ಸಂಗತ
ಡಾ.ವಿಜಯ್ ದರಡಾ
ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ರಾಜಕೀಯಕ್ಕೆ ಬಲಿಯಾದಳು. ಅತ್ತ ಬಾಂಗ್ಲಾದೇಶದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾದರು. ಕ್ರೀಡೆಯಲ್ಲಿ ಭಾರತ ಬೆಳೆಯಬೇಕು ಅಂದರೆ ಕ್ರೀಡಾಕ್ಷೇತ್ರವನ್ನು ರಾಜಕೀಯದ ಕಪಿಮುಷ್ಟಿಯಿಂದ ಬಿಡಿಸಬೇಕು. ಬಾಂಗ್ಲಾದೇಶದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಅಂದರೆ ಅದಕ್ಕೆ ಭಾರತದ ನೆರವೂ ಬೇಕು.
ಕಳೆದ ವಾರ ಇಬ್ಬರು ಖ್ಯಾತನಾಮರು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸುದ್ದಿಯಾದರು. ಒಬ್ಬರು ಭಾರತೀಯ ಕ್ರೀಡಾಲೋಕದ ತಾರಾ ಕುಸ್ತಿಪಟು ವಿನೇಶ್ ಫೋಗಟ್. ಇನ್ನೊಬ್ಬರು ಬಾಂಗ್ಲಾದೇಶದ ಪದಚ್ಯುತ ಪ್ರಧಾನಮಂತ್ರಿ ಶೇಖ್ ಹಸೀನಾ! ಇವರಿಬ್ಬರ ಮಧ್ಯೆ ನೇರವಾದ ಸಂಬಂಧ ಇಲ್ಲವಾದರೂ, ಈ ಇಬ್ಬರೂ ಏಕೆ ಒಟ್ಟೊಟ್ಟಿಗೇ ನನ್ನ ಅಂಕಣದ ವಸ್ತುವಾಗಿದ್ದಾರೆ ಅಂದರೆ, ಇವರಿಬ್ಬರ ಪ್ರಕರಣದಲ್ಲೂ ರಾಜಕಾರಣ ಅಡಗಿದೆ. ಆ ವಿಷಯದಲ್ಲಿ ಇವರಿಬ್ಬರ ಪ್ರಕರಣದಲ್ಲೂ ಸಾಮ್ಯತೆಯಿದೆ.
ಒಬ್ಬರ ಪ್ರಕರಣದಲ್ಲಿ ಕ್ರೀಡಾ ರಾಜಕಾರಣವಿದ್ದರೆ, ಇನ್ನೊಬ್ಬರ ವಿಷಯದಲ್ಲಿ ರಾಜಕಾರಣದ್ದೇ ರಾಜಕಾರಣ, ಅರ್ಥಾತ್ ಷಡ್ಯಂತ್ರದ ರಾಜಕಾರಣ ಅಡಗಿದೆ. ಇಬ್ಬರ ಪ್ರಕರಣದಲ್ಲೂ ಕೆಲ ವ್ಯಕ್ತಿಗಳ ಪ್ರತಿಷ್ಠೆ ಅಥವಾ ದುರಹಂಕಾರ ಕೆಲಸ ಮಾಡಿದೆ. ಈ ಕಾರಣಕ್ಕಾಗಿಯೂ ಇವೆರಡೂ ಪ್ರಕರಣಗಳನ್ನು ಒಟ್ಟಿಗೇ ಚರ್ಚಿಸಬಹುದು. ಮೊದಲಿಗೆ, ನಮ್ಮ ದೇಶದ ಹೆಮ್ಮೆಯ ಪುತ್ರಿ ವಿನೇಶ್ -ಗಟ್ ಬಗ್ಗೆ ಚರ್ಚಿಸೋಣ. ಈಕೆ ಕ್ರೀಡಾಲೋಕದ ಕೊಳಕು ರಾಜಕಾರಣದ ಸಂತ್ರಸ್ತೆ.
