ನಿಜದರ್ಶನ
ಶಶಿ ತರೂರ್
ಕೇರಳದ ವಯನಾಡಿನಲ್ಲಿ ಸಂಭವಿಸಿದ ಆಘಾತಕಾರಿ ಭೂಕುಸಿತ ಕೇವಲ ಎಚ್ಚರಿಕೆಯ ಗಂಟೆಯಷ್ಟೇ ಅಲ್ಲ, ಬಹಳ ಕಾಲದಿಂದ ಅನುರಣಿ
ಸುತ್ತಿದ್ದ ಮರಣಗಂಟೆಯೂ ಆಗಿತ್ತು. ಆದರೂ, ಆತ್ಮಾ ವಲೋಕನ ಮಾಡಿಕೊಳ್ಳುವುದರ ಬದಲು, ನಮ್ಮ ತಪ್ಪುಗಳಿಂದ ಪಾಠ ಕಲಿಯುವುದರ ಬದಲು ಹಾಗೂ ಪುನಃ ಈ ತಪ್ಪು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದರ ಬದಲು ನಾವು ತಕ್ಷಣದ ಪರಿಹಾರ (ಇದನ್ನು ಕೇರಳ ಚೆನ್ನಾಗಿ
ಮಾಡುತ್ತದೆ), ನಂತರ ಪುನರ್ವಸತಿಗೇ (ಇದನ್ನು ಕೇರಳ ಚೆನ್ನಾಗಿ ಮಾಡುವುದಿಲ್ಲ) ಗಮನ ನೀಡುತ್ತಾ ಬಂದಿದ್ದೇವೆ.
ನಂತರ ಎಂದಿನಂತೆ ನಮ್ಮ ಜೀವನವ್ಯಾಪಾರ ಸಾಗುತ್ತದೆ. ರಾಜಕೀಯದ ಜಡತ್ವವನ್ನು ಮೀರಿ ಕ್ರಮ ಕೈಗೊಳ್ಳುವುದಕ್ಕೆ ನಾವು ವಿಫಲರಾಗುತ್ತಿರು ವುದರಿಂದ ಭವಿಷ್ಯದಲ್ಲಿ ಇಂಥ ದುರಂತಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವಲ್ಲಿಯೂ ಸೋಲುತ್ತಿದ್ದೇವೆ. ದುರಂತ ಸಂಭವಿಸಿದ ಬಳಿಕ ಆಗಸ್ಟ್ ೩ರ ಶನಿವಾರ ನಾನು ವಯನಾಡಿಗೆ ಹೋಗಿದ್ದೆ. ತಿರುವನಂತಪುರಂನ ಸಂಸದರ ಕಚೇರಿಯು ಸಂಗ್ರಹಿಸಿದ್ದ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ನನ್ನ ಕೈಲಾದಷ್ಟು ಸಹಾಯ ಮಾಡಿದೆ.
ಮುಂಡಕ್ಕೆ, ಚೂರಲ್‌ಮಲ ಹಾಗೂ ಪುಂಚಿರಿ ಮಟ್ಟಮ್‌ನಲ್ಲಿ ಉಂಟಾದ ಸರ್ವನಾಶವನ್ನು ಕಣ್ಣಾರೆ ಕಂಡು ಮರುಗಿದೆ. ಕೇವಲ ಐದು ದಿನಗಳ ಹಿಂದಿನವರೆಗೆ ಜನರು ಸ್ವಚ್ಛ ನೀಲಾಕಾಶದ ಕೆಳಗೆ ಖುಷಿಯಿಂದ ಬದುಕುತ್ತಿದ್ದ ಸುಂದರ ಪರ್ವತದ ಪರಿಸರದಲ್ಲಿ ಈಗ ಜೆಸಿಬಿಗಳು ಗರ್ಜಿಸುವುದನ್ನು ಕೇಳಿದೆ. ಅದೃಷ್ಟವಶಾತ್ ಬದುಕುಳಿದವರನ್ನು ಕಾಳಜಿ ಕೇಂದ್ರಗಳಲ್ಲಿ ಮಾತನಾಡಿಸಿದೆ. ನಂತರ ಆಸ್ಪತ್ರೆಗೆ ಹೋದೆ. ಅಲ್ಲಿ ಜುಲೈ ೩೦ರ ಬೆಳಗ್ಗೆ
ಸಂಭವಿಸಿದ ಭಯಾನಕ ಘಟನೆಯಲ್ಲಿ ಮನೆ ಹಾಗೂ ಕನಸುಗಳನ್ನು ಕಳೆದುಕೊಂಡು ಗೋಳಾಡುತ್ತಿದ್ದ ದುರದೃಷ್ಟವಂತರನ್ನು ನೋಡಿದೆ.
