ಜೀವನ ಚೈತ್ರ
ಗೋಪಾಲಕೃಷ್ಣ ಭಟ್ ಬಿ.
ನಮ್ಮ ದೇಶದ ಸಾಂಸ್ಕೃತಿಕ ಪರಂಪರೆ ವಿಶ್ವದ ಅಗ್ರಗಣ್ಯ ಮತ್ತು ಎಲ್ಲರಿಂದಲೂ ಗೌರವಿಸಲ್ಪಡುತ್ತದೆ. ಇಲ್ಲಿ ಪರೋಪಕಾರ ಎನ್ನುವ ಮಂತ್ರ ತುಂಬಾ ಮಹತ್ವ ಹೊಂದಿದೆ ಮತ್ತು ಲಾಗಾಯ್ತಿನಿಂದ ನೆಲೆಸಿದೆ. ಸರ್ವೇ ಭವನ್ತು ಸುಖಿನಃ ಎಂಬ ಶ್ಲೋಕವೇ ಇದಕ್ಕೆ ಉತ್ತಮ ಉದಾಹರಣೆ. ಪರೋಪಕಾರದ ಮೂಲಕ ನಾವು ಸಮಾಜ ದಲ್ಲಿ ಉತ್ತಮ ಬದಲಾವಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿರುತ್ತೇವೆ ಮತ್ತು ನಮ್ಮ ಜೀವನದಲ್ಲಿ ಸಾರ್ಥಕತೆ ಹೊಂದಬಹುದು.
ಆದ್ದರಿಂದಲೇ ಇದು ನಿಜವಾದ ಮನುಷ್ಯತ್ವದ ಪ್ರತಿರೂಪ ವಾಗಿದೆ. ಸಹಾಯ ಮಾಡುವುದು ಅಥವಾ ಪರೋಪಕಾರ ಮಾಡುವುದು ಅಂದರೆ ಕೇವಲ ಹಣದ ಸಹಾಯ ಅಷ್ಟೆ ಅಲ್ಲ. ಕೆಲವೊಮ್ಮೆ ಹಣದಲ್ಲಿ ನೀಡಲಾಗದೇ ಇದ್ದುದನ್ನು ನಮ್ಮ ಸಮಯ, ಅನುಕಂಪ ನೀಡುವುದರ ಮೂಲಕವೂ ನೀಡಬಹುದು. ಕಷ್ಟದಲ್ಲಿರುವವರ ದುಃ ಖಗಳಿಗೆ ಸ್ಪಂದಿಸುವುದು ಕೂಡಾ ಒಂದು ರೀತಿಯಲ್ಲಿ ಸಹಾಯ ಮಾಡಿದಂತೆ. ಅಶಕ್ತರನ್ನು ಕೈಹಿಡಿದು ನಡೆಸುವುದು, ಇರುವ ಜ್ಞಾನವನ್ನು ಧಾರೆ ಎರೆಯುವುದು, ಗೊತ್ತಿಲ್ಲದವರಿಗೆ ಅಗತ್ಯ ಮಾಹಿತಿ ನೀಡುವುದು. ಇವೇ ಮೊದಲಾದ ರೀತಿಯ ಸಣ್ಣ ಸಣ್ಣ ಸಹಾಯಗಳು ಕೂಡಾ ಸಹಾಯ ಪಡೆದವರ ಮೊಗದಲ್ಲಿ ಸಂತಸದ ನಗೆಗೆ ಕಾರಣ ವಾಗಬಹುದು.
ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಸಾಧ್ಯವಾದಷ್ಟೂ ನಾವು ನಮ್ಮವರಿಗಾಗಿ, ನಮ್ಮ ಸಮಾಜದ ಉಪಯೋಗಕ್ಕಾಗಿ ಜೀವಿಸಬೇಕು. ದೇವರು ಕೊಟ್ಟ ಈ ದೇಹ ಯಾ ಶರೀರ ಇರುವುದೇ ನಮ್ಮಿಂದಾದಷ್ಟು ಇತರರಿಗೆ ಸಹಾಯ ಮಾಡಲು ಎನ್ನುವ ಧ್ಯೇಯವನ್ನು ಇಟ್ಟುಕೊಂಡರೆ ಜೀವನ ಸಾರ್ಥಕ ವಾಗಬಹುದು. ಪ್ರಕೃತಿಯಲ್ಲಿ ಮರಗಿಡಗಳು ಹಣ್ಣುಗಳನ್ನು ಕೊಡುವಂತೆ, ಹಸುಗಳು ಪರೋಪಕಾರ ಗುಣದಿಂದಲೇ ಹಾಲು ನೀಡುವಂತೆ ಈ ಮನುಷ್ಯ ಜೀವನ ನಮಗೆ ಸಿಕ್ಕಿರುವುದು ಪರರಿಗೆ ಸಹಾಯ ಮಾಡುವುದಕ್ಕೆ ಎಂದೇ ಭಾವಿಸಬೇಕು. ಒಂದು ಗಾದೆಯ ಮಾತಿದೆ ಊರಿಗೆ ಉಪಕಾರಿ, ಮನೆಗೆ ಮಾರಿ. ಅಂದರೆ, ನಮ್ಮ ಮನೆಯವರ ಜವಾಬ್ದಾರಿ/ ಮನೆ ಕೆಲಸಗಳಿಗೆ ಮೊದಲ ಆದ್ಯತೆ ಕೊಡದೆ, ಇತರರಿಗೆ ಸಹಾಯ ಮಾಡುವುದು. ಆದರೆ, ನಮ್ಮ ಮನೆಯ ವರನ್ನು, ಕುಟುಂಬದವರನ್ನು ಮತ್ತು ನಮ್ಮ ಮಿತ್ರರನ್ನು ಎಂದಿಗೂ ನಾವು ಕಡೆಗಣಿಸಬಾರದು.
‘ಸೇವಾಹಿ ಪರಮೋ ಧರ್ಮಃ’ ಎಂದು ಹೇಳುವ ಮಾತು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ಸಾರುತ್ತದೆ. ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ. ನಮ್ಮ ಜೀವನದಲ್ಲಿ ಬೇಡಿ ಬಂದವರಿಗೆ ಸಹಾಯ ಮಾಡುವುದರಲ್ಲಿ ಸಿಗುವ ಆನಂದ, ಮತ್ತೊಬ್ಬರಿಂದ ಸಹಾಯ ಪಡೆಯುವುದರಲ್ಲಿ ಸಿಗದು. ಸೇವೆ ಮಾಡುವ ಸಾಮರ್ಥ್ಯವನ್ನು ನಮಗೆ ದೇವರು ನೀಡಿದ್ದಾರೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಬದುಕಿನ ಸಾರ್ಥಕ್ಯಕ್ಕೆ ಸೇವೆ ಕಾರಣವಾಗಬಹುದು. ಸೇವೆ ಸ್ವಾರ್ಥರಹಿತವಾಗಿದ್ದಾಗ ಹೆಚ್ಚಿನ ಮೌಲ್ಯ ಪಡೆಯುತ್ತದೆ.
ಅಂದರೆ ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೆ ಪ್ರತಿ-ಲಾಪೇಕ್ಷೆ ಇರಬಾರದು. ನಿರೀಕ್ಷೆ ನಮ್ಮನ್ನು ಕೊರಗುವಂತೆ ಮಾಡುವುದು. ಅದು ಜೀವನದಲ್ಲಿ ದುಃಖ ತರುತ್ತದೆ. ಆದ್ದರಿಂದ ಪ್ರತಿಫಲದ ನಿರೀಕ್ಷೆ ಇಲ್ಲದೇ ಮಾಡುವ ಸಹಾಯ ನಮ್ಮನ್ನು ಖುಷಿಯಾಗಿರುವಂತೆ ಮಾಡುತ್ತದೆ. ಅದೇ ಸಂತಸದಿಂದ ಜೀವನದಲ್ಲಿನ ಒತ್ತಡ ಕಡಿಮೆ ಆಗುವುದು. ಕೇವಲ ಪ್ರಚಾರಕ್ಕಾಗಿ ದಾನ, ಸೇವೆ ಇತ್ಯಾದಿ ಮಾಡಿ, ತಾನೊಬ್ಬ ದೊಡ್ದ ಮನುಷ್ಯ ಎನ್ನುವ ತೋರ್ಪಡಿಕೆ ಒಳ್ಳೆಯದಲ್ಲ. ಸಹಾಯದಿಂದ ಸಂತೋಷ: ನಾವು ಮಾಡುವ ಸಣ್ಣ ಸಣ್ಣ ಸಹಾಯವೂ ಕೂಡಾ ಖುಷಿ ನೀಡುತ್ತದೆ. ಉದಾಹರಣೆಗೆ, ನಾವು ನಿತ್ಯ ಓಡಾ ಡುವ ಬಸ್ನಲ್ಲಿ ವಯಸ್ಸಾದವರು, ವಿಕಲ ಚೇತನರು ಬಸ್ ಹತ್ತಬೇಕಿರುತ್ತದೆ. ತ್ರಾಸದಿಂದಲೇ ಬಸ್ ಹತ್ತಲು ಪ್ರಯತ್ನಿಸುತ್ತಿರುತ್ತಾರೆ.
