ಒಡಲಾಳ
ಅನನ್ಯ ಭಾರ್ಗವ ಬೇದೂರು
ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಪ್ರತಿ ವರ್ಷದಂತೆ ಈ ವರ್ಷವೂ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಇದರಲ್ಲೇನು ಹೊಸತು? ಎಂದು ಕೆಲವರಿಗೆ ಅನ್ನಿಸಬಹುದು. ಅಲ್ಲೇ ಇರುವುದು ವಿಶೇಷತೆ- ಪೆನ್ಡ್ರೈವ್ ಮೂಲಕ ಶಿಷ್ಯವೇತನಕ್ಕ ಆಹ್ವಾನ. ಹೌದು, ಇಷ್ಟು ವರ್ಷ ಅನೂಚಾನವಾಗಿ ನಡೆದು ಕೊಂಡು ಬಂದ ಒಂದು ಪದ್ಧತಿಯು, ಆಧುನಿಕ ಜಗತ್ತಿಗೆ ಅಪ್ ಡೇಟ್ ಎಂಬ ರೀತಿಯಲ್ಲಿ ಹೊಸರೀತಿಯ ಶಿಷ್ಯವೇತನ ಪದ್ಧತಿಯಾಗಿ ಬದಲಾಗಿದೆ. ಇದು ತುಂಬಾ ದುರದೃಷ್ಟಕರ.
ಹಿಂದೆ ಶಿಷ್ಯವೇತನ ಪಡೆಯಲು ಇದ್ದ ಮಾರ್ಗವೇ ಬೇರೆ. ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯು ರಾಜ್ಯದ ಸುಮಾರು ಏಳು ಜಿಲ್ಲೆಗಳಲ್ಲಿ ಕೇಂದ್ರ ಗಳನ್ನು ಸ್ಥಾಪಿಸಿದೆ. ಸುತ್ತಮುತ್ತಲ ಪ್ರದೇಶ ಮತ್ತು ಗ್ರಾಮೀಣ ಭಾಗಗಳಲ್ಲಿರುವ, ಸಂಗೀತ ಮತ್ತು ನೃತ್ಯ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಅಕಾಡೆಮಿಯು ನಿಗದಿಪಡಿಸಿರುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಕಥಾಕೀರ್ತನ, ಗಮಕ, ನೃತ್ಯ ಮೊದಲಾದ ಕಲಾಪ್ರಕಾರಗಳಲ್ಲಿ ಶಿಷ್ಯವೇತನದ ಪಠ್ಯಕ್ರಮದಂತೆ ತಯಾರಿ ನಡೆಸಿ ಪರೀಕ್ಷೆಗೆ ಹಾಜರಾಗುತ್ತಿದ್ದರು.
ಪ್ರತಿ ಕೇಂದ್ರಕ್ಕೆ ಕನಿಷ್ಠಪಕ್ಷ ಇಬ್ಬರು-ಮೂವರು ಪರಿಣತ ಸಂಗೀತ ಮತ್ತು ನೃತ್ಯ ಕಲಾವಿದರು ಅಲ್ಲಿ ಪರೀಕ್ಷಕರಾಗಿ ಪಾಲ್ಗೊಳ್ಳುತ್ತಿದ್ದರೆ. ಅಂದಾಜಿನ ಪ್ರಕಾರ, ಒಟ್ಟಾರೆಯಾಗಿ ೩೦-೩೫ ಇಂಥ ವಿದ್ವಾಂಸರು ಹಾಗೂ ಸಂಗೀತ-ನೃತ್ಯ ಅಕಾಡೆಮಿಯ ಸದಸ್ಯರ ಸಮ್ಮುಖದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಬಂದಂಥ ವಿದ್ಯಾರ್ಥಿಗಳಿಗೆ ಪಕ್ಕವಾದ್ಯಗಾರರನ್ನು ಕೂಡ ಅಕಾಡೆಮಿಯೇ ನೇಮಿಸಿಕೊಡುತ್ತಿತ್ತು.
