ಗಂಧರ್ವಲೋಕ
ಮಾಯಾ ಬಾಲಚಂದ್ರ
ಸಂಗೀತದಲ್ಲಿ ಏನಿಲ್ಲ? ಸ್ವರಗಳು, ಸ್ವರಗಳಿಂದ ಆದ ರಾಗಗಳು, ರಾಗಗಳೊಂದಿಗೆ ಮೇಳೈಸುವ ಭಾವಗಳು, ಭಾವಗಳನ್ನು ಸ್ಪುಟವಾಗಿ ಹೊಮ್ಮಿಸುವ ತಾನಗಳು, ಸ್ಥಾಯಿಗಳು, ಅಕ್ಷರಗಳು, ಅಕ್ಷರಗಳಿಂದಾದ ವಾಕ್ಯಗಳು, ವಾಕ್ ಪ್ರಧಾನವಾದ ಸಾಹಿತ್ಯ, ಗೇಯಗಳು, ಕಾವ್ಯಗಳು, ಗೀತೆಗಳು ಇವೆಲ್ಲವುಗಳಿಗೂ ಸಮಯದ ಚೌಕಟ್ಟನ್ನು ಸೃಷ್ಟಿಸಿ, ಶಿಸ್ತುಬದ್ಧವಾದ ಗಣಿತದ ಕ್ರಮಬದ್ಧತೆಯನ್ನು ಒದಗಿಸುವ ತಾಳಗಳು, ಇವೆಲ್ಲವನ್ನೂ ಸಮ್ಮೇಳೈಸಿ, ರಸಪಾಕವಾಗಿಸಿ
ಸಿದ್ಧಪಡಿಸುವ ವಿಜ್ಞಾನ… ಇನ್ನೂ ಎಷ್ಟೋ ಸಂಗತಿಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಸಂಗೀತ ಹೊರಹೊಮ್ಮಿದಾಗ ಇಡೀ ವಿಶ್ವವೇ
ನಾದಾಧೀನವಾಗಿಬಿಡುತ್ತದೆ.
ಮೇಲಿನ ಎಲ್ಲ ವಿಚಾರಗಳು ಸ್ವತಂತ್ರವಾದವುಗಳೇ ಆದರೂ, ಒಂದಕ್ಕೊಂದು ಹೊಂದಿಕೊಂಡು ಸಂಪೂರ್ಣವೆನಿಸಿಕೊಳ್ಳುತ್ತವೆ. ರಾಗ ಮತ್ತು ಭಾವ ಸಿದ್ಧಿಗಳ ಅಂತಃಸಂಬಂಧ ರಸಾನುಭವದ ದೃಷ್ಟಿಯಿಂದ ಪ್ರಯೋಜನಕಾರಿ. ಶ್ರುತಿ ಮತ್ತು ಲಯಗಳ ಸಂಬಂಧ ಸಂಗೀತವನ್ನು ಭದ್ರಗೊಳಿಸುವ ಬುನಾದಿ. ವಿಶ್ವ ಸಂಗೀತದಲ್ಲಿ ಭಾರತೀಯ ಸಂಗೀತದ ಸ್ಥಾನ ಬಹಳ ವಿಶಿಷ್ಟವಾದುದು.