ಬಂಡೆಗಲ್ಲುಗಳು ಹಾಗೂ ಮಣ್ಣಿನ ರಾಶಿಗಳ ಅಡಿಯಲ್ಲಿ ಅವರು ಭವಿಷ್ಯವನ್ನು ಕಳೆದುಕೊಂಡಿದ್ದರು. ಅಲ್ಲೊಬ್ಬಳು ಪುಟ್ಟ ಹುಡುಗಿ ಸಿಕ್ಕಳು. ಅವಳು ನಾವು ಊಹಿಸಲಾಗದ ನಷ್ಟವನ್ನೂ ದುಃಖವನ್ನೂ ಅನುಭವಿಸಿದ್ದಳು. ಅವಳಿಗೆ ಬರೀ ಎಂಟು ವರ್ಷ. ತಂದೆ, ತಾಯಿ, ಅಣ್ಣ, ತಂಗಿ, ಅಜ್ಜ, ಅಜ್ಜಿ ಎಲ್ಲರನ್ನೂ ಕಳೆದುಕೊಂಡಿದ್ದಳು. ಮೈತುಂಬಾ ಗಾಯಗಳಾಗಿದ್ದವು. ಮೈಮೂಳೆಗಳು ಮುರಿದಿದ್ದವು. ಮುಖ ತರಚಿತ್ತು. ಆ ನೋವಿನಲ್ಲೂ ಅವಳು ಹಾಸಿಗೆಯ ಮೇಲೆ ತನ್ನ ಕಲರಿಂಗ್ ಬುಕ್‌ನಲ್ಲಿ ತಲ್ಲೀನಳಾಗಿದ್ದಳು. ನನ್ನನ್ನು ಶೂನ್ಯ ಆವರಿಸಿಕೊಂಡಿತು. ಕೊನೆಯ ಪಕ್ಷ ಅವಳೇನು ಅನುಭವಿಸಿದ್ದಾಳೋ ಅದನ್ನು ತಡೆಯುವುದಕ್ಕಾದರೂ ನಮ್ಮಿಂದ ಸಾಧ್ಯವಾಗಬೇಕಿತ್ತು.
ಪ್ರಕೃತಿಯ ಜತೆಗಿನ ಕೇರಳದ ಯುದ್ಧದ ಗಡಿ ಬಹಳ ಹಿಂದೆಯೇ ರಚನೆಯಾಗಿತ್ತು. ಹವಾಮಾನ ಬದಲಾವಣೆಯೊಂದಿಗೆ ಅದು ಇನ್ನಷ್ಟು ಢಾಳಾಗಿ ಗೋಚರಿಸುತ್ತಿತ್ತು. ೨೦೨೩ರ ಫೆಬ್ರವರಿಯಲ್ಲಿ ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಭಾರತದ ಭೂಕುಸಿತದ ಸಾಧ್ಯತೆಯ ನಕ್ಷೆಯನ್ನು ಪ್ರಕಟಿಸಿತ್ತು. ಅದರಲ್ಲಿ ೧೭ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ೧೪೭ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಲಾಗಿತ್ತು. ಆ ಪೈಕಿ ಭೂಕುಸಿತದ ಸಾಧ್ಯತೆ ಅತ್ಯಂತ ಹೆಚ್ಚಿರುವ ೫೦ ಜಿಲ್ಲೆಗಳಲ್ಲಿ ಕೇರಳದ ೧೪ ಜಿಲ್ಲೆಗಳ ಪೈಕಿ ೧೩ ಜಿಲ್ಲೆಗಳಿದ್ದವು.
