Thursday, 28th November 2024

ಸಿದ್ದು ಈಗ ಔಟ್ ಆಫ್ ಡೇಂಜರ್‌ ?

ಮೂರ್ತಿಪೂಜೆ

ಕಳೆದ ವಾರ ದಿಲ್ಲಿಗೆ ಹೋದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರಂತೆ. ‘ಮುಡಾ ಹಗರಣದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟಿಸ್ ಕೊಟ್ಟರಲ್ಲ? ಈ ಬೆಳವಣಿಗೆ ಇನ್ನಷ್ಟು ಮುಂದಕ್ಕೆ ಹೋಗಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಸನ್ನಿವೇಶ ಸೃಷ್ಟಿಯಾದರೆ ಏನು ಗತಿ?’ ಅಂತ ಅವರು ಕೇಳಿದಾಗ, ‘ಇಲ್ಲ, ಹಾಗಾಗುತ್ತದೆ ಅನ್ನಿಸುವುದಿಲ್ಲ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಸನ್ನಿವೇಶ ಉದ್ಭವವಾಗುವುದಿಲ್ಲ’ ಎಂದರಂತೆ ಮಲ್ಲಿಕಾರ್ಜುನ ಖರ್ಗೆ.

ಆದರೂ ಪಟ್ಟು ಬಿಡದ ಈ ನಾಯಕರು, ‘ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಸನ್ನಿವೇಶ ಸೃಷ್ಟಿಯಾಗದಿದ್ದರೆ ಸರಿ, ಆದರೆ ನಮ್ಮ ಚಿಂತೆ ಎಂದರೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಅನಿವಾರ್ಯವಾದರೆ ಮುಂದೇನು ಅನ್ನುವುದು. ಈಗಿರುವ ಮಾಹಿತಿಯ ಪ್ರಕಾರ, ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿದರೆ ನಾವೇ ಸಿಎಂ ಆಗಬೇಕು ಅಂತ ಕರ್ನಾಟಕದ ನಾಲ್ಕೈದು ಮಂದಿ ನಾಯಕರು ಬಯಸುತ್ತಿದ್ದಾರೆ.

ಆದರೆ ಪಕ್ಷದ ಬಹುತೇಕರು, ಅಂಥ ಪ್ರಸಂಗ ಉದ್ಭವಿಸಿದರೆ ನೀವೇ ಮುಖ್ಯಮಂತ್ರಿ ಪಟ್ಟಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಮೊದಲನೆಯದಾಗಿ ನೀವು ಅತ್ಯಂತ ಹಿರಿಯ ನಾಯಕರು. ಹೀಗಾಗಿ ನಿಮ್ಮ ನಾಯಕತ್ವವನ್ನು ಎಲ್ಲರೂ ಒಪ್ಪುತ್ತಾರೆ. ಎರಡನೆಯದಾಗಿ, ದಕ್ಷ  ಆಡಳಿತಗಾರರು. ಇದೇ ರೀತಿ ನೀವು ಮುಖ್ಯಮಂತ್ರಿಯಾದರೆ ವಾಮಮಾರ್ಗದಿಂದ ನಿಮ್ಮನ್ನಿಳಿಸಲು ಬಿಜೆಪಿ ವರಿಷ್ಠರು ಬಯಸುವುದಿಲ್ಲ. ಹೀಗಾಗಿ ಸಿದ್ದರಾಮಯ್ಯನವರು ಇಳಿಯುವುದು ಅನಿವಾರ್ಯವಾದರೆ ನೀವು ಕರ್ನಾಟಕಕ್ಕೆ ಬರಲು ಸಜ್ಜಾಗಿ’ ಅಂತ ಹೇಳಿದ್ದಾರೆ.

