Sunday, 15th December 2024

ತುಳಸೀದಾಸರಿಗೆ ಹನುಮನ ದರ್ಶನ ಮಾಡಿಸಿದ ಬ್ರಹ್ಮರಾಕ್ಷಸ

ರಾಮನನ್ನರಸಿ ಕಾಶಿಗೆ ಬಂದ ತುಳಸಿದಾಸರು ಅಲ್ಲಿ ನಿತ್ಯವೂ ರಾಮಕಥಾ ವಾಚನ ಮಾಡಲು ಆರಂಭಿಸಿದರು. ಕಾಶಿಯ ಸುತ್ತಮುತ್ತಲ ಭಕ್ತರೆಲ್ಲ ಬಂದು
ಸೇರುತ್ತಿದ್ದರು. ಎಲ್ಲಿ ರಾಮ ಕಥಾ ಪಠಣ ಇರುವುದೋ, ಅಲ್ಲಿ ಹನುಮಂತ ಇರುವನು ಎಂಬಂತೆ ದಿನವೂ ಹನುಮಂತ ಅಲ್ಲಿಗೆ ಬರುತ್ತಿದ್ದ ಅದು ದಾಸರಿಗೆ ತಿಳಿದಿರಲಿಲ್ಲ. ಅವರು ನಿತ್ಯ ಗಂಗಾ ನದಿಗೆ ಸ್ನಾನ ಸಂಧ್ಯಾವಂದನೆಗೆ ಹೋಗುತಿದ್ದರು.

ಅಲ್ಲಿಂದ ಬರುವಾಗ ಒಂದು ತಂಬಿಗೆ ನೀರು ತಂದು ಒಣಗಿದ ಮರಕ್ಕೆ ಹಾಕುತ್ತಿದ್ದರು. ಆದರೆ ಹಾಕುತ್ತಿದ್ದ ನೀರು ಕಾಣದೆ ಒಣಗಿದಂತೆ ಇರುತ್ತಿತ್ತು ನೀರು
ನೆಲದ ಮೇಲೆ ಬೀಳದೆ ಯಾರೋ ಕುಡಿದಂತೆ ಭಾಸವಾಗುತ್ತಿತ್ತು. ಇದು ಹೇಗೆ ಎಂದು ಅಂದುಕೊಳ್ಳುತ್ತಲೇ ೨೧ ದಿನ ಕಳೆದು ಹೋಯಿತು. ಈ ದಿನ ಪರೀಕ್ಷಿಸ ಬೇಕೆಂದು ನೀರು ಹಾಕಿ ಮರದ ಹತ್ತಿರ ನಿಂತರು. ಸ್ವಲ್ಪ ಹೊತ್ತಿಗೆ ಆ ಮರದಿಂದ ಪ್ರಕಾಶಮಾನವಾದ ಬೆಳಕು ಬಂದು ಮರದ ತುಂಬಾ ಎಲೆ ಚಿಗುರಿ ಆ ಮರದಿಂದ ಬ್ರಹ್ಮ ರಾಕ್ಷಸ ಹೊರಬಂದು ಪ್ರತ್ಯಕ್ಷವಾಯಿತು.

ದಾಸರು ರಾಕ್ಷಸನನ್ನು ನೋಡಿ ಒಂದು ಕ್ಷಣ ಭಯದಿಂದ ಕಂಪಿಸಿದರು. ಇಷ್ಟು ದಿನ ಹಾಕುತ್ತಿದ್ದ ನೀರನ್ನು ಈ ರಾಕ್ಷಸ ಕುಡಿಯುತ್ತಿದೆ ಎಂದು ತಿಳಿಯಿತು. ಬ್ರಹ್ಮ ರಾಕ್ಷಸ ಮಾತನಾಡಿ, ‘ನೀವು ನನಗೆ ಇಷ್ಟು ದಿನಗಳ ಕಾಲ ನೀರನ್ನು ಕೊಟ್ಟು ನನ್ನ ಬಾಯಾರಿಕೆಯನ್ನು ತಣಿಸಿರುವಿರಿ ನಿಮಗೆ ಏನು ವರ ಬೇಕೋ ಕೇಳಿ ಕೊಡುತ್ತೇನೆ’ ಎಂದಿತು. ತುಳಸಿದಾಸರು ‘ನನಗೆ ರಾಮನ ದರ್ಶನ ಮಾಡಿಸು. ಅದು ಬಿಟ್ಟರೆ ಇನ್ನೇನು ಬೇಡ’ ಎಂದರು. ಬ್ರಹ್ಮ ರಾಕ್ಷಸ ಹೇಳಿತು ‘ರಾಮದರ್ಶನ ಮಾಡಿಸುವ ಶಕ್ತಿ ನನಗಿದ್ದರೆ ನಾನೇಕೆ ಬ್ರಹ್ಮ ರಾಕ್ಷಸನಾಗಿ ಈ ಒಣ ಮರದಲ್ಲಿ ಇರುತ್ತಿದ್ದೆ.

