ದೃಷ್ಟಿಕೋನ
ಸ್ವಪನ್ ದಾಸ್ ಗುಪ್ತಾ
ಬಾಂಗ್ಲಾದೇಶದ ಆಡಳಿತ ವ್ಯವಸ್ಥೆಯಲ್ಲಿ ಬಹುದೊಡ್ಡ ರೂಪಾಂತರ ಸಂಭವಿಸಿದೆ. ಮೀಸಲಾತಿ ವಿರೋಧಿಸುವ ನೆಪದಲ್ಲಿ ಭುಗಿಲೆದ್ದ ವಿದ್ಯಾರ್ಥಿ ದಂಗೆಯು ಅವಾಮಿ ಲೀಗ್ ಸರಕಾರವನ್ನು ಕಿತ್ತೆಸೆದಿದೆ. ಆಗಸ್ಟ್ ೫ರ ಕ್ರಾಂತಿಯಲ್ಲಿ ಪ್ರಧಾನಿ ಶೇಖ್ ಹಸೀನಾ ಅಧಿಕಾರ ಕಳೆದುಕೊಂಡು, ಜೀವ ಉಳಿಸಿಕೊಂಡು ಭಾರತಕ್ಕೆ ಓಡಿ ಬಂದಿದ್ದಾರೆ. ಇಂಥದ್ದೊಂದು ದಿಢೀರ್ ಕ್ರಾಂತಿ ಸಂಭವಿಸಿದ್ದು ಹೇಗೆ ಎಂಬ ಬಗ್ಗೆಯೇ ಸಾಕಷ್ಟು ಊಹಾಪೋಹಗಳು ಈಗ ಹರಿದಾಡತೊಡಗಿವೆ.
ಬಾಂಗ್ಲಾದ ಸೆಲೆಬ್ರಿಟಿ ನಾಯಕ ಹಾಗೂ ಪ್ರತಿಭಟನಾಕಾರರ ಫೇವರಿಟ್ ವ್ಯಕ್ತಿಯಾಗಿದ್ದ ನೊಬೆಲ್ ಪುರಸ್ಕ ತ ಮುಹಮ್ಮದ್ ಯೂನುಸ್ ಈಗ ಮಧ್ಯಂತರ ಸರಕಾರಕ್ಕೆ ಮುಖ್ಯಸ್ಥರಾಗಿದ್ದಾರೆ. ಅವರು ಈ ಕ್ರಾಂತಿಯನ್ನು ಬಾಂಗ್ಲಾದೇಶದ ‘ಎರಡನೇ ವಿಮೋಚನೆ’ ಎಂದು ಕರೆದಿದ್ದಾರೆ. ಶೇಖ್ ಹಸೀನಾ ವಾಜಿದ್‌ರನ್ನು ಕೆಳಗಿಳಿಸಲೇಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿ ಸಂಘಟನೆಗಳಲ್ಲೂ ಅನೇಕರು ಇದನ್ನೇ ಹೇಳುತ್ತಿದ್ದಾರೆ. ಈಗ ಎದ್ದಿರುವ ಪ್ರಶ್ನೆ: ಬಾಂಗ್ಲಾದೇಶದ ಮುಂದಿನ ಕತೆಯೇನು? ಕ್ರಾಂತಿ ಮುಗಿದು ಈಗಷ್ಟೇ ಎರಡು ವಾರವಾಗುತ್ತಿದೆ. ಈಗಲೇ ಭವಿಷ್ಯದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರುವುದು ಅವಸರವಾದೀತು.
ಇಷ್ಟಕ್ಕೂ ದೇಶದಲ್ಲಿ ಹಿಂಸಾಚಾರವೇ ಇನ್ನೂ ನಿಂತಿಲ್ಲ. ಆದರೆ ಸ್ಥೂಲವಾಗಿ ಕೆಲ ಟ್ರೆಂಡ್‌ಗಳಂತೂ ಗೋಚರಿಸುತ್ತಿವೆ. ಮೀಸಲಾತಿ ವಿರುದ್ಧದ ಹೋರಾಟದ ಸಮಯದಲ್ಲಿ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಈಗ ಮೀಸಲಾತಿ ವಿರುದ್ಧ ಹೋರಾಟ ನಡೆಸುತ್ತಿರುವ ‘ಕ್ರಾಂತಿಕಾರಿಗಳನ್ನು’ ಎದುರು ಬದುರು ತಂದು ನಿಲ್ಲಿಸಿ ನೀವೇ ಹೊಡೆದಾಡಿಕೊಳ್ಳಿ ಎಂದು ಎತ್ತಿಕಟ್ಟಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಆ ಪ್ರಯತ್ನ ಅವರಿಗೇ ತಿರುಗುಬಾಣವಾಯಿತು.
