಾಜ್ಯಗಳಾದರೂ ಒಂದೇ ಮಣ್ಣಿನ ಬಂಧವನ್ನು ಹಂಚಿಕೊಂಡಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ.

ಈ ಪ್ರವೃತ್ತಿಗೆ ದುಬಾರಿ ಬೆಲೆ ತೆರುವಂತಾಗಿದೆ ಎಂಬುದನ್ನು ವಯನಾಡು ದುರಂತ ತೋರಿಸಿಕೊಟ್ಟಿದೆ. ಸದ್ಯಕ್ಕೆ ನಮ್ಮ ಭೂಮಿಯ ಮೇಲೆ ಸುಮಾರು ೮೦೦ ಕೋಟಿ ಜನರಿದ್ದಾರೆ. ೨೦೫೦ರ ವೇಳೆಗೆ ಈ ಸಂಖ್ಯೆ ೧,೦೦೦ ಕೋಟಿಯ ಸುಮಾರಿಗೆ ತಲುಪಲಿದೆ. ಈ ಎಲ್ಲಾ ಜನರು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವುದರಿಂದ ಬಹುಬೇಗ ಅವುಗಳ ಕೊರತೆ ಉಂಟಾಗಲಿದೆ. ಪ್ರತಿ ವರ್ಷ ಸುಮಾರು ೧ ಕೋಟಿ ಹೆಕ್ಟೇರ್ ಅರಣ್ಯ ನಾಶವಾಗುತ್ತಿದೆ. ಮಾನವನ ಚಟುವಟಿಕೆಗಳೇ ಇದಕ್ಕೆ ಪ್ರಮುಖ ಕಾರಣ. ಜಗತ್ತಿನ ೧೫೦ ಕೋಟಿಗೂ ಹೆಚ್ಚು ಜನರು ಆಹಾರ, ವಸತಿ, ಉದ್ಯೋಗ, ಔಷಧಿ, ಜೀವನೋಪಾಯಕ್ಕೆ ಅರಣ್ಯಗಳನ್ನೇ ಅವಲಂಬಿಸಿದ್ದಾರೆ.

೯೭೦ರಿಂದೀಚೆಗೆ ನಾವು ಭೂಮಿಯ ಮೇಲೆ ಹಾಕುತ್ತಿರುವ ಒತ್ತಡವು ಎರಡು ಪಟ್ಟು ಹೆಚ್ಚಾಗಿದೆ. ನಾವು ಅವಲಂಬಿಸಿರುವ ಸಂಪನ್ಮೂಲಗಳ ಪ್ರಮಾಣ ಶೇ.೩೩ಕ್ಕೆ ಇಳಿದಿದೆ. ಹೀಗೆಯೇ
ಮುಂದುವರಿದರೆ ನಮ್ಮ ನಾಶಕ್ಕೆ ನಾವೇ ನಾಂದಿ ಹಾಡಿದಂತಾಗುತ್ತದೆ. ‘ಪ್ರಕೃತಿಯೇ ಮಹಾಮಾತೆ. ಪ್ರಕೃತಿಯು ಪ್ರತಿಯೊಬ್ಬರ ಅವಶ್ಯಕತೆಗಳನ್ನೂ ಪೂರೈಸಬಲ್ಲದು, ಆದರೆ ಒಬ್ಬ ವ್ಯಕ್ತಿಯ
ದುರಾಸೆಯನ್ನಲ್ಲ’ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದರು. ಪ್ರಕೃತಿಯು ಮನುಕುಲದ ಬದುಕಿಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಕೊಡುಗೈ ದಾನಿಯಂತೆ ನೀಡುತ್ತಲೇ
ಬಂದಿದೆ. ನಾವು ‘ಬದುಕು’ ಎಂದು ತಿಳಿದುಕೊಂಡ ವೃತ್ತದಅರ್ಧಭಾಗವು ನಿಜಜೀವನವಾದರೆ, ಇನ್ನರ್ಧ ಭಾಗವು ಬದುಕಿನ ಆಚೆಗೆ ದೇಹಕ್ಕೆ ಅತೀತವಾದ ಪ್ರಕೃತಿ ಎಂದರೆ ತಪ್ಪಿಲ್ಲ. ಪ್ರಕೃತಿ ಮತ್ತು ಪರಿಸರ ರಕ್ಷಣೆ ನಮ್ಮ ಮತ್ತು ನಮ್ಮ ಮುಂದಿನ ಜನಾಂಗಕ್ಕೆ ರಕ್ಷಣೆ. ಇದನ್ನರಿತು ಬಾಳಬೇಕಾಗಿದೆ.

(ಲೇಖಕರು ವಿಜಯ ಬ್ಯಾಂಕ್‌ನ ನಿವೃತ್ತ ಮುಖ್ಯ
ಪ್ರಬಂಧಕರು)