ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ಭಾಷೆಯ ಕಾರಣಕ್ಕಾಗಿ ಯುರೋಪ್ ಅತಿ ಹೆಚ್ಚು ದೇಶಗಳಾಗಿ ವಿಭಜಿತವಾಗಿರುವುದು ಮೇಲ್ನೋಟಕ್ಕೆ ತಿಳಿದುಬಿಡುತ್ತದೆ. ಇಲ್ಲಿನವರು ತಂತಮ್ಮ ಭಾಷೆಯ ಬಗ್ಗೆ ವ್ಯಾಮೋಹ ಹೊಂದಿzರೆ. ಹೀಗಾಗಿ ಇವು ಪುಟಾಣಿ ದೇಶಗಳಾಗಿ ಭಾಗವಾಗಿವೆ. ಇಂಥ ದೇಶಗಳಲ್ಲಿ ಕೂಡ ಮತ್ತೆ ನಾಲ್ಕಾರು ಭಾಷೆಗಳ ನಡುವೆ ತಿಕ್ಕಾಟ ನಡೆಯುತ್ತಿರುತ್ತದೆ.
ನಮ್ಮ ಹೆಸರು ಜಗತ್ತಿನ ಯಾವುದೇ ದೇಶಕ್ಕೆ ಹೋಗಲಿ ಬದಲಾಗುವುದಿಲ್ಲ ಅಲ್ಲವೇ? ಹೌದು ನಮ್ಮ ಮಟ್ಟಿಗೆ ಇದು ಸತ್ಯ. ಆದರೆ ಜಗತ್ತಿನ ಬೇರೆ ಭಾಗದಲ್ಲಿ ನಮ್ಮ ಹೆಸರನ್ನ ಉಚ್ಚರಿಸುವ ರೀತಿ ಬೇರೆಯಿರುತ್ತದೆ. ಜತೆಗೆ ಕೆಲವೊಮ್ಮೆ ಪೂರ್ಣ ಪ್ರಮಾಣದಲ್ಲಿ ಮೂಲಕ್ಕಿಂತ ಬದಲಾಗಿರುತ್ತದೆ. ‘ಇದೇನಿದು ಈ ರೀತಿ ಹೇಳುತ್ತಿದ್ದಾನೆ?’ ಎನ್ನುವ ನಿಮ್ಮ ಸಂಶಯವನ್ನ ಹೆಚ್ಚು ಹೊತ್ತು ಹಾಗೆ ಇರಲು ಬಿಡುವುದಿಲ್ಲ.
ಮೊದಲ ಮೂರು ಸಾಲುಗಳನ್ನ ಈ ರೀತಿ ಬರೆಯಲು ಕಾರಣವೇನು ಎನ್ನುವುದನ್ನ ಮುಂದಿನ ಕೆಲವು ಸಾಲುಗಳು ಹೇಳಿಬಿಡುತ್ತವೆ. ಸ್ಪ್ಯಾನಿಷ್ ಭಾಷೆ ಯಲ್ಲಿ ಸ್ಪ್ಯಾನಿಷ್‌ಗೆ ಏನೆನ್ನುತ್ತಾರೆ ಗೊತ್ತೇ? ಸ್ಪ್ಯಾನಿಷ್ ಎನ್ನುವುದು ಇಂಗ್ಲಿಷರು ಇಟ್ಟಿರುವ ಹೆಸರು. ಸ್ಪ್ಯಾನಿಷ್‌ಗೆ ಸ್ಪ್ಯಾನಿಷ್‌ನಲ್ಲಿ ‘ಕಾಸ್ತೆಯಾನೊ’ ಅಥವಾ ‘ಎಸ್ಪಾನಿಯೋಲ್’ ಎನ್ನುತ್ತಾರೆ. ಹಾಗೆ ಸ್ಪ್ಯಾನಿಷ್‌ನಲ್ಲಿ ಇಂಡಿಯಾಗೆ ‘ಇಂದಿಯ’ ಎಂದೂ ಹಿಂದೂವನ್ನ ‘ಇಂದು’ ಎಂದೂ ಕರೆಯುತ್ತಾರೆ.