ರಾಜಕೀಯ ದುರಹಂಕಾರದ ವಿರುದ್ಧ ಅವಳು ಹೋರಾಡಿದ ವಿಷಯ ಎಲ್ಲರಿಗೂ ಗೊತ್ತಿದೆ. ಆ ಪ್ರಕರಣದಲ್ಲಿ ಅವಳನ್ನು ಎಷ್ಟು ಶೋಷಣೆ ಮಾಡಿದರು ಎಂಬುದೂ ಗೊತ್ತಿದೆ. ಅದನ್ನೆಲ್ಲ ಮತ್ತೆ ಹೇಳಬೇಕಾದ ಅಗತ್ಯವಿಲ್ಲ. ಆದರೆ, ವಿನೇಶ್ ಫೋಗಟ್ ನಡೆಸಿದ ಹೋರಾಟದಿಂದ ಅವಮಾನಕ್ಕೆ ಒಳಗಾದ ವರಿಗೆ, ಆಕೆಯ ಹೋರಾಟದಿಂದ ತಮ್ಮ ದುರಹಂಕಾರಕ್ಕೆ ಪೆಟ್ಟು ತಿಂದವರಿಗೆ, ಅವಳ ಹೋರಾಟದಿಂದ ರಾಜಕೀಯದಲ್ಲಿ ಮುಖಭಂಗ ಅನುಭವಿಸ ಬೇಕಾಗಿ ಬಂದವರಿಗೆ ದೇಶದ ಪ್ರತಿಷ್ಠೆ ಮತ್ತು ರಾಷ್ಟ್ರೀಯ ಧ್ವಜದ ಗೌರವಕ್ಕಿಂತ ಹೆಚ್ಚಾಗಿ ಅವಳಿಗೊಂದು ಪಾಠ ಕಲಿಸುವುದೇ ದೊಡ್ಡ ವಿಷಯವಾಯಿತು
ಎಂಬುದು ನಿಜಕ್ಕೂ ದುರದೃಷ್ಟಕರ ಸಂಗತಿ.
ವಿನೇಶ್ ೫೩ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಾ ಬಂದಿದ್ದ ಕುಸ್ತಿಪಟು. ಅವಳನ್ನು ಈ ವಿಭಾಗದಲ್ಲೇ ಒಲಿಂಪಿಕ್ಸ್‌ಗೆ ಕಳುಹಿಸಬೇಕಾಗಿತ್ತು. ಆದರೆ ಅವಳ ಬದಲು ಅಂತಿಮ್ ಪಂಘಲ್ ಎಂಬ ಇನ್ನೊಬ್ಬ ಕುಸ್ತಿಪಟುವನ್ನು ಈ ವಿಭಾಗದಲ್ಲಿ ಭಾರತವು ಒಲಿಂಪಿಕ್ಸ್‌ಗೆ ಕಳುಹಿಸಿತ್ತು. ಅವಳು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಳು. ನಂತರ ಅವಳ ಜತೆಗೆ ಪ್ಯಾರಿಸ್‌ಗೆ ತೆರಳಿದ್ದ ಸಹೋದರಿಯು ಅಂತಿಮ್ ಪಂಘಲ್‌ಳ ಅಕ್ರೆಡಿಷನ್ ಕಾರ್ಡ್ ಹಿಡಿದು ಒಲಿಂಪಿಕ್ಸ್ ಗ್ರಾಮಕ್ಕೆ ಪ್ರವೇಶಿಸಲು ಅಕ್ರಮವಾಗಿ ಯತ್ನಿಸುವಾಗ ಸಿಕ್ಕಿಬಿದ್ದು ಭಾರತಕ್ಕೆ ಇನ್ನಷ್ಟು ಮುಜುಗರವಾಯಿತು. ಅದು ಹಾಗಿರಲಿ.