ದೇಶದಲ್ಲೇ ವಯನಾಡು ೧೩ನೇ ಅತಿಹೆಚ್ಚು ಭೂಕುಸಿತದ ಸಾಧ್ಯತೆಯಿರುವ ಜಿಲ್ಲೆಯೆಂಬ ಆತಂಕವನ್ನು ಗಳಿಸಿತ್ತು. ಈ ನಕ್ಷೆ ಪ್ರಕಟವಾದಾಗಲೇ ಕೇರಳದ ಹಣೆಬರಹವನ್ನು ಗೋಡೆಯ ಮೇಲೆ ಬರೆದಂತಾಗಿತ್ತು. ೨೦೧೯ರಲ್ಲಿ ವಯನಾಡಿನ ಪುತುಮಲಾದಲ್ಲಿ ಭೂಕುಸಿತ ಸಂಭವಿಸಿದಾಗ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ವಿಶೇಷ ಅಥವಾ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ನಂತರದ ಐದು ವರ್ಷಗಳಲ್ಲಿ, ಕತ್ತಲ ರಾತ್ರಿಯ ರಹಸ್ಯ ಕಾರ್ಯಾಚರಣೆಗಳಲ್ಲಿ ವೆಲರಿಮಲ ಬೆಟ್ಟಗಳಲ್ಲಿ ೮೬,೦೦೦ ಚದರ ಕಿಲೋಮೀಟರ್‌ನಷ್ಟು ಕಾಡುಗಳು ಕಣ್ಮರೆಯಾದವು.
ಈಗ ಭೂಕುಸಿತದಿಂದ ಸಂಪೂರ್ಣ ಭೂಲಕ್ಷಣವೇ ಬದಲಾಗಿರುವ ಇರುವಜಿಂಜಿಪುಳ ಪರ್ವತ ಶ್ರೇಣಿಯಲ್ಲೇ ಈ ಜಾಗ ಬರುತ್ತದೆ. ಇಲ್ಲಿನ ಮುಂಡಕ್ಕೆ , ಚೂರಲ್‌ಮಲ, ಅಟ್ಟಮಲ ಮತ್ತು ನೂಲ್ಪುಳದಲ್ಲೇ ಭಾರಿ ಭೂಕುಸಿತ ಸಂಭವಿಸಿದೆ. ಇಲ್ಲಿ ವಾಸಿಸುತ್ತಿದ್ದ ಜನರು ಗುಡ್ಡ ಕುಸಿತದ ದುರಂತದಲ್ಲಿ ಕೇವಲ ಸಂಖ್ಯೆಗಳಾಗಿ ಶವಾಗಾರಕ್ಕೆ ಹೋಗಿದ್ದಾರೆ. ೩೦೦ಕ್ಕೂ ಹೆಚ್ಚು ದೇಹಗಳು ಇಲ್ಲೇ ಸಿಕ್ಕಿವೆ. ೨೦೦ಕ್ಕೂ ಹೆಚ್ಚು ಜೀವಗಳು ಇನ್ನೂ ಸಿಕ್ಕಿಲ್ಲ. ಅವು ಬದುಕುಳಿದಿರುವ ಸಾಧ್ಯತೆ ದಿನೇದಿನೆ ಕ್ಷೀಣಿಸುತ್ತಿದೆ.
ಪರಿಸರ ವ್ಯವಸ್ಥೆಯಲ್ಲಿ ಕೇರಳ ಬಹಳ ಅಸ್ಥಿರ ಸ್ಥಿತಿಯಲ್ಲಿದೆ. ೨೦೧೫ರಿಂದ ೨೦೨೨ರ ನಡುವೆ ಇಡೀ ದೇಶದಲ್ಲೇ ಈ ರಾಜ್ಯದಲ್ಲಿ ಅತಿಹೆಚ್ಚು ಭೂಕುಸಿತ ಗಳು ಸಂಭವಿಸಿದ್ದಷ್ಟೇ ಅಲ್ಲ, ೨೦೧೭ರಿಂದ ೨೦೨೨ರ ನಡುವೆ ಇಲ್ಲಿ ನೈಸರ್ಗಿಕ ವಿಪತ್ತು ಸಂಭವಿಸದೆ ಇದ್ದ ವರ್ಷವೇ ಇರಲಿಲ್ಲ. ಚಂಡಮಾರುತ,
ಪ್ರವಾಹ ಅಥವಾ ಭೂಕುಸಿತ ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಎಲ್ಲವೂ ಪ್ರತಿವರ್ಷ ಸಂಭವಿಸಿವೆ. ಈಗ ಉಂಟಾಗಿರುವ ದುರಂತಕ್ಕೆ ಅರಣ್ಯನಾಶ ಪ್ರಮುಖ ಕಾರಣಗಳಲ್ಲಿ ಒಂದು. ವಯನಾಡಿನ ಶೇ.೬೨ರಷ್ಟು ಅರಣ್ಯ ಪ್ರದೇಶ ೧೯೫೦ರಿಂದ ೨೦೧೮ರ ನಡುವೆ ಕಣ್ಮರೆಯಾಗಿದೆ!
ಅದರಿಂದಾಗಿ ಅನಿಯಂತ್ರಿತ ಮಣ್ಣಿನ ಸವಕಳಿ ಉಂಟಾಗಿದೆ. ಹೀಗಾಗಿ ಮಳೆಯ ನೀರು ಭೂಮಿಯ ಮೇಲ್ಮೆ ಪದರದಿಂದ ಕೆಳಗೆ ಇಳಿದಿದೆ. ಅದು ಭೂಮಿ ಯೊಳಗಿನ ಮಣ್ಣನ್ನು ಸಡಿಲಗೊಳಿಸಿದೆ. ಪರಿಣಾಮ, ಭೂಕುಸಿತ, ಮೇಲ್ಮೆ ಮಣ್ಣಿನಲ್ಲಿ ಕೊಳವೆಯಂಥ ರಚನೆಗಳು, ಭೂಮಿಯ ಒಳಗೆ ಸುರಂಗದಂಥ ರಚನೆಗಳು ಉಂಟಾಗಿವೆ. ಪುತುಮಲಾ ಭೂಕುಸಿತದಿಂದ ವಯನಾಡಿನಲ್ಲಿ ಊಹೆಗೂ ಸಿಲುಕದಷ್ಟು ಮಣ್ಣಿನ ಕೊಳವೆಗಳಂಥ ರಚನೆಗಳು ಸೃಷ್ಟಿಯಾಗಿವೆ. ಅದರಿಂದಾಗಿ ಭೂಕುಸಿತಗಳು ಹೆಚ್ಚಾಗಿವೆ. ಇವೆಲ್ಲದರ ಜತೆಗೆ ಹವಾಮಾನ ಬದಲಾವಣೆಯೂ ಸೇರಿಕೊಂಡು ಪರಿಸ್ಥಿತಿಯನ್ನು ಇನ್ನಷ್ಟು ಭೀಕರವಾಗಿಸುತ್ತಿದೆ.