ಜರ್ಮನಿಯನ್ನ ಅಲೆ ಮಾನಿಯಾ ಎಂದೂ, – ದೇಶವನ್ನ ಫ್ರಾನ್ಸಿಯ ಎಂದೂ ಕರೆಯುತ್ತಾರೆ. ಆಸ್ಟ್ರೇಲಿಯಾವನ್ನ ಔಸ್ಟ್ರಾಲಿಯ ಎನ್ನುತ್ತಾರೆ, ನ್ಯೂಜಿ ಲ್ಯಾಂಡ್‌ಗೆ ನುವಜಿಲ್ಯಾಂಡ ಎನ್ನುತ್ತಾರೆ. ಪೋರ್ಚುಗಲ್, ಪೊರ್ತುಗಲ್ ಆಗಿದೆ. ರಷ್ಯವನ್ನ ರುಸಿಯ ಎನ್ನಲಾಗುತ್ತದೆ. ಹೀಗೆ ನಮ್ಮ ದೇಶದ ಹೆಸರು
ಇತರರ ಬಾಯಿಯಲ್ಲಿ ಬದಲಾಗುತ್ತದೆ. ಹೇಗೆ ಸ್ಪ್ಯಾನಿಷರು ಇತರ ದೇಶಗಳ ಹೆಸರನ್ನ ತಮ್ಮ ಭಾಷೆಯಲ್ಲಿ ತಮಗೆ ಬೇಕಾದ ಹಾಗೆ ಉಚ್ಚರಿಸುತ್ತಾರೋ, ಹಾಗೆಯೇ ಜರ್ಮನ್ನರು, ಫ್ರೆಂಚರು, ರಷ್ಯನ್ನರು ಎಲ್ಲರೂ ತಮ್ಮ ತಮ್ಮ ಭಾಷೆಯ ಸೊಗಡಿಗೆ ತಕ್ಕಂತೆ ದೇಶಗಳ ಹೆಸರನ್ನ ಕರೆಯುತ್ತಾರೆ.
ಈ ವೇಳೆಗೆ ನಿಮಗೂ ನಾನು ಏನು ಹೇಳುತ್ತಿದ್ದೇನೆ ಎನ್ನುವುದರ ಅರಿವಾಗಿರುತ್ತದೆ. ಇಂಗ್ಲಿಷರು ನಮ್ಮ ದೇಶಕ್ಕೆ ವ್ಯಾಪಾರಕ್ಕೆ ಬಂದವರು, ಇಲ್ಲಿನ ಸಂಪತ್ತು, ಸುಖ-ಶಾಂತಿ ನೋಡಿ ನೆಲೆ ನಿಂತರು. ಆದರೇನು ಅವರಿಗೆ ನಮ್ಮ ಊರುಗಳ ಹೆಸರನ್ನ ಉಚ್ಚರಿಸಲು ಕಷ್ಟವಾಯ್ತು. ಚೆನ್ನೆ ಮದ್ರಾಸ್ ಆಯ್ತು, ತಿರುವ ನಂತಪುರ ತ್ರಿವೇಂಡ್ರಮ್, ಬೆಂಗಳೂರು ಬ್ಯಾಂಗಲೋರ್ ಹೀಗೆ ಬಹಳಷ್ಟು ಊರುಗಳು ತಮ್ಮ ಮೂಲ ಹೆಸರನ್ನ ಇವರಿಂದ ಕಳೆದುಕೊಂಡವು. ಇತ್ತೀಚೆಗೆ ಎಲ್ಲರೂ ತಮ್ಮ ಹಳೆಯ ಹೆಸರುಗಳನ್ನ ಮತ್ತೆ ಚಾಲ್ತಿಗೆ ತರುತ್ತಿದ್ದಾರೆ.