ರಾಮದರ್ಶನ ಮಾಡಿಸುವ ಶಕ್ತಿ ನನಗಿಲ್ಲ ಹನುಮಂತನಿಗೆ ಮಾತ್ರ ಸಾಧ್ಯ’ ಎಂದಿತು. ದಾಸರು ‘ಆ ರಾಮದೂತರ ರಾಮಭಕ್ತ ಅಂಜನ ಸುತ ಹನುಮಂತ ನೆಲ್ಲಿ ನಾನೆಲ್ಲಿ, ತಮಾಷೆ ಮಾಡುವೆಯಾ’ ಎಂದರು. ಆಗ ಬ್ರಹ್ಮ ರಾಕ್ಷಸ ಹೇಳಿತು ‘ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ನಿಮ್ಮ ರಾಮ ಕಥೆ ಕೇಳಲು ಪ್ರತಿನಿತ್ಯ ಹನುಮಂತ ಬರುತ್ತಾನೆ ಎಲ್ಲಿ ರಾಮನು ಅಲ್ಲಿ ಹನುಮ ಎಂದು ನಿಮಗೆ ತಿಳಿದಿಲ್ಲವೇ?’ ಎಂದು ಕೇಳಿದಾಗ ದಾಸರಿಗೆ ಆಶ್ಚರ್ಯವಾಗಿ, ಪ್ರತಿ ನಿತ್ಯವೂ ಬಿಟ್ಟೂ ಬಿಡದೆ ಬರುತ್ತಿದ್ದ ಒಬ್ಬ ವೃದ್ಧರೇ ಹನುಮಂತ ಎಂಬುದು ತಿಳಿಯಿತು. ಬ್ರಹ್ಮ ರಾಕ್ಷಸ ಹೇಳಿತು ನಿಮ್ಮ ‘ರಾಮ ಕಥೆ ಕೇಳಲು ಎಲ್ಲರಿ ಗಿಂತ ಮೊದಲು ಬಂದು ಎಲ್ಲರಿಗಿಂತ ಯಾರು ಕೊನೆಯಲ್ಲಿ ಹೋಗುತ್ತಾರೋ ಅವರೇ ಆಂಜನೇಯ.

ಆಂಜನೇಯನ ಮೂಲಕ ನಿಮಗೆ ರಾಮದರ್ಶನವಾಗುತ್ತದೆ’ ಎಂದಾಗ ತುಳಸಿದಾಸರಿಗೆ ಆನಂದ ಭಾಷ್ಪ ಹರಿಯಿತು. ಬ್ರಹ್ಮ ರಾಕ್ಷಸನಿಗೆ, ‘ನಿನಗೆ ಕೋಟಿ ನಮನಗಳು. ನಿನ್ನಿಂದ ನನಗೆ ಬಹಳ ಉಪಕಾರವಾಯಿತು ಇನ್ನು ಮುಂದೆ ರಾಮ ಭಕ್ತ ತುಳಸಿದಾಸ ಎಂದು ಹೆಸರು ಅದರಲ್ಲಿ ನೀನು ಸೇರಿದ್ದಿ. ಮುಂದೆ ಯಾರಾದರೂ ಭಕ್ತರು ರಾಮ ಭಕ್ತ ಎಂದು ನನ್ನನ್ನು ನೆನೆಸಿಕೊಂಡಾ ಮರೆಯದೆ ನಿನ್ನನ್ನು ನೆನಪಿಸಿಕೊಳ್ಳುತ್ತಾರೆ. ನನ್ನ ಹೆಸರು ಎಲ್ಲಿಯ ತನಕ ಇಲ್ಲಿ ಇರುವುದೋ ಅಲ್ಲಿಯತನಕ ನೀನು ಇರುವೆ, ನನಗೆ ಸಹಾಯ ಮಾಡಿದ ನಿಮಗೆ ಎಂದಿಗೂ ಒಳ್ಳೆಯದೇ ಆಗುತ್ತದೆ’ ಎಂದು ಮನತುಂಬಿ ಹರಸಿದರು.

ನಂತರ ತಮ್ಮ ರಾಮಕಥಾ ಸಮಯದಲ್ಲಿ ಎಲ್ಲರಿಗಿಂತ ಮೊದಲು ಬಂದು ಕೊನೆಯಲ್ಲಿ ಹೊರಟ ವೃದ್ಧರನ್ನು ಹನುಮಂತನೆಂದು ಗುರುತಿಸಿ ಅವರ ಪಾದಕ್ಕೆರಗಿ ಕೃತಾರ್ಥರಾದರು. ಅವರ ಭಕ್ತಿಗೆ ಮೆಚ್ಚಿ ಹನುಮಂತ ತನ್ನ ನಿಜ ರೂಪದರ್ಶನ ಮಾಡಿಸಿ ಅವರನ್ನು ಹರಸಿದನು. ನಮ್ಮ ಭಕ್ತಿ ಮತ್ತು ಅಪರಿಮಿತ ವಿಶ್ವಾಸದಿಂದ ಇಷ್ಟ ದೈವವನ್ನು ಮತ್ತು ಆ ದೈವದ ಕೃಪೆಯನ್ನು ಖಂಡಿತ ನಾವು ಸಂಪಾದಿಸಬಹುದು ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ.