ಅಭಿಮತ
ಉತ್ಕರ್ಷ ಕೆ.ಎಸ್
ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣವು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಿಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್, ಸಿದ್ದರಾಮಯ್ಯರ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆಗೆ ಮುಂದಾಗಿವೆ.
ಆಡಳಿತಾರೂಢ ಸರಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಮಾಡುವ ಇಂಥ ಪಾದಯಾತ್ರೆಗಳು ಸಹಜವಾಗಿಯೇ ಆಳುಗರಿಗೆ ತಲೆನೋವು ತರಿಸುತ್ತವೆ. ನಮ್ಮ ನೆಲ, ಜಲ, ಭಾಷೆ ಹೀಗೆ ಅನೇಕ ವಿಚಾರಗಳಿಗಾಗಿ ಕರ್ನಾಟಕದಲ್ಲಿ ಪಾದಯಾತ್ರೆಗಳು ನಡೆದಿವೆ, ಆ ಪೈಕಿ ಕೆಲವು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಅಂಥ ಕೆಲವದರ ಪಕ್ಷಿನೋಟ ಇಲ್ಲಿದೆ. ಮಲಪ್ರಭಾ ನೀರಾವರಿ ಪ್ರದೇಶದ ರೈತರು ಸಮನ್ವಯ ಸಮಿತಿಯೊಂದನ್ನು ರಚಿಸಿಕೊಂಡು, ನೀರಾವರಿ ಕಾಲುವೆಗಳ ದುರಸ್ತಿ, ಬೆಳೆವಿಮೆ ಜಾರಿ, ರಸಗೊಬ್ಬರ-ಕ್ರಿಮಿನಾಶಕಗಳಿಗೆ ರಿಯಾಯಿತಿ/ಸಬ್ಸಿಡಿ ನೀಡಿಕೆ, ಅಭಿವೃದ್ಧಿಕರ ರದ್ದತಿ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ೧೯೮೦ರಲ್ಲಿ ನರಗುಂದದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದರು.
೧೯೮೧ರ ದಶಕದಲ್ಲಿ, ಜೀತವಿಮುಕ್ತಿಗೆಂದು ಮತ್ತು ಹರಿಜನ-ಗಿರಿಜನರಿಗೆ ಭೂಮಿ ನೀಡಬೇಕೆಂದು ಆಗ್ರಹಿಸಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್ .ಯಡಿಯೂರಪ್ಪನವರು ಪಾದಯಾತ್ರೆ ನಡೆಸಿದರು ಮತ್ತು ೧,೭೦೦ ಮಂದಿಯನ್ನು ಜೀತಪದ್ಧತಿಯಿಂದ ವಿಮುಕ್ತಿಗೊಳಿಸುವಲ್ಲಿ ಸಫಲರಾದರು. ಎಸ್.ಎಂ. ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವರ ನೇತೃತ್ವದಲ್ಲಿ ೧೯೯೯ರಲ್ಲಿ ರಾಜ್ಯಾದ್ಯಂತ ‘ಪಾಂಚಜನ್ಯ ಯಾತ್ರೆ’ಯನ್ನು ನಡೆಸಲಾಗಿತ್ತು. ಇದರ ಫಲವಾಗಿಯೇ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರದ ಗದ್ದುಗೆಯನ್ನು ಏರಿತ್ತು.
ಅದು ೧೯೯೯ರ ಲೋಕಸಭಾ ಚುನಾವಣೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಕ್ಷೇತ್ರದಲ್ಲಿ ಸೋತು ಮನೆ ಸೇರಿದ್ದರು. ಅವರ ರಾಜಕೀಯ ಜೀವನ ಇನ್ನು ಮುಗಿದೇಹೋಯಿತು ಎಂಬ ಮಾತುಗಳು ರಾಜಕಾರಣದ ಪಡಸಾಲೆಗಳಲ್ಲಿ ಕೇಳಿಬಂದಿದ್ದವು. ಆದರೆ ೨೦೦೨ರಲ್ಲಿ ಅಂದಿನ ಕನಕಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಚಂದ್ರಶೇಖರ ಮೂರ್ತಿಯವರು ಮೃತ ಪಟ್ಟಿದ್ದರಿಂದ ಉಪಚುನಾವಣೆ ಆಯೋಜನೆಗೊಂಡಿತ್ತು ಮತ್ತು ಅದರ ಆಸುಪಾಸಿನಲ್ಲೇ ಚನ್ನಪಟ್ಟಣದಲ್ಲಿ ‘ನೀರಾ ಹೋರಾಟ’ ಸಂಬಂಧಿತ ಪಾದಯಾತ್ರೆ ನಡೆದಿತ್ತು. ಹೋರಾಟ ತೀವ್ರಗೊಂಡು ಇಬ್ಬರು ರೈತರು ಗೋಲಿಬಾರ್ನಲ್ಲಿ ಅಸುನೀಗಿದರು.