ಯುರೋಪ್ ಭಾಷೆಯ ಕಾರಣಕ್ಕಾಗಿ ಅತಿ ಹೆಚ್ಚು ದೇಶಗಳಾಗಿ ವಿಭಜಿತವಾಗಿರುವ ಖಂಡ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಿಡುತ್ತದೆ. ಇಲ್ಲಿನ ಜನರು ತಮ್ಮ ತಮ್ಮ ಭಾಷೆಯ ಬಗ್ಗೆ ಅತಿ ವ್ಯಾಮೋಹ ಹೊಂದಿದ್ದಾರೆ. ಹೀಗಾಗಿ ಇವುಗಳು ಪುಟಾಣಿ ದೇಶಗಳಾಗಿ ಭಾಗವಾಗಿವೆ. ಇಂಥ ಪುಟಾಣಿ ದೇಶಗಳಲ್ಲಿ ಕೂಡ ಮತ್ತೆ ನಾಲ್ಕಾರು ಭಾಷೆ ಗಳ ನಡುವೆ ತಿಕ್ಕಾಟ ನಡೆಯುತ್ತಿರುತ್ತದೆ. ಸಾಮಾನ್ಯ ದಿನಗಳಲ್ಲಿ ಅಥವಾ ಪ್ರವಾಸಿಗರ ಕಣ್ಣಿಗೆ ಎಲ್ಲವೂ ಚಂದವಾಗಿ, ಶಾಂತಿಯುತವಾಗಿ ಕಾಣುತ್ತದೆ. ಅಲ್ಲಿ ನೆಲೆ ನಿಂತು ಸ್ಥಳೀಯರ ಜತೆಗೆ ವ್ಯವಹರಿಸಲು ಶುರು ಮಾಡಿದ ನಂತರ ನಿಧಾನವಾಗಿ ‘ಅಯ್ಯೋ, ಇವರು ನಮಗಿಂತ ಏನೂ ಭಿನ್ನರಲ್ಲ’ ಎನ್ನುವ ಅರಿವಾಗುತ್ತದೆ.
ಹೆಸರನಿದೆ ಎನ್ನುವವರದು ಒಂದು ಪಕ್ಷ, ಹೆಸರಲ್ಲಿ ಎಲ್ಲವೂ ಇದೆ ಎನ್ನುವವರದು ಇನ್ನೊಂದು. ಹೆಸರಲ್ಲಿ ಏನಿದೆಯೋ ಅಥವಾ ಇಲ್ಲವೋ ನನಗೆ ತಿಳಿಯದು. ಆದರೆ ಒಂದಂತೂ ಸತ್ಯ, ಯಾರಾದರೂ ನಮ್ಮ ಹೆಸರನ್ನ ಸರಿಯಾಗಿ ಕರೆಯದಿದ್ದರೆ ಮಾತ್ರ ಸ್ವಲ್ಪ ಇರಿಸು-ಮುರಿಸು ಉಂಟಾಗುವುದು ಸತ್ಯ. ಸ್ಪೇನ್‌ನಲ್ಲಿ ನನ್ನ ಹೆಸರನ್ನ ಒಂದು ದಿನವೂ ಕರೆಯಲಿಲ್ಲ! ಹೌದು ಆಸ್ಪತ್ರೆ, ಏರ್‌ಪೋರ್ಟ್, ಬ್ಯಾಂಕು ಹೀಗೆ ಯಾವುದೇ ಪಬ್ಲಿಕ್ ಜಾಗಗಳಲ್ಲಿ ಸದಾ ‘ಮೂಕನಹಳ್ಳಿ’ ಎಂದೂ ಅಥವಾ ‘ರಾಮಶೇಷ’ ಎಂದೂ ಕರೆದದ್ದೇ ಹೆಚ್ಚು. ರಾಮಶೇಷ ನನ್ನ ಅಪ್ಪನ ಹೆಸರು. ಪಾಸ್‌ಪೋರ್ಟ್ ನಲ್ಲಿ ಎಲ್ಲವನ್ನೂ ಉದ್ದವಾಗಿ ಬರೆಯುವುದರಿಂದ ನನ್ನ ಹೆಸರು ‘ರಂಗಸ್ವಾಮಿ ಮೂಕನಹಳ್ಳಿ ರಾಮ ಶೇಷ’ ಎಂದಾಗಿತ್ತು.
ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ, ಯಾರು ರಂಗನ ಹೆಸರನ್ನ ತಪ್ಪಿಲ್ಲದೆ ಹೇಳು ತ್ತಾರೆ ಅವರಿಗೆ ಬಹುಮಾನ ಕೊಡುವುದಾಗಿ ಹೇಳುತ್ತಿದ್ದರು. ನನ್ನ ಪೂರ್ಣ ಹೆಸರು ಸರಿಯಾಗಿ ಯಾರೂ ಹೇಳಲಿಲ್ಲ, ಅದಕ್ಕೆ ಕಾರಣ ಭಾಷೆ. ‘ರಂಗ’ ಹೇಳುತ್ತಿದ್ದರು, ಆದರೆ ‘ಸ್ವಾಮಿ’ ಎನ್ನುವುದನ್ನ ಹೇಗೆ ಉಚ್ಚರಿಸಬೇಕು ಎನ್ನುವುದು ಗೊತ್ತಾಗದೆ ತಿಣುಕುತ್ತಿದರು. ಬಹುಪಾಲು ದಕ್ಷಿಣ ಭಾರತೀಯರು ತಮ್ಮ ಮಕ್ಕಳಿಗೆ ಹೆಸರು ಇಡುವಾಗ ಬಹಳ ಯೋಚಿಸುವುದಿಲ್ಲ, ಕೆಲವೊಂದು ಮನೆಯಲ್ಲಿ ಅಣ್ಣ-ತಮ್ಮನ ಹೆಸರಿನ ಮುಂದಿನ ಸರ್‌ನೇಮ್ ಕೂಡ ಬದಲಾಗಿರುತ್ತದೆ.