ವಿನೇಶ್ ಬದಲು ಅಂತಿಮ್‌ಳನ್ನು ಭಾರತವು ೫೩ ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಆಯ್ಕೆ ಮಾಡಿದ್ದರಿಂದ ವಿನೇಶ್‌ಗೆ ೫೦ ಕೆ.ಜಿ. ವಿಭಾಗವನ್ನು ಆಯ್ದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ೫೦ ಕೆ.ಜಿ. ವಿಭಾಗವನ್ನು ಒಪ್ಪಿಕೊಳ್ಳದಿದ್ದರೆ ವಿನೇಶ್‌ಗೆ ಒಲಿಂಪಿಕ್ಸ್‌ಗೆ ಹೋಗುವ ಅವಕಾಶವೇ ಸಿಗುತ್ತಿರಲಿಲ್ಲ. ಆದರೆ ಅವಳು ಹಟವಾದಿ. ಹೀಗಾಗಿ ಅನಿವಾರ್ಯವಾಗಿಯಾರೂ ಸರಿ, ೫೦ ಕೆ.ಜಿ. ವಿಭಾಗಕ್ಕೆ ಒಪ್ಪಿಕೊಂಡು ಭಾರತಕ್ಕೆ ಪದಕ ತರುವ ಹಟದೊಂದಿಗೆ ಪ್ಯಾರಿಸ್‌ಗೆ ತೆರಳಿದಳು. ಅಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ, ಫೈನಲ್‌ಗೂ ಹೋದಳು.
ಫೈನಲ್‌ಗೆ ಹೋಗುವುದೆಂದರೆ ಅವಳಿಗೆ ಬೆಳ್ಳಿ ಪದಕವಂತೂ ಖಾತ್ರಿಯಾಗಿತ್ತು ಎಂತಲೇ ಅರ್ಥ. ಆಕೆ ಫೈನಲ್‌ನಲ್ಲೂ ಗೆದ್ದು ಭಾರತಕ್ಕೆ ಚಿನ್ನ ತರುತ್ತಾ ಳೆಂದು ಇಡೀ ದೇಶ ಭರವಸೆಯಿಂದ ಕಾಯುತ್ತಿತ್ತು. ಆದರೆ, ೧೦೦ ಗ್ರಾಮ್ ದೇಹದ ತೂಕ ಹೆಚ್ಚಾದ ಕಾರಣ ಅವಳನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸ ಲಾಗಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿತ್ತು. ಅದರೊಂದಿಗೆ ೧೪೦ ಕೋಟಿ ಭಾರತೀಯರ ಚಿನ್ನದ ಕನಸು ನುಚ್ಚು ನೂರಾಯಿತು. ಕೋಟ್ಯಂತರ ಕ್ರೀಡಾಪ್ರೇಮಿಗಳು ಅಯ್ಯೋ ಎಂದು ಮರುಗಿದರು. ಒಂದಂತೂ ನಿಜ. ಭಾರತದ ಕ್ರೀಡಾಲೋಕವನ್ನು ರಾಜಕಾರಣ ತನ್ನ ಕಪಿಮುಷ್ಟಿಯಲ್ಲಿ ಇರಿಸಿ ಕೊಂಡಿದೆ. ಆದ್ದರಿಂದಲೇ ಇಂಥ ಆಘಾತಗಳು ನಮ್ಮನ್ನು ಕಂಗೆಡಿಸುತ್ತಿವೆ.
