Thursday, 28th November 2024

ಹೊಸ ಕ್ರಿಮಿನಲ್‌ ಕಾನೂನುಗಳ ವೈಶಿಷ್ಟ್ಯ

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಪಾಲಿಗೆ ೨೦೨೪ರ ಜುಲೈ ೧ ಐತಿಹಾಸಿಕ ದಿನವಾಗಿದೆ. ಏಕೆಂದರೆ, ಅಂದಿನಿಂದ ೩ ಹೊಸ ಕ್ರಿಮಿನಲ್ ಕಾನೂನು ಗಳು ದೇಶದಲ್ಲಿ ಜಾರಿಯಾಗಿವೆ. ಅಲ್ಲಿಯವರೆಗೆ ಅಸ್ತಿತ್ವದಲ್ಲಿದ್ದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (ಐಇಎ) ಇವುಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು  ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸುರಳೀತವಾಗಿ ಜಾರಿಗೆ ಬಂದಿವೆ.

ಕಳೆದ ಡಿಸೆಂಬರ್‌ನಲ್ಲಿ ಇವನ್ನು ಅಪರೂಪಕ್ಕೆ ಎನ್ನುವಂತೆ ಹೆಚ್ಚು ಗದ್ದಲ ಮತ್ತು ವಿರೋಧವಿಲ್ಲದೆ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ಈ ಪ್ರಮುಖ ಕಾನೂನುಗಳಲ್ಲಿನ ಬದಲಾವಣೆ ಗಳು ಭಾರತದ ನ್ಯಾಯದಾನ ವ್ಯವಸ್ಥೆಯ ಮೇಲೆ ಕ್ರಾಂತಿಕಾರಕ ಮತ್ತು ನಿರ್ಣಾಯಕ ಪರಿಣಾಮ ಬೀರಲಿವೆ ಎಂದೇ ಪರಿಭಾವಿಸಲಾಗಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿನ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತಿರಲಿಲ್ಲ; ಕಳಪೆ ಸ್ವರೂಪದ ತನಿಖೆಗಳು, ಅಸಂಗತ ಕಾನೂನು ಕ್ರಮಗಳು, ಕ್ರಿಮಿನಲ್ ಪ್ರಕರಣಗಳನ್ನು ದೊಡ್ಡ ಪ್ರಮಾಣಗಳಲ್ಲಿ ಬಾಕಿ ಉಳಿಸಿಕೊಳ್ಳುವುದು, ವಿಳಂಬ ವಾಗುವ ನ್ಯಾಯಾಲಯದ ವಿಚಾರಣೆಗಳು, ಒಟ್ಟಾರೆ ಪ್ರಕರಣಗಳ ವಿಲೇವಾರಿಯಲ್ಲಿನ ವಿಳಂಬ, ಗಂಭೀರ ಅಪರಾಧಗಳಿಗೆ ಕಡಿಮೆ ಪ್ರಮಾಣದ ಶಿಕ್ಷೆ ಮತ್ತು ವಿಚಾರಣಾಧೀನ ಕೈದಿಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದು ಸೇರಿದಂತೆ ಅನೇಕ ನ್ಯೂನತೆಗಳು ಇದಕ್ಕೆ ಕಾರಣವಾಗಿದ್ದವು.

ಹಾಗಾಗಿ, ಆಧುನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ದೀರ್ಘಕಾಲ ಬಾಳಿಕೆಯಲ್ಲಿದ್ದ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುವುದು ಅನಿವಾರ್ಯ ಎಂಬುದು ಬಹುತೇಕ ಕಾನೂನು ತಜ್ಞರ ಅಭಿಪ್ರಾಯವಾಗಿತ್ತು. ಭಾರತೀಯ ನ್ಯಾಯ ಸಂಹಿತೆಯು ಹೊಸ ಅಪರಾಧಗಳನ್ನು ಗುರುತಿಸಿದರೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯು ವಿಧಿವಿಜ್ಞಾನ ತನಿಖಾ ಪ್ರಕ್ರಿಯೆ
ಯನ್ನು ಕಡ್ಡಾಯವಾಗಿಸುತ್ತದೆ ಮತ್ತು ಕಾನೂನು ಪ್ರಕ್ರಿಯೆ ಗಳನ್ನು ಹೆಚ್ಚು ಡಿಜಿಟಲೀಕರಣಗೊಳಿಸುತ್ತದೆ.