ನಿರ್ದಯ ಮುಂಗಾರು ಮಳೆಯ ಅಬ್ಬರಕ್ಕೆ ದಿಢೀರ್ ಪ್ರವಾಹಗಳು ಉಂಟಾಗುವುದು ಹಾಗೂ ಭೂಮಿಯ ಮೇಲ್ಪದರ ಜಾರುವುದು ಪದೇಪದೆ ಸಂಭವಿಸುತ್ತಿದೆ. ಹವಾಮಾನ ವಿಜ್ಞಾನಿಗಳ ಪ್ರಕಾರ ಅರಬ್ಬಿ ಸಮುದ್ರದಲ್ಲಿ ಉಷ್ಣತೆ ಹೆಚ್ಚಾಗಿರುವುದರಿಂದ ಸಹಜಕ್ಕಿಂತ ಹೆಚ್ಚು ದಪ್ಪವಾದ ಮೋಡಗಳು ರೂಪುಗೊಳ್ಳುತ್ತಿವೆ. ಅದರಿಂದಾಗಿ ತೀರದ ಪ್ರದೇಶಗಳಲ್ಲಿ ಏಕಾಏಕಿ ಅನಿರೀಕ್ಷಿತ ಪ್ರಮಾಣದ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಕೇರಳದಲ್ಲಿ ಸಂಭವಿಸುವ ಭೂಕುಸಿತಗಳು ಇನ್ನಷ್ಟು ಹೆಚ್ಚಾಗುತ್ತಿವೆ. ವಯನಾಡಿನಲ್ಲಿ ಭೂಕುಸಿತ ಸಂಭವಿಸಿದ ವಾರದಲ್ಲಿ ಗರಿಷ್ಠ ೫೨ರಿಂದ ೨೦೦ ಮಿ.ಮೀ. ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಆದರೆ ಅದರ ಬದಲಿಗೆ ೫೨೨ ಮಿ. ಮೀ. ಮಳೆ ಕೆಲವೇ ಗಂಟೆಗಳಲ್ಲಿ ಸುರಿದಿದೆ. ಮೇಲ್ಮೆ ಮಣ್ಣಿಗೆ ಮಳೆಯ ನೀರನ್ನು ಹೀರಿಕೊಳ್ಳಲು ಎಷ್ಟು ಶಕ್ತಿಯಿರುತ್ತದೆಯೋ ಅದಕ್ಕಿಂತ ಈ ಮಳೆಯ ಪ್ರಮಾಣ ಹಲವಾರು ಪಟ್ಟುಗಳಷ್ಟು ಹೆಚ್ಚಿನದು.
ಹೀಗಾದಾಗ ಗುಡ್ಡಗಳು ಹೇಗೆ ತಡೆದುಕೊಳ್ಳುತ್ತವೆ? ತಪ್ಪಲಿನಲ್ಲಿ ವಾಸಿಸುವ ಜನರ ಬದುಕನ್ನು ನಾಶಪಡಿಸಲು ಅವು ಏಕಾಏಕಿ ಕುಸಿದುಬಿದ್ದಿವೆ!
ವಯನಾಡಿನಲ್ಲಿ ದುರಂತ ಸಂಭವಿಸಿದ ಮರುದಿನ ನಾನು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಇದನ್ನು ‘ಅತ್ಯಂತ ತೀವ್ರ ನೈಸರ್ಗಿಕ ವಿಪತ್ತು’ ಎಂದು ಘೋಷಿಸುವಂತೆ ಮನವಿ ಮಾಡಿದ್ದೆ. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಮಾರ್ಗದರ್ಶಿ ಸೂತ್ರಗಳಲ್ಲಿರುವ ೮.೧ನೇ ಪ್ಯಾರಾದಲ್ಲಿ ಇಂಥ ಮನವಿ ಮಾಡಲು ಸಂಸದರಿಗೆ ಅಧಿಕಾರವಿದೆ. ಹೀಗೆ ಘೋಷಿಸಿದರೆ ಲೋಕಸಭೆಯ ಎಲ್ಲಾ ೫೪೩ ಸಂಸದರು ಹಾಗೂ ರಾಜ್ಯಸಭೆಯ ಎಲ್ಲಾ ೨೫೦ ಸದಸ್ಯರು ತಾವು ಇಚ್ಛೆಪಟ್ಟಲ್ಲಿ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ೧ ಕೋಟಿ ರುಪಾಯಿ ನೆರವನ್ನು ವಯನಾಡಿನ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ಹಾಗೂ ಈ ಸುಂದರ ನಾಡಿನ ಮರುನಿರ್ಮಾಣಕ್ಕೆ ನೆರವು ನೀಡಲು ಅವಕಾಶ ಲಭಿಸುತ್ತದೆ (ಸದ್ಯದ ಪರಿಸ್ಥಿತಿಯಲ್ಲಿ ಈ ಕ್ಷೇತ್ರದ ಸಂಸದರು ಮಾತ್ರ ತಮ್ಮ ಪಾಲಿನ ಅನುದಾನವನ್ನು ಇಲ್ಲಿಗೆ ನೀಡಬಹುದು.