ಭಾರತದಲ್ಲಿ ಇದ್ದರೆ ಎಲ್ಲವೂ ಓಕೆ. ಹೊರದೇಶಕ್ಕೆ ಹೋಗಿ, ಒಂದು ಪಕ್ಷ ಅಲ್ಲಿನ ಪೌರತ್ವವನ್ನ ಪಡೆದುಕೊಳ್ಳುವ ಸನ್ನಿವೇಶದಲ್ಲಿ ಈ ಹೆಸರು ಅದೇಕೆ ಅಷ್ಟು ಪ್ರಾಮುಖ್ಯ ಎನ್ನುವುದು ತಿಳಿಯುತ್ತದೆ. ನಮ್ಮಪ್ಪನ ಹೆಸರು ಒಂದು ಕಡೆ ಶ್ರೀ ರಾಮಶೇಷ ಎಂದೂ, ಇನ್ನೊಂದು ದಾಖಲೆಯಲ್ಲಿ ರಾಮಶೇಷ ಎಂದೂ, ಮತ್ತೊಂದು ಕಡೆ ರಮೇಶ, ಹೀಗೆ ಅದೊಂದು ದೊಡ್ಡ ಕಥೆ. ಅಮ್ಮನದು ನಾಗಲಕ್ಷ ಮ್ಮ ಮತ್ತು ನಾಗಲಕ್ಷಮ್ಮ ನಡುವಿನ ಗುದ್ದಾಟ.
ಇವೆಲ್ಲವೂ, ಅತಿ ಸಣ್ಣ ಬದಲಾವಣೆಗಳೂ ಲೆಕ್ಕಕ್ಕೆ ಬರುತ್ತವೆ. ಅಲ್ಲದೆ ಸ್ಪೇನ್ ದೇಶದಲ್ಲಿ ಅಪ್ಪನ ಹೆಸರಿನ ಒಂದು ಸರ್‌ನೇಮ್ ಮತ್ತು ಅಮ್ಮನ ಹೆಸರಿನ
ಒಂದು ಸರ್‌ನೇಮ್ ಕಡ್ಡಾಯವಾಗಿ ಮಕ್ಕಳ ಹೆಸರ ಮುಂದೆ ಜೋಡಣೆಯಾಗಲೇಬೇಕು. ಇದು ಪೌರತ್ವ ಪಡೆಯಲು ಇರುವ ಒಂದು ನಿಬಂಧನೆ ಕೂಡ. ಇದನ್ನ ಧಿಕ್ಕರಿಸುವಂತಿಲ್ಲ. ನಮ್ಮಲ್ಲಿ ಸರ್ ನೇಮ್ ವ್ಯವಸ್ಥೆ ದೇವರಿಗೇ ಪ್ರೀತಿ. ನನ್ನ ಕಸಿನ್‌ಗಳು ಕೆಲವರು ರಾವ್, ಇನ್ನು ಕೆಲವರು ಶರ್ಮ, ಸಿಂಹ
ಒಂದಕ್ಕೊಂದು ಸಂಬಂಧವಿಲ್ಲ. ಒಂದೇ ಕುಟುಂಬದ ಕಥೆಗಳು ಸಾವಿರ. ಹೀಗಾಗಿ ನಾವು ಯಾರು? ನಮ್ಮ ಅಸ್ಮಿತೆಯೇನು? ಎನ್ನುವ ಪ್ರಶ್ನೆ ಬಂದದ್ದು ಈ ಹೊಸ ಸನ್ನಿವೇಶದಲ್ಲಿ.