ಇಲೆಕ್ಟ್ರಾನಿಕ್ ಮತ್ತು ಡಿಜಿಟಲ್ ದಾಖಲೆಗಳನ್ನು ಪರಿಗಣಿಸುವ ಮೂಲಕ ನ್ಯಾಯಾಲಯಗಳು ಸಾಕ್ಷ್ಯವನ್ನು ನಿರ್ವಹಿಸುವ ವಿಧಾನವನ್ನು ಭಾರತೀಯ ಸಾಕ್ಷ್ಯ ಅಧಿನಿಯಮವು ಆಧುನೀಕರಿಸಿದಂತಾಗುತ್ತದೆ ಮತ್ತು ಇದು ಭಾರತದ ನ್ಯಾಯದಾನ ವ್ಯವಸ್ಥೆಯಲ್ಲಿನ ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸ
ಲಿದೆ ಎಂದು ಭಾವಿಸಲಾಗುತ್ತಿದೆ. ಭಾರತವು ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ ಜಾರಿಯಲ್ಲಿದ್ದ ೩ ಕ್ರಿಮಿನಲ್ ಕಾನೂನುಗಳು ಸಣ್ಣಪುಟ್ಟ
ಪರಿಷ್ಕರಣೆಗಳನ್ನು ಸಾಕಷ್ಟು ಬಾರಿ ಕಂಡಿದ್ದರೂ, ಇವಕ್ಕೆ ಈ ಬಾರಿ ಗಂಭೀರ ಬದಲಾವಣೆಗಳನ್ನು ತರಲಾಗಿದೆ ಎನ್ನಲಾಗುತ್ತಿದೆ.