ಆದರೆ, ಸದ್ಯ ಇಲ್ಲಿಗೆ ಸಂಸದರು ಇಲ್ಲ. ಉಪ ಚುನಾವಣೆ ಕೂಡ ಘೋಷಣೆಯಾಗಿಲ್ಲ). ಕೇಂದ್ರ ಸರಕಾರದಿಂದ ನನಗೆ ಇನ್ನೂ ಉತ್ತರ ಬಂದಿಲ್ಲ.
ಆದರೂ ಒಂದು ಸಂಗತಿ ಸ್ಪಷ್ಟವಾಗಿದೆ. ಇಂಥ ದುರಂತಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲು ನಮಗೆ ಇನ್ನಷ್ಟು ದಕ್ಷವಾದ, ವಿಶ್ವಾಸಾರ್ಹವಾದ ಹಾಗೂ ‘ರಿಯಲ್ ಟೈಮ್’ ಮುನ್ಸೂಚನಾ ವ್ಯವಸ್ಥೆಯ ಅಗತ್ಯವಿದೆ. ಆಗ ತಕ್ಷಣ ಎಚ್ಚೆತ್ತುಕೊಂಡು ಜನರನ್ನು ಅಪಾಯದ ಕೇಂದ್ರ ಸ್ಥಳದಿಂದ ಬೇರೆಡೆಗೆ ಕಳುಹಿಸಲು, ಹಾಲಿ ಇರುವ ಮೂಲಸೌಕರ್ಯವನ್ನು ಹೆಚ್ಚಿಸಿಕೊಂಡು ತುರ್ತು ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳಲು ಹಾಗೂ ತೀವ್ರ ಸನ್ನದ್ಧ ಸ್ಥಿತಿಯನ್ನು ಹೊಂದಲು ಸಾಧ್ಯವಾಗುತ್ತದೆ. ಬಹಳ ಕಾಲದಿಂದ ನಾವು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನೇ ಇದಕ್ಕಾಗಿ ನಂಬಿಕೊಂಡಿದ್ದೇವೆ.
