Thursday, 28th November 2024

ಚಿನ್ನದ ಪದಕ ಗೆಲ್ಲದಿದ್ದರೂ ಚಿನ್ನದ ಹುಡುಕಿಯಾದಳು !

ಆಟ-ಪಾಠ

ಮರಿಲಿಂಗಗೌಡ ಮಾಲಿಪಾಟೀಲ್

ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತದ ಹೆಸರಿನ ಮುಂದೆ ಕೇವಲ ೩ ಕಂಚಿನ ಪದಕಗಳು ಎನ್ನುವ ನಿರಾಸೆಯ ಕಾರ್ಮೋಡದ ನಡುವೆ ವಿನೇಶ್ ಫೋಗಟ್ ಎಂಬ ಭರವಸೆಯ ಹೊಂಗಿರಣ ಕಾಣಿಸಿಕೊಂಡಿತ್ತು. ಆರಂಭಿಕ ಪಂದ್ಯದಲ್ಲಿ ಜಪಾನ್‌ನ ಯುಯಿ ಸುಸಾಕಿ ವಿರುದ್ಧ, ಕ್ವಾರ್ಟರ್ ಫೈನಲ್‌ನಲ್ಲಿ ಯುರೋಪಿಯನ್ ಮಾಜಿ ಚಾಂಪಿಯನ್ ಉಕ್ರೇನಿನಿನ ಓಕ್ಲಾನಾ ಅವರನ್ನು, ಸೆಮಿಫೈನಲ್‌ನಲ್ಲಿ ಕ್ಯೂಬಾದ ಯೂಸ್ಕೇಯಿಲ್ ಗುಜ್ಮನ್ ರನ್ನು ಸೋಲಿಸಿ ವಿನೇಶ್ ಫೋಗಟ್ ಫೈನಲ್‌ಗೆ ಹೆಜ್ಜೆ ಇರಿಸಿದ್ದರು.

ಚಿನ್ನದ ಪದಕ ಸಿಗುವ ಭರವಸೆ ಇತ್ತು. ಬೆಳ್ಳಿ ಖಚಿತವಿತ್ತು. ಆದರೆ… ಸೆಮಿ ಫೈನಲ್ ಸ್ಪರ್ಧೆಯನ್ನು ಮುಗಿಸಿದ ಆ ಸಂಜೆ ತನ್ನ ದೇಹತೂಕ ಹೆಚ್ಚಾಗಿರುವುದು ವಿನೇಶ್‌ಗೆ ತಿಳಿಯುತ್ತದೆ. ಅದನ್ನು ಇಳಿಸಲು ಇನ್ನಿಲ್ಲದ ಕಸರತ್ತು ನಡೆಯಿತು. ಇಡೀ ರಾತ್ರಿ ನಿದ್ರೆ ಮಾಡಲಿಲ್ಲ. ಸ್ಕಿಪ್ಪಿಂಗ್, ರನ್ನಿಂಗ್, ಸೈಕ್ಲಿಂಗ್ ಎಕ್ಸರ್‌ಸೈಸ್ ಮಾಡಿದರು, ಸ್ಟೀಮ್ ಬಾತ್ ಮೂಲಕ ಬೆವರು ಹರಿಸಿದರು, ಯಾವ
ಆಹಾರವನ್ನೂ ಸೇವಿಸಲಿಲ್ಲ, ಕೂದಲು ಕತ್ತರಿಸಿಕೊಂಡರು, ಕೊನೆಗೆ ದೇಹದಿಂದ ರಕ್ತವನ್ನೂ ತೆಗೆಯಲಾಯಿತು. ಏನೆಲ್ಲ ಮಾಡಿದರೂ ಬುಧವಾರ ತೂಕ ಪರೀಕ್ಷೆ ಮಾಡುವ ವೇಳೆಗೆ ೧೦೦ ಗ್ರಾಂ ಅಽಕ ತೂಕ ಉಳಿದೇ ಉಳಿಯಿತು. ಒಲಿಂಪಿಕ್ಸ್ ನಿಯಮದ ಪ್ರಕಾರ ಫೋಗಟ್ ಅನರ್ಹರಾಗುತ್ತಾರೆ. ಯಾರಿಗೆ ೨ನೇ ಸ್ಥಾನ ಆಗಲೇ ಒಲಿದಿತ್ತೋ, ಪ್ರಥಮ ಸ್ಥಾನದ ಸಾಧ್ಯತೆಗಳಿತ್ತೋ, ಅವರು ಅಂತಾರಾಷ್ಟ್ರೀಯ ಕುಸ್ತಿ ನಿಯಮಗಳ ಪ್ರಕಾರ ಅಂತಿಮ ಸ್ಥಾನಕ್ಕೆ ಕುಸಿಯುತ್ತಾರೆ.