ಆದರೆ ತಮ್ಮ ಮಾತಿಗೆ ಖರ್ಗೆಯವರು ಆಸಕ್ತಿ ತೋರದೆ ಹೋದಾಗ, ‘ಸರ್, ಒಂದು ವೇಳೆ ಅಂಥ ಸನ್ನಿವೇಶ ಉದ್ಭವವಾದರೆ ನೀವು ಕರ್ನಾಟಕಕ್ಕೆ ಬನ್ನಿ. ಇಲ್ಲ ಅಂದರೆ ನನಗೆ ಒಂದು ಅವಕಾಶ ಕೊಡಿಸಲು ಯತ್ನಿಸಿ. ನಾನು ದಶಕಗಳ ಕಾಲದಿಂದ ರಾಜಕಾರಣ ಮಾಡಿದ್ದೇನೆ.ದೊಡ್ಡ ದೊಡ್ಡ ಜವಾಬ್ದಾರಿ ಗಳನ್ನು ನಿರ್ವಹಿಸಿದ್ದೇನೆ. ಇದು ಕೊನೆಯ ಅವಕಾಶ. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ನನ್ನ ಹೆಸರಿಗೆ ಬಲ ತುಂಬಿ’ ಅಂತ ಈ ನಾಯಕರು ಹೇಳಿ ಬಂದರಂತೆ.

ಸಿದ್ದು ಅಪಾಯದಿಂದ ಪಾರಾದರಾ?

ಈ ಮಧ್ಯೆ ರಾಜ್ಯಪಾಲರ ಷೋಕಾಸ್ ನೋಟಿಸ್ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ಸುತ್ತ ಆವರಿಸಿದ್ದ ಆತಂಕದ ಕಾರ್ಮೋಡ ಮೆಲ್ಲಗೆ ಕರಗುತ್ತಿದೆ. ಇದಕ್ಕೆ ರಾಜ್ಯಪಾಲರ ವೇಗ ತಗ್ಗಿದ್ದು ಒಂದು ಕಾರಣವಾದರೆ, ರಾಜ್ಯಪಾಲರ ಕ್ರಮದ ವಿರುದ್ಧ ಹೋರಾಡಲು ಸಿದ್ದರಾಮಯ್ಯ ಅವರಿಗೆ ಸಿಗುತ್ತಿರುವ ಅಸಗಳು ಮತ್ತೊಂದು ಕಾರಣ. ಅಂದ ಹಾಗೆ, ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ, ನಿರಾಣಿ ಮತ್ತು ಜೊ ವಿರುದ್ಧದ ವಿಚಾರಣೆಗೆ ಅನುಮತಿ ನೀಡಲು ಕೋರಿ ಸಲ್ಲಿಕೆಯಾಗಿದ್ದ ಮನವಿಗಳು ರಾಜಭವನದಲ್ಲಿ ಕೊಳೆಯುತ್ತಿವೆ. ಆದರೆ ಜೂನ್ ೨೬ರಂದು ಮಂಡನೆಯಾದ ಟಿ.ಜೆ.ಅಬ್ರಹಾಂ ದೂರಿಗೆ ಪ್ರತಿಯಾಗಿ ಮರುದಿನವೇ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟಿಸ್ ಜಾರಿಯಾಗುತ್ತದೆ.

ಇದರರ್ಥ ಏನು? ಒಂದು ವೇಳೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೆ ಈ ಅಂಶವನ್ನೇ ಹಿಡಿದುಕೊಂಡು ನ್ಯಾಯಾಲಯದ ಮೆಟ್ಟಿಲೇರ ಬಹುದು ಮತ್ತು ಸಿಎಂ ವಿರುದ್ಧದ ವಿಚಾರಣೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮಕ್ಕೆ ತಡೆಯಾಜ್ಞೆ ಪಡೆಯಬಹುದು ಎಂಬುದು ಸಿದ್ದರಾಮಯ್ಯ
ಆಪ್ತರ ವಿಶ್ವಾಸ. ಇದೇ ರೀತಿ, ಇಂಥ ಪ್ರಕರಣಗಳಲ್ಲಿ ಪತಿ- ಪತ್ನಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಅಂತ ನ್ಯಾಯಾಲಯ ದಶಕಗಳಷ್ಟು ಹಿಂದೆಯೇ ತೀರ್ಪು ನೀಡಿದೆ. ಮುಡಾ ಪ್ರಕರಣದಲ್ಲೂ ಅಷ್ಟೇ. ಇಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ, ಅವರ ಸಹೋದರ ಕಾಣಿಕೆ ನೀಡಿದ ಭೂಮಿಯನ್ನು ಮುಡಾ ಸ್ವಾಧೀನಪಡಿಸಿಕೊಂಡಿದೆ ಮತ್ತು ಇದಕ್ಕೆ ಪ್ರತಿಯಾಗಿ ನಿವೇಶನಗಳನ್ನು ನೀಡಿದೆ. ಹೀಗೆ ಅವರಿಗೆ ನಿವೇಶನಗಳನ್ನು ನೀಡುವುದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನಿದೆ? ಅವರೇನಾದರೂ ಕಾನೂನು ಬಾಹಿರವಾಗಿ ತಮ್ಮ ಪತ್ನಿಗೆ ನಿವೇಶನ ನೀಡಲು ಶಿಫಾರಸು ಮಾಡಿದ್ದಾರೆಯೇ? ಅಥವಾ ಅವರು ರಾಜ್ಯದ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಈ ನಿವೇಶನ ಗಳನ್ನು ಮುಡಾ ಮಂಜೂರು ಮಾಡಿದೆಯೇ? ಹೀಗಿದ್ದ ಮೇಲೆ ಈ ಪ್ರಕರಣಕ್ಕೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ ಅನ್ನುವಂಥ ಪ್ರಶ್ನೆಗಳನ್ನು ನ್ಯಾಯಾಲಯ ಕೇಳಿದರೆ ಉತ್ತರಿಸುವುದು ಕಷ್ಟ.