ಶೇಖ್ ಹಸೀನಾ ಅವರು ತಮ್ಮನ್ನು ರಜಾಕರ್‌ಗಳಿಗೆ ಹೋಲಿಸುತ್ತಿದ್ದಾರೆ ಎಂದು ಭಾವಿಸಿದ ವಿದ್ಯಾರ್ಥಿ ಚಳವಳಿಗಾರರು ಅದರಿಂದ ರೊಚ್ಚಿಗೆದ್ದು ಪ್ರಧಾನಿ ಕುರ್ಚಿಯ ಬುಡಕ್ಕೇ ಬೆಂಕಿಯಿಟ್ಟರು. ರಜಾಕರ್‌ಗಳು ಅಂದರೆ ೧೯೭೧ರ ಬಾಂಗ್ಲಾ ವಿಮೋಚನೆ ಯುದ್ಧದ ಸಮಯದಲ್ಲಿ ಪಾಕಿಸ್ತಾನದೊಂದಿಗೆ ಕೈಜೋಡಿಸಿದ್ದ ಬಂಗಾಳಿಗಳು. ಇವರನ್ನು ಬಾಂಗ್ಲಾದೇಶದಲ್ಲಿ ದೇಶದ್ರೋಹಿಗಳ ರೀತಿ ನೋಡಲಾಗುತ್ತದೆ. ಆಗಸ್ಟ್ ೫ರ ಕ್ರಾಂತಿಯ ಬಳಿಕ ಹೋರಾಟ ಗಾರರು ಬಾಂಗ್ಲಾದೇಶದ ಪಿತಾಮಹ ಶೇಖ್ ಮುಜಿಬುರ್ ರಹಮಾನ್ ಅವರ ಪುತ್ಥಳಿಯನ್ನು ಧ್ವಂಸಗೊಳಿಸಿದ್ದು, ಢಾಕಾದಲ್ಲಿರುವ ಅವರ ಮನೆಗೆ
ಬೆಂಕಿ ಹಚ್ಚಿದ್ದು, ಹೊಸ ನಾಯಕತ್ವಕ್ಕೆ ಈ ದಂಗೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಹೋಗಿದ್ದು ಹಾಗೂ ಕ್ರಾಂತಿಯ ಕೆಲ ಖ್ಯಾತನಾಮ ಬೆಂಬಲಿಗರು ಕೂಡ ಈ ಹಿಂಸಾಚಾರವನ್ನು ಖಂಡಿಸದೆ ಇದ್ದುದನ್ನು ನೋಡಿದರೆ- ಹೋರಾಟಗಾರರನ್ನು ರಜಾಕರ್‌ಗಳಿಗೆ ಶೇಖ್ ಹಸೀನಾ ಹೋಲಿಸಿದ ವಿಷಯಕ್ಕೆ ನಾನಾ ಅರ್ಥಗಳು ಸುರಿಸುತ್ತವೆ.
ಮುಹಮ್ಮದ್ ಯೂನುಸ್ ಅವರ ಹೊಸ ಸರಕಾರವು ಈವರೆಗೆ ಬಂಗಬಂಧು ಮುಜಿಬುರ್ ರಹಮಾನ್ ಅವರು ಹುತಾತ್ಮರಾದ ದಿನವಾದ ಆಗಸ್ಟ್ ೧೫ ರಂದು ದೇಶದಲ್ಲಿ ನೀಡುತ್ತಿದ್ದ ರಾಷ್ಟ್ರೀಯ ರಜೆಯನ್ನು ರದ್ದುಪಡಿಸಿರುವುದನ್ನು ಕೂಡ ಇದರೊಂದಿಗೇ ಸೇರಿಸಿ ಓದಿಕೊಳ್ಳಿ. ಅಂದರೆ, ೧೯೭೧ರ
ಪರಂಪರೆಯನ್ನು ಬಿಟ್ಟು ಮುನ್ನಡೆಯುವ ಉದ್ದೇಶಪೂರ್ವಕ ಪ್ರಯತ್ನಗಳು ಇಲ್ಲಿ ಕಾಣಿಸುತ್ತಿವೆ. ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ.