ಕೋಟ್ಯಂತರ ಭಾರತೀಯ ಕ್ರೀಡಾಭಿಮಾನಿಗಳ ಹೃದಯ ಆಗಲೇ ಜರ್ಝರಿತವಾಗಿತ್ತು. ಇದನ್ನು ಆಕೆ ಹೇಗೆ ಸ್ವೀಕರಿಸಬೇಕು? ಅಮ್ಮ, ಕುಸ್ತಿ ಗೆದ್ದಿದ್ದೇ ನಾನು ಸೋತಿದ್ದೇನೆ. ನಿನ್ನ ಕನಸುಗಳು ಮತ್ತು ನನ್ನ ಧ್ಯೇಯ ನುಚ್ಚು ನೂರಾಗಿದೆ. ಇನ್ನೂ ನನ್ನ ಶಕ್ತಿ ಉಳಿದಿಲ್ಲ ಎನ್ನುವ ಭಾವುಕ ಪೋ ಹಾಕಿ ಕುಸ್ತಿಗೆ ಗುಡ್ಬೈ ಹೇಳಿದ್ದಾರೆ. ೧೪೦ ಕೋಟಿ ಜನಸಂಖ್ಯೆಯ ಭಾರತದಿಂದ ಪ್ಯಾರಿಸ್
ಒಲಿಂಪಿಕ್ಸ್‌ಗೆ ಹೋಗಿರುವ ಸ್ಪರ್ಧಾಳುಗಳ ಸಂಖ್ಯೆ ೧೧೭. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದೇ ಬದುಕಿನ ದೊಡ್ಡ ಸಾಧನೆ. ಫೈನಲ್‌ಗೆ ತಲುಪಿದ್ದು ಅಚ್ಚಳಿಯದ ಸಾಧನೆ. ಎಲ್ಲ ಸಾಧ್ಯತೆಗಳಿದ್ದೂ ಅನರ್ಹರಾದದ್ದು ದುರಂತವಷ್ಟೇ ಹೊರತು ಅದು ವಿನೇಶ್‌ರ ಸೋಲಲ್ಲ. ಹೀಗಾಗಿ ಚಿನ್ನ ಗೆಲ್ಲದಿದ್ದರೂ ಭಾರತದ ಚಿನ್ನದ ಹುಡುಗಿಯಾಗಿಯೇ ಉಳಿದವರು ಫೋಗಟ್.

ವಿನೇಶ್‌ಗೆ ಕಾಡಿದ್ದು ಅಪ್ಪಟ ದುರದೃಷ್ಟ ಅಷ್ಟೇ. ಆದರೆ ಇದರ ಹಿಂದೆ ಸಣ್ಣ ನಿರ್ಲಕ್ಷವಿತ್ತೇ ಹೊರತು ಯಾರದೋ ಕೈವಾಡವಿದೆ ಎನ್ನುತ್ತಾ ಪ್ರಕರಣವನ್ನು ರಾಜಕೀಯಗೊಳಿಸುವುದು ಎಷ್ಟು ಸರಿ? ಒಂದೇ ದಿನದಲ್ಲಿ ಸತತ ಮೂರು ಪಂದ್ಯಗಳನ್ನು ಆಡುವ ಅನಿವಾರ್ಯತೆಯಿಂದ ಬಳಲಿದ್ದ ವಿನೇಶ್ ಸೆಮಿಫೈನಲ್ ಗೆದ್ದ ಬಳಿಕ (ಮೈಮರೆತು?) ಸೇವಿಸಿದ ಆಹಾರವೇ ಅವರಿಗೆ ಮುಳುವಾಗಿರಬಹುದುದೇನೊ? ಇದಕ್ಕೆ ವಿನೇಶ್ ಫೋಗಟ್ ಮತ್ತು ಅವರ ಕೋಚ್ ಸೇರಿದಂತೆ ಸಹಾಯಕ ಸಿಬ್ಬಂದಿಗಳೂ ನೇರ ಹೊಣೆಗಾರರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆ
ಯುವ ಸ್ಪರ್ಧೆಗಳಿಗೆ ಕಠಿಣ ನಿಯಮಗಳಿರುತ್ತವೆ. ಇಂತಹ ನಿಯಮಗಳಿಂದ ಯಾರಿಗೂ ರಿಯಾಯಿತಿ ಇಲ್ಲ.