ಬೇರೆಲ್ಲ ದೇಶಗಳ ಸಂಗೀತದಲ್ಲಿ ಸ್ವರಗಳು ಇವೆ. ಆ ಸ್ವರಗಳನ್ನು ಆರೋಹಣ, ಅವರೋಹಣಗಳಿಗೆ ಹೊಂದಿಸುವ ಮೇಳಗಳಿವೆ. ಆದರೆ ರಾಗಗ
ಳಿಲ್ಲ. ಡಾ.ಮ್ಯಾನ್-ರ್ಡ್ ಕ್ಲೆ ಂಟ್ ಅವರ ‘ಜನರೇಟಿವ್ ಪ್ರಿನ್ಸಿಪಲ್ ಆಫ್ ಮ್ಯೂಸಿಕಲ್ ಥಾಟ್’ ಅನ್ನುವ ಸಂಶೋಧನಾ ಗ್ರಂಥದಲ್ಲಿ, ಇದಕ್ಕೆ
ಪೂರಕವಾದ ಅನೇಕ ವಿಚಾರಗಳು ದೊರೆಯುತ್ತವೆ. ಹಾಗೆಯೇ ಬಿ.ಸಿ. ಚೈತನ್ಯದೇವ ಅವರ ‘ಮ್ಯೂಸಿಕ್ ಆಫ್ ಇಂಡಿಯಾ’ ಗ್ರಂಥದಲ್ಲಿ, ಒಂದೇ ರೀತಿಯ ಸ್ವರಗಳನ್ನು ಹೊಂದಿರುವಂಥ ರಾಗಗಳ ಬಗ್ಗೆ ಬಹಳಷ್ಟು ಶೋಧನೆ, ವಿಶ್ಲೇಷಣೆಗಳನ್ನು ಮಾಡಿದ್ದಾರೆ.
ಬೇರೆ ಬೇರೆ ಸ್ವರಗಳನ್ನು ವಿಭಿನ್ನವಾಗಿ ಸಂಯೋಜಿಸಿ, ಸಿದ್ಧಪಡಿಸಲಾದ ರಾಗಗಳು, ಮೊದಲಿಗೆ ಶ್ರೋತೃಗಳನ್ನು ತಲುಪುತ್ತವೆ. ನಂತರ ವಾಕ್ಯಗಳ ಮೂಲಕ ಸಾಹಿತ್ಯ ಅರ್ಥವಾಗುವುದು. ವಾಕ್ಯಗಳಲ್ಲಿ ಪದಗಳು, ಪದಗಳಲ್ಲಿ ಅಕ್ಷರಗಳು, ಅಕ್ಷರಗಳಲ್ಲಿ ಸ್ವರಗಳು ಹೀಗೆ ಸಂಗೀತದ ಹರಹು ಆಳಕ್ಕೂ, ಎತ್ತರಕ್ಕೂ ವಿಸ್ತರಿಸುತ್ತಾ, ವಿಶಾಲವಾಗುತ್ತಾ ಸಾಗುತ್ತದೆ. ‘ಸ್ವತೋ ರಂಜಯತಿ ಶ್ರೋತೃಚಿತ್ತಂ ಸ ಸ್ವರಮುಚ್ಯತೆ’ ಎಂದರೆ ತನ್ನಷ್ಟಕ್ಕೆ ತಾನೇ ಕೇಳುವವರ ಮನಸ್ಸಿಗೆ ರಂಜನೆ ಯನ್ನುಂಟು ಮಾಡುವ ಧ್ವನಿಗಳನ್ನು ಸ್ವರಗಳೆ ನ್ನುತ್ತೇವೆ. ಧ್ವನಿಯ ವೈಶಿಷ್ಟ್ಯವೇನೂ ಕಡಿಮೆಯದ್ದಲ್ಲ.
ಮಾತಿಗೊಂದು ಧ್ವನಿ, ವ್ಯಕ್ತಿಗೊಂದು ಧ್ವನಿ, ಸಮಾಜಕ್ಕೊಂದು ಧ್ವನಿ.. ಹೀಗೆ ಧ್ವನಿಸುತ್ತಾ, ಮಾರ್ದನಿಸುತ್ತಾ ಹೋಗು ತ್ತದೆ. ಅಂದರೆ ಧ್ವನಿ (ಸ್ವರ) ಕೇವಲ ಗಾಯನಕ್ಕೆ ಸೀಮಿತವಲ್ಲ. ಬ್ರಹ್ಮಾಂಡದೆಡೆ ಎಲ್ಲಕ್ಕೂ ಅದರದ್ದೇ ಆದ ಧ್ವನಿಗಳಿವೆ. ಈ ಧ್ವನಿಗಳನ್ನು ಬಾಧಿಸದೆ, ಅದರದ್ದೇ ಪ್ರಕೃತಿಗೆ ಘಾಸಿಯಾಗದಂತೆ ಕಾಳಜಿ ವಹಿಸುವವರು ಸ್ವರಾರಾಧಕರು. ಸ್ವರವನ್ನು ಶ್ರುತಿ ಬದ್ಧವಾಗಿ, ಕಂಠದಿಂದ ಲೂ, ವಾದ್ಯದಿಂದಲೂ ನುಡಿಸುವವರು ಸುರೀಲರು.