ಹಳೆಯ ಕ್ರಿಮಿನಲ್ ಕಾನೂನುಗಳು ಬ್ರಿಟಿಷರ ಸೃಷ್ಟಿಯಾಗಿದ್ದವು; ಆದರೆ ಈ ಹೊಸ ಸಂಹಿತೆಗಳು ಭಾರತೀಯರಿಗೆ ಭಾರತೀಯರೇ ರೂಪಿಸಿರುವಂಥವು
ಮತ್ತು ಭಾರತದ ಇಂದಿನ ಅಗತ್ಯಗಳಿಗೆ ಸ್ಪಂದಿಸುವಂಥವು. ಇವು ಶಿಕ್ಷೆಗಿಂತ ನ್ಯಾಯದ ಮೇಲೆ ಕೇಂದ್ರಿತವಾಗಿವೆ ಮತ್ತು ತ್ವರಿತ ನ್ಯಾಯವನ್ನು ಒದಗಿಸುವ ಗುರಿಹೊಂದಿವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೆಮ್ಮೆಯಿಂದ ಹೇಳಿಕೊಂಡರೆ, ಈ ಹೊಸ ಕಾನೂನುಗಳಿಗೆ ಪ್ರಮುಖ ಬದಲಾವಣೆಗಳನ್ನು ತರುವಾಗ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಕೂಲಂಕಷವಾಗಿ ಪರಿಶೀಲಿಸಿರಲಿಲ್ಲ ಮತ್ತು ವಿಸ್ತೃತ ಸಾರ್ವಜನಿಕ ಚರ್ಚೆಗೆ ಅವಕಾಶ ಗಿರಲಿಲ್ಲ ಎಂದು ದೇಶದ ಕೆಲ ಕಾನೂನುತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಯಾವುದೇ ಕಾನೂನನ್ನು ಹೊಸದಾಗಿ ಪರಿಚಯಿಸಿದಾಗ ಅಥವಾ ಇರುವ ಕಾನೂನನ್ನು ಮಾರ್ಪಡಿಸಿದಾಗ, ನ್ಯಾಯವಾದಿಗಳಿಗೆ ಮತ್ತು ತನಿಖಾ ಸಂಸ್ಥೆ ಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಅಗತ್ಯವಿರುತ್ತದೆ. ಹಾಗಾಗಿ, ಈ ೩ ಹೊಸ ಕಾನೂನುಗಳನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಅಗತ್ಯವಿರುವ ತರಬೇತಿಗಳನ್ನು ಎಲ್ಲಾ ರಾಜ್ಯಗಳಲ್ಲಿ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ. ತರಬೇತಿಯ ಜವಾಬ್ದಾರಿಯನ್ನು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (ಬಿಪಿಆರ್‌ಡಿ), ನ್ಯಾಯಾಂಗ ಅಕಾಡೆಮಿಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ ಅಪರಾಧಗಳ ಸ್ವರೂಪವನ್ನು ಅವಲಂಬಿಸಿ, ಹಿಂದಿನ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ನೀಡಲಾಗುತ್ತಿದ್ದ ಪೊಲೀಸ್ ಕಸ್ಟಡಿಯನ್ನು ೧೫ ದಿನಗಳಿಂದ ೯೦ ದಿನಗಳವರೆಗೆ ಹೆಚ್ಚಿಸಲಾಗಿದೆ. ಐಪಿಸಿಯಲ್ಲಿದ್ದ ೫೧೧ ಸೆಕ್ಷನ್‌ಗಳ ಬದಲಿಗೆ ಭಾರತೀಯ ನ್ಯಾಯ ಸಂಹಿತೆಯು ೩೫೮ ಸೆಕ್ಷನ್‌ಗಳನ್ನು ಮಾತ್ರ ಹೊಂದುವುದರೊಂದಿಗೆ ಹೊಸ ಕಾನೂನನ್ನು ಸರಳೀಕರಿಸಲಾಗಿದೆ ಎಂದು ವಿಶ್ಲೇಷಿಸಬಹುದು. ಇದರ ವ್ಯಾಪ್ತಿಗೆ ಒಟ್ಟು ೨೦ ಹೊಸ ಅಪರಾಧಗಳನ್ನು ಸೇರಿಸಲಾಗಿದೆ, ೩೩ ಅಪರಾಧಗಳಿಗೆ ಜೈಲುಶಿಕ್ಷೆಯ ಅವಽಯನ್ನೂ, ೮೩ ಅಪರಾಧಗಳಿಗೆ ದಂಡದ ಮೊತ್ತವನ್ನೂ ಹೆಚ್ಚಿಸಲಾಗಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ದೇಶದ್ರೋಹ, ಆರ್ಥಿಕ ಅಪರಾಧಗಳಂಥ ವಿಷಯಗಳಲ್ಲಿ ಸಾಮಾನ್ಯ ನಾಗರಿಕರ ಆಶೋತ್ತರಗಳಿಗೆ ಇಲ್ಲಿ ಸ್ಪಂದಿಸಲಾಗಿ ದೆ. ಹೊಸ ಕಾನೂನಿನ ಪ್ರಕಾರ ಇನ್ನು ವ್ಯಕ್ತಿಯು ಪೊಲೀಸ್ ಠಾಣೆಗೆ ತೆರಳಿಯೇ ದೂರು ನೀಡಬೇಕೆಂದಿಲ್ಲ, ಆನ್‌ಲೈನ್ ಮೂಲಕವೂ ದೂರು ನೀಡಲು ಅವಕಾಶವಿದೆ. ಸುಲಭವಾಗಿ ಮತ್ತು ತ್ವರಿತವಾಗಿ ವರದಿಮಾಡಲು ಇದು ಅನುವು ಮಾಡಿ ಕೊಡುತ್ತದೆ ಹಾಗೂ ಪೊಲೀಸರಿಂದ ತ್ವರಿತ ಕ್ರಮವನ್ನೂ ನಾವು ನಿರೀಕ್ಷಿಸಬಹುದಾಗಿದೆ. ವ್ಯಕ್ತಿಯು ತನ್ನ ವ್ಯಾಪ್ತಿ ಪ್ರದೇಶದ ಹೊರಗೂ, ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಬಹುದು.

ಇದು ಕಾನೂನು ಪ್ರಕ್ರಿಯೆಗಳನ್ನು ಶೀಘ್ರವಾಗಿಸುತ್ತದೆ. ದೂರುದಾರರು ಮತ್ತು ಸಂತ್ರಸ್ತರು ಎಫ್ ಐಆರ್‌ನ ಪ್ರತಿಯನ್ನು ಉಚಿತವಾಗಿ ಪಡೆದುಕೊಂಡು ಅಪರಾಧದಲ್ಲಿನ ತಮ್ಮ ಪಾತ್ರವನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಮಾತ್ರವಲ್ಲದೆ, ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿಯು, ತನ್ನ ಹಾಲಿ ಸ್ಥಿತಿಯ ಬಗ್ಗೆ ತನ್ನಾಯ್ಕೆಯ ವ್ಯಕ್ತಿಗೆ ತಿಳಿಸುವ ಹಕ್ಕನ್ನು ಹೊಂದಿರುತ್ತಾನೆ. ಬಂಧಿತನು ತಕ್ಷಣದ ಜಾಮೀನು ಮುಂತಾದ ನೆರವು ಪಡೆಯಲು ಇದು ನೆರವಾಗಲಿದೆ. ಬಂಧನದ ಬಳಿಕ ವ್ಯಕ್ತಿಗಳ ವಿವರಗಳನ್ನು ಈಗ ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸೂಚನಾ -ಲಕದ ಮೇಲೆ ಅಂಟಿಸ ಲಾಗುತ್ತದೆ. ಇದರಿಂದಾಗಿ ಬಂಧಿತರ ಕುಟುಂಬಿಕರು ಮತ್ತು ಸ್ನೇಹಿತರು ಸುಲಭವಾಗಿ ಮಾಹಿತಿಯನ್ನು ಪಡೆಯಲಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತನಿಖೆಗೆ ಹೊಸ ಕಾನೂನುಗಳು ಆದ್ಯತೆ ನೀಡಿವೆ ಮತ್ತು ಮಾಹಿತಿ ದಾಖಲಿಸಿದ ೨ ತಿಂಗಳೊಳಗೆ ಪ್ರಕರಣದ ತನಿಖೆ ಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಭಾರತೀಯ ದಂಡ ಸಂಹಿತೆಯ ಬದಲಾಗಿ ಬಂದಿರುವ ನ್ಯಾಯ ಸಂಹಿತೆಯ ಅಡಿಯಲ್ಲಿ ಹಲವಾರು ಹೊಸ ಅಪರಾಧಗಳನ್ನು ಸೇರಿಸಲಾಗಿದೆ. ಮೋಸದ ವಿಧಾನಗಳನ್ನು ಬಳಸಿ ನಡೆಸುವ ಲೈಂಗಿಕ ದೌರ್ಜನ್ಯ ಇದಕ್ಕೊಂದು ಉದಾಹರಣೆ. ಬಡ್ತಿ ಅಥವಾ ಉದ್ಯೋಗದ ಸುಳ್ಳು ಭರವಸೆಗಳು, ನಂತರ ಮದುವೆಯಾಗುವುದಾಗಿ ನಂಬಿಸುವಿಕೆ ಇವೆಲ್ಲ ಇಲ್ಲಿ ಮೋಸದ ವಿಧಾನಗಳೆನಿಸಿಕೊಳ್ಳುತ್ತವೆ. ಇಂಥ ಅಪರಾಧಕ್ಕೆ ದಂಡದ ಜತೆಗೆ ೧೦ ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.