ಸ್ಪರ್ಧಿಸುವ ಪ್ರತಿಯೊಬ್ಬ ಕ್ರೀಡಾಳುಗಳಿಗೂ ಇದರ ಅರಿವಿರುತ್ತದೆ, ಇರಲೇಬೇಕು. ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ವಿನೇಶ್‌ಗೂ ಅವರ ಸಹಾಯಕ ಸಿಬ್ಬಂದಿಗೂ ಇದರ ಇರಿವಿಲ್ಲ ಎನ್ನುವ ಮಾತನ್ನು ಅರಗಿಸಿಕೊಳ್ಳುವುದು ಸಾಧ್ಯವಿಲ್ಲ. ಬದುಕಿನಲ್ಲಿ ಕೆಲವೊಂದು ಬಾರಿ ಹಾಗಾಗುತ್ತದೆ, ಈ ಬಾರಿಯೂ ಅಂಥ ಆಂಟಿ ಕ್ಲೇಮ್ಯಾಕ್ಸ್ ಒಂದು ನಡೆದಿದೆ ಅಷ್ಟೇ, ಅದನ್ನು ಒಪ್ಪುವುದು ಅನಿವಾರ್ಯ. ಷಡ್ಯಂತ್ರ ಎಂಬ ಬಾಲಿಷವಾದ ಕೇವಲ ಒಂದು ವರ್ಷದ ಹಿಂದೆ ಸಾಕ್ಷಿ ಮಲಿಕ್, ಭಜರಂಗ ಪೂನಿಯಾ ಮುಂತಾದವರು ಭಾರತೀಯ ಕುಸ್ತಿ ಒಕ್ಕೂಟದ ಅಂದಿನ ಅಧ್ಯಕ್ಷ
ಬ್ರಿಜ್‌ ಭೂಷಣ್‌ಸಿಂಗ್ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ವಿನೇಶ್ ಫೋಗಟ್ ಅವರೂ ಕಾಣಿಸಿಕೊಂಡಿದ್ದರು. ಸಂಸದರೂ ಆಗಿದ್ದ ಬ್ರಿಜ್ ಭೂಷಣ್ ಮಹಿಳಾ ಕುಸ್ತಿ ಪಟುಗಳ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ಹಗರಣಗಳ ವಿರುದ್ಧ ನಡೆದ ಪ್ರತಿಭಟನೆಯಾಗಿತ್ತು ಅದು.

ತಿಂಗಳುಗಳ ಕಾಲ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಹಲವಾರು ಕ್ರೀಡಾಪಟುಗಳು ಇವರ ಬೆನ್ನಿಗೆ ನಿಂತಿದ್ದರು. ಪ್ರತಿಭಟನೆಯನ್ನು ನಿಲ್ಲಿಸುವ ಪ್ರಯತ್ನದಲ್ಲಿ ಪೊಲೀಸರಿಂದ ಲಾಠಿಚಾರ್ಜ್ ಸಹ ನಡೆದಿತ್ತು. ಕಡೆಗೂ ಬ್ರಿಜ್‌ಭೂಷಣ್ ಸಿಂಗ್ ಭಾರತೀಯ ಕುಸ್ತಿ ಒಕ್ಕೂಟದ ತನ್ನ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡುವಲ್ಲಿ ಆ ಪ್ರತಿಭಟನೆ ಯಶಸ್ವಿಯಾಗಿತ್ತು.
ಇದರ ಪರಿಣಾಮವಾಗಿ ವಿನೇಶ್‌ರ ವಿರುದ್ಧ ಈಗ ಷಡ್ಯಂತ್ರ ನಡೆದಿದೆ ಎನ್ನುವ ಅರ್ಥದಲ್ಲಿ ಕೆಲವರು ಬಾಲಿಷ ಮಾತುಗಳನ್ನಾಡುತ್ತಿದ್ದರೆ. ಪ್ರತಿಭಟಟನೆಯ ವಿರುದ್ಧ ಭಾರತದ ಉಚ್ಛ ಅಧಿಕಾರ ದಲ್ಲಿರುವ ಯಾರಾದರೂ ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂದಾದರೆ ವಿನೇಶ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದಂತೆ ತಡೆಯಬಹುದಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಮಾಡುವುದಕ್ಕಿಂತ ರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಮಾಡುವುದೇ ಸುಲಭವಲ್ಲವೆ? ಪ್ರತಿಭಟನೆಯ ಬಳಿಕವೂ ವಿನೇಶ್ ಭಾರತವನ್ನು ಒಲಿಂಪಿಕ್ಸ್‌ನಲ್ಲಿ ಸ್ಪಽಸುವುದು ಸಾಧ್ಯವಾಯಿತು. ವಿನೇಶ್ ಫೈನಲ್‌ಗೆ ಬಂದಾಗ ಭಾರತದ ಎಲ್ಲರೂ ಸಂಭ್ರಮಿಸಿದ್ದರು. ವಿನೇಶ್ ಅನರ್ಹರಾದ ಸುದ್ದಿ ತಿಳಿದ ತಕ್ಷಣ ಖುದ್ದು ಭಾರತದ ಪ್ರಧಾನಿ ನರೇಂದ್ರ
ಮೋದಿಯವರೇ ಭಾರತೀಯ ಒಲಿಂಪಿಕ್ಸ್ ಅಧ್ಯಕ್ಷೆ ಪಿ.ಟಿ.ಉಷಾರೊಂದಿಗೆ ಮಾತನಾಡಿದ್ದಾರೆ.

ಪರ್ಯಾಯ ಸಾಧ್ಯತೆಗಳ ಬಗೆಗೆ ಚರ್ಚೆ ನಡೆಸಿದ್ದರು. ಅಂತಿಮವಾಗಿ ಜಂಟಿ ಬೆಳ್ಳಿ ಪದಕವನ್ನಾದರೂ ನೀಡುವಂತೆ ಒಲಿಂಪಿಕ್ ಸಮಿತಿಯ ಮುಂದೆ ಮನವಿ ಸಲ್ಲಿಸಲಾಗಿದೆ. ಈ ವಿಷಯದಲ್ಲಿ ಕೋರ್ಟ್ ಆಫ್ ಆರ್ಬಿಟ್ರೇಷಸ್ ಫಾರ್ ಸ್ಪೋರ್ಟ್ಸ್ (ಸಿ.ಎ.ಎಸ್) ಪರಿಶೀಲನೆ ನಡೆಸಲಿದೆ. ಆ ರೀತಿ ಭಾರತದ ಆಡಳಿತ ಸೂತ್ರ ಹಿಡಿದವರು ವಿನೇಶ್ರನ್ನು ಎಲ್ಲ ಹಂತದಲ್ಲಿಯೂ ಬೆಂಬಲಿಸಿದ್ದಾರೆ. ಸ್ಪರ್ಧೆಯ ನಡುವೆ ದೇಹದ ತೂಕ ಹೆಚ್ಚಾಗುವ ಸಮಸ್ಯೆಯನ್ನು ವಿನೇಶ್ ಒಬ್ಬರೇ ಎದುರಿಸಿದವರಲ್ಲ. ಇಟಲಿಯ ಇಮ್ಯಾನ್ಯುಯೆಲ್ ಲಿಯುಜಿ ೫೦ ಕೆಜಿ ವಿಭಾಗದಲ್ಲಿ ಮೊದಲ ದಿನವೇ ೫೦ ಗ್ರಾಂ ಅಧಿಕ ತೂಕವಿದ್ದಾರೆ ಎನ್ನುವ ಕಾರಣಕ್ಕೆ ೧೬ರ ಮಟ್ಟದಲ್ಲಿ ಹೊರ ಬಿದ್ದಿದ್ದರು. ಇದೇ ಸಮಸ್ಯೆಯನ್ನು ತಾನೂ ಎದುರಿಸಿದ್ದಾಗಿ ಮೇರಿ ಕೋಂ ಹೇಳಿಕೊಂಡಿದ್ದರು.

ಎಲ್ಲವೂ ಸರಿಯಾಗಿಯೇ ನಡೆದು ಚಿನ್ನದ ಪದಕ ಗೆದ್ದಿದ್ದರೆ ಚೆನ್ನಾಗಿತ್ತು. ಆದರೆ ಬದುಕಿನಲ್ಲಿ ನಡೆಯುವ ದುರಂತವನ್ನು ಒಪ್ಪಿಕೊಳ್ಳಲೇಬೇಕು. ನಿರಾಶೆಯಿಂದಲೇ ಕುಸ್ತಿ ಬದುಕಿಗೆ ವಿನೇಶ್ ವಿದಾಯ ಹೇಳಿzರೆ. ಹಾಗೆಂದು ಅಲ್ಲಿಗೇ ಬದುಕು ಮುಗಿದಿಲ್ಲ. ವಿನಶ್‌ರಿಗೆ ಪದಕ ಗೆದ್ದಾಗ ಬರುವ ಕೋಟಿ ಕೋಟಿ ಹಣ ಬರದಿರಬಹುದು. ಆದರೆ ಹಣವೇ ಎಲ್ಲವೂ ಅಲ್ಲವಲ್ಲ! ಭವಿಷ್ಯದಲ್ಲಿ ವಿನೇಶ್ ಕೋಚಿಂಗ್ ಮಾಡಬಹುದು, ವಿನೇಶ್ರನ್ನು ನೋಡಿ ಸ್ಪೂರ್ತಿಗೊಳ್ಳುವ ಯುವಪ್ರತಿಭೆಗಳು ವಿನೇಶ್‌ರ ಅಡಿಯಲ್ಲಿ ಪಳಗಿ ಮುಂದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದು. ತಾನು ಸಾಧಿಸಲಾಗದ್ದನ್ನು ತನ್ನ ಶಿಷ್ಯರ ಮೂಲಕ ಈಡೇರಿಸಿಕೊಂಡು ಮುಂದೊಂದು ದಿನ ವಿನೇಶ್‌ರೇ ಆನಂದಬಾಷ್ಪ ಹರಿಸಬಹುದು. ಅದಕ್ಕೆ ದೇಶದ ಕೋಟ್ಯಂತರ ಜನ ಸಾಕ್ಷಿ ಆಗಬಹುದು. ಮುಂದಿನ ಒಲಿಂಪಿಕ್ಸ್‌ಗೆ ನಾನು ವಿನೇಶ್‌ರನ್ನು ಸಿದ್ಧಪಡಿಸುತ್ತೇನೆ ಎಂದು ವಿನೇಶ್ ಅವರ ಚಿಕ್ಕಪ್ಪ ಮಹಾವೀರ್‌ಸಿಂಗ್ ಫೋಗಟ್ ಈಗಾಗಲೇ ಹೇಳಿದ್ದಾರೆ. ಅದು ಸಾಧ್ಯವಾಗುತ್ತದೋ ಇಲ್ಲವೋ ಬೇರೆ ಮಾತು. ಆದರೆ ವಿನೇಶ್‌ರೇ ತರಬೇತುಗೊಳಿಸಿದ ಅಭ್ಯರ್ಥಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದರೆ ಅದು ವಿನೇಶ್‌ರವರ ಬದುಕಿನ ಅತ್ಯಂತ ಶ್ರೇಷ್ಠವಾದ ನಿರ್ವಚನ ಆಗಬಹುದು.
ದಂಗಲ್ ಹುಡುಗಿಯರ ಸಹೋದರಿ ಈ ವಿನೇಶ್ ಫೋಗಟ್ ಯಾರು ಎಂಬ ವಿವರ ಕೇಳಿದರೆ ಆಸಕ್ತಿದಾಯಕ ವಿವರಗಳು ಹೊರ ಬರುತ್ತವೆ.

ಅಮೀರ್ ಖಾನ್ ದಂಗಲ್ ಎಂಬ ಸಿನಿಮಾ ಮಾಡಿದರಲ್ಲ, ಆ ಸಿನಿಮಾಕ್ಕೆ ಸೂರ್ತಿಯಾದವರು ಗೀತಾ ಮತ್ತು ಬಬಿತಾ ಎಂಬ ಸಹೋದರಿಯರು. ಗೀತಾ ಮತ್ತು ಬಬಿತಾ ಬಾಲ್ಯದಲ್ಲಿ ಸ್ಕೂಲಿಗೆ ಹೋಗುತ್ತಿದ್ದಾಗ ತಮ್ಮನ್ನು ಛೇಡಿಸಿದ್ದ ಹುಡುಗರಿಗೆ ನಾಲ್ಕು ಬಾರಿಸಿ ಮನೆಗೆ ಬಂದು ಈ ವಿಷಯ ತಿಳಿದಾಗ ಅವರ ತಂದೆ ತನ್ನ ಹೆಣ್ಣು ಮಕ್ಕಳು ಕುಸ್ತಿಯಲ್ಲಿ ತಾನು ಸಾಧಿಸಲಾಗದ್ದನ್ನು ಇವರು ಸಾಧಿಸಬಹುದು ಎಂದು ನಿರೀಕ್ಷಿಸುತ್ತಾರೆ. (ಮಹಾವೀರ್ ಸಿಂಗ್ ಪೋಗಟ್ ಎಂಬ ಆ ಕುಸ್ತಿಪಟು ನಾಲ್ವರು ಹೆಣ್ಣು ಮಕ್ಕಳನ್ನು ಪಡೆದಿದ್ದರು. ಕುಸ್ತಿಯಲ್ಲಿ ದೇಶಕ್ಕೆ ಪದಕ ತರುವ ತನ್ನ
ಕನಸು ನನಸಾಗದೇ ಕೊರಗಿದ್ದರು. ತನಗೆ ಗಂಡು ಮಕ್ಕಳಿದ್ದರೆ ಅವರಾದರೂ ಪದಕ ತರಬಹುದು ಎಂಬ ಆಸೆ ಇದ್ದರೂ ಹೆಣ್ಣು ಮಕ್ಕಳೇ ಜನಿಸಿದಾಗ ತನ್ನ ಕುಟುಂಬಕ್ಕೆ ಪದಕ ತರುವ ಸಾಧ್ಯತೆ ಇಲ್ಲ ಎಂದು ನಿರಾಶೆ ಅನುಭವಿಸಿದ್ದರು) ತನ್ನ ಹೆಣ್ಣು ಮಕ್ಕಳು ತನ್ನನ್ನು ಚುಡಾಯಿಸಿದವರಿಗೆ ತದುಕಿ ಬಂದಾಗ ಹೆಣ್ಣು ಮಕ್ಕಳೂ ಕುಸ್ತಿಯಲ್ಲಿ ಗೆಲ್ಲಬಹುದು ಎಂದು ಭಾವಿಸಿ ಸಮಾಜದ
ಪ್ರತಿರೋಧದ ನಡುವೆಯೂ ತನ್ನ ಹೆಣ್ಣು ಮಕ್ಕಳಿಗೆ ಕುಸ್ತಿ ಕಲಿಸುತ್ತಾರೆ.