ಆದರೆ ಕಂಡೂ ಕಾಣದಂತೆ ವರ್ತಿಸುವ ಬದಲು, ಅವರಿಗೆ ಸಹಾಯ ಹಸ್ತ ನೀಡುವುದರಲ್ಲಿ ಆನಂದವನ್ನು ಕಂಡುಕೊಳ್ಳಬಹುದು. ಇನ್ನು ಭಿಕ್ಷುಕರಿಗೆ ಆಹಾರ ನೀಡುವುದು, ವೃದ್ಧಾಶ್ರಮ ಗಳಿಗೆ ಬೆಂಬಲ ನೀಡುವುದು, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಇತ್ಯಾದಿ ಸಹಾಯಗಳಿಂದ ಅವರ ಮನದಲ್ಲಿ ಮೂಡುವ ಸಂತೋಷ, ಅವರ ಆಶೀರ್ವಾದ ನಮಗೆ ದೊರಕುವ ಧನಾತ್ಮಕ ಶಕ್ತಿಯಾಗ ಬಹುದು. ಪರೋಪಕಾರದ ಫಲಾನುಭವಿಗಳು ಕೇವಲ
ಸ್ವೀಕರಿಸುವವರೇ ಅಲ್ಲ, ಸಹಾಯ ಮಾಡುವವನು ಸಹ ಸಂತೋಷ ವನ್ನು ಅನುಭವಿಸುತ್ತಾನೆ. ನಾವು ಯಾರಿಗೋ ಒಳ್ಳೆಯದು ಮಾಡಿದರೆ ಮತ್ತು ಇನ್ನೊಬ್ಬರ ಬದುಕಿಗೆ ಆಸರೆಯಾದರೆ, ಅದನ್ನು ಅವರು ಜೀವನ ಪರ್ಯಂತ ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳಬಹುದು.
ಕೃತಜ್ಞತೆ ಬಹಳ ಮಹತ್ವದ್ದು. ಅದರಿಂದ ವ್ಯಕ್ತಿ ವ್ಯಕ್ತಿಯ ನಡುವೆ ಬಾಂಧವ್ಯ ಹೆಚ್ಚಬಹುದು. ಇಲ್ಲಿ ಮಾನವೀಯತೆಯ ಬಾಂಧವ್ಯ ಕೂಡಾ ವೃದ್ಧಿಯಾಗ ಬಹುದು. ಆದರೆ ಕೃತಘ್ನರಿಗೆ ಲೋಕ ದಲ್ಲಿ ಒಳ್ಳೆಯ ಸ್ಥಾನಮಾನವಿಲ್ಲ. ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಂ ಎಂದು ನಮ್ಮ ಪುರಾತನ ಶ್ಲೋಕಗಳು ಕೂಡ ಹೇಳುತ್ತವೆ. ಪರೋಪಕಾರದಿಂದ ಪುಣ್ಯ ಲಭಿಸುತ್ತದೆ; ಆದರೆ ಇತರರಿಗೆ ತೊಂದರೆ ಕೊಡುವುದರಿಂದ ಪಾಪ ಬರುತ್ತದೆ. ಆದ್ದರಿಂದ ಯಾರಿಗೂ ತೊಂದರೆ ಕೊಡ ಬಾರದು, ಅಲ್ಲದೆ ಕೇಡನ್ನು ಕೂಡಾ ಬಯಸಬಾರದು. ನಾವು ಇತರ ರಿಗೆ ಮಾಡುವ ಸಣ್ಣ ಸಣ್ಣ ಸಹಾಯಗಳು ಕೂಡಾ ಅವರಿಗೆ ತುಂಬಾ ಅನುಕೂಲವಾಗಬಹುದು. ಅವರ ಜೀವನದ ಸಂತೋಷಕ್ಕೆ ನಾಂದಿಯಾಗಬಹುದು. ಈ ಮಾನವಜನ್ಮ ನಮಗೆ ದೊರಕಿದ್ದು ಹಿಂದಿನ ಜನ್ಮದ ಪುಣ್ಯ-ಲ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ನಾವು ಈ ಜಗತ್ತಿಗೆ ಏನು ನೀಡುತ್ತೆವೆಯೋ ಅದನ್ನೆ ಮತ್ತೆ ಪಡೆಯುತ್ತೆವೆ ಎಂಬ ಒಂದು ಮಾತಿದೆ. ಅಂದರೆ ಅದು ಪ್ರಿತಿ, ಅನುಕಂಪ, ಸಹಾಯಹಸ್ತ ಏನೇ ಆಗಿರಬಹುದು.