ಬಹಳಷ್ಟು ವಿಮರ್ಶಕರು ‘ಇದು ಸರಿಯಾದ ಕ್ರಮ’ ಎಂದು ಶ್ಲಾಸಿದರೂ, ‘ಈ ಕಾನೂನು ಕೆಲ ಸಂದರ್ಭಗಳಲ್ಲಿ ಒಮ್ಮತದ ಸಂಬಂಧವನ್ನು ಅಪರಾಧಿಕರಿ
ಸುತ್ತದೆ’ ಎಂದು ಒಂದಷ್ಟು ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಜಾತಿ, ಸಮುದಾಯ ಅಥವಾ ಜನಾಂಗದ ಆಧಾರದ ಮೇಲಿನ ಕೊಲೆಯನ್ನು ವಿಶಿಷ್ಟ ಅಪರಾಧವೆಂದು ಗುರುತಿಸುವುದರೊಂದಿಗೆ ಕ್ರಿಮಿನಲ್ ಕಾನೂನಿನಲ್ಲಿ ಮಹತ್ವದ ಬದಲಾವಣೆಯನ್ನು ತಂದಂತಾಗಿದೆ. ಇತ್ತೀಚೆಗೆ ದೇಶದಲ್ಲಿ ಇಂಥ ಅಪರಾಧಗಳ ವಿವಿಧ ಪ್ರಕರಣಗಳು ಹೆಚ್ಚು ಕಂಡುಬಂದಿರುವುದರಿಂದ, ಹೊಸ ಕಾನೂನು ಅವಕ್ಕೆ ಅಗತ್ಯವಾದ ಕಾನೂನು ಮಾನ್ಯತೆಯನ್ನು ನೀಡುತ್ತಿರುವುದು ಒಳ್ಳೆಯ ನಡೆ ಎನ್ನಬಹುದು.

ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳು ಮೊದಲು ಬೇರೆಯದೇ ಆದ ಕಾನೂನುಗಳ ವ್ಯಾಪ್ತಿಯಲ್ಲಿದ್ದವು; ಭಾರತೀಯ ನ್ಯಾಯ ಸಂಹಿತೆಯ ಕಲಂ ೧೧೧ (೧) ರಲ್ಲಿ ಉಲ್ಲೇಖಿಸಿದಂತೆ ಸಂಘಟಿತ ಅಪರಾಧವು ದರೋಡೆ, ಸುಲಿಗೆ, ಅಪಹರಣ, ವಾಹನ ಕಳವು, ಬಾಡಿಗೆ ಕೊಲೆ, ಭೂಕಬಳಿಕೆ, ಸೈಬರ್ ಮತ್ತು ಆರ್ಥಿಕ ಅಪರಾಧಗಳು, ಮಾದಕ ವಸ್ತುಗಳ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಅಕ್ರಮ ಸೇವೆಗಳು ಮುಂತಾದ ಕಾನೂನುಬಾಹಿರ ಚಟುವಟಿಕೆ ಗಳನ್ನು ಒಳಗೊಂಡಿರುವುದು ಸ್ವಾಗತಾರ್ಹ ಬದಲಾವಣೆ ಎಂದು ಪರಿಗಣಿಸಲಾಗುತ್ತಿದೆ.

ಹಳೆಯ ಕಾನೂನಿಗೆ ಹೋಲಿಸಿದಾಗ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯು, ಕಾನೂನು ಕ್ರಮ, ಬಂಧನ, ಜಾಮೀನು ಮುಂತಾದ ಪ್ರಕ್ರಿಯೆಗಳ ಕಾರ್ಯವಿಧಾನ ಗಳನ್ನು ವಿವರವಾಗಿ ನೀಡುತ್ತದೆ, ೭ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲುಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ವಿಧಿವಿಜ್ಞಾನ ತನಿಖೆಯನ್ನು ಕಡ್ಡಾಯಗೊಳಿಸುತ್ತದೆ. ಮಾತ್ರವಲ್ಲ, ಪುರಾವೆಗಳನ್ನು ಸಂಗ್ರಹಿಸುವ ಮತ್ತು ಪ್ರಕ್ರಿಯೆಯನ್ನು ದಾಖಲಿಸುವ ಉದ್ದೇಶಕ್ಕಾಗಿ ವಿಧಿವಿಜ್ಞಾನ
ತಜ್ಞರು ಅಪರಾಧ ಸಂಬಂಧಿತ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ.