ಅಮೆರಿಕ ಮತ್ತು ಚೀನಾದಂತೆ ಒಲಿಂಪಿಕ್ಸ್ ನಲ್ಲಿ ಸಾಕಷ್ಟು ಚಿನ್ನದ ಪದಕಗಳನ್ನು ಗೆಲ್ಲುವ ಶಕ್ತಿಯಿರುವ ಬೇಕಾದಷ್ಟು ಯುವಕರು ನಮ್ಮ ದೇಶದಲ್ಲಿ ದ್ದಾರೆ. ಆದರೆ ಕ್ರೀಡಾ ರಾಜಕಾರಣದಿಂದಾಗಿ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಬೇರೆ ದೇಶಗಳ ಜನಸಂಖ್ಯೆ ಮತ್ತು ಅವು ಒಲಿಂಪಿಕ್ಸ್‌ನಲ್ಲಿ ಗಳಿಸುವ
ಪದಕಗಳ ಸಂಖ್ಯೆಯನ್ನೊಮ್ಮೆ ನೋಡಿ. ಚೀನಾ ಒಂದನ್ನು ಬಿಟ್ಟರೆ, ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ಪದಕ ಗಳಿಸುವ ೩೦ ದೇಶಗಳ ಜನಸಂಖ್ಯೆಗೂ ನಮ್ಮ
ದೇಶದ ಜನಸಂಖ್ಯೆಗೂ ಹೋಲಿಕೆ ಕೂಡ ಮಾಡುವುದು ಕಷ್ಟ. ಅವುಗಳ ಜನಸಂಖ್ಯೆ ಅಷ್ಟೊಂದು ಕಡಿಮೆಯಿದೆ.
ವಿಜ್ಞಾನ, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ನಾವು ಜಾಗತಿಕ ನಾಯಕರಾಗಲು ಸಾಧ್ಯವಿದ್ದರೆ ಕ್ರೀಡೆಯಲ್ಲಿ ಏಕೆ ಸಾಧ್ಯವಿಲ್ಲ? ಏಕೆಂದರೆ ಕ್ರೀಡಾಲೋಕವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಆಳುತ್ತಿದ್ದಾರೆ. ನಾವು ತಾನೇ ಏನು ಮಾಡಲು ಸಾಧ್ಯವಿದೆ? ರಾಜಕಾರಣ ತುಂಬಾ ವಿಚಿತ್ರವಾದ ವಿಷಯ. ಅದು ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಬಯಸುತ್ತದೆ. ರಾಜಕಾರಣದ ರಕ್ತದಲ್ಲೇ ಫೆಡಲಿಸಂ ಇದೆ.
ಇಲ್ಲದಿದ್ದರೆ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಹಣೆಬರಹ ಹೀಗಾಗಲು ಸಾಧ್ಯವಿತ್ತೇ? ಹದಿನೈದು ವರ್ಷಗಳ ಹಿಂದೆ ಅವರು ಬಾಂಗ್ಲಾದೇಶದ ಚುಕ್ಕಾಣಿ ವಹಿಸಿಕೊಂಡಾಗ ಆ ದೇಶ ಪಾತಾಳದಲ್ಲಿತ್ತು. ಅಲ್ಲಿ ಯಾವುದೂ ನೆಟ್ಟಗಿರಲಿಲ್ಲ.
ಆದರೆ ಆಕೆ ತಮ್ಮ ದಕ್ಷ ಆಡಳಿತದಿಂದ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ವಿಶ್ವಬ್ಯಾಂಕ್ ಕೂಡ ಈ ಅಭಿವೃದ್ಧಿಯನ್ನು ಮುಕ್ತ ಕಂಠದಿಂದ ಹೊಗಳಿತು. ಬೇರೆ ದೇಶಗಳಿಗೆ ಬಾಂಗ್ಲಾದೇಶದ ಬೆಳವಣಿಗೆಯು ಸ್ಪೂರ್ತಿಯಾಗಿದೆ ಎಂದು ಹೇಳಿತು. ೨೦೩೧ರ ವೇಳೆಗೆ ಬಾಂಗ್ಲಾದೇಶವು ಮೇಲ್ಮಧ್ಯಮ ಆದಾಯದ ದೇಶವಾಗಬಹುದಿತ್ತು. ೨೦೨೬ಕ್ಕೆ ಬಾಂಗ್ಲಾದೇಶವು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಿಂದ ಹೊರಬೀಳಲಿದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹೇಳಿತ್ತು.
ಆರ್ಥಿಕ ಪ್ರಗತಿಯ ಜತೆಗೇ ಬಾಂಗ್ಲಾದೇಶವು ಭಯೋತ್ಪಾದನೆಯ ವಿರುದ್ಧ ಅತ್ಯಂತ ಕಠಿಣವಾದ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿತ್ತು. ಹೀಗಾಗಿ ಆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದವು. ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ, ಭದ್ರತೆಯ ದೃಷ್ಟಿಯಿಂದ ಹಾಗೂ ಔದ್ಯೋಗಿಕವಾಗಿ ಹೀಗೆ ಎಲ್ಲಾ ರಂಗದಲ್ಲೂ ಬೆಳವಣಿಗೆ ಹೊಂದುತ್ತಿದ್ದಾಗ ಶೇಖ್ ಹಸೀನಾ ಆಡಳಿತದ ಬಗ್ಗೆ ಜನರಿಗೆ ಸಿಟ್ಟು ಬಂದಿದ್ದಾದರೂ ಏಕೆ? ಅಂಥ ದಕ್ಷ ಆಡಳಿತಗಾರ್ತಿಯನ್ನು ದೇಶ ಬಿಟ್ಟು ಓಡಿಸುವಂಥ ಭ್ರಮೆಗೆ ಬಾಂಗ್ಲಾದೇಶಿಗಳು ಸಿಲುಕಿದ್ದು ಏಕೆ? ನಿಜ, ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿತ್ತು. ಅದರ ಬಗ್ಗೆ ಜನರು ಸಿಟ್ಟಾಗಿದ್ದರು.
ಮೀಸಲಾತಿಯ ವಿರುದ್ಧ ಹೋರಾಟ ತೀವ್ರಗೊಂಡಿತ್ತು. ಆದರೆ ತೀರಾ ಹಸೀನಾ ಅವರ ಸರಕಾರವನ್ನೇ ಬೀಳಿಸುವಷ್ಟು ಪ್ರಬಲ ಸಂಗತಿಗಳು ಇವ್ಯಾವುವೂ ಆಗಿರಲಿಲ್ಲ. ವಾಸ್ತವವಾಗಿ, ಹಸೀನಾ ಭಾರತದ ಜತೆಗೆ ಹೊಂದಿದ್ದ ಗಟ್ಟಿಯಾದ ಸಂಬಂಧದ ಬಗ್ಗೆ ಅಂತಾರಾಷ್ಟ್ರೀಯ ಶಕ್ತಿಗಳಿಗೆ ಒಳಗೊಳಗೇ ಸಾಕಷ್ಟು
ಸಿಟ್ಟಿತ್ತು. ಚೀನಾದ ಸಿಟ್ಟಂತೂ ಬಹಿರಂಗವಾಗಿಯೇ ಕಾಣಿಸುತ್ತಿತ್ತು. ಅವರಿಗೆ ಭಾರತ-ಬಾಂಗ್ಲಾ ನಡುವಿನ ಸ್ನೇಹ ನೋಡಿ ಹೊಟ್ಟೆಯುರಿಯುವುದಕ್ಕೆ ಕಾರಣವೂ ಇದೆ.
ಬಾಂಗ್ಲಾದೇಶದಲ್ಲಿ ತನ್ನ ಆಟಕ್ಕೆ ಶೇಖ್ ಹಸೀನಾ ಅವಕಾಶ ನೀಡಬೇಕೆಂದು ಚೀನಾ ಬಯಸುತ್ತಿತ್ತು. ಜಗತ್ತಿನ ಇನ್ನಿತರ ಸೂಪರ್ ಪವರ್ ರಾಷ್ಟ್ರಗಳು ಕೂಡ ಭಾರತ-ಬಾಂಗ್ಲಾ ಸಂಬಂಧದ ಬಗ್ಗೆ ಅತೃಪ್ತಿ ಹೊಂದಿದ್ದವು. ಆದರೆ ಹಸೀನಾ ಅವರ‍್ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅವರ‍್ಯಾರ ಒತ್ತಡಕ್ಕೂ
ಸೊಪ್ಪು ಹಾಕುತ್ತಿರಲಿಲ್ಲ. ಅವರಿಗೆ ತಮ್ಮ ದೇಶದ ಹಿತ ಮುಖ್ಯವಾಗಿತ್ತು. ಬಾಂಗ್ಲಾದೇಶದ ಹಿತಕ್ಕೆ ಭಾರತದ ಸ್ನೇಹ ಅವಶ್ಯವಾಗಿತ್ತು. ಹೀಗಾಗಿ ಶೇಖ್ ಹಸೀನಾ ಈ ವಿಷಯದಲ್ಲಿ ತುಂಬಾ ಕಠಿಣವಾದ ನಿಲುವನ್ನೇ ಹೊಂದಿದ್ದರು.
ಈ ಮಧ್ಯೆ, ವಿದ್ಯಾರ್ಥಿ ಚಳವಳಿಯ ಹೆಸರಿನಲ್ಲಿ ದೊಡ್ಡ ಹೋರಾಟವೊಂದು ಆರಂಭವಾಯಿತು. ಅದರಲ್ಲಿ ಜಮಾತ್ -ಎ-ಇಸ್ಲಾಮಿ ಎಂಬ ವಿದ್ಯಾರ್ಥಿ ಸಂಘಟನೆಯೊಂದು ಸೇರಿಕೊಂಡಿತು. ಈ ಸಂಘಟನೆಗೆ ಮೊದಲಿನಿಂದಲೂ ಶೇಖ್ ಹಸೀನಾ ವಿರುದ್ಧ ದ್ವೇಷ. ಆಕೆಯನ್ನು ಕೆಳಗಿಳಿಸಬೇಕೆಂದು ಬಹಳ ವರ್ಷಗಳಿಂದ ಕಾಯುತ್ತಿತ್ತು. ಆ ಸಂಘಟನೆ ಬೀದಿಗಿಳಿದು, ಮೊದಲೇ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ಹಿಂಸಾಚಾರವನ್ನು ಬೆರೆಸಿತು. ಹೀಗಾಗಿ
ವಿದ್ಯಾರ್ಥಿಗಳ ಹೋರಾಟವು ದಂಗೆಯಾಗಿ ಮಾರ್ಪಟ್ಟಿತು. ನಿಮಗೊಂದು ವಿಷಯ ಗೊತ್ತಿರಲಿ. ಜಮಾತ್-ಎ-ಇಸ್ಲಾಮಿ ಎಂಬುದು ಪಾಕಿಸ್ತಾನದ ಪರವಾಗಿರುವ ಸಂಘಟನೆ.
ಪಾಕಿಸ್ತಾನಕ್ಕೂ ಬಾಂಗ್ಲಾದೇಶಕ್ಕೂ ಬದ್ಧ ವೈರ. ೧೯೭೧ರಲ್ಲಿ ಬಾಂಗ್ಲಾದೇಶದ ರಚನೆಯನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸಿತ್ತು. ಆದರೂ ಭಾರತದ ನೆರವಿನಿಂದ ಬಾಂಗ್ಲಾದೇಶವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದಿತ್ತು. ಹೀಗಾಗಿ ಬಾಂಗ್ಲಾದೇಶ ಅಭಿವೃದ್ಧಿಗೊಳ್ಳುವುದನ್ನು ಸಹಿಸಲು ಪಾಕಿಸ್ತಾನಕ್ಕೆ ಯಾವತ್ತೂ ಸಾಧ್ಯವಿಲ್ಲ. ಬಾಂಗ್ಲಾದೇಶದ ಜನನಕ್ಕೆ ಕಾರಣನಾದ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ದೇಶಭಕ್ತ ವಿದ್ಯಾರ್ಥಿಗಳು ಒಡೆಯುವುದನ್ನು ನೀವು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿದೆಯೇ? ಆ ಪ್ರತಿಮೆಯನ್ನು ಒಡೆದುಹಾಕಿದವರು ಜಮಾತ್-ಎ- ಇಸ್ಲಾಮಿ ಸಂಘಟನೆಯ ಸದಸ್ಯರು ಎಂಬುದು ಈಗ ಸಾಬೀತಾಗಿದೆ. ಇದೇ ಗುಂಪು ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೂ ದಾಳಿ ನಡೆಸಿ, ಅವರ
ಮನೆಗಳನ್ನು ಲೂಟಿ ಮಾಡಿದೆ.