ಹಾಗಿದ್ದರೆ ಬಾಂಗ್ಲಾದೇಶವು ತನಗೆ ಸ್ವಾತಂತ್ರ್ಯ ಲಭಿಸಿದ ೧೯೭೧ರ ಐತಿಹಾಸಿಕ ಘಟನೆಯನ್ನೇ ಮರೆಯಲು ಅಥವಾ ಮರೆಸಲು ಏಕೆ ಬಯಸುತ್ತಿದೆ? ತನ್ನ ಮೂಲ ಪಾಕಿಸ್ತಾನದಲ್ಲಿ ರುವುದನ್ನು ಮರೆಯುವುದಕ್ಕೇನೂ ಬಾಂಗ್ಲಾದೇಶ ಯತ್ನಿಸುತ್ತಿಲ್ಲ. ಅಥವಾ ಆ ಉದ್ದೇಶ ಅದಕ್ಕಿಲ್ಲ. ಅದಕ್ಕೂ ಈಗಿನ ಕ್ರಾಂತಿಗೂ ಸಂಬಂಧ ಕೂಡ ಇಲ್ಲ. ಹಾಗಂತ, ಬಾಂಗ್ಲಾದೇಶವು ನಿಧಾನವಾಗಿ ತನ್ನ ಪಾಕಿಸ್ತಾನಿ ಬೇರುಗಳತ್ತಲೇ ಮತ್ತೆ ಮರಳುತ್ತಿದೆ ಎಂದೂ ಹೇಳುವ ಅಗತ್ಯವಿಲ್ಲ. ಹಾಗೆ ಕೂಡ ಆಗುತ್ತಿಲ್ಲ. ವಾಸ್ತವವಾಗಿ ಈ ‘ಎರಡನೇ ವಿಮೋಚನೆ’ಯ ಹಿಂದೆ ಇರುವುದು ಆತ್ಮಗೌರವದ ವಿಕೃತ ರೂಪಾಂತರ.
೧೯೭೧ರ ಬಾಂಗ್ಲಾ ವಿಮೋಚನೆಯಲ್ಲಿ ಭಾರತದ ಪಾತ್ರ ಬಹಳ ದೊಡ್ಡದಿತ್ತು. ಪಾಕಿಸ್ತಾನದ ಸೇನೆಯು ಅಂದು ಶರಣಾಗಿದ್ದು ಭಾರತದ ಸೇನೆಗೇ ಹೊರತು ಬಾಂಗ್ಲಾ ಹೋರಾಟಗಾರರಿಗೆ ಅಲ್ಲ. ಇದೊಂದು ಕೀಳರಿಮೆ ಸದಾ ಬಾಂಗ್ಲಾದೇಶದ ಕೆಲ ವರ್ಗಗಳನ್ನು ಕಾಡುತ್ತಲೇ ಬಂದಿದೆ. ೧೯೭೧ರಲ್ಲಿ ಪಾಕಿಸ್ತಾನ ದಿಂದ ಬಾಂಗ್ಲಾ ಬೇರೆಯಾಗಬೇಕು ಎಂಬ ಉದ್ದೇಶದಿಂದ ಹೋರಾಟ ನಡೆದಿದ್ದರ ಹಿಂದೆ ಎರಡು ಕಾರಣಗಳಿದ್ದವು. ಒಂದು, ಭಾಷೆಯ ದಬ್ಬಾಳಿಕೆ. ಎರಡನೆ ಯದು, ರಾಜಕೀಯ ಸ್ವಾತಂತ್ರ್ಯ ಅಥವಾ ಪ್ರಾದೇಶಿಕ ಸ್ವಾಯತ್ತತೆ. ಇವತ್ತಿಗೂ ಬಾಂಗ್ಲಾ ವಿಮೋಚನೆಗೆ ಇವೇ ಕಾರಣಗಳನ್ನು ಹೇಳಲಾಗುತ್ತದೆ.
ಆದರೆ, ಬಾಂಗ್ಲಾದೇಶವು ಪಾಕಿಸ್ತಾನದ ಹಿಡಿತದಿಂದ ಬಿಡಿಸಿಕೊಳ್ಳುವಾಗ ೧೯೭೧ರಲ್ಲಿ ನಡೆದ ಘಟನೆಗಳಿವೆಯಲ್ಲಾ, ಅವುಗಳನ್ನು ಜೀರ್ಣಿಸಿಕೊಳ್ಳಲು ಇವತ್ತಿಗೂ ಬಾಂಗ್ಲಾದೇಶಕ್ಕೆ ಆಗುತ್ತಿಲ್ಲ. ೧೦ ತಿಂಗಳ ಕಾಲ ಬಾಂಗ್ಲಾದೇಶದ ‘ಮುಕ್ತಿ ಬಾಹಿನಿ’ ಪಡೆಗಳು ಪಾಕಿಸ್ತಾನಕ್ಕೆ ಸಾಕಷ್ಟು ನೀರಿಳಿಸಿದ್ದರೂ, ಬಾಂಗ್ಲಾ ವಿಮೋಚನೆಯ ವಿಷಯ ಪ್ರಸ್ತಾಪವಾದಾಗಲೆಲ್ಲ ಈಗಲೂ ಜಗತ್ತಿನ ಕಣ್ಮುಂದೆ ಬರುವ ಚಿತ್ರವೆಂದರೆ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಜಿ ಭಾರತದ ಲೆಫ್ಟಿನೆಂಟ್ ಜನರಲ್ ಜೆ. ಎಸ್.ಅರೋರಾಗೆ ಶರಣಾಗಿ ಕಡತಕ್ಕೆ ಸಹಿ ಹಾಕುತ್ತಿರುವ ಚಿತ್ರ.
ಆಗ ಅಲ್ಲಿದ್ದುದು ಒಬ್ಬನೇ ಒಬ್ಬ ಬಾಂಗ್ಲಾದೇಶಿ. ಅದೂ ಸಿವಿಲ್ ಡ್ರೆಸ್‌ನಲ್ಲಿ ನಿಂತಿದ್ದ. ಹೀಗಾಗಿ, ತನಗೆ ಸಿಕ್ಕ ಸ್ವಾತಂತ್ರ್ಯವು ಭಾರತ ಕೊಡಿಸಿದ ಭಿಕ್ಷೆ ಎಂಬಂಥ ಜಾಗತಿಕ ಇಮೇಜಿನಿಂದ ಹೊರಗೆ ಬರಬೇಕು ಎಂದು ಬಾಂಗ್ಲಾದೇಶಕ್ಕೀಗ ಅನ್ನಿಸಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಮೀಸಲಾತಿ
ವಿರುದ್ಧ ಹೋರಾಟ ನಡೆದು, ಪ್ರಧಾನಿ ಶೇಖ್ ಹಸೀನಾರನ್ನು ಪದಚ್ಯುತಿಗೊಳಿಸುವ ಅವಸರದಲ್ಲಿ ಸಾವಿರಕ್ಕೂ ಹೆಚ್ಚು ಜನರು ಬಾಂಗ್ಲಾದೇಶದ ಪೊಲೀಸರು ಹಾಗೂ ಅರೆಸೇನಾ ಪಡೆಗಳ ಬಂದೂಕುಪ್ರೇಮಿ ಸೈನಿಕರಿಗೆ ಬಲಿಯಾಗಿದ್ದಾರೆ.