ಇಲ್ಲಿ, ಎಲ್ಲಾ ವಿಚಾರಣೆಗಳು ಇಲೆಕ್ಟ್ರಾನಿಕ್ ಮಾಧ್ಯಮವನ್ನು ಬಳಸಿಯೇ ನಡೆಯಬೇಕಾಗುತ್ತದೆ ಮತ್ತು ತನಿಖೆ, ಪ್ರಯೋಗ ಅಥವಾ ವಿಚಾರಣೆಯ ಉದ್ದೇಶಕ್ಕಾಗಿ ಇಲೆಕ್ಟ್ರಾನಿಕ್ ಸಂವಹನ ಮಾಧ್ಯಮಗಳನ್ನು ಬಳಸಬಹುದಾಗಿದೆ. ಇಲೆಕ್ಟ್ರಾನಿಕ್ ಮತ್ತು ಡಿಜಿಟಲ್ ದಾಖಲೆಗಳಿಗೆ ಅವಕಾಶ ನೀಡಿರುವುದು ಭಾರತೀಯ ಸಾಕ್ಷ್ಯ ಅಧಿನಿಯಮದಲ್ಲಿ ಗಮನಿಸಬಹುದಾದ ಬದಲಾವಣೆ. ಇದರನ್ವಯ, ಸರ್ವರ್, ಇ-ಮೇಲ್, ಲ್ಯಾಪ್‌ಟಾಪ್, ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಸಂಗ್ರಹಿಸಿದ ಫೈಲುಗಳು, ಸ್ಥಳ ಮಾಹಿತಿ, ವೆಬ್‌ಸೈಟ್ ವಿಷಯ, ಸಂದೇಶಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಇಲೆಕ್ಟ್ರಾನಿಕ್ ದಾಖಲೆಗಳನ್ನು ಪುರಸ್ಕರಿಸಲಾಗುತ್ತದೆ.

ವಿದ್ಯುನ್ಮಾನ ಮಾಧ್ಯಮದಿಂದ ಪಡೆಯಲಾದ ಮೌಖಿಕ ಸಾಕ್ಷ್ಯವು ಇಲ್ಲಿ ‘ಒಪ್ಪಿತ ಪುರಾವೆ’ ಎನಿಸಿ ಕೊಳ್ಳುತ್ತದೆ. ಇದಲ್ಲದೆ, ಅತ್ಯಾಚಾರದ ವಿಷಯದಲ್ಲಿ ಸಂತ್ರಸ್ತರಿಗೆ ಉತ್ತಮ ರಕ್ಷಣೆ ನೀಡುವ ಸಲುವಾಗಿ, ಸಂತ್ರಸ್ತೆಯ ಹೇಳಿಕೆಯನ್ನು ಪ್ರತ್ಯಕ್ಷವಾಗಿ ದಾಖಲಿಸುವುದರ ಬದಲಾಗಿ ಆಡಿಯೋ-ವಿಡಿಯೋ ವಿಧಾನಗಳ ಮೂಲಕ ದಾಖಲಿಸಲಾಗುತ್ತದೆ. ಅಪರಾಧ ನಡೆದ ಸ್ಥಳಕ್ಕೆ ನೀಡುವ ಭೇಟಿಯಿಂದ ಮೊದಲ್ಗೊಂಡು ತನಿಖೆಯವರೆಗಿನ ಎಲ್ಲಾ ಹಂತಗಳಲ್ಲಿ ತಂತ್ರಜ್ಞಾನದ ಬಳಕೆಯನ್ನು ಈ ಅಧಿನಿಯಮ ಪರಿಚಯಿಸಿರುವುದಿಂದ ತನಿಖೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ನಿರೀಕ್ಷಿಸಬಹುದು ಎಂಬುದು ಸರಕಾರದ ವಾದ.