ಇಲ್ಲ, ಇಲ್ಲ ಸಿದ್ದರಾಮಯ್ಯ ಪ್ರಭಾವಿಯಾಗಿದ್ದ ಕಾರಣಕ್ಕೇ ಅವರ ಪತ್ನಿಗೆ ನಿವೇಶನಗಳನ್ನು ನೀಡಲಾಗಿದೆ ಎಂದಾದರೆ ಸಿದ್ದರಾಮಯ್ಯ ಅವರು ಯಾರ ಮೇಲೆ, ಯಾವ ಸಂದರ್ಭದಲ್ಲಿ ಪ್ರಭಾವ ಬೀರಿದರು ಎಂಬುದನ್ನು ಸಾಬೀತು ಮಾಡಬೇಕಾಗುತ್ತದೆ. ಆ ದೃಷ್ಟಿಯಿಂದ ರಾಜ್ಯಪಾಲರು ವಿಚಾರಣೆಗೆ
ಅನುಮತಿ ನೀಡಿದರೂ ನ್ಯಾಯಾಲಯ ಅದನ್ನು ಒಪ್ಪುವುದು ಕಷ್ಟ. ಆದ್ದರಿಂದ ಸಿದ್ದರಾಮಯ್ಯ ಈಗ ಔಟ್ ಆಫ್ ಡೇಂಜರ್ ಎಂಬುದು ಅವರ ಆಪ್ತರ ಮಾತು. ಹೀಗಾಗಿಯೇ ೧೫ ದಿನಗಳ ಹಿಂದೆ ವಿಪರೀತ ಆಕ್ಟೀವ್ ಆಗಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಈಗ ಕೂಲ್ ಆಗಿದ್ದಾರೆ.

ಅಷ್ಟೇ ಅಲ್ಲ, ವಿಚಾರಣೆಗೆ ಅನುಮತಿ ನೀಡಿದರೆ ಎದುರಾಗುವ ಸಾಧಕ-ಬಾಧಕಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಸಿದ್ದು ಆಪ್ತರಿಗೆ ಬಂದಿರುವ ಮಾಹಿತಿಯ ಪ್ರಕಾರ, ೧೫ ದಿನಗಳ ಹಿಂದೆ ಈ ವಿಷಯದಲ್ಲಿ ರಾಜ್ಯಪಾಲರ ಮೇಲಿದ್ದ ದಿಲ್ಲಿಯ ಒತ್ತಡ ಕಡಿಮೆಯಾಗಿದೆ.