ಆದರೆ, ಈ ಆಗಸ್ಟ್ ಕ್ರಾಂತಿಯು ಸಂಪೂರ್ಣ ಬಾಂಗ್ಲಾದೇಶದ ಕರಕಮಲಗಳಿಂದಲೇ ನಡೆದ ಕೃತ್ಯ. ಸೋಕಾಲ್ಡ್ ‘ಫ್ಯಾಸಿಸಂ ವಿರುದ್ಧದ ಗೆಲುವು’ ಎಂಬ ಈ ಹೆಗ್ಗಳಿಕೆಯನ್ನು ಬಾಂಗ್ಲಾದೇಶವು ಬೇರೆ ಯಾವ ದೇಶದ ಜತೆಗೂ ಹಂಚಿ ಕೊಳ್ಳಬೇಕಿಲ್ಲ. ಕ್ರಾಂತಿಗೆ ಟೂಲ್-ಕಿಟ್ ವಿನ್ಯಾಸಗೊಳಿಸಿ ಕೊಟ್ಟವರ ಜತೆಗೂ ಕ್ರೆಡಿಟ್ ಹಂಚಿಕೊಳ್ಳುವ ಅಗತ್ಯವಿಲ್ಲ. ಬಾಂಗ್ಲಾದ ಆಡಳಿತದಲ್ಲಿ ಆದ ಬದಲಾವಣೆಯ ಎರಡನೇ ಪ್ರಮುಖ ಲಕ್ಷಣವೆಂದರೆ, ಈ ರೂಪಾಂತರವು
ಭಾರತದ್ವೇಷವನ್ನು ಬಾಂಗ್ಲಾದೇಶದ ಮೂಲಮಂತ್ರವನ್ನಾಗಿ ಮಾಡಲಿದೆ. ಭಾರತವಿರೋಽತನವು ಬಾಂಗ್ಲಾದೇಶದ ಇನ್ನು ಮುಂದಿನ ರಾಷ್ಟ್ರೀಯ ಸಿದ್ಧಾಂತವಾಗುವ ಸಾಧ್ಯತೆಯಿದೆ.
ಇಷ್ಟು ಕಾಲ ಶೇಖ್ ಹಸೀನಾ ಹಾಗೂ ಅವರ ಅವಾಮಿ ಲೀಗ್ ಪಕ್ಷವು ದೆಹಲಿಯಲ್ಲಿ ಕುಳಿತ ಬಾಸ್‌ಗಳ ಕೈಗೊಂಬೆಯಾಗಿದ್ದವು ಎಂಬ ಭಾವನೆ ಬಾಂಗ್ಲಾದೇಶದ ಒಂದು ವರ್ಗದ ಜನರಲ್ಲಿತ್ತು. ೨೦೧೯ ಹಾಗೂ ೨೦೨೪ರಲ್ಲಿ ನಡೆದ ಚುನಾವಣಾ ಅಕ್ರಮಗಳ ಸೂತ್ರಧಾರ ಭಾರತ ಎಂಬ ಆರೋಪವೂ ಅಲ್ಲಿದೆ. ಆದರೆ ವಿರೋಧ ಪಕ್ಷಗಳ ಆ ಕೂಗಿಗೆ ಇಷ್ಟು ಕಾಲ ಯಾವುದೇ ಬೆಲೆ ಇರಲಿಲ್ಲ. ಏಕೆಂದರೆ ಶೇಖ್ ಹಸೀನಾ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದರು. ಇನ್ನು, ಬಾಂಗ್ಲಾದೇಶವು ಭಾರತದ ಉತ್ಪನ್ನಗಳಿಗೆ ಡಂಪಿಂಗ್ ಯಾರ್ಡ್ ಆಗಿದೆ ಎಂದು ಅನೇಕರು ದೂರುತ್ತಿದ್ದರು. ಇತ್ತೀಚೆಗೆ ಕೆಲ ಯೂಟ್ಯೂಬ್ ಹೋರಾಟಗಾರರು ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಂಗ್ಲಾದಲ್ಲಿ ಕ್ಯಾಂಪೇನ್ ಕೂಡ ನಡೆಸಿದ್ದರು. ಭಾರತದ ಕುರಿತಾದ ದ್ವೇಷ ಬಾಂಗ್ಲಾ
ದೇಶದಲ್ಲಿ ಇವತ್ತಿಗೂ ಎಷ್ಟು ತೀವ್ರವಾಗಿದೆ ಅಂದರೆ, ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್ ತೌಹೀದ್ ಹೊಸೇನ್ ಅವರು ಭಾರತದ ಜತೆಗಿನ ಎಲ್ಲಾ ಒಪ್ಪಂದಗಳೂ ಈ ಹಿಂದಿನಂತೆಯೇ ಮುಂದುವರೆಯಲಿವೆ ಎಂದು ಹೇಳಿಕೆ ನೀಡಿದ ಕಾರಣಕ್ಕೆ ಅವರು ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.