ಅದಕ್ಕೆ ಈಗ ನಾವು ಮೂಕನಹಳ್ಳಿ ಹೆಸರನ್ನ ಭದ್ರವಾಗಿ ಹಿಡಿದುಕೊಂಡಿದ್ದೇವೆ. ಅನನ್ಯ ಎಷ್ಟಾದರೂ ಸ್ಪೇನ್ ದೇಶದ ಪ್ರಜೆ, ಹೀಗಾಗಿ ಅಮ್ಮನ ತಾಳಗುಂದ
ಕೂಡ ಅವಳ ಹೆಸರಿಗೆ ಸೇರಿಕೊಂಡಿದೆ. ನಿಮಗೆ ಇನ್ನೊಂದು ಸ್ವಾರಸ್ಯಕರ ಸಂಗತಿ ಹೇಳಬೇಕು. ಸ್ಪೇನ್ ದೇಶದಲ್ಲಿ ಹತ್ತು ವರ್ಷಗಳ ಕಾಲ ನೆಲಸಿದ ಮೇಲೆ ಇಲ್ಲಿನ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬಹುದು. ಭಾಷೆ, ದೇಶದ ಬಗ್ಗೆ ನಮಗಿರುವ ಜ್ಞಾನ, ಇತರ ಸಾಮಾನ್ಯ ಜ್ಞಾನದ ಒಂದಷ್ಟು ಪರೀಕ್ಷೆ ನಂತರ ಪೌರತ್ವ ಸಿಗುವ ವೇಳೆಗೆ ನಮಗಲ್ಲಿ ೧೫ ವರ್ಷವಾಗಿರುತ್ತದೆ.
ಸ್ವಾರಸ್ಯ ಏನೆಂದರೆ ಹೀಗೆ ಹೊಸದಾಗಿ ಸ್ಪ್ಯಾನಿಷ್ ಪೌರತ್ವ ಪಡೆಯುವ ವೇಳೆಯಲ್ಲಿ ನಮ್ಮ ಭಾರತೀಯ ಹೆಸರಿನ ಅರ್ಥವನ್ನ ಬಿಡಿಸಿ ಹೇಳಿ ಅದನ್ನ ನೋಟರಿ ಮಾಡಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅಪೋಸ್ಟಿಲ್ ಮಾಡಿಸಿಕೊಟ್ಟರೆ ನಾವು ಆ ಹೆಸರನ್ನ ಇಟ್ಟುಕೊಳ್ಳಬಹುದು. ಉದಾ
ಹರಣೆಗೆ ರಂಗಸ್ವಾಮಿ ಹೆಸರಿನಲ್ಲಿ ರಂಗ ಎಂದರೆ ಆರ್ಟ್ ಅಥವಾ ಕಲೆ ಎನ್ನುವ ಅರ್ಥವನ್ನ ಕೊಡುತ್ತದೆ; ಸ್ವಾಮಿ ಎಂದರೆ, ಲಾರ್ಡ್, ಸರ್, ಅಥವಾ
ಅಽಪತ್ಯ ಹೊಂದಿದವನು ಎನ್ನುವ ಅರ್ಥವನ್ನ ಕೊಡುತ್ತದೆ. ಇದನ್ನ ಸ್ಪ್ಯಾನಿಷ್‌ನಲ್ಲಿ ‘ದಿಯೋಸ್ ದೆಲ್ ಆರ್ತೆ’ ಎನ್ನಬಹುದು.
ಇದರರ್ಥ ನಾನು ಸ್ಪ್ಯಾನಿಷ್‌ನಲ್ಲಿ ನನ್ನ ಹೆಸರನ್ನ ದಿಯೋಸ್ ದೆಲ್ ಆರ್ತೆ ಎಂದು ಡಿಕ್ಲೇರ್ ಮಾಡಿಕೊಳ್ಳಬಹುದು. ಇರುವುದು ಒಂದೇ ಭೂಮಿ, ಒಂದೇ ಬಾನು. ಆದರೆ ಇವೆರಡರ ನಡುವಿನ ಬದುಕಿನಲ್ಲಿ ಅದೆಷ್ಟು ವೈಚಿತ್ರ್ಯಗಳು ಅಲ್ಲವೇ? ನಮ್ಮ ಹೆಸರಿನ ಸಮೀಪವೂ ಇಲ್ಲದ ಹೊಸ ಹೆಸರು ಕೂಡ ನಾವು
ಲೀಗಲ್ ಆಗಿ ಪಡೆದುಕೊಳ್ಳಬಹದು. ಎಲ್ಲಕ್ಕೂ ವಿಚಿತ್ರವೇನು ಗೊತ್ತೇ? ನಮ್ಮ ಹೆಸರಿಗೆ ನಮ್ಮಲ್ಲಿರುವ ಅರ್ಥದ ತದ್ವಿರುದ್ಧ ಅರ್ಥ ಜಗತ್ತಿನ ಯಾವುದೋ ದೇಶದ ಭಾಷೆಯಲ್ಲಿ ಇರಬಹುದು.