೨೦೧೦ರ ಜುಲೈನಲ್ಲಿ ವಿಧಾನಸಭೆಯ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ನ ದಿನೇಶ್ ಗುಂಡೂರಾವ್ ಅವರು ರೆಡ್ಡಿ ಸಹೋದರರ ವಿರುದ್ಧ ಸದನದಲ್ಲಿ ಅಕ್ರಮ ಗಣಿಗಾರಿಕೆಯ ಆರೋಪ ಮಾಡಿದ್ದರು. ಇದರಿಂದ ಸದನದಲ್ಲಿ ಮಾತಿನ ಚಕಮಕಿ ಶುರುವಾಗಿ, ಅಂದಿನ ಬಿಜೆಪಿ ಶಾಸಕ ಟಿ.ಎಸ್. ಸುರೇಶ್ ಬಾಬು ಅವರು ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದರು, ‘ಬಳ್ಳಾರಿಗೆ ಬನ್ನಿ, ನೋಡಿಕೊಳ್ಳುತ್ತೇವೆ’ ಎಂದು ಸವಾಲು ಹಾಕಿದರು. ಇದರಿಂದ ಕಲಾಪ ಮತ್ತಷ್ಟು ಗದ್ದಲಮಯವಾಯಿತು. ಬಳ್ಳಾರಿ ಶಾಸಕರು ತೋಳೇರಿಸಿಕೊಂಡು
ವಿಪಕ್ಷ ನಾಯಕರ ಬಳಿಗೆ ಧಾವಿಸಿದರು, ಅವರಲ್ಲಿ ಮೂವರು ರೆಡ್ಡಿ ಸೋದರರೂ ಇದ್ದರು. ಆಗ ಸಿಟ್ಟಿಗೆದ್ದ ಸಿದ್ದರಾಮಯ್ಯನವರು ತೋಳು ತಟ್ಟಿ, ‘ಬಳ್ಳಾರಿಗೆ ಬರ್ತೇವೆ, ರೆಡ್ಡಿ ಮನೆ ಮುಂದೆಯೇ ಮೆರವಣಿಗೆ ಮಾಡ್ತೇವೆ’ ಎಂದು ಅಬ್ಬರಿಸಿ ಸವಾಲೆಸೆದರು. ಅಂತೆಯೇ ಸಿದ್ದರಾಮಯ್ಯರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ನಂತರ ನಡೆದಿದ್ದೆಲ್ಲ ಇತಿಹಾಸ.
ಮೇಕೆದಾಟು ಯೋಜನೆಗೆ ಸಂಬಂಽಸಿದಂತೆ ೨೦೨೨ರಲ್ಲಿ ಕಾಂಗ್ರೆಸ್ನ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕನಕಪುರದ ಸಂಗಮ ಕ್ಷೇತ್ರದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಯಿತು. ಇದರಿಂದ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ನ ವರ್ಚಸ್ಸು ಹೆಚ್ಚಿತು. ಹೀಗೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪಾದಯಾತ್ರೆಯು ತನ್ನದೇ ಆದಂಥ ಮಹತ್ವವನ್ನು ಪಡೆದುಕೊಂಡಿದೆ. ನಾಯಕರೆನಿಸಿಕೊಂಡವರು ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ಶಕ್ತಿಯನ್ನು ವೃದ್ಧಿಸಿಕೊಳ್ಳುವುದಕ್ಕೆ ಪಾದಯಾತ್ರೆಯೂ ಪ್ರಮುಖ ಅಸವಾಗಿದೆ. ಆದರೆ ಯಾರೇ ಪಾದಯಾತ್ರೆ ಮಾಡಿದರೂ ಸರಿ, ಅದು ತಾರ್ಕಿಕ ಅಂತ್ಯವನ್ನು ಕಾಣುವಂತಾಗಬೇಕು.
(ಲೇಖಕರು ಹವ್ಯಾಸಿ ಬರಹಗಾರರು)