ಗಂಟಾಘೋಷ
ಗುರುರಾಜ್ ಗಂಟಿಹೊಳೆ
ವಿಶ್ವಪ್ರಸಿದ್ಧ ಲೇಖಕ ಮಾರ್ಕ್ ಟ್ವೇನ್ ಅವರು ಭಾರತವನ್ನು ಕುರಿತಂತೆ, ‘India is the cradle of human race, birthplace of human speech, mother of history, the grandmother of legend & great grandmother of tradition. Our most valuable & most instructive materials in the history of man are treasured up in India only’ ಎಂದಿದ್ದಾರೆ.
ಮತ್ತೊಂದೆಡೆ, ‘ವಾರಾಣಸಿಯು ಇತಿಹಾಸಕ್ಕಿಂತಲೂ ಪುರಾತನವಾದುದು. ಮಾನವನ ಸಂಪ್ರದಾಯ- ಆಚರಣೆಗಳಿಂದಲೂ ಹಳೆಯದಾದುದು. ವಿಶ್ವದ ಅತ್ಯಂತ ಪುರಾತನ ಐತಿಹಾಸಿಕ ಸ್ಥಳಗಳಿಗಿಂತಲೂ ಎರಡುಪಟ್ಟು ಹಿನ್ನೆಲೆ ಹೊಂದಿರುವಂಥದು’ ಎಂದಿದ್ದಾರೆ. ‘ಕಾಶ್ಯಂ ಮರಣಂ ಮುಕ್ತಿ’ ಎಂಬಂತೆ ಕಾಶಿಯಲ್ಲಿ ಮರಣ ಹೊಂದಿದವರಿಗೆ ಮುಕ್ತಿ ದೊರೆಯುತ್ತದೆ ಎಂಬುದು ಹಿಂದೂಗಳಲ್ಲಿನ ನಂಬಿಕೆ. ಭಾರತೀಯರ ಆಧಾತ್ಮಿಕ ಆತ್ಮದ ಸಂಕೇತವೂ ಕಾಶಿ ಎಂಬ ಮಾತಿದೆ. ೨೦೨೦ರ ಮೊದಲು ಕಾಶಿ ವಿಶ್ವನಾಥನ ಮಂದಿರ ನೋಡಲು ಹೋದವರು ಅಲ್ಲಿನ ಕಿರಿದಾದ, ಇಕ್ಕಟ್ಟಿನ ಕಾಲುದಾರಿಗಳನ್ನು ಕಂಡು ‘ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರ ಹೀಗಿದೆಯಲ್ಲ’ ಎಂದುಕೊಳ್ಳುತ್ತಿದ್ದುದಂತೂ ಸುಳ್ಳಲ್ಲ. ಆದರೀಗ ಕಾಶಿಯ ಚಿತ್ರಣವೇ ಬದಲಾಗಿದೆ.
ಈ ಮೂಲಕ, ಇಂದು ಕಾಶಿಯು ಜಗತ್ಪ್ರಸಿದ್ಧ ಧಾರ್ಮಿಕ ಮತ್ತು ಆಧ್ಯಾತ್ಮಿಕ ಯಾತ್ರಾಸ್ಥಳಗಳಲ್ಲಿ ಪ್ರಮುಖವೆನಿಸಿದೆ. ನೂರಾರು ಕುಟುಂಬಗಳು ಇಲ್ಲಿನ ಉಪ ಆದಾಯದ ಬೆಂಬಲ ಪಡೆದಿವೆ.
ಜತೆಗೆ, ಶತಮಾನಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ವಾರಾಣಸಿಯನ್ನು ಮೋದಿ ಸರಕಾರವು ಕಾರಿಡಾರ್ ಮೂಲಕ ಪುನರುತ್ಥಾನ ಮಾಡಿತೆನ್ನಬಹುದು. ಮೋದಿಯವರಿಗೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಆರ್ಥಿಕ ಸುಧಾರಣೆ ಖಂಡಿತ ಸಾಧ್ಯ ಎಂಬ ಸ್ಪಷ್ಟ ಅರಿವಿದೆ. ಕೇದಾರನಾಥ ಕಾರಿಡಾರ್ ಯೋಜನೆಯಿರಬಹುದು, ಚಾರ್ ಧಾಮ್ ಕಾರಿಡಾರ್, ಕಾಶ್ಮೀರದ ಪುರಾತನ ದೇಗುಲಗಳ ಪುನಃಸ್ಥಾಪನಾ ಕಾರಿಡಾರ್, ವೈಷ್ಣೋದೇವಿ ಕಾರಿಡಾರ್, ಅಮರನಾಥ ಯಾತ್ರಾ ಕಾರಿಡಾರ್, ಅಯೋಧ್ಯೆ ಪುನಃಸ್ಥಾಪನಾ ಕಾರಿಡಾರ್ ಯೋಜನೆಗಳಿರಬಹುದು ಮತ್ತು ಕಾಶಿ ಸೇರಿದಂತೆ ಇತ್ತೀಚೆಗಿನ ಉಜ್ಜೈನ್ ಮಹಾಕಾಲ ಕಾರಿಡಾರ್ ಯೋಜನೆಗಳಿರಬಹುದು ಇವೆಲ್ಲವೂ ಧಾರ್ಮಿಕ ಪ್ರವಾಸಿ ಯೋಜನೆಗಳ ಮೂಲಕ ಆರ್ಥಿಕತೆಗೆ ಬಲತುಂಬುವ ಮೋದಿಯವರ ದೂರದೃಷ್ಟಿಯ ಪರಿಕಲ್ಪನೆಗಳೇ ಆಗಿವೆ.
ಪುರಾತನ ಮಹತ್ವ ಮತ್ತು ಐತಿಹ್ಯವಿರುವ ಸ್ಥಳದಲ್ಲಿ ಸಕಲ ವ್ಯವಸ್ಥೆಗಳ ಮೂಲಕ ಕಾರಿಡಾರ್ ಯೋಜನೆಯನ್ನು ಹಮ್ಮಿಕೊಂಡರೆ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ, ಸ್ಥಳೀಯ ಉತ್ಪನ್ನಗಳು ಮಾರಾಟವಾಗುತ್ತವೆ. ಸ್ಥಳೀಯ ಕರಕುಶಲ ಉತ್ಪನ್ನ ಮತ್ತು ಪರಿಕರಗಳಿಗೆ ಬೇಡಿಕೆಯ ಜತೆಗೆ ಅವುಗಳ ಮಾರುಕಟ್ಟೆ ಮತ್ತು ಪ್ರಚಾರವ್ಯಾಪ್ತಿಯೂ ಹೆಚ್ಚುತ್ತದೆ. ಮೇಲಾಗಿ ಇಂಥ ಯೋಜನೆಗಳಿಂದ ರಾಜ್ಯ ಮತ್ತು ದೇಶದ ಬೊಕ್ಕಸಕ್ಕೆ ನಿವ್ವಳ ಆದಾಯವು ಹರಿದುಬರುವ ಸಾಧ್ಯತೆ ಹೆಚ್ಚಿರುತ್ತದೆ. ಮೇಲೆ ಹೇಳಿದಂತೆ, ೨೦೧೯ರ ಮಾರ್ಚ್ನಲ್ಲಿ ಯೋಜನೆಯನ್ನು ಘೋಷಿಸಿ ಜಾರಿಗೊಳಿಸಿದ್ದಲ್ಲದೆ ಮತ್ತೆ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ಮೋದಿಯವರೇ ೨೦೨೧ರ ಡಿಸೆಂಬರ್ ೧೩ರಂದು ಉದ್ಘಾಟಿಸಿದರು.
ಅವರ ಕನಸಿನ ‘ಕಾಶಿ ಕಾರಿಡಾರ್’ ಯೋಜನೆಯನ್ನು ೫,೦೦೦ ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ೮೦೦ ಕೋಟಿ ರು. ವೆಚ್ಚದ ಈ ಯೋಜನೆಯು ಪುರಾತನ ದೇವಾಲಯವನ್ನು
ಗಂಗಾನದಿಯ ದಡಕ್ಕೆ ಸಂಪರ್ಕಿಸುತ್ತದೆ. ಈ ಯೋಜನೆಯು ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾನದಿಯ ಉದ್ದಕ್ಕೂ ಇರುವ ಘಾಟ್ ಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಯ
ಮೊದಲ ಹಂತವನ್ನು ೩೩೯ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತವು ಸುಮಾರು ೫ ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು ೨೩ ಕಟ್ಟಡಗಳನ್ನು ಒಳಗೊಂಡಿದೆ. ಈ ಯೋಜನೆಯ ಅನುಷ್ಠಾನದ ಸಂದರ್ಭದಲ್ಲೇ, ಮುಚ್ಚಿಹೋಗಿದ್ದ ಸುಮಾರು ೪೦ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳನ್ನು ಮರುಶೋಽಸಿ ಪುನಃಸ್ಥಾಪಿಸಲಾಗಿದೆ.
ಇದು ಹೀಗಿದ್ದರೆ, ಮಧ್ಯಪ್ರದೇಶದ ಅತ್ಯಂತ ಪುರಾತನ ನಗರವಾದ ಆವಂತಿಪುರ, ಅಂದರೆ ಇಂದಿನ ಉಜ್ಜಯಿನಿಯು ಮಹಾಕಾಲ ನೆಲೆಸಿರುವ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರವಾಗಿದ್ದು, ಇಲ್ಲಿ
ಕೈಗೊಂಡ ಕಾರಿಡಾರ್ ಯೋಜನೆಯನ್ನು ‘ಮಹಾಕಾಲ ಕಾರಿಡಾರ್’ ಎಂದೇ ಕರೆಯಲಾಗಿದೆ. ಸುಮಾರು ೮೫೦ ಕೋಟಿ ರು.ಗಳ ಈ ಯೋಜನೆಯು ಉಜ್ಜಯಿನಿ ನಗರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಮಾಡುವಲ್ಲಿ ಸಫಲವಾಗಿದೆ ಎನ್ನಬಹುದು. ಬಹುನಿರೀಕ್ಷಿತ ‘ಪುರಿ ಹೆರಿಟೇಜ್ ಕಾರಿಡಾರ್’ (ಶ್ರೀಮಂದಿರ ಪರಿಕ್ರಮ) ಯೋಜನೆಯನ್ನು ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳವಾಗಿ ಪರಿವರ್ತಿಸುವ ಉದ್ದೇಶದಿಂದ ೨೦೧೯ರ ಡಿಸೆಂಬರ್ನಲ್ಲಿ ಅನಾವರಣ ಗೊಳಿಸಲಾಯಿತು. ಸುಮಾರು ೮೦೦ ಕೋಟಿ ರು.ಗಳ ಈ ಯೋಜನೆಯು ಮೇಘನಾದ ಪಚೇರಿ (೧೨ನೇ
ಶತಮಾನದ ದೇವಾಲಯದ ಹೊರಗೋಡೆ) ಸುತ್ತಲೂ ಅಡೆತಡೆಯಿಲ್ಲದ ೭೫ ಮೀಟರ್ ಕಾರಿಡಾರ್ ನಿರ್ಮಾಣವನ್ನು ಹೊಂದಿದೆ.
ವಾರಾಣಸಿಯ ವಿಶ್ವನಾಥ ದೇವಸ್ಥಾನದ ಕಾರಿಡಾರ್ ಮಾದರಿಯಲ್ಲಿ ಗುವಾಹಟಿಯ ನೀಲಾಚಲ್ ಬೆಟ್ಟದ ಮೇಲಿರುವ ಕಾಮಾಖ್ಯ ದೇವಸ್ಥಾನದಲ್ಲಿ ಕಾರಿಡಾರ್ ನಿರ್ಮಿಸಲು ಅಸ್ಸಾಂ ಸರಕಾರ ಯೋಜಿಸುತ್ತಿದೆ. ದೇವಾಲಯದ ಸುತ್ತಲಿನ ಸಂಚಿತ ಬಯಲು ಪ್ರದೇಶವು ಪ್ರಸ್ತುತ ೩,೦೦೦ ಚದರ ಅಡಿಗಳಿಂದ ೧,೦೦,೦೦೦ ಚದರ ಅಡಿಗಳಿಗೆ ಹೆಚ್ಚಾಗುತ್ತದೆ. ಇದರಿಂದ ಪ್ರತಿವರ್ಷ ಜೂನ್ನಲ್ಲಿ ನಡೆಯುವ ಅಂಬುಬಾಚಿ ಮೇಳದಲ್ಲಿ ಭಾಗವಹಿಸಲು ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಇದಲ್ಲದೆ, ಬೆಂಗಳೂರಿನ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ದಕ್ಷಿಣ ವಲಯ ದಲ್ಲಿ ಲಾಲ್ಬಾಗ್ ಗಡಿ ಗೋಪುರದಿಂದ ಕೆಂಪಾಂಬುಧಿ ಕೆರೆಯವರೆಗಿನ ೧೨ ಕಿ.ಮೀ. ಉದ್ದ ದಷ್ಟು ಪ್ರದೇಶದಲ್ಲಿ ‘ನಾಡಪ್ರಭು ಕೆಂಪೇಗೌಡ ಹೆರಿಟೇಜ್ ಕಾರಿಡಾರ್’ ನಿರ್ಮಾಣವನ್ನು ಘೋಷಿಸಿದೆ.
ಕಾಶಿ ವಿಶ್ವನಾಥನ ಮಂದಿರದಂತೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ ಒಂದು ಶಕ್ತಿಪೀಠವಿದೆ. ಪುರಾತನ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಪ್ರಮುಖವಾದ, ಕರ್ನಾಟಕ ಮತ್ತು ಕೇರಳ
ರಾಜ್ಯಗಳಲ್ಲಿನ ಜನರ ಶ್ರದ್ಧಾಭಕ್ತಿಯ ಕೇಂದ್ರಗಳಲ್ಲಿ ಒಂದೆನಿಸಿದ, ಕೊಡಚಾದ್ರಿ ಬೆಟ್ಟದ ಸಾಲಿನ ಸೌಪರ್ಣಿಕಾ ನದಿಹರಿವಿನಲ್ಲಿ ಮಂಗಳೂರಿನಿಂದ ೧೪೭ ಕಿ.ಮೀ.ನಷ್ಟು ಅಂತರದಲ್ಲಿ ನೆಲೆಗೊಂಡಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ತಾಯಿಯ ಕ್ಷೇತ್ರವು ಪ್ರತಿವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಜಗದ್ಗುರು ಆದಿಶಂಕರಾಚಾರ್ಯರು ಸುಮಾರು ೧೨೦೦ ವರ್ಷಗಳಷ್ಟು ಹಿಂದೆಯೇ ಇಲ್ಲಿನ ದೇವಸ್ಥಾನದಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು, ಮೂಕಾಂಬಿಕಾ ದೇವಿಯು ಶಕ್ತಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಒಂದು ಅವತಾರ ಎಂಬುದಾಗಿ ಪರಿಗಣಿಸಲ್ಪಟ್ಟಿರುವುದರಿಂದ, ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದಲ್ಲಿನ ‘ಸಪ್ತ ಮುಕ್ತಿಸ್ಥಳ’ (ಕೊಲ್ಲೂರು, ಉಡುಪಿ, ಸುಬ್ರಹ್ಮಣ್ಯ, ಕುಂಭಾಶಿ, ಕೋಟೇಶ್ವರ,
ಶಂಕರನಾರಾಯಣ ಮತ್ತು ಗೋಕರ್ಣ) ತೀರ್ಥ ಯಾತ್ರಾ ತಾಣಗಳ ಪೈಕಿ ಒಂದೆನಿಸಿದೆ. ಹಾಗಾಗಿ ಈ ಕ್ಷೇತ್ರವು ಉತ್ತರ ಭಾರತದ ಇತರೆ ಪವಿತ್ರ ಕ್ಷೇತ್ರಗಳಂತೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸಿ ಕೇಂದ್ರವಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯುವ ಎಲ್ಲ ಅರ್ಹತೆ, ಲಕ್ಷಣ ಮತ್ತು ಸೌಕರ್ಯಗಳನ್ನು ಹೊಂದಿದೆ.
ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸ್ಥಳೀಯ ಜನರು ಹಲವು ದಶಕಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಇನ್ನಾದರೂ ‘ಕೊಲ್ಲೂರು ಕಾರಿಡಾರ್ ಯೋಜನೆ’ಯನ್ನು ಘೋಷಿಸಿ, ದೇಶ-ವಿದೇಶದಲ್ಲಿ
ನೆಲೆಸಿರುವ ತಾಯಿಯ ಭಕ್ತರು ಉಳಿದುಕೊಂಡು ದರ್ಶಿಸಲು ಬೇಕಾದ ಮೂಲಸೌಕರ್ಯಗಳ ನಿರ್ಮಾಣ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಜಾಗೃತ ಸ್ಥಳವನ್ನು ಗುರುತಿಸಿ ಬೆಳೆಸುವ ಅಗತ್ಯವಿದೆ. ಕಾರಿಡಾರ್ ಯೋಜನೆಯಿಂದ ಏನು ಲಾಭ? ಮೂಕಾಂಬಿಕಾ ಶಕ್ತಿಪೀಠ ಹೇಗೆ ಅಭಿವೃದ್ಧಿ ಹೊಂದಲಿದೆ, ಯಾರಿಗೆ ಲಾಭವಾಗಲಿದೆ? ಎಂಬೆಲ್ಲ ಪ್ರಶ್ನೆಗಳು ಜನಸಾಮಾನ್ಯರ ಮುಂದಿವೆ. ವಾಸ್ತವ ದಲ್ಲಿ ಮೂಕಾಂಬಿಕಾ ಕಾರಿಡಾರ್ ಯೋಜನೆ ಕಾರ್ಯರೂಪಕ್ಕೆ ಬಂದರೆ ಹಲವು ಲಾಭಗಳಿವೆ. ಈ ಮೂಲಕ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸರೂಪ ಸಿಗಲಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲಿದೆ. ಈ ಮೂಲಕ ಸ್ಥಳೀಯ ಆರ್ಥಿಕತೆಯು ಸುಸ್ಥಿರತೆಯ ಹಳಿಗೆ ಬರಲಿದೆ. ಪ್ರವಾಸೋದ್ಯಮಕ್ಕೆ
ಹೊಂದಿಕೊಂಡಿರುವ ಎಲ್ಲ ಉದ್ಯಮಗಳೂ ಅಭಿ ವೃದ್ಧಿ ಕಾಣಲಿವೆ. ಯುವ ಪ್ರತಿಭೆಗಳ ಪ್ರತಿಭಾ ಪಲಾಯನ ತಪ್ಪಲಿದೆ.
ನಮ್ಮೂರಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರೈಸಿದವರಿಗೆ ನಮ್ಮೂರಿನಲ್ಲಿಯೇ ಗೌರವಯುತವಾದ ಉದ್ಯೋಗವೂ ದೊರೆಯಲಿದೆ. ಮೂಕಾಂಬಿಕಾ ಕಾರಿಡಾರ್ ಯೋಜನೆಯು ಕ್ಷೇತ್ರದ ಸಮೃದ್ಧಿಗೆ ಮೇಲ್ಪಂಕ್ತಿಯಾಗಿ ನಿಲ್ಲಲಿದೆ. ಈ ಮೂಲಕ ರಾಜ್ಯದ ಅಭಿವೃದ್ಧಿ, ಉನ್ನತಿಗೂ ಪ್ರೇರಣೆಯಾಗಿ ನಿಲ್ಲಬಲ್ಲ ಶಕ್ತಿಪೀಠ ಇದಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವಿಷಯಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮವೂ ಒಂದಾಗಿದೆ. ದೇವಸ್ಥಾನಕ್ಕೆ ಬಂದ ಭಕ್ತರು, ಆ ಪರಿಸರದ ಎಲ್ಲ ದೇವಸ್ಥಾನಗಳನ್ನು ಸುಲಭವಾಗಿ ಸಂದರ್ಶಿಸಲು ಅನುಕೂಲವಾಗುವಂತೆ ‘ಟೆಂಪಲ್ ಸರ್ಕ್ಯೂಟ್’ ರಚನೆ ಮಾಡುವುದಕ್ಕೆ ಇದು ಅನುಕೂಲಕರ. ಇದರಿಂದ ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನಕ್ಕೆ ಸುಲಭ ಪಯಣದ ಸಂಪರ್ಕ ಸಾಧ್ಯವಾಗುವುದು. ಇದಕ್ಕೆ ಬೈಂದೂರು ಕ್ಷೇತ್ರ ಬಹುಹಿತವಾಗಿದೆ. ಇದಕ್ಕೆ ಉಡುಪಿ ಜಿಲ್ಲೆಯೂ ಅಷ್ಟೇ ಪೂರಕವಾಗಿದೆ. ಕೊಲ್ಲೂರು ಕಾರಿಡಾರ್ ರಚನೆಯಾದ ನಂತರದಲ್ಲಿ ಕೊಲ್ಲೂರಿಗೆ ಬರುವ ಪ್ರತಿ ಭಕ್ತರು ಬೈಂದೂರು ಕ್ಷೇತ್ರದ ‘ಟೆಂಪಲ್ ಸರ್ಕ್ಯೂಟ್’ ಸುತ್ತುವಂತಾಗಲಿದೆ.
ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗ ಸ್ವಾಮಿ, ಕಮಲಶಿಲೆಯ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಿ, ಹಟ್ಟಿಯಂಗಡಿಯ ಶ್ರೀ
ಗಣಪತಿ, ಗುಡ್ಡಾಮಡಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಗುಜ್ಜಾಡಿಯಲ್ಲಿ ಗುಹೆಯೊಳಗೆ ಕುಳಿತಿರುವ ಶ್ರೀ ಗುಹೇಶ್ವರ, ಮರವಂತೆಯ ಶ್ರೀ ವರಾಹ ಸ್ವಾಮಿ, ಕಿರಿಮಂಜೇಶ್ವರದ ಶ್ರೀ ಅಗಸ್ತ್ಯ,
ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ಹಾಗೂ ಬೈಂದೂರಿನ ಶ್ರೀ ಸೇನೇಶ್ವರ ದೇವರ ದರ್ಶನ ಪಡೆಯಲು ಭಕ್ತರಿಗೆ ‘ಟೆಂಪಲ್ ಸರ್ಕ್ಯೂಟ್’ ಅನುಕೂಲವಾಗಲಿದೆ. ಮೂಕಾಂಬಿಕಾ ಕಾರಿಡಾರ್
ಆಯಿತೆಂದರೆ ಕ್ಷೇತ್ರದಲ್ಲಿರುವ ಎಲ್ಲ ದೇವಸ್ಥಾನಗಳೂ ಇನ್ನಷ್ಟು ಅಭಿವೃದ್ಧಿಯ ಜತೆಗೆ ಜನಮನ್ನಣೆ ಪಡೆಯಲಿವೆ, ಭಕ್ತರ ಸಂಖ್ಯೆ ಹೆಚ್ಚಾಗಲಿದೆ.
ದೇವಸ್ಥಾನದ ಆದಾಯವೂ ವೃದ್ಧಿಯಾಗಲಿದೆ, ಸ್ಥಳೀಯ ಆರ್ಥಿಕತೆಗೆ ಚೈತನ್ಯ ದೊರೆಯಲಿದೆ. ಪ್ರವಾಸೋದ್ಯಮದ ವಿಷಯವಾಗಿ ಕರಾವಳಿ ಜಿಲ್ಲೆಗಳು ತಮ್ಮದೇ ಆದ ಪ್ರಾಮುಖ್ಯವನ್ನು
ಪಡೆದಿವೆ. ಇಲ್ಲಿ ಸರ್ಕ್ಯೂಟ್ ಟೂರಿಸಂ ಮಾಡಬೇಕು ಎಂಬ ಯೋಜನೆಯು ಪ್ರವಾಸೋದ್ಯಮ ಇಲಾಖೆಯ ಕಡತದಲ್ಲೇ ಉಳಿದುಕೊಂಡಿದೆ. ದೇವಸ್ಥಾನಕ್ಕೆ ಬರುವ ಭಕ್ತರು ದೇವರ ದರ್ಶನ
ಮಾಡಿದ ನಂತರ, ಬೀಚ್ ಸಹಿತ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬೇಕು ಮತ್ತು ಬೀಚ್ ನೋಡಲು ಬರುವ ಭಕ್ತರು ಅಲ್ಲಿಂದ ದೇವಸ್ಥಾನಗಳನ್ನು ಸುತ್ತುವಂತಾಗಬೇಕು ಎನ್ನುವ
ದೃಷ್ಟಿಯೊಂದಿಗೆ ಸರ್ಕ್ಯೂಟ್ ಟೂರಿಸಂ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಆದರೆ ಸರಿಯಾದ ಕಾಯಕಲ್ಪ ಸಿಗದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಅದು ಬಾಕಿಯಾಗಿದೆ.
ಭಕ್ತರು ಕೊಲ್ಲೂರು ದೇವಿಯ ದರ್ಶನದ ನಂತರ ಮುರುಡೇಶ್ವರದಲ್ಲಿ ಈಶ್ವರನಿಗೆ ನಮಸ್ಕರಿಸಿ ಉಡುಪಿ ಕಡೆಗೆ ಬರುತ್ತಿದ್ದಂತೆ ಕುಂದಾಪುರ ದಾಟಿದ ತಕ್ಷಣವೇ ಕುಂಭಾಶಿಯಲ್ಲಿ ಶ್ರೀ ಸಿದ್ಧಿವಿನಾಯಕ, ಉಡುಪಿ ಯಲ್ಲಿ ಮಧ್ವಾಚಾರ್ಯರು ಸ್ಥಾಪಿಸಿರುವ ಶ್ರೀಕೃಷ್ಣ ಮಠ, ಉಚ್ಚಿಲದಲ್ಲಿನ ಶ್ರೀ ಮಹಾಲಕ್ಷ್ಮೀ, ಮಂಗಳೂರಿನಲ್ಲಿನ ಶ್ರೀ ಗೋಕರ್ಣನಾಥೇಶ್ವರ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಪೊಳಲಿಯ ಶ್ರೀ ರಾಜರಾಜೇಶ್ವರಿ, ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಸೌತಡ್ಕದ ಶ್ರೀ ಗಣಪತಿ, ಕುಕ್ಕೆಯಲ್ಲಿನ ಶ್ರೀ ಸುಬ್ರಹ್ಮಣ್ಯ ದೇವರಿಗೆ ನಮಸ್ಕರಿಸಿ ಅಲ್ಲಿಂದ
ಪ್ರಯಾಣವನ್ನು ಮುಂದುವರಿಸಬಹುದಾದ ಸುಲಭ ವ್ಯವಸ್ಥೆಯನ್ನು ಕರಾವಳಿಯಲ್ಲಿ ರೂಪಿಸಲು ಕೊಲ್ಲೂರು ಕಾರಿಡಾರ್ ಮುಂದೆ ಖಂಡಿತವಾಗಿಯೂ ಸರಕಾರಿ ವ್ಯವಸ್ಥೆಗೆ ಪ್ರೇರಣೆಯಾಗಲಿದೆ.
ಕರಾವಳಿಯಲ್ಲಿ ಭಕ್ತರಿಗೆ ಅಥವಾ ಪ್ರವಾಸಿಗರಿಗೆ ಗುಣಮಟ್ಟದ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗುತ್ತಿದೆ.
ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿಗಳು, ಖಾಸಗಿ ವಸತಿಗೃಹಗಳ ಆಡಳಿತ ಮಂಡಳಿಗಳು ಹಾಗೂ ಇಲ್ಲಿಯ ಸ್ಥಳೀಯ ಆಡಳಿತ ಸಂಸ್ಥೆಗಳು ಈಗಾಗಲೇ ಗುಣಮಟ್ಟದ ವ್ಯವಸ್ಥೆಯನ್ನು
ಒದಗಿಸುತ್ತಿದ್ದು, ಕೊಲ್ಲೂರು ಕಾರಿಡಾರ್ ನಿರ್ಮಾಣ ವಾದರೆ ಅವು ಇನ್ನಷ್ಟು ಮೇಲ್ದರ್ಜೆಗೆ ಏರಲಿವೆ. ೨೦೧೫ರಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಾರಂಭಿಸಿದ ರಾಷ್ಟ್ರೀಯ ಪರಂಪರೆ ನಗರ ಅಭಿವೃದ್ಧಿ ಮತ್ತು ವರ್ಧನೆ ಯೋಜ ನೆಯು ಈ ವಿಧಾನಕ್ಕೆ ಸಾಕ್ಷಿಯಾಗಿದೆ. ಗುರುತಿಸಲಾದ ಪಾರಂಪರಿಕ ತಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋರ್ ಹೆರಿಟೇಜ್ ಮೂಲಸೌಕರ್ಯವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುವ ಮೂಲಕ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
ಇದಲ್ಲದೆ, ಈ ಪ್ರಯತ್ನಗಳು ಪ್ರವಾಸೋದ್ಯಮದ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಸ್ಥಳೀಯರಿಗೆ ಆರ್ಥಿಕ ಅವಕಾಶಗಳನ್ನು ಉತ್ತೇಜಿಸುತ್ತವೆ ಮತ್ತು ನಗರದ ಆದಾಯಕ್ಕೆ ಕೊಡುಗೆ ನೀಡುತ್ತವೆ. ಹಳೆಯ ನಗರ ಪ್ರದೇಶಗಳಿಗೆ ಹೊಸ ಜೀವನ ಕಲ್ಪಿಸಿದಂತಾಗುತ್ತದೆ. ದೇವಾಲಯಗಳು ಮತ್ತು ಪರಂಪರೆಯ ಕಾರಿಡಾರ್ಗಳಂಥ ಉಪಕ್ರಮಗಳ ಮೂಲಕ ಭಾರ
ತೀಯ ನಗರಗಳ ಮರುವಿನ್ಯಾಸವು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಪ್ರವಾಸೋದ್ಯಮ ಬೆಳವಣಿಗೆ ಮತ್ತು ಆರ್ಥಿಕ ಅವಕಾಶಗಳಂಥ ಧನಾತ್ಮಕ ಫಲಿತಾಂಶಗಳನ್ನು ತಂದಿದೆ. ಈ ಯೋಜನೆಗಳು ಐತಿಹಾಸಿಕ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವುದರ ಜತೆಗೆ, ನಗರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತವೆ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು
ಹೊರಜಗತ್ತಿಗೆ ತೆರದಿಡುತ್ತವೆ ಎಂಬುದನ್ನು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳು ಗಮನಿಸಬೇಕಿರುವುದು ಪ್ರಸ್ತುತದ ಅಗತ್ಯಗಳಲ್ಲಿ ಒಂದಾಗಿದೆ.