ಇವತ್ತಿನ ಬಾಂಗ್ಲಾದೇಶದಲ್ಲಿ ಭಾರತದ ಬಗ್ಗೆ ನಖಶಿಖಾಂತ ದ್ವೇಷ ಮನೆಮಾಡಿದೆ. ಹಾಗಂತ ಇನ್ನುಮುಂದೆ ಬಾಂಗ್ಲಾದೇಶದ ರೋಗಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಬರುವುದು ನಿಂತುಹೋಗುತ್ತದೆ ಅಥವಾ ಭಾರತದ ವ್ಯಾಪಾರ ವ್ಯವಹಾರಗಳು ಬಾಂಗ್ಲಾದೇಶದಲ್ಲಿ ಮುಚ್ಚಿಹೋಗುತ್ತವೆ ಎಂಬುದು ಇದರರ್ಥ ಅಲ್ಲ. ಹಾಗೆಲ್ಲ ಏನೂ ಆಗುವುದಿಲ್ಲ. ಅವೆಲ್ಲ ಎಂದಿನಂತೆಯೇ ನಡೆಯುತ್ತವೆ. ಆದರೆ, ಎರಡು ದೇಶಗಳ ನಡುವೆ ಉಂಟಾಗಲಿರುವ ಬಹುದೊಡ್ಡ
ಬದಲಾವಣೆ ಅಂದರೆ ರಾಜಕೀಯ ಮತ್ತು ರಾಜತಾಂತ್ರಿಕ ಭಿನ್ನಮತಗಳು ಇನ್ನುಮುಂದೆ ಹೆಚ್ಚಾಗುತ್ತವೆ. ಹಿಂದೆ ಜೈಉರ್ ರಹಮಾನ್ ಅಧ್ಯಕ್ಷರಾಗಿದ್ದಾಗ ಹೀಗೇ ಆಗಿತ್ತು. ಈ ಬೆಳವಣಿಗೆಗಳು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಚಟುವಟಿಕೆಗಳಿಗೆ ಉತ್ತೇಜನ ನೀಡಿದರೆ ಅದು ಭಾರತಕ್ಕೆ ಇನ್ನೊಂದು ತಲೆನೋ ವಾಗಿ ಪರಿಣಮಿಸುತ್ತದೆ.
ಈಗ ಬಾಂಗ್ಲಾದೇಶದಲ್ಲಿರುವ ಮಧ್ಯಂತರ ಸರಕಾರದ ಹಾಗೂ ಇಡೀ ದೇಶದಲ್ಲಿ ಮನೆಮಾಡಿರುವ ಭಾರತದ್ವೇಷದ ಉದ್ದೇಶ ಆ ದೇಶಕ್ಕೆ ಇಸ್ಲಾಮಿಕ್ ದೇಶವಾಗುವ ಬಯಕೆ ಯಿದೆ ಎಂಬುದಲ್ಲ. ದಂಗೆ ನಡೆಸಿದ ವಿದ್ಯಾರ್ಥಿಗಳ ಸಿಟ್ಟು ಇದ್ದುದು ಸರ್ವಾಧಿಕಾರಿ ಆಡಳಿತದ ಬಗ್ಗೆ. ಅವರು ಬಾಂಗ್ಲಾದೇಶದಲ್ಲಿ ನಿಯಂತ್ರಿತ ಮಾರುಕಟ್ಟೆ ಇರಬೇಕೆಂದು ಬಯಸುತ್ತಿದ್ದರು. ವಿದ್ಯಾರ್ಥಿ ಹೋರಾಟಗಾರರಲ್ಲಿ ಒಂದು ಗುಂಪು ಜಮಾತ್-ಎ-ಇಸ್ಲಾಮಿ ಸಂಘಟನೆಯದೂ ಇತ್ತು.