ಅಥವಾ ನಮ್ಮ ಹೆಸರನ್ನ ಹೇಳಿದೊಡನೆ ಜನ ನಗಬಹುದು. ನಮ್ಮ ಹೆಸರಿನ ಅರ್ಥ ಹೇಳಲು ಕೂಡ ಅವರು ನಾಚಿಕೆ ಪಡಬಹುದು. ನಮ್ಮ ದೇಶದಲ್ಲಿ,
ನಮ್ಮ ಭಾಷೆಯಲ್ಲಿ ಅತ್ಯಂತ ಸಭ್ಯ ಎನ್ನಿಸಿದ ಪದವನ್ನು ಜಗತ್ತಿನ ಇನ್ನಾವುದೋ ಮೂಲೆಯಲ್ಲಿ ಬಳಸಲು ಹಿಂಜರಿಯಬಹುದು. ಇದಕ್ಕೇ ಇರಬೇಕು ಹಿಂದಿಯಲ್ಲಿ ‘ಕಿಸೀ ಕಿ ಬೋಲಿ, ಕಿಸೀ ಕ ಗಾಲಿ’ ಎಂದಿರಬಹುದು. ಇದಕ್ಕೆ ಸಂಬಂಧಿಸಿದ ಒಂದು ಘಟನೆಯನ್ನ ಹೇಳಿ ಇಂದಿನ ಬರಹಕ್ಕೆ ವಿರಾಮ ಹಾಡುವೆ.
ದಕ್ಷಿಣ ಅಮೆರಿಕದ ಬಹುತೇಕ ದೇಶಗಳಲ್ಲಿ ಸ್ಪ್ಯಾನಿಷ್ ಆಡಳಿತ ಭಾಷೆ. ಜನರ ಭಾಷೆ. ಹೀಗಾಗಿ ನನಗೆ ದಕ್ಷಿಣ ಅಮೆರಿಕ ಪ್ರವಾಸ ಕಷ್ಟವಲ್ಲ. ಸ್ಪೇನ್‌ನ
ಸ್ಪ್ಯಾನಿಷಿನಲ್ಲಿ ಉಗ್ರಾಣಕ್ಕೆ ‘ಅಲ್ಮೇಸೆನ್’ ಎನ್ನುತ್ತೇವೆ. ಇದನ್ನ ದಕ್ಷಿಣ ಅಮೆರಿಕದ ಬಹುತೇಕ ದೇಶಗಳಲ್ಲಿ ‘ಬೋದೆಗಾ’ ಎನ್ನುತ್ತಾರೆ. ಹೀಗೆ ನನಗೆ
ಸ್ಪ್ಯಾನಿಷ್ ಬರುತ್ತದೆ ಎನ್ನುವ ವಿಶ್ವಾಸಕ್ಕೆ ಈ ದೇಶಗಳು ಒಂದಷ್ಟು ಬ್ರೇಕ್ ಹಾಕುತ್ತವೆ. ಕೆಲವೊಮ್ಮೆ ನಮ್ಮ ಉತ್ತರ ಕರ್ನಾಟಕದ ಕೆಲವು ಕನ್ನಡ ಪದಗಳ ಅರ್ಥ ತಿಳಿಯದೆ ಪರದಾಡಿದ್ದೂ ಇದೆ. ಇದು ಆಲ್‌ಮೋ ಸೇಮ.