ಸದ್ಯಕ್ಕಿಲ್ಲ ಸಂಪುಟ ಸರ್ಜರಿ
ಇನ್ನು ಸಿಎಂ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸಣ್ಣದೊಂದು ಸರ್ಜರಿ ಮಾಡಲು ಬಯಸಿದ್ದ ಕಾಂಗ್ರೆಸ್ ವರಿಷ್ಠರು ಈಗ ಆ ಪ್ರಪೋಸಲ್ಲಿನಿಂದ ಹಿಂದೆ ಸರಿದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದೇ ಇದಕ್ಕೆ ಮುಖ್ಯ ಕಾರಣ. ಅಂದ ಹಾಗೆ, ಮೊನ್ನೆ ಕರ್ನಾಟಕಕ್ಕೆ ಬಂದಿದ್ದ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರ ಜತೆ ಮಾತನಾಡಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ನಾಲ್ಕೆ ದು ಮಂದಿ ಸಚಿವರ ಮೇಲೆ ಪದೇ ಪದೆ ದೂರುಗಳು ಬರುತ್ತಿವೆ. ಹೀಗಾಗಿ ಇವರನ್ನು ಸಂಪುಟದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡೋಣ. ಹಾಗಾದಾಗ ಪಕ್ಷ ಭ್ರಷ್ಟರನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ ಮತ್ತು ಉಳಿದವರಿಗೂ ಇದು ಎಚ್ಚರಿಕೆಯಾಗುತ್ತದೆ’ ಎಂಬುದು ಈ ನಾಯಕರ ಮಾತು. ಆದರೆ ಅವರಾಡಿದ ಮಾತುಗಳನ್ನು ಒಪ್ಪದ ಸಿದ್ದರಾಮಯ್ಯ‘ನೋ, ನೋ, ಅದೆಲ್ಲ ಸಾಧ್ಯವಿಲ್ಲ.

ಭ್ರಷ್ಟಾಚಾರದ ಆರೋಪ ಬಂದಿದೆ ಅಂತ ಕೆಲ ಮಂತ್ರಿಗಳನ್ನು ಟಾರ್ಗೆಟ್ ಮಾಡಿದರೆ ಸಾಲದು. ಭ್ರಷ್ಟಾಚಾರದ ಆರೋಪ ಯಾರ‍್ಯಾರ ಮೇಲಿದೆ
ಅನ್ನುವುದನ್ನು ಪರಿಶೀಲಿಸಿ ಮೇಲು ಹಂತದಲ್ಲಿರುವವರ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಬೇಕು. ಅರ್ಥಾತ್, ಅವರನ್ನು ಸಂಪುಟದಿಂದ ಕೈಬಿಡಬೇಕು. ಹಾಗೆ ಮಾಡಲು ಸಾಧ್ಯವಾ ಅಂತ ಯೋಚಿಸಿ. ಎಸ್ ಅನ್ನುವುದಾದರೆ ಸಂಪುಟಕ್ಕೆ ಮೇಜರ್ ಸರ್ಜರಿಯನ್ನೇ ಮಾಡಬಹುದು’ ಎಂದರು.

ಯಾವಾಗ ಸಿದ್ದರಾಮಯ್ಯ ಈ ಮಾತನಾಡಿದರೋ, ಆಗ ಪರಿಸ್ಥಿತಿ ಎಲ್ಲಿಗೆ ತಲುಪಬಹುದು? ಸಂಪುಟದಿಂದ ಗೇಟ್‌ಪಾಸ್ ಪಡೆಯುವ ಪ್ರಬಲ ಮಂತ್ರಿಗಳು ಯಾರು? ಅಂತ ಊಹಿಸಿದ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಸುಮ್ಮನಾದರಂತೆ. ಯಡಿಯೂರಪ್ಪ-ಜೋಷಿ ಫುಲ್ ಕ್ಲೋಸು
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ನಡುವಣ ವೈಮನಸ್ಸು ಮಾಯವಾಗಿದೆ. ಇದಕ್ಕೆ ಕಾರಣವಾಗಿರುವುದು ಮೈಸೂರು ಚಲೋ ಪಾದಯಾತ್ರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾದದ ಹಗರಣಗಳ ಹಿನ್ನೆಲೆಯಲ್ಲಿ ಇಂಥದೊಂದು
ಪಾದಯಾತ್ರೆ ಮಾಡಬೇಕು ಎಂಬ ಪ್ರಸ್ತಾಪ ಪಕ್ಷದ ವೇದಿಕೆಯಲ್ಲಿ ಮಂಡನೆಯಾಗಿದ್ದು ನಿಜವಾದರೂ, ಅಂತಿಮವಾಗಿ ಅದು ವಿಜಯೇಂದ್ರ ಅವರ ವರ್ಚಸ್ಸನ್ನು ವೈಭವೀಕರಿಸಲಿದೆ ಎಂಬ ಕಾರಣಕ್ಕಾಗಿ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.

