ಕಾರ್ಪೊರೇಟ್ ಸಂಸ್ಥೆಗಳು ಮತ್ತು ಉದ್ಯಮಿಗಳಿಂದ ಸಿಎಸ್‌ಆರ್ ನಿಧಿಯಡಿ ಹಣ ಸಂಗ್ರಹಿಸಿ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಸರಕಾರ ಯೋಜನೆ ಹಾಕಿಕೊಂಡಿದೆ. ಮುಂದಿನ ೩ ವರ್ಷಗಳಲ್ಲಿ ರಾಜ್ಯದ ೨ ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ‘ಪಬ್ಲಿಕ್ ಶಾಲೆ’ ನಿರ್ಮಿಸಲು ರಾಜ್ಯಸರಕಾರ ಉದ್ದೇಶಿಸಿದೆ.
ಕಾರ್ಪೋರೇಟ್ ಕಂಪನಿಗಳು, ಉದ್ಯಮಿಗಳು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ ನೀಡುವ ದೇಣಿಗೆಯಿಂದಲೇ ಇವುಗಳನ್ನು ನಿರ್ವಹಿಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಪ್ರೋ, ಇನೋಸಿಸ್‌ನಂತಹ ಪ್ರಮುಖ ಕಂಪನಿಗಳು ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ವೆಚ್ಚ ಮಾಡಲು ಸಿದ್ಧರಿzರೆ ಎಂದು ಡಿಸಿಎಂ ಹೇಳಿದ್ದಾರೆ. ಕಾರ್ಪೋರೇಟ್ ಕಂಪನಿಗಳು ಶಿಕ್ಷಣ ಕ್ಷೇತ್ರಕ್ಕೆ ದೇಣಿಗೆ ನೀಡುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರೂ ಮನವಿ ಮಾಡಿದ್ದಾರೆ. ಮೇಲ್ನೋಟಕ್ಕೆ ಈ ಯೋಜನೆ ನವಿರಾದ ಕಲ್ಪನೆಯನ್ನು ನೀಡಿದರೂ, ಯೋಜನೆಗೆ ಜಾರಿಗೆ ಮುನ್ನ ಸರಕಾರ ಮತ್ತು ನಾಗರಿಕರು ಸಾಕಷ್ಟು ಮುಂಜಾಗರೂಕತೆ ವಹಿಸಲೇಬೇಕು. ಈಗ ಇರುವ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಹೊರಟಿದ್ದರೆ ಆಕ್ಷೇಪವಿರಲಿಲ್ಲ. ಹೊಸ ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ತೆರೆಯಲು ಹೊರಟಿರುವ ಸರಕಾರಕ್ಕೆ ಅಲ್ಲಿನ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಚಿಂತೆ ಇದ್ದಂತಿಲ್ಲ.
‘ನೀವೇ ಕಟ್ಟಡ ವನ್ನು ನಿರ್ಮಾಣ ಮಾಡಿ’ ಎಂದು ಕಾರ್ಪೋರೇಟ್ ಕಂಪನಿಗಳಿಗೆ ಹಸಿರು ಟವಲ್ ಹಾಸಿರುವ ಸಚಿವರು, ಈ ಶಾಲೆಗಳಿಗೆ ಅಗತ್ಯವಿರುವ ಜಾಗವನ್ನು ಯಾರು ಕೊಡುತ್ತಾರೆ? ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಯಾರು ನೇಮಿಸುತ್ತಾರೆ? ಅವರ ಮಾಸಿಕ ವೇತನವನ್ನು ಪಾವತಿಸು ವವರಾರು? ಹಾಲಿ ಶಿಕ್ಷಕರಂತೆಯೇ ಅವರಿಗೆ ಕೆಲಸ ಭದ್ರತೆ ಇರಲಿದೆಯೇ, ಭವಿಷ್ಯದ ದಿನಗಳಲ್ಲಿ ಕಂಪನಿಗಳು ಮುಚ್ಚಿದರೆ ಈ ಶಾಲೆಗಳನ್ನು ನಿರ್ವಹಿಸು ವವರಾರು ? ಇತ್ಯಾದಿ ಹಲವು ಪ್ರಶ್ನೆಗಳಿಗೂ ಉತ್ತರ ನೀಡಬೇಕಾಗಿದೆ. ಸ್ಥಳೀಯರ ಸಹಭಾಗಿತ್ವದೊಂದಿಗೆ ಶಾಲೆಗಳು ನಡೆಯಬೇಕೆನ್ನುವ ಕಾರಣಕ್ಕೆ ಶಾಲಾ ಭಿವೃದ್ಧಿ ಮಂಡಳಿಗಳನ್ನು ರಚಿಸಲಾಗಿದೆ. ಕರಾವಳಿ, ಮಲೆನಾಡು ಭಾಗದ ಸರಕಾರಿ ಶಾಲೆಗಳು ಎಸ್ ಡಿಎಂಸಿಗಳ ಸಹಕಾರದಿಂದ ಖಾಸಗಿ ಶಾಲೆಗಳಿ ಗಿಂತಲೂ ಚೆನ್ನಾಗಿ ನಡೆಯುತ್ತಿವೆ. ಉಳಿದೆಡೆಗಳಲ್ಲೂ ಸ್ಥಳೀಯರ ಸಹಭಾಗಿತ್ವಕ್ಕೆ ಸರಕಾರ ಒತ್ತು ನೀಡಬೇಕು. ಜನಭಾಗಿತ್ವವಿಲ್ಲದ ಯಾವ ಯೋಜನೆಯೂ ಯಶಸ್ವಿಯಾಗಲಾರದು.