ಅದು ಇಸ್ಲಾಮಿ ಛಾತ್ರ ಶಿಬಿರದ ಸಿದ್ಧಾಂತವನ್ನು ಅನುಸರಿಸುತ್ತದೆ ಎಂಬುದು ನಿಜ. ಆದರೆ, ಹೋರಾಟದಲ್ಲೂ, ನಂತರದ ಬೆಳವಣಿಗೆ ಯಲ್ಲೂ ಅದರ ಪಾಲು ಅತ್ಯಲ್ಪ ವಾಗಿದೆ. ಮುಂದಿನ ತಿಂಗಳು ಗಳಲ್ಲಿ ಚುನಾವಣೆ ಘೋಷಣೆಯಾದಾಗ ವಿದ್ಯಾರ್ಥಿ ಹೋರಾಟಗಾರರಲ್ಲಿ ಕೆಲ ಗುಂಪುಗಳು ಒಟ್ಟಾಗಿ ಎಡ ಪಂಥೀಯ ರಾಜಕೀಯ ಪಕ್ಷವನ್ನು ಕಟ್ಟಿಕೊಂಡು ಸ್ಪರ್ಧಿಸುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಅವು ಬಾಂಗ್ಲಾದೇಶಿ ನ್ಯಾಷನಲ್ ಪಾರ್ಟಿ ಜತೆಗೆ
ಕೈಜೋಡಿಸುವ ಉಮೇದಿಯಲ್ಲಿ ಇಲ್ಲ. ಇದು ನಿಜವೇ ಆದರೆ ಮುಂದಿನ ದಿನಗಳಲ್ಲಿ ಬಾಂಗ್ಲಾ ದೇಶ ಜಾತ್ಯತೀತ ದೇಶವಾಗಿ ಗುರುತಿಸಿಕೊಳ್ಳಲು ಇಷ್ಟ ಪಡುತ್ತದೆಯೋ ಅಥವಾ ಇಸ್ಲಾಮಿಕ್ ದೇಶವಾಗಿ ಗುರುತಿಸಿ ಕೊಳ್ಳಲು ಬಯಸುತ್ತದೆಯೋ ಎಂಬುದು ಕುತೂಹಲಕಾರಿ ಯಾಗಿದೆ.
ಶೇಖ್ ಹಸೀನಾರ ಸರಕಾರವನ್ನು ಬೀಳಿಸಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿಗಳು ನಡೆದಿವೆ. ಇದಕ್ಕೆ ಎರಡು ಕಾರಣಗಳಿವೆ. ಒಂದು, ೧೯೭೦ರ ದಶಕ ಹಾಗೂ ಅದಕ್ಕಿಂತ ಮುಂಚಿನಿಂದಲೂ, ಬಾಂಗ್ಲಾದಲ್ಲಿ ಉಂಟಾಗುವ ಎಲ್ಲಾ ರಾಜಕೀಯ ಬದಲಾವಣೆ ಅಥವಾ ಅಸ್ಥಿರತೆಗಳಲ್ಲಿ ಹಿಂದೂ ಗಳು ಏಟು ತಿನ್ನುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಇಂಥ ಅಸ್ಥಿರತೆಯನ್ನು ಹಿಂದೂಗಳ ಮೇಲಿನ ಹಳೆಯ ದ್ವೇಷ ತೀರಿಸಿಕೊಳ್ಳಲು ಸರಿಯಾದ ಸಮಯ ಎಂದು ಕೆಲವರು ಭಾವಿಸುತ್ತಾರೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಹಿಂದೂ
ಗಳನ್ನು ಭಾರತಕ್ಕೆ ಓಡಿಸಲು ಇದು ಸುವರ್ಣಾವಕಾಶ ಎಂಬಂತೆ ನೋಡುತ್ತಾರೆ. ಬಾಂಗ್ಲಾದೇಶ್ ಹಿಂದು ಬುದ್ಧಿಸ್ಟ್ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್‌ನ ವರದಿಯ ಪ್ರಕಾರ ಆಗಸ್ಟ್ ೫ರ ನಂತರದ ಮೂರು ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ೨೦೦ಕ್ಕೂ ಹೆಚ್ಚು ದಾಳಿಗಳು ನಡೆದಿವೆ.