ಅದರಲ್ಲೂ ಮಾಜಿ ಮುಖ್ಯಮಂತ್ರಿಯೊಬ್ಬರು, ‘ಇಂಥ ಪಾದಯಾತ್ರೆಯಿಂದ ಯಾವ ಪ್ರಯೋಜನವೂ ಇಲ್ಲ. ಯಾಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ ಅಷ್ಟೇ. ಇದೇ ರೀತಿ ವಾಲ್ಮೀಕಿ ಅಭಿವೃದ್ಧಿ ನಿಗಮದದ ಹಗರಣವೇ ಇರಲಿ, ಮುಡಾ ಹಗರಣವೇ ಇರಲಿ. ಕೆದಕುತ್ತಾ ಹೋದರೆ ಮೂರೂ ಪಕ್ಷಗಳ ಅವಧಿಯಲ್ಲಿ ಲೋಪಗಳಾಗಿವೆ. ಹೀಗಾಗಿ ಈ ವಿಷಯಗಳನ್ನು ಕೆದಕುವುದರಲ್ಲಿ ಅರ್ಥವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಂಥ ಹೋರಾಟದಿಂದ ರಾಜ್ಯದ ಅಹಿಂದ ವರ್ಗಗಳಿಗೆ ವ್ಯತಿರಿಕ್ತ ಸಂದೇಶ ರವಾನೆಯಾಗಬಹುದು. ಬಲಿಷ್ಠ ವರ್ಗಗಳು ಸೇರಿ ದುರ್ಬಲ ವರ್ಗಗಳ ನಾಯಕ
ನನ್ನು ಇಳಿಸಲು ಹೊರಟಿವೆ ಎಂಬ ಸಂದೇಶ ರವಾನೆಯಾದರೆ ಅವು ಇನ್ನಷ್ಟು ಪರಿಣಾಮಕಾರಿಯಾಗಿ ಕಾಂಗ್ರೆಸ್ ಜತೆ ನಿಲ್ಲುತ್ತವೆ. ಹೀಗಾಗಿ ಇದಕ್ಕೆ ಅವಕಾಶ ಕೊಡುವ ಬದಲು ಇನ್ನಷ್ಟು ಕಾಲ ಕಾಯುವುದು ಒಳ್ಳೆಯದು’ ಅಂತ ಜೆ.ಪಿ.ನಡ್ಡಾ ಅವರಿಗೇ ವಿವರಿಸಿದ್ದರಂತೆ.

ಈ ಮಧ್ಯೆ ಪಾದಯಾತ್ರೆ ವಿಷಯದಲ್ಲಿ ಪ್ರೀತಂ ಗೌಡರಿಗೆ ಪ್ರಿಫರೆನ್ಸು ಕೊಟ್ಟಿದ್ದು ಸರಿಯಲ್ಲ ಅಂತ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ತಕರಾರು ಎತ್ತಿದರಲ್ಲ? ಈ ವಿಷಯವೂ ಸೇರಿ ಅಮಿತ್ ಶಾ ಅವರೇ ಮಧ್ಯೆ ಪ್ರವೇಶಿಸುವ ಸ್ಥಿತಿ ಬಂದಾಗ ಪಾದಯಾತ್ರೆಯ ಕಥೆ ಡೋಲಾಯಮಾನ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಪ್ರಲ್ಹಾದ ಜೋಷಿ ಅವರು, ಯಾವ ಕಾರಣಕ್ಕಾಗಿ ಪಾದಯಾತ್ರೆ ನಡೆಯಬೇಕು ಅಂತ ವರಿಷ್ಠರಿಗೆ ವಿವರಿಸಿದ್ದಲ್ಲದೆ, ‘ಈ ಪಾದಯಾತ್ರೆಯಿಂದ ವಿಜಯೇಂದ್ರ ಮಾತ್ರವಲ್ಲ, ನಿಮ್ಮ ಮಗ ನಿಖಿಲ್ ಅವರ ಲೀಡರ್‌ಷಿಪ್ಪಿಗೂ ಬಲ ಬರುತ್ತದೆ’ ಅಂತ
ಹೇಳಿ ಕುಮಾರಸ್ವಾಮಿ ಅವರ ಮನವೊಲಿಸಿದ್ದರು. ಯಾವಾಗ ಪ್ರಲ್ಹಾದ ಜೋಷಿಯವರ ತಂತ್ರಗಾರಿಕೆ ಕೆಲಸ ಮಾಡಿತೋ, ಮೈಸೂರು ಚಲೋ ಪಾದಯಾತ್ರೆ ಸಾಂಗವಾಗಿ ನಡೆದಿದೆ. ಅಷ್ಟೇ ಅಲ್ಲ, ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಧಗಧಗ ಅಂತ ಹೊತ್ತಿ ಉರಿಯುತ್ತಿದ್ದ ಯಡಿಯೂರಪ್ಪ-ಜೋಷಿ ನಡುವಣ ಸಂಬಂಧ ವಿಶ್ವಾಸದ
ಹಳಿಗೆ ಮರಳಿದೆ.