ಆದರೆ ಅದು ನಿರೀಕ್ಷಿತ ನೆರವು ನೀಡುತ್ತಿಲ್ಲ. ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಆಳವಾದ ವಿಶ್ಲೇಷಣೆಯ ಆಧಾರದ ಮೇಲೆ, ಬೇರೆ ಬೇರೆ ತಂತ್ರಗಳನ್ನು ಬಳಸಿ, ನಮಗೆ ಬೇಕಾದ ಸ್ಥಳದ ಭೂಲಕ್ಷಣ, ಅಲ್ಲಿನ ಜಲವಿಜ್ಞಾನ, ಹಸಿರಿನ ಪ್ರಮಾಣ ಹಾಗೂ ಇನ್ನಿತರ ಭೂಗುಣಗಳನ್ನು ಅರಿತುಕೊಳ್ಳಲು ಬಳಸಬೇಕಾಗುತ್ತದೆ. ಇಷ್ಟೆಲ್ಲ ಆದ ನಂತರ ಆ ಸ್ಥಳದ ಗರ್ಭದಲ್ಲಿ ಏನೇನು ನಿಗೂಢಗಳು ಅಡಗಿವೆ ಎಂಬುದನ್ನು ಊಹೆಯ ಮೇಲೆ ತಿಳಿದುಕೊಳ್ಳ ಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ಕಳುಹಿಸಿದ ಉಪಗ್ರಹಗಳು ಪ್ರದೇಶದ ಚಿತ್ರಗಳನ್ನು ಕ್ಲಿಕ್ಕಿಸಿ, ಅಲ್ಲಿನ ಭೂಲಕ್ಷಣದ ಪ್ರತಿಯೊಂದು ಅಂಶವನ್ನೂ ದಾಖಲಿಸಿ, ನೀರು, ಮಣ್ಣು, ಹಸಿರು, ಬಂಡೆ ಹೀಗೆ ಪ್ರತಿಯೊಂದರ ಬಗ್ಗೆಯೂ ಮಾಹಿತಿ ಯನ್ನು ಕಲೆಹಾಕಿ ಕಳುಹಿಸುತ್ತವೆ.
ಈ ಎಲ್ಲಾ ಮಾಹಿತಿಗಳನ್ನೂ ಜೋಡಿಸಿ, ಎಲ್ಲಾ ಚಿತ್ರಗಳನ್ನೂ ಒಂದೆಡೆ ಸೇರಿಸಿದಾಗ ನಿರ್ದಿಷ್ಟ ಸ್ಥಳದ ಸಮಗ್ರ ನಕ್ಷೆ ಸಿದ್ಧವಾಗುತ್ತದೆ. ಈ ಹಂತದಲ್ಲಿ ಆಳವಾದ ವಿಶ್ಲೇಷಣೆ ಮಾಡಬೇಕಾಗುತ್ತದೆ. ಪ್ರದೇಶವು ನೈಸರ್ಗಿಕ ವಿಪತ್ತುಗಳ ಅಪಾಯದ ಸಾಧ್ಯತೆಯನ್ನು ಯಾವ ಪ್ರಮಾಣದಲ್ಲಿ ಎದುರಿಸುತ್ತಿದೆ ಎಂಬುದನ್ನು ಊಹಾತ್ಮಕ ಮಾದರಿಗಳ ಮೂಲಕ ತಿಳಿದುಕೊಳ್ಳಬೇಕಾಗುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ನಿರ್ಮಿಸುವ ಬೇರೆ ಬೇರೆ ರೀತಿಯ ಊಹಾತ್ಮಕ ಮಾದರಿಗಳ ರೀತಿಯಲ್ಲೇ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಕಳುಹಿ ಸುವ ಮಾಹಿತಿಯ ವಿಶ್ಲೇಷಣೆಯ ಫಲಿತಾಂಶ ಕೂಡ ಸಂಪೂರ್ಣ ನಿಖರವಾಗಿರುವುದಿಲ್ಲ ಎಂಬುದೇ ನಿಜವಾದ ಸಮಸ್ಯೆ ಮತ್ತು ಈ ಉಪಗ್ರಹಗಳು ಮಣ್ಣಿನ ಕೆಳಗಿರುವುದನ್ನು ಗುರುತಿಸುವುದಿಲ್ಲ.