‘ಪ್ರಕೃತಿ ಸ್ವರ’ ಎನ್ನುವುದನ್ನು ಸಂಗೀತದ ಪಾರಿಭಾಷಿಕ ಶಬ್ದವಾಗಿ ನೋಡದೆ, ಸಾರ್ವತ್ರಿಕವಾಗಿ ನೋಡುವುದಾದರೆ, ಅದು ಪ್ರಕೃತಿಯದ್ದೇ ಆದ ಸ್ವರ. ಪ್ರಕೃತಿಯ ಮೂಲ ಪ್ರವೃತ್ತಿಯನ್ನು ಧ್ವನಿಸುವಂಥ ಪ್ರಕೃತಿಯ ಧ್ವನಿ. ಇದಕ್ಕೆ ಧಕ್ಕೆಯಾಗದಂತೆ ವರ್ತಿಸುವವರು ಕಾಳಜಿ ವಹಿಸುವವರು ಸುರೀ ಪ್ರವೃತ್ತಿಯವರು. ಮತ್ತೆ ಸಂಗೀತದ ಪರಿಭಾಷೆಗೆ ಮರಳಿದರೆ ಸಂಗೀತದ ಸಪ್ತ ಸ್ವರಗಳಲ್ಲಿ ‘ಪ್ರಕೃತಿ ಸ್ವರ’ ಎಂದರೆ ಎರಡು ಮಾತ್ರ. ಅವು ‘ಸ’ ಮತ್ತು ‘ಪ’ ಮಾತ್ರ. ಪ್ರಕೃತಿ ಸ್ವರಗಳು ನಿರ್ದಿಷ್ಟವಾಗಿರುವ ಸ್ವರಗಳು. ಇವು ಎಲ್ಲ ರಾಗಗಳಲ್ಲಿಯೂ ಒಂದೇ ತೆರನಾಗಿದ್ದು, ಬದಲಾಗದೆ ಉಳಿಯುತ್ತವೆ. ಉಳಿದ ಐದು ಸ್ವರಗಳು ವಿಕೃತಿ ಸ್ವರಗಳೆನಿಸಿಕೊಳ್ಳುತ್ತವೆ.
ಇವು ಗಳು ರಾಗದಿಂದ ರಾಗಕ್ಕೆ ಬದಲಾಗುತ್ತಾ ಹೋಗುತ್ತವೆ. ಪ್ರಕೃತಿ ಸ್ವರಗಳು ಮತ್ತು ವಿಕೃತಿ ಸ್ವರಗಳು ವಿರುದ್ಧ ಗುಣ ಸ್ವಭಾವಗಳನ್ನು ಹೊಂದಿದ್ದರೂ ಇವು ಯಾವುವೂ ವಿರುದ್ಧ ಧ್ವನಿಗಳಲ್ಲ. ಸ್ವರಗಳೆಲ್ಲವೂ ಒಂದಕ್ಕೊಂದು ಪರಸ್ಪರ ಪೂರಕವೇ. ಎಲ್ಲವೂ ಒಂದಾಗಿ ರಾಗಕ್ಕೆ ಸಂಪನ್ನತೆಯನ್ನು ಕೊಟ್ಟು
ಪೂರ್ಣವಾಗುವಂತೆ ಮಾಡುವ ಗುಣ ಎಲ್ಲ ಸ್ವರಗಳಿಗೂ ಇದೆ. ಹಾಗೆಯೇ ಬ್ರಹ್ಮಾಂಡದಲ್ಲಿನ, ಅಂದರೆ ಪ್ರಕೃತಿ ಯಲ್ಲಿನ ಎಲ್ಲ ಧ್ವನಿಗಳು ಒಂದಕ್ಕೊಂದು ಪೂರಕವೇ ಆಗಿವೆ. ಇಲ್ಲಿ ಯಾವುದೂ ವಿರುದ್ಧವಲ್ಲ. ಎಲ್ಲವೂ ಮೇಳೈಸಿದಾಗಲೇ ಸುಂದರ ಜಗತ್ತು. ಇದು ಪ್ರಕೃತಿ ಸಾರುವ ನೀತಿ.