ಈ ರೀತಿ ಪ್ರತ್ಯಕ್ಷ (ಲೈವ್) ಸ್ವರೂಪದಲ್ಲಿ ನಡೆಯುವ ಪರೀಕ್ಷೆಗೆ ಅದರದೇ ಆದಂಥ ಮಹತ್ವ ಇರುತ್ತದೆ. ಪ್ರತಿ ವಿದ್ಯಾರ್ಥಿಗೂ ಇದೊಂದು ಪುಟ್ಟ ವೇದಿಕೆಯೇ ಆಗಿರುತ್ತದೆ. ಪರೀಕ್ಷಕರು ವಿದ್ಯಾರ್ಥಿಯ ರಾಗ-ಭಾವ-ತಾಳ, ನೃತ್ಯದ ಚಲನೆಯ ಗತಿ ಇವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಆತನ/ ಆಕೆಯ ತಯಾರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅವರ ಪೈಕಿ ಅರ್ಹರಾದವರನ್ನು ಶಿಷ್ಯವೇತನಕ್ಕೆ ಆಯ್ಕೆಮಾಡುತ್ತಿದ್ದರು. ಹೀಗೆ ಉತ್ತಮ ಪ್ರತಿಭೆ ಗಳನ್ನು ಆಯ್ಕೆಮಾಡಿದ ಪರೀಕ್ಷಕರಿಗೆ ಮತ್ತು ಪಕ್ಕವಾದ್ಯಗಾರರಿಗೆ ಸೂಕ್ತವಾದಂಥ ಸಂಭಾವನೆ ಕೊಟ್ಟುಗೌರವಿಸಲಾಗುತ್ತಿತ್ತು. ಆದರೆ ಈ ವರ್ಷ ಈ ಪರಿಪಾಠವನ್ನು ಗಾಳಿಗೆ ತೂರಲಾಗಿದೆ. ಶಿಷ್ಯವೇತನ ಬಯಸುವ ವಿದ್ಯಾರ್ಥಿಗಳು ನಿಗದಿತ ಪಠ್ಯಕ್ರಮದ ಅನುಸಾರ ತಮ್ಮ ಪ್ರದರ್ಶನವನ್ನು ಮೊಬೈಲ್ ನಲ್ಲಿ ಅಥವಾ ಒಳ್ಳೆಯ ಸ್ಟುಡಿಯೋಗಳಲ್ಲಿ ವಿಡಿಯೋ ಮಾಡಿ, ಅದನ್ನು ಪೆನ್ಡ್ರೈವ್ಗೆ ವರ್ಗಾಯಿಸಿ ಅಕಾಡೆಮಿಗೆ ಕಳುಹಿಸಿಕೊಡಬೇಕಂತೆ.
ಅಲ್ಲಿನವರು ಅದನ್ನು ವೀಕ್ಷಿಸಿ ಶಿಷ್ಯವೇತನಕ್ಕೆ ಯಾರು ಸೂಕ್ತರು/ಅರ್ಹರು ಎನ್ನುವುದನ್ನು ಅಲ್ಲಿಯೇ ಕುಳಿತು ನಿರ್ಧರಿಸುತ್ತಾರಂತೆ! ಎಲ್ಲಿಗೆ ಬಂತು ಕಾಲ? ಒಂದು ಮಾಹಿತಿಯ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಕಲಾಪ್ರದರ್ಶನದ ೨೦ ನಿಮಿಷದ ವಿಡಿಯೋ ಮಾಡಿ ಕಳುಹಿಸಬೇಕಂತೆ. ಇಲ್ಲಿ ಗಮನಿಸ ಬೇಕಾದ್ದು ಆರ್ಥಿಕ ಸಬಲತೆಯನ್ನು ಹೊಂದಿರುವ ಪೋಷಕರು ಉತ್ತಮ ಸ್ಟುಡಿಯೋಗಳಲ್ಲಿ ರೆಕಾರ್ಡಿಂಗ್ ಮಾಡಿಸಬಲ್ಲವರಾಗಿರುತ್ತಾರೆ.