ಎರಡನೆಯದಾಗಿ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಅವಾಮಿ ಲೀಗ್ ಪಕ್ಷದ ಮತಬ್ಯಾಂಕ್ ಎಂದು ಗುರುತಿಸಲಾಗುತ್ತದೆ. ಹೀಗಾಗಿ ಅವಾಮಿ ಲೀಗ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಹಿಂಸಾಚಾರಿಗಳು ಹಿಂದೂಗಳ ಮೇಲೂ ಬೆಂಕಿ ಉಗುಳಿದ್ದಾರೆ. ಮುಂದಿನ
ದಿನಗಳಲ್ಲಿ ಅವಾಮಿ ಲೀಗ್ ಪಕ್ಷಕ್ಕೆ ಮತ್ತೆ ಸಹಜ ರಾಜಕೀಯ ಪಕ್ಷವಾಗಿ ಕೆಲಸ ಮಾಡಲು ಅವಕಾಶ ನೀಡುವ ಬಗ್ಗೆ ಚರ್ಚೆಗಳು ಶುರುವಾದರೆ ಆಗ ಪುನಃ ಹಿಂದೂಗಳ ಮೇಲೆ ದೌರ್ಜನ್ಯ ನಡೆಯಬಹುದು.
ಕಳೆದೊಂದು ವಾರದಲ್ಲಿ ಬಾಂಗ್ಲಾದೇಶವು ಬಹಳ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದೆ. ಮೊಟ್ಟಮೊದಲ ಬಾರಿ ಢಾಕಾ, ಚಿತ್ತಗಾಂಗ್ ಹಾಗೂ ಸಿಲ್ಹೆಟ್‌ನಲ್ಲಿ ಹಿಂದೂಗಳು ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸಿದ್ದಾರೆ. ಆ ಪ್ರತಿಭಟನೆಗೆ ಬೆಚ್ಚಿದ ಮಧ್ಯಂತರ ಸರಕಾರ ಸ್ವತಃ ತಾನೇ ಢಾಕೇಶ್ವರಿ ದೇಗುಲಕ್ಕೆ ಆಗಮಿಸಿ ಹಿಂದೂ ಸಮುದಾಯವನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಭಾರತದ ಪ್ರಧಾನಿ ನೀಡಿದ ಕಠಿಣ ಸಂದೇಶದ ಪರಿಣಾಮವಾಗಿ ಹಿಂದೂಗಳನ್ನು ರಕ್ಷಿಸುವ ಸಂದೇಶವನ್ನು ಬಹಿರಂಗವಾಗಿ ನೀಡುವುದು ಅನಿವಾರ್ಯವಾಯಿತು ಎಂದು ಮುಹಮ್ಮದ್ ಯೂನುಸ್ ಅವರ ಸರಕಾರ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಆದರೆ, ಸದ್ಯಕ್ಕಂತೂ ಹಿಂದೂ ವಿರೋಧಿ ದಂಗೆ ಇನ್ನಷ್ಟು ವಿಸ್ತರಿಸದಂತೆ ಬಾಂಗ್ಲಾದೇಶದ ಸರಕಾರ ಖಂಡಿತ ನೋಡಿ ಕೊಳ್ಳಲಿದೆ.
ಹಾಗಂತ, ಮುಂದೆ ಇಂಥ ಘಟನೆ ನಡೆಯುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ. ಅದರಲ್ಲೂ, ಮುಂದೆ ಚುನಾವಣೆ ನಡೆದಾಗ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಮತ್ತು ಜಮಾತ್-ಎ-ಇಸ್ಲಾಮಿ ಸಂಘಟನೆಯ ಮೈತ್ರಿ ಸರಕಾರವೇನಾದರೂ ಅಸ್ತಿತ್ವಕ್ಕೆ ಬಂದರೆ ಆಗ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸದ್ಯಕ್ಕಂತೂ ಆ ಸಾಧ್ಯತೆಯೇ ಹೆಚ್ಚು ಕಾಣಿಸುತ್ತಿದೆ.
(ಲೇಖಕರು ಹಿರಿಯ ಪತ್ರಕರ್ತರು)