ಭಾರತ ಸರಿಯಾದ ಸಮಯಕ್ಕೆ ಮಧ್ಯಪ್ರವೇಶ ಮಾಡದೆ ಇದ್ದಿದ್ದರೆ ದಂಗೆಕೋರರು ಕ್ಷಿಪ್ರಕ್ರಾಂತಿಯ ಹೆಸರಿನಲ್ಲಿ ಶೇಖ್ ಹಸೀನಾರನ್ನು ಕೊಂದೇ ಬಿಡುತ್ತಿದ್ದರು. ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಕೂಡ ಕ್ರಾಂತಿಕಾರಿ ಭಯೋತ್ಪಾದಕರಿಂದ ಹತ್ಯೆಯಾದವರು. ಅದೃಷ್ಟವಶಾತ್ ಶೇಖ್
ಹಸೀನಾಗೆ ಜೀವ ಉಳಿಸಿಕೊಂಡು ಭಾರತಕ್ಕೆ ಪಲಾಯನ ಮಾಡಲು ಸಾಧ್ಯವಾಯಿತು. ಭಾರತ ಕೂಡ ಆಕೆಯನ್ನು ಬರಮಾಡಿಕೊಂಡಿತು. ತನ್ಮೂಲಕ ತಾನು ಆಪತ್ತಿನ ಸಮಯದಲ್ಲಿ ಬಾಂಗ್ಲಾದೇಶದ ಜತೆಗೆ ನಿಲ್ಲುತ್ತೇನೆ ಎಂಬ ಸಂದೇಶವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ರವಾನಿಸಿತು.
ನೆರೆ ದೇಶದಲ್ಲಿ ಹೊತ್ತಿಕೊಂಡ ಬೆಂಕಿ ಕ್ರಮೇಣ ನಮಗೂ ತೊಂದರೆ ಉಂಟುಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನೆರೆ ದೇಶದಲ್ಲಿ ಶಾಂತಿ ನೆಲೆಸಿದ್ದರೆ ನಮ್ಮಲ್ಲೂ ಶಾಂತಿ ನೆಲೆಸುತ್ತದೆ. ಪಾಕಿಸ್ತಾನದಲ್ಲಿ ಉಗ್ರರ ಮುಕ್ತ ಅಟಾಟೋಪಕ್ಕೆ ಆ ದೇಶದ ಸರಕಾರಗಳು ಅವಕಾಶ ನೀಡಿರುವ ಕಾರಣ ನಮ್ಮ ದೇಶದಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಬಾಂಗ್ಲಾದೇಶವನ್ನು ಮತ್ತೊಮ್ಮೆ ಶಾಂತಿಯ ಪಥಕ್ಕೆ ತರುವ, ಆ ದೇಶವನ್ನು ಭಯೋತ್ಪಾದಕರ ಕಪಿಮುಷ್ಟಿಯಿಂದ ರಕ್ಷಿಸುವ ಅಗತ್ಯವಿದೆ. ಅದು ಎಲ್ಲರ ಜವಾಬ್ದಾರಿ. ಭಾರತವೂ ಅದರಲ್ಲಿ ಕೈಜೋಡಿಸಬೇಕಿದೆ.
(ಲೇಖಕರು ಹಿರಿಯ ಪತ್ರಕರ್ತರು)