ಸಾಲದೆಂಬಂತೆ, ಮಕ್ಕಳು ಎಷ್ಟೇ ತಪ್ಪಾಗಿ ಹಾಡಿದರು ಕೂಡ ಸುಧಾರಿತ ಆವೃತ್ತಿಯನ್ನು ‘ಕಟ್ ಆಂಡ್ ಪೇಸ್ಟ್’ ಮಾಡಿ, ಸಾಮಾನ್ಯ ಹಾಡುಗಾರರನ್ನೂ ಅಸಾಮಾನ್ಯರಾಗಿ ಪರಿವರ್ತಿಸಬಲ್ಲ ಸಾಫ್ಟ್ ವೇರ್ಗಳು ಅಭಿವೃದ್ಧಿಯಾಗಿವೆ. ಗ್ರಾಮೀಣ ಪ್ರದೇ ಗಳಲ್ಲಿರುವ ಮತ್ತು ಬಡ-ಮಧ್ಯಮ ವರ್ಗದ ಪ್ರತಿಭಾವಂತ
ವಿದ್ಯಾರ್ಥಿಗಳು ಇದನ್ನೆಲ್ಲ ಮಾಡಲು ಸಾಧ್ಯವೇ? ತಮ್ಮ ಪ್ರತಿಭೆಯನ್ನು ಅವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು, ಸಾವಿರಾರು ರುಪಾಯಿ ಕೊಟ್ಟು ಪೆನ್ಡ್ರೈವ್ ಖರೀದಿಸಿ (ಈಗ ಮೊದಲಿನಿಂತೆ ೨೦೦-೩೦೦ ರುಪಾಯಿಗೆ ಪೆನ್ಡ್ರೈವ್ ಸಿಗುವುದಿಲ್ಲ), ಅದಕ್ಕೆ ತಮ್ಮ ಧ್ವನಿಮುದ್ರಿತ ಕಲಾ ಪ್ರದರ್ಶನವನ್ನು ವರ್ಗಾಯಿಸಿ ಅಕಾಡೆಮಿಗೆ ಕಳುಹಿಸಿಕೊಡಲು ಸಾಧ್ಯವೇ? ಈಗ ಮಳೆಗಾಲವಾಗಿರುವುದರಿಂದ, ಸಾಕಷ್ಟು ಹಳ್ಳಿಗಳಲ್ಲಿ ವಿದ್ಯುಚ್ಛಕ್ತಿ ಪೂರೈಕೆಯು ಸಮರ್ಪಕವಾಗಿರುವುದಿಲ್ಲ, ಕೆಲವೊಂದು ಪ್ರದೇಶಗಳಲ್ಲಿ ೩-೪ ದಿನಗಳವರೆಗೂ ವಿದ್ಯುತ್ತು ಅಲಭ್ಯವಾಗಿರುತ್ತದೆ.
ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಹೇಗೆ ವಿಡಿಯೋ ಮಾಡಿ ಕಳುಹಿಸಿಕೊಡಲು ಸಾಧ್ಯ? ನಾಲ್ಕು ಗೋಡೆಗಳ ಮಧ್ಯೆ ಕುಳಿತು ಎದುರಿಗೆ ಮೊಬೈಲ್ ಇಟ್ಟು ಹಾಡಿಯೋ ಅಥವಾ ನರ್ತಿಸಿಯೋ ಧ್ವನಿಮುದ್ರಿಸಿಕೊಂಡು ನಂತರ ಪೆನ್ಡ್ರೈವ್ಗೆ ಹಾಕಿ ಕಳುಹಿಸಿಕೊಡುವುದು ಸೂಕ್ತವೇ ಅಥವಾ ಶಿಷ್ಯವೇತನ
ಸಂಬಂಧಿತ ಸಂದರ್ಶನದಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸುವುದು ಸೂಕ್ತವೇ? ಸುಮಾರಾಗಿ ಪ್ರತಿ ಪೆನ್ಡ್ರೈವ್ನಲ್ಲಿ ಇಪ್ಪತ್ತೇ ನಿಮಿಷ ಎಂದು ಪರಿಗಣಿಸಿ ದರೂ, ಸಾವಿರಾರು ವಿದ್ಯಾರ್ಥಿಗಳು ಕಳುಹಿಸಿದ ಪೆನ್ಡ್ರೈವ್ಗಳಲ್ಲಿನ ಆ ಅವಧಿಯ ಕಲಾಪ್ರಸ್ತುತಿಯನ್ನು ವೀಕ್ಷಿಸಲು ಎಷ್ಟೊಂದು ಸಮಯ ಬೇಕಾಗುತ್ತದೆ (ಜತೆಗೆ ಸಂಗೀತ-ನೃತ್ಯ ಅಕಾಡೆಮಿಯು ಪೆನ್ಡ್ರೈವ್ನ ಕಾರ್ಖಾನೆಯಾಗಿ ಬಿಡುತ್ತದೆ!).