ಸಾಕ್ಷ್ಯಗಳ ತಿರುಚುವಿಕೆಯ ಅಪಾಯವನ್ನು ಪರಿಗಣಿಸಿ, ಶೋಧ ಮತ್ತು ಸಾಕ್ಷಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗಳಲ್ಲಿ ಆಡಿಯೋ-ವಿಡಿಯೋ ರೆಕಾರ್ಡಿಂಗ್ ಅನ್ನು ಕಡ್ಡಾಯವಾಗಿ ಸೇರಿಸಿರುವುದು ಈ ಅಧಿನಿಯಮ ದಲ್ಲಿನ ಪ್ರಮುಖ ಸಾಧನೆಯಾಗಿದೆ. ಓಬೀರಾಯನ ಕಾಲದ ತುಕ್ಕುಹಿಡಿದ ಕಾನೂನುಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ, ಇಂದಿನ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವ ಕ್ರಮ ಸರಿಯಾದದ್ದೇ ಆಗಿದೆ. ಸಮಾಜದ ಪ್ರಸಕ್ತ ಪರಿಸ್ಥಿತಿ ಮತ್ತು ದೇಶದ ಆಂತರಿಕ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಬದಲಾವಣೆ ತಂದಿರುವುದು, ದೇಶದ ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದರೆಡೆಗಿನ ಕೇಂದ್ರ ಸರಕಾರದ ದೃಢವಾದ ಹೆಜ್ಜೆಯಾಗಿದೆ.

ಮಾತ್ರವಲ್ಲ, ಅಸಮರ್ಪಕ ವಕ್ ಕಾನೂನಿಗೆ ಬದಲಾವಣೆ ತರುವ ಪ್ರಸ್ತಾವನೆ ಮತ್ತು ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ಮೋದಿಯವರು ಕೆಂಪುಕೋಟೆ ಮೇಲಿನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ‘ಜಾತ್ಯತೀತ ನಾಗರಿಕ ಸಂಹಿತೆ’ಯನ್ನು ಜಾರಿಗೆ ತರುವ ಕುರಿತಾದ ಸರಕಾರದ ಧೋರಣೆಗಳೂ ಸಮರ್ಪಕ ವಾಗಿವೆ. ಅನುಷ್ಠಾನಕ್ಕೆ ಸಿದ್ಧವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳೂ ಸರಕಾರದ ಕಾನೂನು ಸುಧಾರಣಾ ಮತ್ತು ಸರಳೀಕರಣ ಕ್ರಮಗಳ ಭಾಗವೇ ಆಗಿವೆ. ಹಾಗಾಗಿ, ಅನುಷ್ಠಾನದಲ್ಲಿನ ಆರಂಭಿಕ ತೊಡಕುಗಳಿಗೆ ಹೆಚ್ಚಿನ ಮಹತ್ವ ನೀಡದೆ, ಕ್ರಿಮಿನಲ್ ಕಾನೂನುಗಳಲ್ಲಿನ ಈ ಎಲ್ಲಾ ಸಕಾರಾತ್ಮಕ ಮಾರ್ಪಾಡುಗಳನ್ನು ದೇಶಸ್ಥರು ತೆರೆದ ಮನಸ್ಸಿನಿಂದ ಸ್ವಾಗತಿಸಬೇಕಿದೆ ಮತ್ತು ಈ ಹೊಸ ಚಿಂತನೆಗೆ ಶೀಘ್ರವಾಗಿ ಹೊಂದಿಕೊಳ್ಳುವ ಮೂಲಕ ಸ್ಪಂದಿಸ ಬೇಕಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)