ಹೀಗೇ ಒಮ್ಮೆ ಬೊಲಿವಿಯಾ ದೇಶದಲ್ಲಿ ಸಂಚರಿಸುತ್ತಿದ್ದೆ. ಅಲ್ಲಿನ ಜನ ಹಮ್ಮು- ಬಿಮ್ಮು ಇಲ್ಲದ ಸರಳ ಜೀವಿಗಳು. ನಮ್ಮಲ್ಲಿ ಹೇಗೆ ವಿದೇಶಿ ಜನರು ಬಂದರೆ ಓಲೈಸಲು ನೋಡುತ್ತೇವೆ ಹಾಗೆಯೇ ಇಲ್ಲಿನ ಜನರಿಗೆ ನಾನು ವಿದೇಶಿ, ಅವರಿಗೆ ನಾನು ಸ್ಪ್ಯಾನಿಷ್ ಮಾತನಾಡುವುದು ಆಶ್ಚರ್ಯ ತಂದಿತ್ತು. ಹೆಚ್ಚು ಕಡಿಮೆ ಅವರಂತೆ ಮಾತನಾಡುತ್ತಿದ್ದ ನನ್ನ ಕಂಡವರು ‘ಕೊಮೊ ತೇ ಯಾಮಾಸ್?’ ಎನ್ನುತ್ತಿದ್ದರು.
ಅಂದರೆ ನಿನ್ನ ಹೆಸರೇನು? ಎನ್ನುವ ಅರ್ಥ. ನಾನು ಸಭ್ಯತೆ ಯಿಂದ ‘ಸೊಯ್ ರಂಗ’ ಎನ್ನುತ್ತಿದ್ದೆ. ಮುಂದಿನ ಒಂದೆರಡು ಕ್ಷಣ ಅವರು ಮುಖಮುಖ ನೋಡಿ ಕೊಳ್ಳುತ್ತಿದ್ದರು. ಕೆಲವರು ನಕ್ಕರು. ಹೀಗೇಕೆ ಎನ್ನುವುದು ತಿಳಿಯಲಿಲ್ಲ. ಕೊನೆಗೆ ಹೋಟೆಲ್ ಒಂದರಲ್ಲಿ ಕುಳಿತು ನಾನು ಸಸ್ಯಾಹಾರಿ ಎನ್ನು ವುದನ್ನ ಬಿಡಿಸಿ ಹೇಳಿ ಕುಳಿತಿದ್ದೆ. ಮಾಣಿ ಬಂದವನು ‘ಹೆಸರೇನು?’ ಎಂದ, ಹೇಳಿದೆ. ಅವನು ಒಂದು ಕ್ಷಣ ದಂಗಾದವನಂತೆ ಕಂಡ ಮತ್ತು ತಕ್ಷಣ ನಕ್ಕ, ‘ಜೋಕ್ ಮಾಡಬೇಡ, ನಿನ್ನ ಹೆಸರೇಳು’ ಎಂದ.
‘ಇಲ್ಲಪ್ಪ ನನ್ನ ಹೆಸರು ರಂಗ ಎಂದೇ. ಅದೇಕೆ ಇಲ್ಲಿ ಬಹುತೇಕರು ನನ್ನ ಹೆಸರು ಕೇಳಿದ ತಕ್ಷಣ ವಿಚಿತ್ರವಾಗಿ ವರ್ತಿಸುತ್ತಿದ್ದೀರಿ?’ ಎಂದೆ. ‘ರಂಗ’ ಎನ್ನು ವುದು ಹಸುವಿನ ಹೊಟ್ಟೆಯ ಭಾಗದ ಮಾಂಸದಿಂದ ಮಾಡಿದ ಒಂದು ಖಾದ್ಯದ ಹೆಸರು ಎಂದನಾತ. ದಿನಪೂರ್ತಿ ಜನರು ನನ್ನ ಹೆಸರು ಕೇಳಿದ ತಕ್ಷಣ ಅದೇಕೆ ಹಾಗೆ ವ್ಯವಹರಿಸುತ್ತಿದ್ದರು ಎನ್ನುವುದು ತಡವಾಗಿ ತಿಳಿಯಿತು. ನಿಮ್ಮ ಹೆಸರು ಯಾವುದೋ ದೇಶದ ಖಾದ್ಯ ವಾಗಿರಬಹುದು, ಕೆಟ್ಟ ಪದವಾಗಿರ ಬಹುದು, ಜನ ಹೇಳಲು ನಾಚಿಕೊಳ್ಳಬಹುದು. ನನ್ನ ಹೆಸರಿನ ಘಟನೆ ಭಾಷೆಯ ವೈವಿಧ್ಯತೆಗೆ ಒಂದು ಸಣ್ಣ ಸಾಕ್ಷಿ!