ಹೀಗೆ ವೀಕ್ಷಿಸುವ ಮೂಲಕ ಶಿಷ್ಯವೇತನಕ್ಕೆ ಅರ್ಹರನ್ನು ಹೇಗೆ ಆಯ್ಕೆ ಮಾಡುತ್ತಾರೋ ದೇವರೇ ಬಲ್ಲ. ರಾಜ್ಯದ ಸಾಂಸ್ಕೃತಿಕ ಕಲಾಲೋಕದ ಪ್ರತಿ ಯೊಬ್ಬ ದಿಗ್ಗಜರು, ದೊಡ್ಡ ದೊಡ್ಡ ಸಂಗೀತಗಾರರು, ಕಲಾವಿದರು ಈ ಪರಿಪಾಠವನ್ನು ಪ್ರಶ್ನಿಸಬೇಕಿದೆ. ಇಲ್ಲವಾದರೆ, ಮುಂದೊಂದು ದಿನ ‘ಆಧುನಿಕತೆಗೆ ಅಪ್ಡೇಟ್’ ಎಂಬ ಭ್ರಮೆಗೆ ಬಿದ್ದು, ಅದರ ಮುಂದಿನ ಭಾಗವಾಗಿ ನಾಲ್ಕು ಗೋಡೆಗಳ ಮಧ್ಯೆ ಪ್ರೇಕ್ಷಕರೇ ಇಲ್ಲದೆ ಸಂಗೀತ-ನೃತ್ಯ ಕಲಾವಿದರು ತಮ್ಮ ಪ್ರಸ್ತುತಿಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಅಕಾಡೆಮಿಗೆ ಕಳಿಸಿ ಗೌರವ ಸಂಭಾವನೆಯನ್ನು ಪಡೆದುಕೊಳ್ಳುವ ದಿನ ಬಂದರೂ ಆಶ್ಚರ್ಯ ವಿಲ್ಲ.
ಅಲ್ಲಿರುವ ಸದಸ್ಯರು ಕೂಡ ಈ ಪರಿಪಾಠಕ್ಕೆ ತಲೆದೂಗಿದರೆ ಹೇಗೆ ಎಂಬುದು ನನಗೆ ಅಚ್ಚರಿಯುಂಟುಮಾಡಿರುವ ಸಂಗತಿ. ಕಲಾಪ್ರೇಮಿಗಳಲ್ಲಿ, ಪ್ರಜ್ಞಾವಂತ ಕಲಾವಿದರಲ್ಲಿ ನನ್ನ ನಮ್ರ ವಿನಂತಿಯಿಷ್ಟೇ- ಇದನ್ನು ಅಧ್ಯಕ್ಷರ ಬಳಿಯಲ್ಲಿ ನೇರವಾಗಿ ಪ್ರಶ್ನಿಸೋಣ. ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿದರೆ ನಾನಂತೂ ಇಂಥ ಹೋರಾಟಗಳಿಗೆ ಸದಾ ಸಿದ್ಧ. ಕಲಾವಿದರು ದಯವಿಟ್ಟು ಪ್ರತಿಕ್ರಿಯಿಸಿ, ದನಿಯೆತ್ತಿ.
(ಲೇಖಕರು ಸಂಗೀತ-ನೃತ್ಯ ಅಕಾಡೆಮಿಯ ಮಾಜಿ
ಸದಸ್ಯರು)