ಮೈಸೂರು ಚಲೋ ಯಾತ್ರೆಯ ಸಂದೇಶ

ಅಂದ ಹಾಗೆ, ಬಿಜೆಪಿ ಮಿತ್ರಕೂಟದ ‘ಮೈಸೂರು ಚಲೋ’ ಪಾದಯಾತ್ರೆಯ ಸಾಧನೆ ಏನು? ಅದು ರವಾನಿಸಿದ ಸಂದೇಶವೇನು?ಎಂಬ ಬಗ್ಗೆ ಕುತೂಹಲಕಾರಿ ಚರ್ಚೆಗಳು ಪ್ರಾರಂಭವಾಗಿವೆ. ಕೆಲ ನಾಯಕರ ಪ್ರಕಾರ, ಮೈಸೂರು ಚಲೋ ಪಾದಯಾತ್ರೆ ಪ್ರಾರಂಭವಾದಾಗ ಅದರ ಸಾಧನೆ
ಯಾವ ಲೆವೆಲ್ಲಿಗೆ ಹೋಗಬಹುದು ಎಂಬ ಕುತೂಹಲವಿತ್ತು. ಅದರಲ್ಲೂ ಮುಖ್ಯವಾಗಿ ಪಾದಯಾತ್ರೆ ಗುರಿ ತಲುಪುವ ಹೊತ್ತಿಗೆ ರಾಜ್ಯಪಾಲರು ಸಿಎಂ ವಿರುದ್ಧದ ವಿಚಾರಣೆಗೆ ಅನುಮತಿ ಕೊಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಆದರೆ ಈ ಯಾತ್ರೆ ನಿಸ್ಸಂಶಯವಾಗಿ ರಾಜ್ಯದ ಜನತೆಗೆ ಎರಡು ಸಂದೇಶಗಳನ್ನು ರವಾನಿಸಿತು.

ಮೊದಲನೆಯದಾಗಿ ಬಿಜೆಪಿ ಮಿತ್ರಕೂಟದ ನಾಯಕತ್ವಕ್ಕಾಗಿ ಕುಮಾರಸ್ವಾಮಿ-ವಿಜಯೇಂದ್ರ ಮಧ್ಯೆ ಫೈಟು ಶುರುವಾಗಿದೆ ಎಂಬುದು. ಎರಡನೆಯದಾಗಿ, ಒಕ್ಕಲಿಗ ಪಾಳೇಪಟ್ಟಿನ ನಾಯಕತ್ವಕ್ಕಾಗಿ ಕುಮಾರಸ್ವಾಮಿ -ಡಿಕೆಶಿ ಎಂಥ ರಣಭೀಕರ ಕದನಕ್ಕೂ ತಯಾರಾಗಿ ನಿಂತಿದ್ದಾರೆ ಎಂಬುದು. ಇನ್ನು ಇಂಥ ಸಂದೇಶಗಳ ಹೊರತಾಗಿ ಜನರಿಗೆ ಥ್ರಿಲ್ಲರ್ ತರಹ ಕಾಣುತ್ತಿರುವುದು ಕಾಂಗ್ರೆಸ್ ಮತ್ತು ಮಿತ್ರಕೂಟದ ನಾಯಕರ ಆರೋಪ-ಪ್ರತ್ಯಾರೋಪ. ಅವರ ಈ ಆರೋಪ-ಪ್ರತ್ಯಾರೋಪಗಳು ಯಾವ ಯಾವ ಹಗರಣಗಳಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ?ಎಷ್ಟೆಷ್ಟು ಕಾಸು ಒಟ್ಟಿಟ್ಟಿzರೆ ಎಂಬುದನ್ನು ಧ್ವನಿಸುತ್ತಿರುವುದರಿಂದ ತುಂಬಾ ಜನ ಬೆಕ್ಕಸ ಬೆರಗಾಗಿರುವುದು ನಿಜ.