ಯಾರೋ ಕಷ್ಟದಲ್ಲಿರುತ್ತಾರೆ, ಅವರಿಗೆ ಸಹಾಯ ಮಾಡುವುದರಿಂದ ಜಗತ್ತಿನಲ್ಲಿ ಯಾವುದೋ ಒಂದು ಸಕಾರಾತ್ಮಕ ಘಟನೆಗೆ ನಾವು ಕಾರಣರಾಗುತ್ತಿ ದ್ದಾವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಹಾಗಾಗಿ ಇತರರಿಗೆ ಸಹಾಯ ಮಾಡುವುದರಿಂದ ಖುಷಿಯ ಅನುಭವ ಉಂಟಾಗಬಹುದು. ಖುಷಿ ಖುಷಿಯಾಗಿ ಇರುವುದರಿಂದ ಕೆಲಸ ಮಾಡುವ ಜಾಗದಲ್ಲಿಯೂ ಹೆಚ್ಚು ಕ್ರಿಯಾಶೀಲರಾಗಿರಬಹುದು. ಸೇವೆ ಮಾಡುವುದು ನಾವು ಈ ಭೂಮಿಯಲ್ಲಿ ವಾಸಿಸುವುದಕ್ಕೆ ಸಲ್ಲಿಸಬೇಕಾದ ಬಾಡಿಗೆ ಎಂದು ಒಬ್ಬ ಅಮೆರಿಕನ್ ಲೇಖಕಿ ಹೇಳಿದ್ದಾರೆ. ಕೊಡುವ ಗುಣ ನಮ್ಮಲ್ಲಿದ್ದರೆ ಅದನ್ನು ನಾವು ಸತ್ಪಾತ್ರರಿಗೆ ನೀಡಬೇಕು. ನಾವು ಮತ್ತೊಬ್ಬರಿಗೆ ಹೊರೆಯಾಗದೆ ನಮ್ಮ ನಮ್ಮ ಕೆಲಸ ಕಾರ್ಯಗಳಿಗೆ ಇತರರನ್ನು ಅವಲಂಬಿಸುವುದು ಒಳ್ಳೆಯದಲ್ಲ.
ಇದೇ ನಾವು ನಮಗೆ ಮಾಡುವ ದೊಡ್ಡ ಉಪಕಾರ. ಕೊನೆಯದಾಗಿ, ನಾವು ಏನೇ ಮಾಡುವುದಿದ್ದರೂ ಅದರಿಂದ ಫಲಾಪೇಕ್ಷೆ ಪಡಬಾರದು. ಭಗವದ್ಗಿತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿರುವಂತೆ ‘ಕರ್ಮಣ್ಯೆ ವಾಧಿಕಾರಸ್ತೆ ಮಾ ಫಲೇಶು ಕದಾಚನ’ ಎನ್ನುವಂತೆ ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಸಹಾಯ ಮಾಡಬೇಕು. ಅದುವೇ ನಿಜವಾದ ಮಾನವ ಧರ್ಮ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)