ಅವರು ಏಷ್ಯನ್‌ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುತ್ತಾರೆ. ಸ್ವರ್ಣಗೆದ್ದ ಹೆಣ್ಣು ಮಕ್ಕಳ ಕಥೆಯೇ ಮುಂದೆ ದಂಗಲ್ ಸಿನಿಮಾ ಆಗುತ್ತದೆ. ಆ ಹೆಣ್ಣು ಮಕ್ಕಳು ವಿನೇಶ್ ರ ಚಿಕ್ಕಪ್ಪನ ಮಕ್ಕಳು.
ವಿನೋದ್ ಫೋಗಟ್ ಮತ್ತು ಸರಳಾದೇವಿಯವರ ಪುತ್ರಿಯಾಗಿ ೧೯೯೪ರಲ್ಲಿ ಹರಿಯಾಣದ ಕುಟುಂಬವೊಂದರಲ್ಲಿ ಜನಿಸಿದವರು ವಿನೇಶಾ ಫೋಗಟ್. ಇವರ ಚಿಕ್ಕಪ್ಪ ಮಹಾವೀರಸಿಂಗ್ ಫೋಗಟ್ ದ್ರೋಣಾಚಾರ್ಯ ಪ್ರಶಸ್ತಿ ಗೆದ್ದ ಗೌರವಾನ್ವಿತ ಕುಸ್ತಿಪಟು. ವಿನೇಶ್ ಫೋಗಟ್ ರೋಟಗ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದ ಪದವೀಧರೆ. ಚಿಕ್ಕಪ್ಪನ ಪ್ರಭಾವದಿಂದ ಕುಸ್ತಿಪಟುವಾಗಿ ರೂಪುಗೊಂಡ ವಿನೇಶ್ ೨೦೧೮ರ ಏಷ್ಯನ್‌ಗೇಮ್ ನಲ್ಲಿ ಚಿನ್ನದ ಪದಕ ಗೆಲ್ಲುತ್ತಾರೆ, ೨೦೧೮ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ೨೦೧೮ ಮತ್ತು ೨೦೧೯ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕ ಗೆದ್ದ ಗೌರವಕ್ಕೆ ಭಾಜನರಾಗುತ್ತಾರೆ.

೨೦೧೬, ೨೦೧೭ ಮತ್ತು ೨೦೧೯ರಲ್ಲಿ ಕಾಮನ್ವೆಲ್ತ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹೆಗ್ಗಳಿಕೆಯೂ ಅವರದು. ೨೦೧೪ರಲ್ಲಿ ಅರ್ಜುನ ಅವಾರ್ಡ್, ೨೦೨೨ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರಕಾರ ನೀಡಿತ್ತು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಕ್ರೀಡಾಳುಗಳ ಪರಮ ಗುರಿ. ಅದಕ್ಕಾಗಿ ತಮ್ಮ ಬದುಕನ್ನು ತಪಸ್ಸಿನಂತೆ ನಡೆಸುತ್ತಾರೆ. ಸತತ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ
ಕಣಕ್ಕಿಳಿದ ಫೋಗಟ್ ೨೦೧೬ರ ಒಲಿಂಪಿಕ್ಸ್‌ನಲ್ಲಿ ಕಾಲಿಗೆ ಗಾಯವಾಗಿ ನಿರಾಶೆ ಅನುಭವಿಸಿದರು. ೨೦೨೦ರ ಒಲಿಂಪಿಕ್ಸ್‌ನಲ್ಲಿ ಪ್ರಥಮ ಸುತ್ತಿನಲ್ಲಿಯೇ ಸೋತರು. ಈ ಬಾರಿ ಫೈನಲ್ ತಲುಪಿ ಸ್ವರ್ಣ ಗೆದ್ದು ತಮ್ಮ ಕ್ರೀಡಾ ಬದುಕಿನಲ್ಲಿ ಉತ್ತುಂಗ ತಲುಪುವ ಎಲ್ಲ ಸಾಧ್ಯತೆಗಳನ್ನೂ ತೋರಿಸಿದ್ದರು. ಆದರೆ ದುರದೃಷ್ಟವೇ ತನ್ನ ಕೈವಾಡ ಮೆರೆಯಿತು. ಅವರು ಚಿನ್ನ ಗೆಲ್ಲದಿದ್ದರೂ ಚಿನ್ನದ
ಹುಡುಗಿಯಾಗಿzರೆ. ಭಾರತದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಮರರಾಗಿದ್ದಾರೆ.

(ಲೇಖಕರು: ಹವ್ಯಾಸಿ ಬರಹಗಾರರು)