ಸಂಗೀತದ ಜೀವಾಳವೂ ಇದೇ ಆಗಿದೆ. ಸಕಲ ಚರಾಚರಗಳನ್ನು ಒಳಗೊಳ್ಳುವ ಜಗದ ದನಿಯೇ ನಾದ. ‘ನಾದಾಧಿನಂ ಜಗತ್ ಸರ್ವಂ..’ ನಾದಮಯ ಈ ಲೋಕವೆಲ್ಲ.. ಸಂಗೀತವು ಬೇರೆ ಹಲವು ವಿದ್ಯೆಗಳೊಂದಿಗೆ ಬೆಸೆದುಕೊಂಡು, ತನ್ನನ್ನು ವಿವಿಧ ಮುಖಗಳಿಗೆ ತೆರೆದುಕೊಳ್ಳುವುದರೊಂದಿಗೆ, ಅನ್ಯ
ವಿದ್ಯೆಗಳನ್ನೂ ಸಂಪೂರ್ಣಗೊಳಿಸಿದೆ. ನಾಟ್ಯ, ನಾಟಕ, ಯಕ್ಷಗಾನ, ಗಮಕ ಮುಂತಾದವುಗಳನ್ನು ಸಂಗೀತ ಇಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಪ್ರಾರಂಭದಲ್ಲಿ ಎಲ್ಲವೂ ಸೇರಿ ಒಂದೇ ಆಗಿದ್ದಂಥ ವಿದ್ಯೆ ಕಾಲಕ್ರಮೇಣ ತನ್ನದೇ ಸ್ವತಂತ್ರ ಬೆಳವಣಿಗೆಯಿಂದ ವಿಭಿನ್ನ ಕ್ಷೇತ್ರಗಳಾಗಿ ರೂಪುಗೊಂಡರೂ ಇಂದಿಗೂ ಎಲ್ಲವೂ ಒಂದಕ್ಕೊಂದು ಪೂರಕವಾಗಿಯೇ ಮುಂದುವರಿಯುತ್ತಿವೆ.
ಶಾಸ್ತ್ರೀಯ ಸಂಗೀತವನ್ನು ಗಮನಿಸಿದರೆ ಇತ್ತೀಚಿನ ವರ್ಷಗಳಲ್ಲಿ ಅಗಾಧವಾದ ಬದಲಾವಣೆಗಳಾಗಿವೆ. ಶುದ್ಧ ಶಾಸೀಯ ಸಂಗೀತ ತನ್ನತನವನ್ನು ಉಳಿಸಿಕೊಂಡಿದ್ದರೂ, ಇದೇ ಶಾಸ್ತ್ರೀಯ ಸಂಗೀತ ಹಲವು ನವ್ಯ ಪ್ರಕಾರಗಳಾದಂಥ ಸುಗಮ ಸಂಗೀತ, ಚಲನಚಿತ್ರ ಸಂಗೀತ ಮುಂತಾದವುಗಳನ್ನು ಕೂಡ ಬೆಳೆಸುತ್ತಿದೆ. ಮನಸ್ಸನ್ನು ವ್ಯಗ್ರಗೊಳಿಸದೆ, ಸ್ನಿಗ್ಧಗೊಳಿಸುವಂಥ ಎಲ್ಲ ಸಂಗೀತವೂ ಪ್ರಸ್ತುತತೆಗೆ ಅವಶ್ಯಕವೇ.
(ಲೇಖಕಿ ಸಂಗೀತ ವಿದುಷಿ)