ವಯನಾಡ್ ದುರಂತದಿಂದ ನಾವು ಶಾಶ್ವತವಾದ ಮತ್ತು ಸರಿಯಾದ ಪಾಠ ಕಲಿಯಬೇಕಿದೆ. ನೈಸರ್ಗಿಕ ವಿಪತ್ತುಗಳ ಮುನ್ಸೂಚನೆಗೆ ಕೇವಲ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿರದೆ, ಭೂಮಿಯ ಮೇಲೇ ಸೆನ್ಸರ್ ಗ್ರಿಡ್‌ಗಳನ್ನು ಸ್ಥಾಪಿಸಬೇಕಿದೆ. ಅವು ಭೂಕುಸಿತದ ಮುನ್ನೆಚ್ಚರಿಕೆ ನೀಡುವ ಸಾಮರ್ಥ್ಯ ಹೊಂದಿವೆ. ಇಂದು ನಮ್ಮಲ್ಲಿ ಶರವೇಗದ ಹಾಗೂ ಅಗಾಧ ಸಾಮರ್ಥ್ಯದ ಇಂಟರ್ನೆಟ್ ಇದೆ. ವಯನಾಡಿನಲ್ಲಿ ಗುಡ್ಡ ಕುಸಿತ
ಸಂಭವಿಸಿದ ನಂತರ ಅವು ಭೀಕರತೆಯ ಇಂಚಿಂಚನ್ನೂ ಬಗೆದು ನೋಡಲು ಸಾಧ್ಯವಾಗುವಂತೆ ಕಳುಹಿಸುತ್ತಿರುವ ಚಿತ್ರಗಳನ್ನು ನೋಡಿದರೆ ನಾವು ಈ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಖೇದವಾಗುತ್ತದೆ. ಭೂಕುಸಿತದ ನಂತರ ಎನ್‌ಆರ್‌ಎಸ್‌ಸಿ ಬಿಡುಗಡೆ ಮಾಡಿದ ‘ಮೊದಲ’ ಮತ್ತು ‘ನಂತರದ’ ಚಿತ್ರಗಳನ್ನು ನೋಡಿದರೆ ರಿಮೋಟ್ ಸೆನ್ಸಿಂಗ್ ಮೂಲಕ ನಾವು ಘಟನೆ ಸಂಭವಿಸಿದ ಬಳಿಕ ಆತ್ಮಾವಲೋಕನ
ಮಾಡಿಕೊಳ್ಳಲು ಮಾತ್ರ ಸಾಧ್ಯವಿದೆ, ಜನರ ಜೀವ ಹೋದ ನಂತರವಷ್ಟೇ ಘಟನೆಯ ವಿಶ್ಲೇಷಣೆ ನಡೆಸಲು ಅದನ್ನು ಬಳಸಬಹುದು ಎಂಬುದು ಖಚಿತವಾಗುತ್ತದೆ.
ಹೀಗಾಗಿ ಈಗಿನ ಭೂಕುಸಿತಗಳಾದರೂ ನಮ್ಮನ್ನು ನಿದ್ದೆಯಿಂದ ಎಬ್ಬಿಸಲಿ ಎಂಬುದು ನನ್ನ ಆಸೆ. ತನ್ಮೂಲಕ ನಾವು ಈಗಿರುವ ಅಂದಾಜಿನ ಮುನ್ಸೂ ಚನಾ ವ್ಯವಸ್ಥೆಯಿಂದ ವಿಶ್ವಾಸಾರ್ಹವಾದ ಮುನ್ನೆಚ್ಚರಿಕೆಯ ವ್ಯವಸ್ಥೆಯತ್ತ ಹೊರಳಬಹುದು. ಮತ್ತು ಇಂಥ ಪ್ರದೇಶಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಾನವನ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂಬ ವಿಷಯ ದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದಂತೂ ಬಾಕಿಯೇ ಇದೆ. ಈಗಲೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳದೆ ಹೋದರೆ, ನಾವು ಯಾವುದೇ ಪಾಠ ಕಲಿಯದ ನೈಸರ್ಗಿಕ ವಿಪತ್ತುಗಳ ಸಾಲಿಗೆ ವಯನಾಡು ಕೂಡ ಇನ್ನೊಂದು ಸೇರ್ಪಡೆಯಾಗುತ್ತದೆ ಅಷ್ಟೆ.
(ಲೇಖಕರು ತಿರುವನಂತಪುರಂ ಸಂಸದರು)